ನಮ್ಮಲ್ಲಿ ನೈತಿಕತೆಯೇ ಇಲ್ಲವೇ?
ಶೋಷಿತ ಸಮಾಜಗಳ ಜನವರ್ಗಗಳಿಗೆ ಮರ್ಯಾದೆಯ ಬದುಕಿನ ಹಕ್ಕನ್ನು ಒದಗಿಸಲು ಸಂವಿಧಾನದಲ್ಲೇ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಮೀಸಲು ಪದ್ಧತಿಯನ್ನು ರೂಪಿಸಲಾಗಿದೆ. ಸಾಮಾಜಿಕ ನ್ಯಾಯ ವಿತರಣೆಯ ಸಿದ್ಧಾಂತದ ಅನುಷ್ಠಾನದಲ್ಲಿ ಇದೊಂದು ದೊಡ್ಡ ಹೆಜ್ಜೆ.
ಕಳೆದ 65 ವರ್ಷಗಳಲ್ಲಿ ಈ ನೀತಿ ಸಾಕಷ್ಟು ಪ್ರತಿಫಲವನ್ನೂ ನೀಡಿದೆ. ಜನರ ನಿರೀಕ್ಷೆ ಇನ್ನೂ ಹೆಚ್ಚಿದೆ. ಆದರೆ ಮೀಸಲು ನಿಯಮದ ಲಾಭ ಪಡೆಯಲು, ಮೀಸಲು ಸ್ಥಾನಕ್ಕೆ ಅರ್ಹರಲ್ಲದವರೂ ತಮ್ಮ ಜಾತಿಯನ್ನೇ ಬದಲಾಯಿಸುವುದಕ್ಕೆ ಮುಂದಾಗುವುದು, ಅದಕ್ಕೆ ಅಧಿಕಾರಿಗಳು ಕುಮ್ಮಕ್ಕು ಕೊಡುವ ಕೆಟ್ಟ ಚಾಳಿಯೂ ಆರಂಭವಾದಂತಿದೆ. ಕನ್ನಡ ಪ್ರಭದಲ್ಲೇ ಇಂತಹ ವರದಿಯೊಂದು ಬುಧವಾರ ಪ್ರಕಟವಾಗಿದೆ.
ಸಂವಿಧಾನದ ಅಧಿಕಾರವನ್ನು ಬಳಸಿ, ನ್ಯಾಯ ಸಮ್ಮತವಾದ, ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲು ರಚನೆಯಾಗಿರುವ ಪವಿತ್ರ ಸಂಸ್ಥೆಗಳಲ್ಲೂ ಇತ್ತೀಚೆಗೆ ಕೇಳಿ ಬರುತ್ತಿರುವ ದೂರುಗಳು ಹೇರಳವಾಗಿವೆ. ಲೋಕಸೇವಾ ಆಯೋಗ, ಉಚ್ಚ ನ್ಯಾಯಾಲಯಗಳು, ಕಾರ್ಯಾಂಗ-ಶಾಸಕಾಂಗಗಳ ಅತ್ಯುನ್ನತ ಸ್ಥಾನಗಳಲ್ಲೂ ಎಲ್ಲ ರೀತಿಯ ಪಾರದರ್ಶಕ ವ್ಯವಸ್ಥೆಗಳನ್ನೂ ಮಣ್ಣುಗೂಡಿಸುವಂತಹ ಪ್ರಕರಣಗಳು ಅಧಿಕೃತವಾಗಿಯೇ ಪ್ರಕಟವಾಗಿವೆ.
ಮೋಸ ಮಾಡಿ, ಸಲ್ಲದ ಸಂವಿಧಾನಾತ್ಮಕ ಸ್ಥಾನಮಾನ ಪಡೆಯುವುದಕ್ಕೆ ಹಿಂದೆ-ಮುಂದೆ ನೋಡದೇ ಮುಂದಾಗುತ್ತಿರುವ ಪ್ರತಿಷ್ಠಿತರ ವರ್ತನೆಯನ್ನು ಗಮನಿಸಿದರೆ ಏನಿದು, ನಮ್ಮಲ್ಲಿ ಈಗ ನೈತಿಕತೆಯೇ ಮಾಯವಾಗಿದೆಯೇ ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾದ ಸ್ಥಿತಿಯನ್ನು ನಾವು ತಲುಪಿದ್ದೇವೆ. ಈ ಸಮಸ್ಯೆಯ ಪರಿಹಾರಕ್ಕೆ ಇರುವುದು ಒಂದೇ ಮದ್ದು: ತಪ್ಪಿತಸ್ಥರು ಸಿಕ್ಕಿ ಬಿದ್ದಾಗ ಅತ್ಯಂತ ಕಠಿಣ ಶಿಕ್ಷೆ.