ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಆಕ್ರೋಶ ಹುಟ್ಟಿಸುವ ನ್ಯಾಯವ್ಯವಸ್ಥೆ

Mainashree
Updated On : 8 Sept 2013, 8:34 am

ಇತ್ತೀಚಿನ ದೆಹಲಿ ಅತ್ಯಾಚಾರದಲ್ಲಿ 'ಸಕ್ರಿಯ'ವಾಗಿ ಪಾಲ್ಗೊಂಡ 'ಬಾಲಾಪರಾಧಿ'ಗೆ ಮೂರು ವರ್ಷ ಶಿಕ್ಷೆ- ಈ ಸುದ್ದಿಯನ್ನು ಓದಿದ ನಂತರ ನನಗೆ 'ನ್ಯಾಯ' ಅನ್ನುವ ಪದ ಕೇಳಿದರೇ ಅಸಹ್ಯವಾಗಹತ್ತಿದೆ. ಯಾವ ದೃಷ್ಟಿಕೋನದಿಂದ ನೋಡಿದರೂ ನಮ್ಮಂಥ ಪಾಮರರಿಗೆ, ಈ 17 ವರ್ಷದ ಗಡವನಿಗೆ ಸೂಕ್ತವಾದದ್ದು ಗಲ್ಲು ಶಿಕ್ಷೆಯಷ್ಟೇ ಎನಿಸುವಾಗ, ವ್ಯವಸ್ಥೆಗೆ ಮಾತ್ರ ಬೇರಾವ ದೃಷ್ಟಿಕೋನ ದೊರಕಿತೋ ಆ ದೇವರೇ ಬಲ್ಲ. ಅದರಲ್ಲೂ ಈ ಬಾಲಪರಾಧಿಯ ಅನೂಹ್ಯ ಕೃತ್ಯಗಳನ್ನು 'ನಿರ್ಭಯಾ'ಳಿಂದ ಕೇಳಿ ತಿಳಿದ ಮೇಲೂ ಇಂಥ ತೀರ್ಪು ಅನಿವಾರ್ಯವಾಗುತ್ತದೆಂದರೆ, ನಮ್ಮ 'ನ್ಯಾಯಶಾಸ್ತ್ರ'ಗಳು ಬಾವಿಗೆಸೆಯಲು ಸೂಕ್ತವೆನ್ನುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಸಾವಿಗೆ ಸಮೀಪದಲ್ಲಿರುವ ವ್ಯಕ್ತಿ ಮ್ಯಾಜಿಸ್ಟ್ರೇಟರ ಮುಂದೆ ಹೇಳಿದ ಸಾಕ್ಷ್ಯ ಎಲ್ಲ ಸಾಕ್ಷ್ಯಗಳಿಗಿಂತ ಪ್ರಮುಖವಾದದ್ದೆಂಬುದು, ನಮ್ಮೀ 'ನ್ಯಾಯಶಾಸ್ತ್ರ'ಗಳೇ ಒಪ್ಪಿವೆ. ಹೀಗಿರಲು, ಯಾವ ಶಾಸ್ತ್ರೋಕ್ತಿ, ಈ ಗಡವ ಬಾಲಪರಾಧಿಯ ಘನಂದಾರಿ ಕೃತ್ಯಕ್ಕೆ ಕನಿಷ್ಟತಮ ಶಿಕ್ಷೆಯನ್ನು ಸೂಚಿಸುತ್ತದೋ? ಇಂಥ ನ್ಯಾಯಶಾಸ್ತ್ರಕ್ಕೆ ನಾವು ಬದ್ಧರಾಗಿದ್ದೀವೆಂದರೆ, ನಮಗೂ ಕಾಡುಪ್ರಾಣಿಗಳಿಗೂ ಯಾವುದೇ ವ್ಯತ್ಯಾಸವಿರದು. (ನಮ್ಮಂಥ ಹೀನ ಜಂತುಗಳೊಂದಿಗೆ ಹೋಲಿಕೆ ಮಾಡಿದುದಕ್ಕೆ ಕಾಡು ಪ್ರಾಣಿಗಳು ನನ್ನನ್ನು ಕ್ಷಮಿಸಬೇಕು.) 18 ವರ್ಷವಾಗಿಲ್ಲ ಎಂಬ ಒಂದೇ ಕಾರಣದಿಂದ ಕಾಮುಕನನ್ನು ಕಾಮುಕನಲ್ಲ ಅನ್ನುವ ನಮ್ಮ ನ್ಯಾಯಾಂಗಕ್ಕೆ ಏನು ಹೇಳೋಣ. ಗೊತ್ತಿಲ್ಲದೇ ತಪ್ಪೆಸಗುವ ಬಾಲಾಪರಾಧಿಗಳೆಲ್ಲಿ, ಈ ತರಹದ ಕಾಮುಕ-ಕ್ರೌರ್ಯದ ಅಪರಾಧಿಗಳೆಲ್ಲಿ? ಎಲ್ಲವಕ್ಕೂ ಒಂದೇ ಮಾನದಂಡವೇ? ಯಂತ್ರಗಳಂತೆ ವಿವೇಚನಾರಹಿತವಾಗಿ "ತಲೆಗೆಲ್ಲಾ ಒಂದೇ ಮಂತ್ರ"ವೆಂಬಂತೆ ಯೋಚಿಸಲು ನಮಗೆ ನ್ಯಾಯಾಂಗದ ಅಗತ್ಯವಿದೆಯೇ? ವಿವೇಚನೆಗೆ ಒಳಪಡದ ಇಂಥ ತೀರ್ಪನ್ನೂ ನಾವು 'ನ್ಯಾಯ' ಎಂದು ಸ್ವೀಕರಿಸಬೇಕೇ? ಅಂಥ ಹೀನಾಯ ಸ್ಥಿತಿಗೆ ನಾವು ತಲುಪಿದ್ದೀವಾ?
- ಎಂ. ಸಂತೋಷಶಾಸ್ತ್ರಿ, ಕುಮಟಾ
ನೀರಿನಲ್ಲಿ ಹೋಮ ಮಾಡಿದಂತೆ
ಗೋಹತ್ಯೆ ವಿಷಯದಲ್ಲಿ ಕಾನೂನು ಸಡಿಲವಾದ ನಂತರ ರಾಜಾರೋಷವಾಗಿ ಗೋವುಗಳನ್ನು ಕದಿಯುವ ಕಸುಬು ಪ್ರಾರಂಭವಾಗಿದೆ. ಅದರಲ್ಲೂ ಗೋವುಗಳನ್ನು ಹಟ್ಟಿಯಿಂದಲೇ ಕದಿಯತೊಡಗಿದ್ದಾರೆ. ಗೋಹತ್ಯೆ ನಿಷೇಧ ಕಾನೂನು ತರಲು ಎಷ್ಟೋ ಸಲ ಜಾಥಾಗಳನ್ನು ಮಾಡಲಾಯಿತು. ಗೋವುಗಳನ್ನು ಹಿಂದೂ ಧರ್ಮದವರು ದೇವರೆಂದು ಪೂಜಿಸುತ್ತಾರೆ. ಅಂತಹ ದೇಶದಲ್ಲಿ ಗೋಹತ್ಯೆ ವ್ಯಾಪಾರವಾಗಿ ನಡೆಯುತ್ತಿದೆ. ಸರ್ಕಾರವು ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಬೇಕು. ಇಲ್ಲದಿದ್ದಲ್ಲಿ ಗೋವುಗಳನ್ನು ಹಾಡುಹಗಲೇ ಹತ್ಯೆ ಮಾಡಲಾಗುತ್ತದೆ.
- ಪೂಜಾ ವೈ.ಡಿ., ಪುತ್ತೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement