ಅಖಿಲೇಶ್ ಸರ್ಕಾರ ತರಾಟೆಗೆ
ಧಾರ್ಮಿಕ, ಮತೀಯ ಹಾಗೂ ಕೋಮುವಾದಿ ಓಟು ಬ್ಯಾಂಕ್ ರಾಜಕೀಯ, ಈಗ ಉತ್ತರ ಪ್ರದೇಶದ ಮುಜಾಫರ ನಗರದ ಸುತ್ತಮುತ್ತಲ...
ಧಾರ್ಮಿಕ, ಮತೀಯ ಹಾಗೂ ಕೋಮುವಾದಿ ಓಟು ಬ್ಯಾಂಕ್ ರಾಜಕೀಯ, ಈಗ ಉತ್ತರ ಪ್ರದೇಶದ ಮುಜಾಫರ ನಗರದ ಸುತ್ತಮುತ್ತಲ ಜಿಲ್ಲೆಗಳಲ್ಲಿ ಪ್ರಕಟವಾಗಿರುವ ಹಿಂಸಾಚಾರಕ್ಕೆ ಹಿನ್ನೆಲೆಯಂತಿದೆ ಎನ್ನುವ ಮಾತನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಸಿಂಗ್ ಯಾದವ್ ಸರ್ಕಾರ (ಅದರ ಹಿಂದೆ ಮುಲಾಯಂ ಸಿಂಗ್ ಯಾದವ್ರ ಮಾರ್ಗದರ್ಶನ ಇದ್ದೇ ಇದೆ) ಇಂದಿನ ಪರಿಸ್ಥಿತಿಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.
ಈಗ ನಡೆದಿರುವ ಗಲಭೆಗಳು, ಹಿಂಸಾಚಾರ, ಸ್ಪಷ್ಟವಾಗಿ ಅಲ್ಲಿನ ರಾಜಕೀಯ ಪಕ್ಷಗಳ ಪರಸ್ಪರ ದೂಷಣೆಗೆ ಅವಕಾಶ ಮಾಡಿಕೊಟ್ಟಿರುವುದು ನಿಜ. ಆಗಸ್ಟ್ ಕೊನೆಯ ವೇಳೆಗೆ (ಪ್ರಧಾನವಾಗಿ ಆಗಸ್ಟ್ 27 ರಂದು) ಅಲ್ಲಲ್ಲಿ ಕೋಮುಗಲಭೆಗಳು ವರದಿಯಾಗುತ್ತಿದ್ದರೂ ರಾಜ್ಯ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎನ್ನುವ ದೂರು ಸಾರ್ವತ್ರಿಕವಾಗಿ ಕೇಳಿಬಂದಿದೆ. ಆ ರಾಜ್ಯದಲ್ಲಿ ಇನ್ನೂ ರಾಜ್ಯ ಸರ್ಕಾರಕ್ಕಿಂತ ಜಾತಿಗಳ ಮಹಾಪಂಚಾಯತ್ಗಳೇ ಜನರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿರುವಂತಿದೆ. ಸಕಾಲದಲ್ಲಿ ಹಲವು ಮೂಲಗಳಿಂದ ಮುಜಾಫರ ನಗರದಲ್ಲಿ ಎರಡು ಗುಂಪುಗಳ ದ್ವೇಷ ಕೊತಕೊತನೆ ಕುದಿಯುತ್ತಿದೆ ಎನ್ನುವ ವರದಿಗಳು ಸಮಾಜವಾದಿ ಪಕ್ಷದ ಹಿರಿಯರನ್ನು ತಲುಪಿದ್ದ್ದರೂ, ಸರ್ಕಾರ ಅದನ್ನು ನಿರ್ಲಕ್ಷಿಸಿ, ಈಗ ಗಣೇಶನ ಹಬ್ಬದ ಅನಂತರ ಉಗ್ರ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಒಂದು ವಿಪರ್ಯಾಸವೇ.
ಮಂಗಳವಾರ ಮಧ್ಯಾಹ್ನದ ವೇಳೆಗೆ ಗಲಭೆಗಳಿಗೆ 38 ಮಂದಿ ಆಹುತಿಯಾಗಿದ್ದು, ಭದ್ರತಾ ಪಡೆಗಳು 330ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಹಾಗೂ ಸೇನೆಯ ಶಕ್ತಿ ಪ್ರದರ್ಶನ ಮಾಡಿದ್ದು, ಖಂಡಿತವಾಗಲೂ ಆಡಳಿತದ ದಕ್ಷತೆಯ ವಿಚಾರದಲ್ಲಿ ಒಳ್ಳೆಯ ಅಭಿಪ್ರಾಯವನ್ನು ಮೂಡಿಸುವುದಿಲ್ಲ. ಆ ಕೆಲಸ ಮೊದಲೇ ಆಗಬೇಕಾಗಿತ್ತು. ಕೇಂದ್ರ ಮಂತ್ರಿ, ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಅಜಿತ್ ಸಿಂಗ್ ಅವರಿಗೂ ಮುಜಾಫರ ನಗರಕ್ಕೆ ಹೋಗಲು ಸರ್ಕಾರ ಅನುಮತಿ ನೀಡಲಿಲ್ಲ. ಅದೇ ರೀತಿ ಬಿಜೆಪಿಯ ರಾಷ್ಟ್ರೀಯ ನಾಯಕ ರವಿಶಂಕರ ಪ್ರಸಾದ್ ಅವರಿಗೂ ಪರಿಸ್ಥಿತಿಯ ಪರಿಶೀಲನೆಗೆ ಅವಕಾಶ ಸಿಗಲಿಲ್ಲ. ಮಹಾಪಂಚಾಯತ್ಗಳಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪವನ್ನು ಉತ್ತರ ಪ್ರದೇಶದ ಸರ್ಕಾರದ ಪರವಾಗಿ ಬಿಜೆಪಿಯ ನಾಯಕರ ಮೇಲೆ ಹೊರಿಸಲಾಗಿದೆ. ಕೆಲವು ಶಾಸಕರ ಬಂಧನವೂ ಆಗಿದೆ.
ಕೇಂದ್ರ ಸರ್ಕಾರವೂ ಈ ವಿಚಾರದಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸಿದೆ ಎಂದೇನೂ ಭಾಸವಾಗುತ್ತಿಲ್ಲ. ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಅವರು ಆ ರಾಜ್ಯದಲ್ಲಿ ಕೋಮು ಸೌಹಾರ್ದದ ಅಭಾವ ಕುರಿತಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು ಎಂದು ತಿಳಿಸಿದ್ದಾರೆ. ಅಂದರೇನರ್ಥ? ಒಂದು ರೀತಿಯಲ್ಲಿ ಅದು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸರ್ಕಾರವನ್ನು ಟೀಕಿಸಿದಂತೆಯೇ ಅಲ್ಲವೇ? ಪ್ರಧಾನಿ ಮನಮೋಹನ ಸಿಂಗ್ ಅವರೂ ತಮ್ಮ ಮೌನ ಮುರಿದು ನೇರವಾಗಿ ಮುಖ್ಯಮಂತ್ರಿ ಅಖಿಲೇಶ ಯಾದವ್ ಅವರಿಗೆ ಫೋನ್ ಮಾಡಿ ಕೇಂದ್ರದ ನೆರವಿನ ಭರವಸೆ ನೀಡಿರುವುದಕ್ಕೆ ಪ್ರಚಾರ ಕೊಟ್ಟಿದ್ದೂ ಒಂದು ರೀತಿಯಲ್ಲಿ ಟೀಕೆಯೇ.
ಅಖಿಲೇಶ್ ಸಿಂಗ್ ಸರ್ಕಾರವನ್ನು ವಜಾ ಮಾಡಬೇಕೆನ್ನುವ ಹಲವರ ಆಕ್ರೋಶಭರಿತ ಒತ್ತಾಯವನ್ನು ರಾಜಕೀಯ ಒತ್ತಡ ಎಂದು ತಳ್ಳಿ ಹಾಕಿದರೂ, ಈಗಿನ ಕಾವೇರಿರುವ ಮತಾಂಧತೆಯ ಸನ್ನಿವೇಶವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ನಿಜಕ್ಕೂ ಕೆಟ್ಟ ಕೆಲಸ. ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಈಗಾಗಲೇ ಹಿಂಸಾಚಾರದ ತನಿಖೆಗೆ ಒಂದು ನ್ಯಾಯಾಂಗ ಆಯೋಗವನ್ನು ರಚಿಸಿದ್ದಾರೆ. ಸಾಮಾಜಿಕ ಸಂಘರ್ಷಗಳ ಸನ್ನಿವೇಶದಲ್ಲಿ ನ್ಯಾಯಾಂಗ ತನಿಖೆಯಿಂದ ಯಾವ ಜನವರ್ಗವೂ ತೃಪ್ತವಾಗುವುದು ಸಾಧ್ಯವಿಲ್ಲ.
ನ್ಯಾಯಾಂಗ ತನಿಖೆಯ ವಿಚಾರಣೆಯ ಕಾರ್ಯಕಲಾಪವನ್ನೇ ಹಿಂದೆ ಅನೇಕ ಶಕ್ತಿಗಳು ಕೋಮು ಸಂಘರ್ಷದ ಅನಿವಾರ್ಯತೆಯನ್ನು ಸಮರ್ಥಿಸಲು ಬಳಸಿಕೊಂಡ ನಿದರ್ಶನಗಳಿವೆ. ಈಗ ಅನೇಕ ಸಂದರ್ಭಗಳಲ್ಲಿ ಸರ್ಕಾರಗಳೂ ನ್ಯಾಯಾಂಗ ತನಿಖಾ ಆಯೋಗಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಉತ್ತರ ಪ್ರದೇಶದಲ್ಲಿ ನಡೆದಿರುವುದು ಸಾಂಪ್ರದಾಯಿಕ ಕೋಮು ಗಲಭೆಗಳಲ್ಲ. ಯಾರೋ ಕಿಡಿಗೇಡಿಗಳು ನಡೆಸಿರುವ ಕುಚೇಷ್ಟೆಯೂ ಅಲ್ಲ. ಈ ಗಲಭೆಗಳ ಹಿಂದೆ ಇರುವ ಶಕ್ತಿಗಳಿಗೆ ರಾಜಕೀಯವಾಗಿ ಮೇಲುಗೈ ಸ್ಥಾಪಿಸುವ ಮಹತ್ವಾಕಾಂಕ್ಷೆ ಇದೆ. ಅದರಲ್ಲಿ ಅನುಮಾನವೇ ಇಲ್ಲ. ಸರ್ಕಾರಕ್ಕೂ ಇದೆಲ್ಲ ಗೊತ್ತಿಲ್ಲ ಎಂದೇನೂ ಅಲ್ಲ. ಆದರೆ ಸರ್ಕಾರ ನಡೆಸುವವರು, ಅದನ್ನು ವಿರೋಧಿಸುವವರು ರಾಜಕೀಯ ವ್ಯಕ್ತಿಗಳೇ ಅಲ್ಲವೇ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ತಮ್ಮ ವಿರುದ್ಧ ಪ್ರತಿಪಕ್ಷಗಳ ದುರುದ್ದೇಶ ಪೂರ್ವಕವಾದ ಅಪಪ್ರಚಾರವನ್ನು ಖಂಡಿಸುವುದು, ಅಧಿಕಾರದ ಹೊರಗಿರುವ ಪಕ್ಷಗಳು ಸರ್ಕಾರದ ಸೂತ್ರಗಳನ್ನು ಹಿಡಿದಿರುವ ರಾಜಕೀಯ ಪಕ್ಷದ ಪಕ್ಷಪಾತ ನೀತಿಯನ್ನು ಲೇವಡಿ ಮಾಡುವುದು ಒಂದೇ ನಾಣ್ಯದ ಎರಡು ಮುಖಗಳಷ್ಟೇ. ಮೊದಲೇ ಹೇಳಿದಂತೆ, ಈಗಿನ ಪರಿಸ್ಥಿತಿಗೆ ಒಂದು ದೊಡ್ಡ ಅಂಶದ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಲೇ ಬೇಕು. ಸೇನೆಯ ಶಕ್ತಿ ಪ್ರದರ್ಶನ, ಪ್ರತಿಪಕ್ಷಗಳ ನಾಯಕರ ಬಂಧನ, ಕರ್ಫ್ಯೂಗಳಿಂದ ಪರಿಸ್ಥಿತಿಯನ್ನು ಸುಧಾರಿಸುವುದು ಸಾಧ್ಯವಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ಇದ್ದರೆ, ಅದೇ ಪರಿಸ್ಥಿತಿಯನ್ನು ತಿಳಿಗೊಳಿಸಬಹುದು. ಉತ್ತರ ಪ್ರದೇಶ ಸರ್ಕಾರ ಈಗ ತನ್ನ ಸೆಕ್ಯುಲರ್ ಚಿಂತನೆಯನ್ನು ಕಾರ್ಯರೂಪದಲ್ಲಿ ತರಬೇಕು.