ಅಪ್ನಿ ದುನಿಯಾ, ಅಪ್ನಾ ಅಶಿಯಾನಾ!
ಸೈನ್ಯಕ್ಕೆ ಸೇರುವ ಉದ್ದೇಶದಿಂದ ಪೂನಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಕಲಿತು, ಡೆಹ್ರಾಡೂನಿನ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದ ನವೀನ್ಗುಲಿಯಾ ಎಂಬ ಯುವಕನಿಗೆ ದೇಶಸೇವೆಗೆ ಅವಕಾಶ ದೊರತಿದ್ದಕ್ಕಾಗಿ ತುಂಬಾ ಸಂತಸವುಂಟಾಯಿತು. ಇನ್ನೇನು ಸೇನೆಗೆ ಸೇರಿ ತನ್ನ ಸಾಧನೆ ತೊರಬೇಕು ಎನ್ನುವಷ್ಟರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನವೀನ್ಗುಲಿಯಾ, ಕತ್ತಿನ ಸ್ವಾಧೀನ ಕಳೆದುಕೊಂಡು ಗಾಲಿ ಕುರ್ಚಿಯಲ್ಲಿ ತಿರುಗಾಡುವ ಪರಿಸ್ಥಿತಿಗೆ ಬಂದ. ಆಗ ಆತನಿಗಾದ ದುಃಖ ಅಷ್ಟಿಷ್ಟಲ್ಲ. ಏನು ಮಾಡಬೇಕೆಂದು ತಿಳಿಯದೆ, ಕೊನೆಗೆ ಕಂಪ್ಯೂಟರ್ ವಿಜ್ಞಾನ ಕಲಿಯಲು ಕಾಲೇಜಿಗೆ ಸೇರಿದ. ಬರೆಯುವ ಸಾಮರ್ಥ್ಯವಿಲ್ಲದ್ದರಿಂದ ಕೇಳಿದ್ದನ್ನು ಚಾಚೂ ತಪ್ಪದೆ ಹೇಳಿ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಓಡಾಡಲು ತನ್ನ ಕಾರನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡಿಕೊಂಡ. ಲದಾಖ್ನಲ್ಲಿ ವಾಹನ ಚಲಾಯಿಸಿ ತನ್ನ ಹೆಸರನ್ನು ಲಿಮ್ಕಾ ದಾಖಲೆಗೆ ಸೇರುವಂತೆ ಮಾಡಿದ. ಅವನ ಈ ಸಾಧನೆಯಿಂದ ಸ್ಫೂರ್ತಿ ಪಡೆಯಲು ದೇಶದ ವಿವಿಧ ಭಾಗಗಳಿಂದ ಇವನಿಗೆ ಕರೆ ಬರುತ್ತಲೇ ಇತ್ತು. ತನ್ನ ವಾಹನದಲ್ಲಿಯೇ ಪಯಣಿಸಿ, ಯುವಕರಿಗೆ ಸಮಾಜಸೇವೆ, ದೇಶಸೇವೆ ಮಾಡಲು ಪ್ರೇರೇಪಿಸುತ್ತಿದ್ದ. ಒಮ್ಮೆ ಒಂದು ನಗರದ ಮಾರುಕಟ್ಟೆಯಲ್ಲಿ ತಿರುಗಾಡುವಾಗ ಹರಿದ ಲಂಗ ಧರಿಸಿದ, ಬರಿಗಾಲಲ್ಲಿ ನಡೆದಾಡುವ ಬಾಲಕಿ ಹಸಿವಿನಿಂದ ಅಳುತ್ತಿರುವುದನ್ನು ನೋಡಿದ. ಇಂತಹ ಅಲಕ್ಷಿತ ಅನಾಥ ಮಕ್ಕಳಿಗೆ ಏನಾದರೂ ಮಾಡಬೇಕು ಎಂದು ಅವನಿಗನ್ನಿಸಿತು. ಆಗ ರೂಪುಗೊಂಡಿದ್ದೇ 'ಅಪ್ನಿ ದುನಿಯಾ, ಅಪ್ನಾ ಅಶಿಯಾನಾ' ಎಂಬ ಸ್ವಯಂ ಸೇವಾ ಸಂಸ್ಥೆ. ಅದರ ಮುಖ್ಯ ಉದ್ದೇಶ ಅನಾಥರಾದ, ಬೀದಿ ಮಕ್ಕಳ ಪ್ರತಿಭೆಯನ್ನು ಗುರುತಿಸುವುದು, ಶಿಕ್ಷಣ ನೀಡುವುದು. ಪೋಷಕರಿಂದ ತ್ಯಜಿಸಲ್ಪಟ್ಟ ಅಂಗವಿಕಲ ಮಕ್ಕಳ ಕಲ್ಯಾಣ, ವೈದ್ಯಕೀಯ ಚಿಕಿತ್ಸೆ, ಪೌಷ್ಟಿಕ ಆಹಾರ ಮುಂತಾದ ಅನೇಕ ಯೋಜನೆಗಳನ್ನು ನವೀನ್ ರೂಪಿಸಿದ್ದಾನೆ. ಅಗತ್ಯವಿರುವ ಮಕ್ಕಳಿಗೆ ಕಂಬಳಿ, ವಸ್ತ್ರ, ಆಹಾರ, ಶಿಕ್ಷಣ ಕೊಡಿಸುವ ಇವನ ಸಾಹಸಕ್ಕೆ ಕೆಲವರು ಕೈಜೋಡಿಸಿದ್ದೂ ಇದೆ. ಕೆಲವು ಮಕ್ಕಳನ್ನು ಅವರ ಪೋಷಕರ ಮನೆಯಲ್ಲಿಯೇ ಬಿಟ್ಟು ಅವರ ಅಗತ್ಯಕ್ಕನುಗುಣವಾಗಿ ಸಹಾಯ ಮಾಡಲು ಮತ್ತು ಆತ್ಮವಿಶ್ವಾಸ ತುಂಬಲು ಶ್ರಮಿಸುತ್ತಿದ್ದಾನೆ. ಇದು ಆತನಿಗೆ ಅದ್ಭುತ ಯಶಸ್ಸನ್ನು ನೀಡಿತಲ್ಲದೆ. ಅನೇಕ ಮಕ್ಕಳ ಬಾಳು ಬೆಳಗುವಂತೆ ಮಾಡಿದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.