ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನ್ಯಾಯಾಧೀಶರ ನೇಮಕದಲ್ಲಿ ಕಾರ್ಯಾಂಗಕ್ಕೂ ಪಾತ್ರ

Mainashree
Updated On : 6 Sept 2013, 11:07 am

ಸುಪ್ರೀಮ್ ಕೋರ್ಟ್, ಹೈಕೋರ್ಟ್‌ಗಳ ನ್ಯಾಯಾಧೀಶರ ನೇಮಕ ಈಗ ನಡೆಯುತ್ತಿರುವುದು, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಹಾಗೂ ಹಿರಿಯ ನ್ಯಾಯಾಧೀಶರ ಸಮಿತಿಯ ಶಿಫಾರ್ಸಿನ ಮೇರೆಗೆ. ಆ ಹೆಸರುಗಳನ್ನು ರಾಷ್ಟ್ರಪತಿ ಒಪ್ಪಬೇಕು ಅಷ್ಟೇ.
ಈ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರಗಳ ಪಾತ್ರ ಏನೇನೂ ಇಲ್ಲ. ಇದಕ್ಕೆ ಮುಂಚೆ ಉನ್ನತ ನ್ಯಾಯಾಂಗದ ನೇಮಕಗಳ ಅಧಿಕಾರ ಸರ್ಕಾರಕ್ಕೆ ಇತ್ತು. ಸರ್ಕಾರದ ನೇಮಕ ಎಂದ ಮೇಲೆ ಅಲ್ಲಿ ರಾಜಕೀಯ ಪ್ರಸ್ತಾಪ ಬರುವುದು ಅನಿವಾರ್ಯ. ಸರ್ಕಾರಕ್ಕೆ ಈ ಅಧಿಕಾರ ಬೇಡವೆಂದು ಸುಪ್ರೀಮ್ ಕೋರ್ಟ್ 1993ರಲ್ಲಿ ಆದೇಶ ನೀಡಿದ್ದರಿಂದ ಸುಮಾರು ಎರಡು ದಶಕಗಳ ಕಾಲ ಆ ಪದ್ಧತಿಯೇ ಜಾರಿಯಲ್ಲಿದೆ.
ಈ ಪರಿಸ್ಥಿತಿ ಸಹಜವಾಗಿಯೇ ರಾಜಕಾರಣಿಗಳಿಗೆ ಹಿಡಿಸಲಿಲ್ಲ. ಆದರೆ ಸುಪ್ರೀಮ್ ಕೋರ್ಟ್‌ನ ಆದೇಶಕ್ಕೆ ಕಾಯಿದೆಯ ಬೆಂಬಲವಿರುವುದರಿಂದ ಸರ್ಕಾರ ಅಸಹಾಯಕವಾಗಿತ್ತು. ಉನ್ನತ ನ್ಯಾಯಾಂಗದ ಪೀಠಗಳಿಗೆ ಸೂಕ್ತ ವ್ಯಕ್ತಿಗಳನ್ನು ಆರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಸುಪ್ರೀಮ್ ಕೋರ್ಟ್‌ನ ನ್ಯಾಯಾಧೀಶರ ಸಮಿತಿಗೇ ಬಿಡುವುದು ಒಳಿತಲ್ಲ. ಆಯ್ಕೆಯಲ್ಲಿ ಸರ್ಕಾರಕ್ಕೂ ಒಂದು ಪಾತ್ರವಿರಲೇಬೇಕೆನ್ನುವ ಅಭಿಪ್ರಾಯಕ್ಕೆ ವ್ಯಾಪಕವಾದ ಬೆಂಬಲ ಸಿಕ್ಕಿತ್ತು.
ಆ ದೃಷ್ಟಿಯಿಂದ ಸರ್ಕಾರ ಈಗ ಸಂವಿಧಾನವನ್ನೇ ಬದಲಾಯಿಸಲು ವಿಧೇಯಕವನ್ನು ಮಂಡಿಸಿದ್ದು, ಅದು ಗುರುವಾರ ರಾಜ್ಯಸಭೆಯ ಅಂಗೀಕಾರವನ್ನು ಪಡೆದಿದೆ. ಈ ವಿಧೇಯಕವನ್ನು ಭಾರತೀಯ ಜನತಾ ಪಾರ್ಟಿಯೂ ತತ್ವಶಃ ಒಪ್ಪಿರುವುದರಿಂದ ವಿಧೇಯಕದ ಅಂಗೀಕಾರದ ಹಾದಿ ಸುಗಮವೇ.
ರಾಜ್ಯಸಭೆಯ ಮುಂದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡು ವಿಧೇಯಕಗಳಿವೆ. ಸುಪ್ರೀಮ್ ಕೋರ್ಟ್, ಹೈಕೋರ್ಟ್‌ನ ನ್ಯಾಯಾಧೀಶರ ನೇಮಕಕ್ಕೆ ಹೆಸರುಗಳನ್ನು  ಸಲಹೆ ಮಾಡಲು ಒಂದು ನ್ಯಾಯಾಂಗ ನೇಮಕದ ಆಯೋಗದ ರಚನೆ ಒಂದು ವಿಧೇಯಕ. ಇದು ಸಂವಿಧಾನದ ಬದಲಾವಣೆ.
ಇನ್ನೊಂದು ವಿಧೇಯಕ, ಆಯೋಗದ ಸ್ವರೂಪ ಹಾಗೂ ಅದರ ಸದಸ್ಯರ ನಾಮಕರಣಕ್ಕೆ ಸಂಬಂಧಿಸಿದ್ದು. ಈಗ ಸರ್ಕಾರ ಸಲಹೆ ಮಾಡಿರುವಂತೆ ಈ ಆಯೋಗದಲ್ಲಿ ಕಾಯಿದೆ ಮಂತ್ರಿ ಸದಸ್ಯರಾಗಿರುತ್ತಾರೆ. ಒಬ್ಬ ಅಧಿಕಾರಿ ಅದರ ಕಾರ್ಯದರ್ಶಿ.
ಎರಡನೇ ವಿಧೇಯಕ ಸಂವಿಧಾನದ ಬದಲಾವಣೆಯ ನಿಯಮದಲ್ಲಿ ಬರುವುದಿಲ್ಲ. ಅದು ಇತರ ಎಲ್ಲ ಕಾಯಿದೆಗಳಂತೆಯೇ ಕಾರ್ಯಾಂಗವೇ ಜಾರಿಗೊಳಿಸುವ ಕಾಯಿದೆ.
ಭಾರತೀಯ ಜನತಾ ಪಾರ್ಟಿಯ ನಿಲವು ರಾಜ್ಯಸಭೆಯಲ್ಲಿ ಪ್ರಕಟವಾದಂತೆ ಸಂವಿಧಾನದ ಬದಲಾವಣೆ ಹಾಗೂ ನ್ಯಾಯಾಂಗ ನೇಮಕಗಳ ಆಯೋಗದ ರಚನೆಗೆ ಪಕ್ಷದ ಬೆಂಬಲವಿದ್ದರೂ, ವಿಧೇಯಕದ ವಿವರಗಳು ಹಾಗೂ ಸಾಧಕ ಬಾಧಕಗಳ ಅಧ್ಯಯನಕ್ಕಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದಿತ್ತು.
ಸರ್ಕಾರ ಅದನ್ನು ಒಪ್ಪಲಿಲ್ಲ. ಸಂವಿಧಾನದ ಬದಲಾವಣೆಯ ವಿಧೇಯಕವನ್ನು ಈಗಲೇ ಒಪ್ಪಿ, ನ್ಯಾಯಾಂಗ ನೇಮಕ ಆಯೋಗದ ರಚನೆಯ ವಿಧೇಯಕವನ್ನು ಬೇಕಾದರೆ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಬಹುದು ಎನ್ನುವ ನಿಲವನ್ನು ತಾಳಿದಾಗ, ಬಿಜೆಪಿ ಅದನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದ್ದು, ಒಂದು ರೀತಿಯಲ್ಲಿ ತಂತ್ರವೇ.
ಸಂವಿಧಾನದ ಬದಲಾವಣೆಯ ವಿಧೇಯಕವನ್ನು ರಾಜ್ಯಗಳ ವಿಧಾನಮಂಡಲಗಳೂ ಒಪ್ಪಬೇಕು. ಅದಕ್ಕೆ ಕನಿಷ್ಠ ಏಳೆಂಟು ತಿಂಗಳಾದರೂ ಬೇಕಾಗುತ್ತದೆ. ಆ ವೇಳೆಗೆ ನೇಮಕ ಆಯೋಗದ ವರದಿಯೂ ಬಂದರೆ ಕಾಯಿದೆ ರಚನೆ ಸಾಧ್ಯ. ನಿಜ. ನೇಮಕದ ಆಯೋಗ, ಸರ್ಕಾರದ ಪಾತ್ರ ಎನ್ನುವ ಮಾತು ಇದ್ದ ಕಡೆ ರಾಜಕೀಯವನ್ನು ಸಂಪೂರ್ಣವಾಗಿ ಕಡೆಗಾಣಿಸುವುದು ಸಾಧ್ಯವಿಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಈಗ ಅಂಗೀಕಾರವಾಗಿರುವ ಸಂವಿಧಾನದ ಬದಲಾವಣೆಯ ವಿಧೇಯಕ ಅಗತ್ಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement