ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬಾಬಾ ಸಾಹೇಬನ ಸ್ವಾಭಿಮಾನ

Mainashree
Updated On : 8 Sept 2013, 8:31 am

ಬಾಬಾ ಸಾಹೇಬ ನರಗುಂದಕರ್ ನರಗುಂದದ ವೀರ ಸ್ವಾತಂತ್ರ್ಯಯೋಧ. ನರಗುಂದ ಸಂಸ್ಥಾನವು ಮರಾಠರು ದಾದಾಜಿರಾವ್ ಅಪ್ಪ ಅವರಿಗೆ 1818ರಲ್ಲಿಯೇ ನೀಡಲ್ಪಟ್ಟ ಒಂದು ಸ್ವತಂತ್ರ ಸಂಸ್ಥಾನ. ದಾದಾಜಿರಾವ್ ಅಪ್ಪ ಅವರ ಮಗ ಭಾಸ್ಕರರಾವ್‌ನ ಉತ್ತಮ ಆಡಳಿತದಿಂದ ಸಂತೃಪ್ತರಾದ ಪ್ರಜೆಗಳು ಅವನನ್ನು ಗೌರವದಿಂದ ಬಾಬಾ ಸಾಹೇಬ ಎಂದೇ ಕರೆಯುತ್ತಿದ್ದರು. ಸ್ವಾತಂತ್ರ್ಯ ಪ್ರಿಯನಾದ ಬಾಬಾ ಸಾಹೇಬನಿಗೆ ಇದ್ದ ಒಬ್ಬ ಮಗ ಮೃತ್ಯುವಶನಾದಾಗ ಬಾಲಕನೊಬ್ಬನನ್ನು ದತ್ತು ಪಡೆಯಲು ಸಿದ್ಧತೆ ನಡೆಸಿದನು. ಆದರೆ ಬ್ರಿಟಿಷರು ಅದಕ್ಕೆ ಒಪ್ಪಲಿಲ್ಲ. ಅವನು ಬ್ರಿಟಿಷರಿಗೆ ನಿಷ್ಠನಾಗಿರಬೇಕೆಂದೂ, ಅವನ ಮರಣಾನಂತರ ಅವನ ಪತ್ನಿಗೆ ಮಾಸಾಶನ ನೀಡುವುದಾಗಿಯೂ ತಿಳಿಸಿದರು. 1857 ರಲ್ಲಿ ನಡೆದ ಸ್ವಾತಂತ್ರ್ಯ ಚಳುವಳಿಯ ಬಿಸಿ ಕನ್ನಡ ನಾಡಿನಲ್ಲಿಯೂ ರಿಂಗಣಿಸುತ್ತಿದ್ದ ಕಾಲವದು. ಮೊದಲೇ ಆತ್ಮಾಭಿಮಾನಿಯೂ, ಸ್ವಾತಂತ್ರ್ಯ ಪ್ರಿಯನೂ ಆದ ಬಾಬಾ ಸಾಹೇಬನಿಗೆ ಬ್ರಿಟಿಷರ ಆದೇಶ ಪಥ್ಯವಾಗಲಿಲ್ಲ. ಅಂತಿಮವಾಗಿ ಸುರೇಬಾನದಲ್ಲಿ ನಡೆದ ಯುದ್ಧದಲ್ಲಿ ವೀರಾವೇಶದಿಂದ ಯುದ್ಧ ಮಾಡಿ ಬ್ರಿಟಿಷರ ಸೈನ್ಯವನ್ನು ಹಿಮ್ಮೆಟ್ಟಿಸಿದನು ಮತ್ತು ಜನರಲ್ ಮೆನ್ಸನ್ನನ ರುಂಡವನ್ನು ಕತ್ತರಿಸಿ, ಅದನ್ನು ಅಗಸಿಯ ಬಾಗಿಲಿಗೆ ಕಟ್ಟಿಸಿದನು. ಅದನ್ನು ಇಂದಿಗೂ ರಕ್ತ ಅಗಸಿ ಎಂದೇ ಕರೆಯಲಾಗುತ್ತದೆ.
ಆದರೆ ಆ ಸಂತೋಷ ಹೆಚ್ಚುಕಾಲ ಉಳಿಯಲಿಲ್ಲ. ಇಂಗ್ಲಿಷ್ ಸೈನ್ಯ ಕರ್ನಲ್ ಮಾಲ್ಕಂನ ನೇತೃತ್ವದಲ್ಲಿ ನರಗುಂದದ ಕೋಟೆಯನ್ನು ಮುತ್ತಿಗೆ ಹಾಕಿತು. ಬಾಬಾಸಾಹೇಬನ ಜೊತೆಯಲ್ಲಿದ್ದ ಕೆಲವರ ವಿಶ್ವಾಸ ದ್ರೋಹದಿಂದಾಗಿ ಬಾಬಾ ಸಾಹೇಬ ಸೋತುಹೋದ. ಆದರೂ ಅವನಲ್ಲಿ ಕ್ರಾಂತಿಯ ಕಿಚ್ಚು ಆರಿರಲಿಲ್ಲ. ಬ್ರಿಟಿಷರಿಂದ ತಪ್ಪಿಸಿಕೊಂಡು ತೋರಗಲ್ಲಿಗೆ ಹೋಗಿ ಸೈನ್ಯ ಸಂಘಟನೆಗೆ ತೊಡಗಿದ.
ಮತ್ತೆ ಕೆಲವರ ವಿಶ್ವಾಸ ದ್ರೋಹದ ಲಾಭ ಪಡೆದ ಫ್ರಾಕ್ಸ್‌ಟರ್ ಎಂಬ ಅಧಿಕಾರಿ ಮಾರುವೇಷದಿಂದ ಹೋಗಿ ಬಾಬಾ ಸಾಹೇಬನನ್ನು ಬಂಧಿಸಿ ಬೆಳಗಾವಿಗೆ ತಂದನು. ಅಲ್ಲಿ ಬಹಿರಂಗವಾಗಿ ಬಾಬಾಸಾಹೇಬನನ್ನು ಗಲ್ಲಿಗೇರಿಸಲಾಯಿತು. ನಾಲ್ಕು ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕ ಸಂಗ್ರಹವಿದ್ದ ಅವನ ಗ್ರಂಥಾಲಯವನ್ನು ಬ್ರಿಟಿಷ್ ಅಧಿಕಾರಿಗಳು ಸುಟ್ಟು ಹಾಕಿದರು. ಬಾಬಾ ಸಾಹೇಬನ ಸಾವನ್ನು ಸಹಿಸಲಾಗದೆ ಅವನ ತಾಯಿ ಯಮುನಾ ಬಾಯಿ ಮತ್ತು ಪತ್ನಿ ಸಾವಿತ್ರಿಬಾಯಿ ಮಲಪ್ರಭೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡರು. ಇಂದಿಗೂ ಈ ಮೂವರ ಸಮಾಧಿ ಬೆಳಗಾವಿಯಲ್ಲಿದೆ. ಆದರೆ ಅವು ತುಂಬಾ ದುಸ್ಥಿತಿಯಲ್ಲಿದ್ದು ಅವುಗಳ ರಕ್ಷಣೆಗೆ ಅಗತ್ಯವಿದೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments