ರಾಹುಲ್ ಹೆಸರು ಪಕ್ಕಾ
ಕಾಂಗ್ರೆಸ್ಸಿನಲ್ಲಿ ಚುನಾವಣೆಗೆ ಮುನ್ನ ಪ್ರಧಾನಿ ಸ್ಥಾನದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವ ಸಂಪ್ರದಾಯ ಇಲ್ಲ ಎನ್ನುವ ಮಾತಿದೆ. ಆದರೆ ನೆಹರೂ, ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರ ಕಾಲದಲ್ಲಿ ಪಕ್ಷ ಗೆದ್ದರೆ ಪ್ರಧಾನಿ ಯಾರಾಗಬಹುದೆನ್ನುವುದರಲ್ಲಿ ಯಾರಿಗೂ ಅನುಮಾನವೇ ಇರಲಿಲ್ಲ. ಆ ಪರಿಸ್ಥಿತಿ ಬದಲಾಗಿದ್ದು ಕಳೆದ ದಶಕದಲ್ಲಿ. ಸೋನಿಯಾ ಗಾಂಧಿ ಅವರೇ ಪ್ರಧಾನಿಯಾಗುವುದು ಖಚಿತ ಎಂದು ಜನ ಭಾವಿಸಿದ್ದಾಗ, ಅವರು ಆ ಸ್ಥಾನವನ್ನು ಮನಮೋಹನ ಸಿಂಗ್ ಅವರಿಗೆ ಬಿಟ್ಟು ಕೊಟ್ಟರು. ಆ ಕಾಲದಲ್ಲೇ ಆರಂಭವಾಗಿದ್ದು ಕಾಂಗ್ರೆಸ್ಸಿನ ಮುಂದಿನ ಪ್ರಧಾನಿ ಯಾರು ಎನ್ನುವ ಚರ್ಚೆ.
ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಈ ಪ್ರಶ್ನೆ ಪ್ರಮುಖವಾಗಿ ಪ್ರಸ್ತಾಪವಾಗುವುದು ಖಚಿತ. ಈಗಾಗಲೇ ಒಂದು ಕಡೆ ಭಾರತೀಯ ಜನತಾ ಪಾರ್ಟಿಯವರು, ಇನ್ನೊಂದು ಕಡೆ ಕಾಂಗ್ರೆಸ್ಸಿನಲ್ಲಿನ ಬಹುದೊಡ್ಡ ಗುಂಪುಗಳವರು ಚುನಾವಣೆಯ ಪ್ರಚಾರ ಸಮರದಲ್ಲಿ ಪ್ರಧಾನಿ ಪೀಠದ ಅಭ್ಯರ್ಥಿಯ ಹೆಸರೇ ಪ್ರಮುಖವಾಗುವಂತೆ ನೋಡಿಕೊಳ್ಳಲು ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ರಷ್ಯದ ಸೇಂಟ್ ಪೀಟರ್ಸ್ ಬರ್ಗ್ನಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಹಿಂತಿರುಗುವಾಗ ಪತ್ರಕರ್ತರ ಜತೆ ಮಾತಾಡುತ್ತಾ ಈಗ ಕಾಂಗ್ರೆಸ್ಸಿನ ಆಯ್ಕೆ ರಾಹುಲ ಗಾಂಧಿ ಅವರೇ ಎಂದು ಹೇಳಿರುವುದು ರಾಜಕೀಯವಾಗಿ ಪ್ರಸ್ತುತವಾಗುತ್ತದೆ.
ರಾಹುಲ ಗಾಂಧಿ ಅವರಿಗೆ ಪ್ರಧಾನಿಯಾಗವ ಅರ್ಹತೆ ಇದೆ ಎಂದು ಮನಮೋಹನ ಸಿಂಗ್ ಅನೇಕ ಬಾರಿ ಹೇಳಿದ್ದಾರೆ. ಆದರೆ ಅವರ ಶನಿವಾರದ ಹೇಳಿಕೆ ಹೆಚ್ಚು ಪ್ರಸ್ತುತವಾಗುವುದು ಅವರು ಆ ಮಾತನ್ನು ಹೇಳಿದ ಧಾಟಿಯಿಂದ. ಮನಮೋಹನ ಸಿಂಗ್ ಪತ್ರಕರ್ತರ ಜತೆ ಮಾತುಕತೆ ನಡೆಸುವಾಗ ಸ್ವಯಂ ಪ್ರೇರಣೆಯಿಂದೇನೂ ರಾಹುಲ ಗಾಂಧಿಯ ಹೆಸರನ್ನು ಹೇಳಲಿಲ್ಲ. ಒಂದು ಪ್ರಶ್ನೆಗೆ ಉತ್ತರ ಕೊಡುವಾಗ ಆ ಹೆಸರು ಹೊರಗೆ ಬಿತ್ತು. ಮನಮೋಹನ ಸಿಂಗ್ ಈ ಪ್ರಶ್ನೆಯನ್ನು ನಿರೀಕ್ಷಿಸಿರಬೇಕು. ಅದಕ್ಕೇ ಪ್ರಶ್ನೆ ಕೇಳಿದ ಕೂಡಲೇ ಮನಸ್ಸಿನಲ್ಲಿದ್ದ ಹೆಸರನ್ನು ಹೇಳಿ, ಒಂದು ರೀತಿಯಲ್ಲಿ ಪ್ರಧಾನಿ ಪೀಠದ ಅಭ್ಯರ್ಥಿಯ ಸ್ಥಾನಕ್ಕೆ ಕಾಂಗ್ರೆಸ್ಸಿನ ಪರವಾಗಿ ರಾಹುಲ್ ಹೆಸರನ್ನು "ಪಕ್ಕಾ" ಮಾಡಿದ್ದಾರೆ. ಈಗ ತಾನೇ ಮುಗಿದ ಸಂಸತ್ತಿನ ಅಧಿವೇಶನದಲ್ಲಿ ಹಲವು ಪ್ರಮುಖ ವಿಷಯಗಳಲ್ಲಿ ಪ್ರಧಾನಿ ನೀಡಿದ ಜಾರಿಕೊಳ್ಳುವಂಥ ಹೇಳಿಕೆಗೂ, ರಾಹುಲ ಗಾಂಧಿಯ ಹೆಸರನ್ನು ಅವರು ಪ್ರಧಾನಿ ಪೀಠಕ್ಕೆ ಈಗ ಅತ್ಯಂತ ಯೋಗ್ಯ ಆಯ್ಕೆ ಎಂದು ಹೇಳಿರುವುದಕ್ಕೂ ಪರಸ್ಪರ ಸಂಬಂಧವಿಲ್ಲ. ಆದರೆ ಎರಡೂ ಹೇಳಿಕೆಗಳನ್ನು ಒಟ್ಟಿಗೇ ನೀಡಿದರೆ ಬೀಸುವ ಗಾಳಿಯ ದಿಕ್ಕನ್ನು ಗುರ್ತಿಸುವುದು ಕಷ್ಟವಲ್ಲ.
ಸಂಸತ್ತಿನ ಅಧಿವೇಶನದಲ್ಲಿ ಪ್ರಧಾನಿ ಒಂದೆರಡು ಬಾರಿ ಸಹನೆಯನ್ನು ಕಳೆದುಕೊಂಡಿದ್ದರು. ಒಂದೆರಡು ಬಾರಿ ಸೂಕ್ತವಾದ ಪದಗಳಿಗೆ ತಡಕಾಡಿದರು. ಇಡೀ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರ ದೃಷ್ಟಿ ಸ್ಪಷ್ಟವಾಗಿ ಮುಂದಿನ ವರ್ಷದ ಚುನಾವಣೆಯ ಕಡೆಗೇ ನೆಟ್ಟಿತ್ತು. ಆ ಸಮಯದಲ್ಲೇ ಪ್ರಧಾನಿ ಪೀಠದಲ್ಲಿ ಈಗ ವಿರಾಜಮಾನವಾಗಿರುವ ವ್ಯಕ್ತಿಯಿಂದಲೇ ರಾಹುಲ ಗಾಂಧಿಯ ಹೆಸರು ಪ್ರಸ್ತಾಪವಾಗಿದ್ದು ಆಕಸ್ಮಿಕವಲ್ಲ. ಮನಮೋಹನ ಸಿಂಗ್ ಅವರು ಹೇಳಬೇಕಾದ ಅಂತಿಮ ಮಾತನ್ನು ಹೇಳಿದ್ದಾಗಿದೆ.
ಇತ್ತೀಚಿನ ದಿನಗಳಲ್ಲಿ ರಾಹುಲ ಗಾಂಧಿ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಅನುಸರಿಸಬೇಕಾದ ತಂತ್ರಗಾರಿಕೆಯ ಹೊಣೆಯನ್ನು ತಾವೇ ವಹಿಸಿಕೊಂಡಿರುವಂತಿದೆ. ಅನೇಕ ರಾಜ್ಯಗಳಲ್ಲಿ ಪ್ರಮುಖ ಸಮಿತಿಗಳ ರಚನೆಯಲ್ಲಿ ಅವರ ಚಿಂತನೆಯ ಕುರುಹು ಎದ್ದು ಕಂಡಿದೆ. ಮದನಗೋಪಾಲ್, ಮೀನಾಕ್ಷಿ ನಟರಾಜನ್ ಅವರಂತಹವರು ಇದ್ದಕ್ಕಿದ್ದಂತೆ ಸಕ್ರಿಯವಾಗಿದ್ದಾರೆ. ಅವರೆಲ್ಲ ರಾಹುಲ್ ಆರಿಸಿದ ಯುವಕರೇ.
ಚುನಾವಣೆಯಲ್ಲಿ ಇತರ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದಲ್ಲೂ ಹಿಂದಿಗಿಂತ ರಾಹುಲ ಗಾಂಧಿ ಹೆಚ್ಚು ಸಕ್ರಿಯವಾಗಿದ್ದಾರೆ. ಉದಾಹರಣೆಗೆ ಇದ್ದಕ್ಕಿದ್ದಂತೆ ರಾಹುಲ ಗಾಂಧಿ ಡಿಎಂಕೆ ರಾಜ್ಯಸಭೆ ಸದಸ್ಯೆ, ಕರುಣಾ ನಿಧಿ ಪುತ್ರಿ ಕನಿಮೋಳಿ ಅವರನ್ನು ಭೇಟಿಯಾಗಿದ್ದರು. ಅದಾದ ಅನಂತರ 2-ಜಿ ಟೆಲಿಕಾಮ್ ಹಗರಣದ ತನಿಖೆಗೆ ನೇಮಕಗೊಂಡಿರುವ ಸಂಯುಕ್ತ ಸಂಸದೀಯ ಸಮಿತಿಯ ಸದಸ್ಯತ್ವವನ್ನು ಡಿಎಂಕೆಯಿಂದ ತೆಗೆದು ನಾಮಕರಣ ಸದಸ್ಯರಿಗೆ ಕೊಡಲಾಯಿತು. ಡಿಎಂಕೆ ಪ್ರತಿಕ್ರಿಯೆ ನೀಡಲೇ ಇಲ್ಲ. ಉತ್ತರ ಪ್ರದೇಶದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ (2009) ರಾಜಕೀಯ ಪಂಡಿತರೆಲ್ಲರೂ ಬೆಚ್ಚಿ ಬೀಳುವಂತೆ ಕಾಂಗ್ರೆಸ್ 22 ಸ್ಥಾನಗಳನ್ನು ಗೆದ್ದಿತ್ತು. ಈಗಲೂ ರಾಹುಲ ಗಾಂಧಿಯ ಆತ್ಮೀಯರು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರ ಆತ್ಮೀಯರನ್ನು ಸದ್ದುಗದ್ದಲವಿಲ್ಲದೇ ಭೇಟಿ ಮಾಡುತ್ತಿದ್ದಾರೆ. ಹಿಂದಿನಂತೆ ರಾಹುಲ್ ಗಾಂಧಿ ಈಗ ಪಕ್ಷದ ವ್ಯವಹಾರದಲ್ಲಿ ನಿರಾಸಕ್ತರಲ್ಲ. ಸಕ್ರಿಯವಾಗಿ ಕೆಲಸಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಪ್ರಾಯಶಃ ರಾಹುಲ ಗಾಂಧಿಯವರ ಹೆಸರನ್ನು ವಿರೋಧಿಸುವವರು ಯಾರೂ ಇದ್ದಂತಿಲ್ಲ.
ಅದಕ್ಕೆ ಸಮಾನಾಂತರವಾಗಿ ಎನ್ನುವಂತೆ, ಬಿಜೆಪಿಯಲ್ಲೂ ನರೇಂದ್ರ ಮೋದಿ ಅವರ ಹೆಸರನ್ನು ಪ್ರಧಾನಿ ಪೀಠದ ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ ಅವಿರೋಧವಾಗಿ ಸೂಚಿಸುವುದಕ್ಕೆ ಹರಸಾಹಸ ನಡೆದಿರುವಂತಿದೆ. ನಿಜ. ಈಗ ಬಿಜೆಪಿಯಲ್ಲಿ ನರೇಂದ್ರ ಮೋದಿಯವರ ಹೆಸರನ್ನು ಬಹಿರಂಗವಾಗಿ ವಿರೋಧಿಸುವ "ನಾಯಕರ" ಸಂಖ್ಯೆ ಕಡಿಮೆ. ಆದರೂ ಅವರ ಮನಸ್ಸನ್ನು ಒಲಿಸಿಕೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ ಭಾಗವತ್ ಅವರೇ ಆಸಕ್ತಿ ವಹಿಸಿರುವಂತಿದೆ.
ಈಗ ಬಿಜೆಪಿಯಲ್ಲಿರುವ ಪ್ರಶ್ನೆ ನರೇಂದ್ರ ಮೋದಿಯವರ ಹೆಸರನ್ನು ಈಗಲೇ ಪ್ರಕಟಿಸಬೇಕೇ, ಅಥವಾ ಉತ್ತರ ಭಾರತದ ನಾಲ್ಕು ರಾಜ್ಯಗಳ ವಿಧಾನ ಸಭೆ ಚುನಾವಣೆ ಮುಗಿದ ಅನಂತರ ಪ್ರಕಟಿಸಬೇಕೇ ಎನ್ನುವುದಷ್ಟೇ ಉಳಿದಿರುವುದು ಎನ್ನುವ ಪ್ರಚಾರವೂ ಕೆಲವು ವಲಯಗಳಿಂದ ಆರಂಭವಾಗಿದೆ. ಇನ್ನು ಎರಡು - ಮೂರು ವಾರಗಳಲ್ಲಿ ದೇಶದ ರಾಜಕಾರಣದಲ್ಲಿ ವಾತಾವರಣದ ಬದಲಾವಣೆಯನ್ನು ನಿರೀಕ್ಷಿಸಬಹುದು. ಆ ವೇಳೆಗೆ ಕಾಂಗ್ರೆಸ್ಸೂ ಒಂದಲ್ಲ ಒಂದು ರೀತಿಯಲ್ಲಿ ತನ್ನ ಸಂಪ್ರದಾಯವನ್ನು ಬದಿಗಿಟ್ಟು ರಾಹುಲ ಗಾಂಧಿ ಅವರ ಹೆಸರನ್ನು ಪಕ್ಷದ ವೇದಿಕೆಯ ಮೂಲಕ ಪ್ರಕಟಿಸಲೂ ಬಹುದು. ಆಗಲೇ ಚುನಾವಣೆಯಲ್ಲಿ ಕಾವೇರುವುದು.