ಸಾಹಿತಿಯ ಪರೋಪಕಾರ
ಹಿಂದಿ ಸಾಹಿತ್ಯ ಜಗತ್ತಿನ ಸುಪ್ರಸಿದ್ಧ ಸಾಹಿತಿ ಪಂಡಿತ್ ಸೂರ್ಯಕಾಂತ ತ್ರಿಪಾಠಿ ಅರ್ಥಾತ್ ನಿರಾಲಾ ಅವರು ಒಳ್ಳೆಯ ಲೇಖಕರಾಗಿ..
ಹಿಂದಿ ಸಾಹಿತ್ಯ ಜಗತ್ತಿನ ಸುಪ್ರಸಿದ್ಧ ಸಾಹಿತಿ ಪಂಡಿತ್ ಸೂರ್ಯಕಾಂತ ತ್ರಿಪಾಠಿ ಅರ್ಥಾತ್ ನಿರಾಲಾ ಅವರು ಒಳ್ಳೆಯ ಲೇಖಕರಾಗಿ, ಕವಿಗಳಾಗಿ, ಪ್ರಬಂಧಕಾರರಾಗಿ, ಕಾದಂಬರಿಕಾರರಾಗಿ ಹೆಸರು ಗಳಿಸಿದವರು. ಅವರ ಆಲೋಚನೆಗಳಿಗೆ ಸ್ಫೂರ್ತಿ ನೀಡಿದವರಲ್ಲಿ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ರವೀಂದ್ರನಾಥ ಠಾಗೂರ್ ಸೇರಿದ್ದಾರೆ. ಧ್ವನಿ, ಗೀತಿಕಾ, ಬೇಲಾ ಮುಂತಾದ ಕವನ ಸಂಕಲನಗಳನ್ನೂ, ಅಪ್ಸರಾ, ಅಲ್ಕಾ, ಪ್ರಭಾವತಿ ಮುಂತಾದ ಕಾದಂಬರಿಗಳನ್ನೂ ಬರೆದಿದ್ದಾರೆ. ಇದರ ಜೊತೆಗೆ ಅನೇಕ ಅನುವಾದಿತ ಕೃತಿಗಳನ್ನೂ ಹೊರತಂದಿದ್ದಾರೆ. ಅವರು ಎಷ್ಟು ಸರಳ ಜೀವಿಗಳಾಗಿದ್ದರು ಎಂದರೆ ಅವರ ಹತ್ತಿರ ಪಾದರಕ್ಷೆಯಾಗಲೀ, ಬೆಚ್ಚಗಿನ ಉಡುಪಾಗಲೀ ಇರಲಿಲ್ಲ. ಇದನ್ನು ಮನಗಂಡ ಅವರ ಅಭಿಮಾನಿಗಳಲ್ಲಿ ಕೆಲವರು ಒಳ್ಳೆಯ ಪಾದರಕ್ಷೆಗಳನ್ನೂ, ಉತ್ತಮವಾದ ಕಂಬಳಿಯನ್ನೂ ನೀಡಿದ್ದರು. ನಿರಾಲಾ ಅವರ ಒಂದು ಗುಣವೆಂದರೆ ತಮ್ಮಲ್ಲಿದ್ದ ವಸ್ತುಗಳನ್ನು ಅಗತ್ಯವಿರುವವರಿಗೆ ನೀಡುವುದು. ತಮಗೆ ತೊಂದರೆಯಾದರೂ ಸರಿ, ಇತರರು ಕಷ್ಟ ಅನುಭವಿಸಬಾರದೆಂಬ ಆಲೋಚನೆ ಅವರದು. ಒಮ್ಮೆ ಅವರು ಹಾಲುತರಲು ಹೊರಗೆ ಹೋಗಿದ್ದರು. ಹೊರಗಡೆ ಅಸಾಧ್ಯ ಚಳಿಯಿದ್ದುದರಿಂದ ನಿರಾಲಾ ಅವರು ಕಂಬಳಿ ಹೊದ್ದು, ಚಪ್ಪಲಿ ಧರಿಸಿ ಹೋಗಿದ್ದರು. ರಸ್ತೆ ಗುಡಿಸುತ್ತಿದ್ದ ಜಾಡಮಾಲಿಯೊಬ್ಬ ಬರಿಗಾಲಲ್ಲಿ ಕೆಲಸ ಮಾಡುತ್ತಿದ್ದುದನ್ನು ನೋಡಿ ಮರುಗಿದರು. ಆತ ಏಕೆ ಚಪ್ಪಲಿ ಧರಿಸಿಲ್ಲವೆಂದು ಕೇಳಿದರು. ತಾನು ಬಡವನಾಗಿರುವುದರಿಂದ ತನಗೆ ಚಪ್ಪಲಿ ಕೊಳ್ಳುವುದು ಸಾಧ್ಯವಾಗದ ಮಾತು ಎಂದು ಅವನು ಉತ್ತರಿಸಿದನು. ಅವನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತಾವು ಧರಿಸಿದ್ದ ಹೊಸ ಚಪ್ಪಲಿಯನ್ನೇ ನೀಡಿದರು. ಆತ ಕೃತಜ್ಞತೆಯ ಎರಡು ಮಾತನಾಡಿದ್ದಕ್ಕೆ ಅವರಿಗೆ ತುಂಬಾ ಸಂತೋಷವಾಯಿತು. ಹಾಗೆಯೇ ಹಾಲಿನವಳ ಮನೆಗೆ ಹೋಗಿ ಹಾಲು ಹಾಕಲು ಕೂಗಿದರು. ಒಬ್ಬ ಮಹಿಳೆ ಕೈಯಲ್ಲಿ ಹಾಲಿನ ಚೆಂಬನ್ನು ಹಿಡಿದು ಹೊರಬಂದಳು. ಚಳಿ ಜಾಸ್ತಿಯಾಗಿದ್ದುದರಿಂದ ತನ್ನ ನೂಲು ಸೀರೆಯಲ್ಲಿ ನಡುಗುತ್ತಾ ಹಾಲು ಹಾಕುತ್ತಿದ್ದ ಅವಳನ್ನು ನೋಡಿ ಅವರಿಗೆ ಅಯ್ಯೋ ಎನಿಸಿತು. ತಾವು ಹೊದ್ದ ಕಂಬಳಿಯನ್ನೇ ಆಕೆಗೆ ನೀಡಿ ಅದನ್ನು ಉಪಯೋಗಿಸಲು ತಿಳಿಸಿ, ತಾವು ಮಾತ್ರ ನಡುಗುತ್ತಾ ಮನೆಗೆ ಬಂದರು. ನಿರಾಲಾ ಅವರ ಸ್ಥಿತಿ ನೋಡಿದ ಮನೆಯವರು ಅವರು ಒಯ್ದಿದ್ದ ಚಪ್ಪಲಿ ಮತ್ತು ಕಂಬಳಿ ಎಲ್ಲಿ ಹೋದವು ಎಂದು ಕೇಳಿದಾಗ ಅವರು, "ಅವರೆಡನ್ನೂ ಅದರ ಅವಶ್ಯಕತೆಯಿರುವವರಿಗೆ ನೀಡಿದ್ದೇನೆ" ಎಂದು ನಿರ್ಲಿಪ್ತರಾಗಿ ಹೇಳಿದರು. ಈ ಘಟನೆ ನಿರಾಲಾ ಅವರ ಸಾಮಾಜಿಕ ಕಳಕಳಿ, ಪರೋಪಕಾರದ ಮನೋಭಾವವನ್ನು ನಮಗೆ ಪರಿಚಯ ಮಾಡಿಕೊಡುತ್ತದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.