ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 11 Sept 2013, 10:51 am

ಬೆಂಗಳೂರಿನ ವಿ.ಹೇಮಂತಕುಮಾರ್ ಅವರು ಪತ್ರ ಕಳುಹಿಸಿದ್ದಾರೆ. 'ಸೆ.3ರ 4ನೇ ಪುಟದಲ್ಲಿ ಪತಿಯನ್ನೇ ಕೊಂದ ಪತ್ನಿ, ಪ್ರಿಯಕರ' ಸುದ್ದಿಯಲ್ಲಿ, 'ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲಗೈದ ಮಹಿಳೆ ಹಾಗೂ ಆಕೆಯ ಪ್ರಿಯಕರ ಸತೀಶ್‌ನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಆ.28ರಂದು ಬಿಟಿಎಂ ಬಡಾವಣೆಯ 2ನೇ ಹಂತದಲ್ಲಿ ಆಟೋ ಚಾಲಕ ಅರುಣ್‌ನನ್ನು ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು' ಎಂದಿದೆ. ಆದರೆ ಸುದ್ದಿ ಮಧ್ಯೆ ಪ್ರಕಟವಾಗಿರುವ ಚಿತ್ರದ ಕೆಳಗಡೆ 'ಕೊಲೆಯಾದ ಹರೀಶ್‌' ಎಂದಿದೆಯಲ್ಲ. ಕೊಲೆಯಾದವನ ಹೆಸರು ಎಂದರೆ ಪ್ರಮೀಳಾಳ ಗಂಡನ ಹೆಸರು ಅರುಣ್ ಅಲ್ಲವೇ?' ಎಂದು ಪ್ರಶ್ನಿಸಿದ್ದಾರೆ.
ಉತ್ತರ ಕನ್ನಡದ ಹೊನ್ನಾವರದಿಂದ ಶಂಕರನಾರಾಯಣ ಭಟ್ ಪತ್ರ ಬರೆದಿದ್ದಾರೆ. 'ಪುಟ 5ರಲ್ಲಿ ಹೈಕೋರ್ಟ್ ಕಟ್ಟಡವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ ಎಂಬ ಕ್ಯಾಪ್ಶನ್ ಕೊಡಲಾಗಿದೆ. ಈ ಚಿತ್ರವನ್ನು ನೋಡಿದರೆ ಯಾವುದೋ ಕಟ್ಟಡಕ್ಕೆ ಬೆಂಕಿ ಬಿದ್ದಂತೆ ಅನಿಸುತ್ತದೆ. ಅದಕ್ಕೂ ಹೆಚ್ಚಾಗಿ ಚಿತ್ರದ ಕೆಳಗೆ ಬರೆದ ಒಕ್ಕಣಿಕೆ ಇನ್ನೂ ವಿಚಿತ್ರವೆನಿಸಿತು. ಗುಲ್ಬರ್ಗ ಹೈಕೋರ್ಟ್ ಕಾಯಂ ಪೀಠ ಉದ್ಘಾಟನೆಗೆ ಸುಪ್ರೀಂ ಕೋರ್ಟ್ ಹಾಗೂ ಇತರೆ ರಾಜ್ಯಗಳ ಹೈಕೋರ್ಟ್ ನ್ಯಾಯಮೂರ್ತಿಗಳು ಆಗಮಿಸುತ್ತಿದ್ದಾರೆ. ಗುಲ್ಬರ್ಗಕ್ಕೆ ತೆರಳುವ ಮುನ್ನ ಅವರು ಬೆಂಗಳೂರಿಗೂ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ಕಟ್ಟಡವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ ಅಂತ ಬರೆದಿದೆ. ಈ ವರದಿಯನ್ನು ಇನ್ನು ಯಾವುದೇ ಬೇರೆ ರೀತಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಹೇಳಲು ಬರುತ್ತಿರಲಿಲ್ಲವೇ?' ಎಂದಿದ್ದಾರೆ.
ರಾಮನಗರದ ಬಾಳೆಕಟ್ಟೆಯಿಂದ ಮಾಗಡಿ ಶ್ರೀನಿವಾಸ್ ಪತ್ರ ಬರೆದಿದ್ದಾರೆ. 'ಆ.31ರ ಮುಖಪುಟದ 'ನಿಜ ಭಸ್ಮಾಸುರ' ಸುದ್ದಿಯ ಉಪಶೀರ್ಷಿಕೆಯಲ್ಲಿ 'ವಾರಾಣಸಿ, ಹೈದರಾಬಾದ್ ಸ್ಫೋಟದಲ್ಲಿ ನಂದೇ ಕೈವಾಡ........' ಎಂಬಲ್ಲಿ 'ವಾರಾಣಸಿ' ಎಂದಿದೆ. ಬಹುಶಃ ಇದು 'ವಾರಣಾಸಿ' ಎಂದು ಓದಿದ್ದ ನೆನಪಿದೆ. ದಯಮಾಡಿ ಈ ಪದದ ಗೊಂದಲ ಹೋಗಲಾಡಿಸಿ.'
'ಇನ್ನು 2ನೇ ಪುಟದ 'ಅತಿಥಿ ಶಿಕ್ಷಕರ ಆಯ್ಕೆಗೆ ಅರ್ಜಿ' ಶೀರ್ಷಿಕೆಯ ಸುದ್ದಿಯಲ್ಲಿ 'ವಿದ್ಯಾರ್ಹತೆ' ಬದಲಾಗಿ 'ವಿದ್ಯಾಹರ್ತೆ' ಆಗಿದೆ. ಹಾಗೆಯೇ 'ನೀಡಲಾಗುವುದು' ಬದಲಾಗಿ 'ನೀಡಲೀಗುವುದು' ಎಂದಾಗಿದೆ. ಬೈಟು ಕಾಫಿಯ 3ನೇ ಪುಟದ 'ಭ್ರಾಂ.... ಭ್ರೂಂ... ಆರೋಗ್ಯ ಜಾದೂ ಅಲ್ಲ' ಸುದ್ದಿಯ 'ಗುಣವಾಗೋಕೆ ಟೈಂ ಬೇಕು' ಉಪಶೀರ್ಷಿಕೆಯ 5ನೇ ಸಾಲಿನಲ್ಲಿ 'ಮಾಡುವ ಬಿಡುವ' ಎಂಬ ಅನರ್ಥ ಪದ ಬಳಕೆಯಾಗಿದೆ. ಇದು 'ಮಾಡಿಬಿಡುವ' ಎಂದಾಗಬೇಕಿತ್ತು' ಎಂದಿದ್ದಾರೆ.
ಹೇಮಂತಕುಮಾರ್ ಅವರ ಪ್ರಶ್ನೆ ಸರಿಯಾಗಿದೆ. ಚಿತ್ರ ಶೀರ್ಷಿಕೆಯಲ್ಲಾದ ಪ್ರಮಾದದಿಂದ ಅರುಣ್ ಹೆಸರಿನ ಬದಲಾಗಿ ಹರೀಶ್ ಎಂದು ಪ್ರಕಟವಾಗಿದೆ. ಇನ್ನು ಮಾಗಡಿ ಶ್ರೀನಿವಾಸ್ ಹೇಳಿರುವಂತೆ ವಾರಣಾಸಿ ಎಂದು ಈ ಹಿಂದೆ ಕರೆಯಲಾಗುತ್ತಿತ್ತು. ಆದರೆ ಪ್ರಸ್ತುತ ಈ ನಗರವನ್ನು ವಾರಾಣಸಿ ಎಂದೆ ಬಳಸಲಾಗುತ್ತದೆ, ವಾರಾಣಸಿಯೇ ಸರಿಯಾದ ಪ್ರಯೋಗ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement