ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಮಾಜಸೇವೆಗೆ ಅಣಿಯಾಗಿಸಿದ ಅಪಘಾತ

Mainashree
Updated On : 6 Sept 2013, 11:06 am

ಹದಿನಾರು ವರ್ಷದ ಯುವಕನೊಬ್ಬ ರಸ್ತೆ ದಾಟುವಾಗ, ವೇಗವಾಗಿ ಬಂದ ವಾಹನವೊಂದಕ್ಕೆ ಸಿಲುಕಿ ಮೃತಪಟ್ಟ. ರಸ್ತೆಯಲ್ಲಿ ಓಡಾಡುವ ಯಾರೊಬ್ಬರೂ ತಮಗೆ ಸಂಬಂಧವಿಲ್ಲವೇನೋ ಎಂಬಂತೆ ತಮ್ಮ ವಾಹನಗಳನ್ನು ಪಕ್ಕಕ್ಕೆ ತಿರುಗಿಸಿಕೊಂಡು ಹೋಗುವುದನ್ನು ಪಿಯೂಷ್ ತಿವಾರಿ ಎಂಬ ದೆಹಲಿಯ ಸಾಫ್ಟ್‌ವೇರ್ ಇಂಜಿನಿಯರ್ ಗಮನಿಸಿದ. ತಕ್ಷಣ ಆ ಹುಡುಗನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದರೆ ಬದುಕುಳಿಯುತ್ತಿದ್ದನೋ ಏನೋ?  ಇದೇ ಚಿಂತೆಯಲ್ಲಿ ಆತ ಏನಾದರೂ ಮಾಡಬೇಕೆಂದು ಆಲೋಚಿಸಿ, 'ಸೇವ್ ಲೈಫ್‌' ಎಂಬ ಸೇವಾ ಸಂಸ್ಥೆಗೆ ನಾಂದಿ ಹಾಡಿಯೇ ಬಿಟ್ಟ. ಅಪಘಾತವಾದಾಗ ಜನಸಾಮಾನ್ಯರ ಕರ್ತವ್ಯದ ಕುರಿತು, ತುರ್ತು ಚಿಕಿತ್ಸೆ ಕೊಡಿಸುವ ಕುರಿತು ಮತ್ತು ಅಪಘಾತಕ್ಕೀಡಾದ ವ್ಯಕ್ತಿಯನ್ನು ಗುರುತಿಸುವ ಬಗ್ಗೆ ಜನಸಾಮಾನ್ಯರ, ವೈದ್ಯರ ಮತ್ತು ಪೊಲೀಸರ ಪಾತ್ರ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾದ. ಸಂಸ್ಥೆ ಪ್ರಾರಂಭವಾದ ಹದಿನೆಂಟು ತಿಂಗಳೊಳಗೆ ಸುಮಾರು 2500 ಪೋಲೀಸರಿಗೆ ಈ ಬಗ್ಗೆ ತರಬೇತಿ ನೀಡಿಲಾಗಿದೆ. ಈ ಸಂಸ್ಥೆ ಇದೀಗ ಒಂದು ಸಹಾಯವಾಣಿಯನ್ನೂ ಪ್ರಾರಂಭಿಸಿದ್ದು, ಅಪಘಾತವಾದ ಕೂಡಲೇ ಸಂಸ್ಥೆಯ ಕಾರ್ಯಕರ್ತರು ಅಲ್ಲಿಗೆ ಹೋಗಿ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುತ್ತಾರೆ. ಇದಕ್ಕಾಗಿ ಸ್ವಯಂ ಸೇವಕರ ಒಂದು ತಂಡ ಸದಾಕಾಲ ಸನ್ನದ್ಧವಾಗಿರುತ್ತದೆ. ತನ್ನ ಕೆಲಸದ ಭರಾಟೆಯಲ್ಲಿ ಸೇವ್ ಲೈಫ್ ಕಾರ್ಯವನ್ನು ಸರಿಯಾಗಿ ನಿರ್ವಹಿಸಲು ಕಷ್ಟವಾಗಿದ್ದರಿಂದ ಹೆಚ್ಚು ಆದಾಯದ ಕೆಲಸಕ್ಕೆ ರಾಜೀನಾಮೆ ನೀಡಿರುವ ಪಿಯೂಷ್ ಇದೀಗ ಪೂರ್ಣಕಾಲಿಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಈತನ ಕಾರ್ಯಕ್ಕೆ ದಾನಿಗಳಿಂದ ಕೆಲಬಾರಿ ದೇಣಿಗೆ ಬರುತ್ತದಾದರೂ ಅದು ಸಾಲುತ್ತಿಲ್ಲ. ಆದ್ದರಿಂದ ಸಂಸ್ಥೆಯ ಕಾರ್ಯ ನಿರ್ವಹಣೆಗೆ ತನ್ನದೇ ಸಂಪನ್ಮೂಲ ಹೊಂದಲೂ ಇದೀಗ ಸೇವ್ ಲೈಫ್ ವಿಶೇಷ ಟಿ-ಶರ್ಟುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಲ್ಲದೆ ತರಬೇತಿ ಕಾರ್ಯಕ್ರಮಗಳಿಂದಲೂ ಸ್ವಲ್ಪ ಆದಾಯ ಬರುತ್ತಿದೆ. ಹೀಗೆ ಬರುವ ಆದಾಯವನ್ನು ಸಂಸ್ಥೆಯ ದೈನಂದಿನ ಖರ್ಚು-ವೆಚ್ಚಗಳಿಗಾಗಿ ಉಪಯೋಗಿಸುವ ಆಲೋಚನೆ ಪಿಯೂಷ್‌ನದ್ದು. ಸಂಸ್ಥೆಯ ವ್ಯಾಪ್ತಿಯನ್ನು ಹೆಚ್ಚುಹೆಚ್ಚು ಅಪಘಾತವಾಗುವ ಪ್ರದೇಶಗಳಿಗೆ ವಿಸ್ತರಿಸುವ ಆಲೋಚನೆಯೂ ಇದೆ. ಹೀಗೆ ಒಂದು ಅಪಘಾತ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸಿತು!

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments