ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ಶ್ರೀಧರ ಹೆಗಡೆ ಚಂದ್ರಕಾನ ಅವರು ಮಿಂಚಂಚೆ ಕಳುಹಿಸಿದ್ದಾರೆ. ಸೆ.6ರ ಸಂಚಿಕೆಯಲ್ಲಿ ಬಂದಿರುವ ರಾಧಾಕೃಷ್ಣ ಭಡ್ತಿಯವರ ಕೃಷಿಗೆ ಸಂಬಂಧಿತ ಲೇಖನ ...
ಬೆಂಗಳೂರಿನಿಂದ ಶ್ರೀಧರ ಹೆಗಡೆ ಚಂದ್ರಕಾನ ಅವರು ಮಿಂಚಂಚೆ ಕಳುಹಿಸಿದ್ದಾರೆ. ಸೆ.6ರ ಸಂಚಿಕೆಯಲ್ಲಿ ಬಂದಿರುವ ರಾಧಾಕೃಷ್ಣ ಭಡ್ತಿಯವರ ಕೃಷಿಗೆ ಸಂಬಂಧಿತ ಲೇಖನ ಉಪಯುಕ್ತವಾಗಿದೆ. ಅದರಲ್ಲಿ ವರಾಹಮಿಹಿರನ 'ಬೃಹತ್ ಸಂಹಿತಾ'(ಸಂಹಿತ ಅಲ್ಲ) ಕೃತಿಯಲ್ಲಿ ಅಂತರ್ಜಲಕ್ಕೆ ಸಂಬಂಧಿತ ಅಧ್ಯಾಯವನ್ನು 'ಉದಗರ್ಗಳ' ಎಂದು ಕೊಟ್ಟಿದ್ದಾರೆ. ಈ ಹಿಂದೆ ಒಂದು ಲೇಖನದಲ್ಲಿ ಕೂಡಾ ಈ ರೀತಿ ಕೊಟ್ಟಿರುವ ನೆನಪು. ಆದರೆ ಇದು ಉದಕಾರ್ಗಲಂ ಎಂದಾಗಬೇಕು (ಉದಕ ಅರ್ಗಲಂ). ಅಂದರೆ ನೀರನ್ನು ಪಡೆಯುವುದು, ಗಳಿಸುವುದು, ಹುಡುಕುವುದು ಎಂಬರ್ಥದಲ್ಲಿ. ಅಧ್ಯಾಯದ ಶಿರೋನಾಮೆಯಲ್ಲಿ ಅಂತರ್ಜಲ ಎನ್ನುವುದು ಕೊಡಲ್ಪಟ್ಟಿಲ್ಲ. ಆದರೆ ಅಧ್ಯಾಯದ ವಿಷಯ -ವಸ್ತು ಅದಕ್ಕೆ ಸಂಬಂಧಿಸಿರುವುದರಿಂದ ವಿವಿಧ ಭಾಷೆಗಳ ಪಂಡಿತರು ಅಂತರ್ಜಲ ಶೋಧನೆ (Groundwater Exploration) ಎಂಬುದಾಗಿ ಭಾಷಾಂತರಿಸಿದ್ದಾರೆ. ಮೂಲ ಗ್ರಂಥದಲ್ಲಿ ಈ ಅಧ್ಯಾಯಕ್ಕೆ 'ದಕಾರ್ಗಲಂ' ಎಂದು ಕರೆಯಲಾಗಿದ್ದು, 'ಉ' ವರ್ಣಲೋಪ ಏಕೆ ಮಾಡಲಾಗಿದೆಯೆಂಬುದು ಆಶ್ಚರ್ಯವೆಂದು ಅಧ್ಯಯನ ನಡೆಸಿದ ಬೇರೆ ಬೇರೆ ತಜ್ಞರು ಹೇಳುತ್ತಾರೆ. ಈ ವಿಷಯದಲ್ಲಿ ಅನುಮಾನ, ಚರ್ಚೆಗಳಿಗೆ ಅವಕಾಶವಿರುವುದಂತೂ ನಿಜ' ಎಂದಿದ್ದಾರೆ.
ಬೆಂಗಳೂರಿನ ಬಾಣಸವಾಡಿಯಿಂದ ಎ.ಎನ್.ಭಟ್ ಅವರು ಪತ್ರ ಕಳುಹಿಸಿದ್ದಾರೆ. ಆ.28ರ ಪತ್ರಿಕೆಯ 'ಬೈಟುಕಾಫಿ' ತುಂಬಾ ಕಹಿಯಾಯಿತು. ಮಕ್ಕಳು ಎಳೆವಯಸ್ಸಿನಲ್ಲಿ ಹೇಗೇಗೋ ಆಡುತ್ತಾರೆ. ಸಿಕ್ಕಿದ್ದನ್ನು ತಿನ್ನುತ್ತಾರೆ ಸಿಗದಿದ್ದರೆ ಕದ್ದು ತಿನ್ನುತ್ತಾರೆ. ಅವರ ಆ ವಯಸ್ಸಿನಲ್ಲಿ ಅದು ಕಳ್ಳತನ ಎಂದೂ ಗೊತ್ತಿರುವುದಿಲ್ಲ. ನೀವೂ ಚಿಕ್ಕವರಿರುವಾಗ ಯಾರದೋ ಮನೆಯ ಸೀಬೆಹಣ್ಣು ತಂದು ತಿಂದಿಲ್ಲವೇ? ಯಾರದೋ ಮಾವಿನಮರಕ್ಕೆ ಕಲ್ಲು ಹೊಡೆದಿಲ್ಲವೇ? ಅದು ಕಳ್ಳತನವೇ? ನಮ್ಮವರೇ, ನಮ್ಮ ಆರಾಧಕ, ಅವತಾರ ಪುರುಷ ಕೃಷ್ಣನನ್ನು ಕಳ್ಳ ಎಂದು ಬರೆಯಬಾರದಿತ್ತಲ್ಲವೇ! ಕೆಲವು ಬಂಡಾಯ ಬರಹಗಾರರು ಅದನ್ನೇ ಕಾಯುತ್ತಿರುತ್ತಾರೆ. ರೋಹಿತ್ ಚಕ್ರತೀರ್ಥರು ಈ ಸೂಕ್ಷ್ಮದ ಬಗ್ಗೆ ಯೋಚಿಸಬೇಕಿತ್ತು' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮೊಳಕಾಲ್ಮೂರಿನಿಂದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಟಿ.ಬ್ರಹ್ಮಾನಂದ ತಪ್ಪೊಂದನ್ನು ಬೊಟ್ಟು ಮಾಡಿ ತೋರಿಸಿದ್ದಾರೆ. ಸೆ.3ರ ಶಿವಮೊಗ್ಗ ಆವೃತ್ತಿಯ ಪುಟ 4ರಲ್ಲಿ 'ರಾಮಚಂದ್ರ ಕಳಕಳಿಗೆ ಸಂಸದ ಸಿದ್ದೇಶ್ವರ ಶ್ಲಾಘನೆ' ಶೀರ್ಷಿಕೆಯ ಚಿತ್ರದ ಕೆಳಗೆ ಜಗಳೂರು ತಾಲೂಕು ಗಡಿಭಾಗದ ಗಾಣಗಟ್ಟೆ ಗ್ರಾಮದಲ್ಲಿ ಶ್ರೀ ಮಾಯಮ್ಮ ವಸತಿಸೌಧ ಲೋಕಾರ್ಪಣೆ ಸಮಾರಂಭದಲ್ಲಿ ಜಿ.ಎಂ.ಸಿದ್ದೇಶ್ವರ, ಎಸ್.ವಿ. ರಾಮಚಂದ್ರ, ರಘು ಆಚಾರ್ ಇತರರು ಪಾಲ್ಗೊಂಡಿದ್ದರು ಎಂದಿದೆ. ಆದರೆ ಚಿತ್ರದಲ್ಲಿರುವವರು ಸಚಿವ ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಚ್.ಕೆ. ಪಾಟೀಲ್. ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಸಚಿವ ಶಾಮನೂರು ಮನೆಯಲ್ಲಿ ತೆಗೆದಂತಿದೆ' ಎಂದಿದ್ದಾರೆ.
'ಕಳ್ಳ ಕೃಷ್ಣ' ಎಂದು ಪ್ರೀತಿ ಹಾಗೂ ಮುದ್ದಿನಿಂದ ಕರೆಯುವುದು ವಾಡಿಕೆ. ಕೃಷ್ಣನ ಬಾಲ ಲೀಲೆಗಳಲ್ಲಿ ಈ ರೀತಿಯ ಸಂಗತಿಗಳು ಬರುತ್ತವೆ. ಕೃಷ್ಣನ ಮೇಲಿನ ಅಪಾರ ಪ್ರೀತಿ ಹಾಗೂ ಮುದ್ದಿನಿಂದ ಈ ರೀತಿಯಾಗಿ ಕರೆಯಲಾಗುತ್ತದೆ. ಬಹುತೇಕ ಸಣ್ಣ ಮಕ್ಕಳಿಗೆ ಒಂದಲ್ಲ ಒಂದು ಸಂದರ್ಭದಲ್ಲಿ 'ಛೀ ಕಳ್ಳ' ಎಂದು ನಾವೇ ಕರೆಯುತ್ತೇವೆ. ಅದರರ್ಥ ಅವರು ಏನನ್ನೋ ಕದ್ದಿದ್ದಾರೆ ಎಂದಲ್ಲ. ಅದೇ ದೃಷ್ಟಿಯಿಂದ ಕೃಷ್ಣನನ್ನು 'ಕಳ್ಳ ಕಷ್ಣ' ಎಂದು ಕರೆಯುತ್ತಾರೆಯೇ ಹೊರತು ಪೊಲೀಸ್ ಪ್ರಕರಣಗಳಲ್ಲಿ ಬಂಧನವಾಗುವ ಕಳ್ಳನಲ್ಲ. ಚಕ್ರತೀರ್ಥ ಅವರ ಲೇಖನದಲ್ಲೆಲ್ಲಿಯೂ ಕೃಷ್ಣನ ಬಗ್ಗೆ ಋಣಾತ್ಮಕವಾಗಿ ಬರೆದಿಲ್ಲ. ಕೆಲವು ವಿಕ್ಷಿಪ್ತ ಮನಸ್ಥಿತಿಯ 'ಬಂಡಾಯ ಬರಹಗಾರರು' ಎಲ್ಲ ಕಡೆ ಇರುತ್ತಾರೆ.
- ವಿಶ್ವೇಶ್ವರ ಭಟ್