ಮಾಡಿದ ತಪ್ಪಿಗೆ ದಂಡದ ಪ್ರಮಾಣ ನ್ಯಾಯವಾಗಿರಲಿ
ದೇಶದ ಪ್ರಸಿದ್ಧ ಟೆಲಿಕಾಮ್ ಸಂಸ್ಥೆಗಳ ಪ್ರತಿನಿಧಿಗಳು ಕೇಂದ್ರ ಸಚಿವ ಕಪಿಲ್ ಸಿಬಲ್ ಅವರನ್ನು ಭೇಟಿಯಾದಾಗ ಆ ಸಭೆಯಲ್ಲಿ ಚರ್ಚೆಗೆ ಬಂದಿದ್ದ ವಿಷಯ ಬಹು ಸೂಕ್ಷ್ಮವಾದದ್ದು, ವಿಚಿತ್ರವಾದದ್ದು.
ಈ ಸಂಸ್ಥೆಗಳು ತಪ್ಪು ಮಾಡಿದರೆ, ದಂಡ ವಿಧಿಸುವ ಅಧಿಕಾರ ಇಲಾಖೆಯ ಅಧಿಕಾರಿಗಳಿಗೇ ಇದೆ. ಆ ಅಧಿಕಾರವನ್ನು ಬಳಸಿಕೊಂಡು ಅಧಿಕಾರಿಗಳು ಸಣ್ಣ-ಪುಟ್ಟ ತಪ್ಪುಗಳಿಗೂ 50 ಕೋಟಿ ರುಪಾಯಿಗಳ ದಂಡ ವಿಧಿಸುತ್ತಿದ್ದಾರೆನ್ನುವ ದೂರನ್ನು ಕೇಳಿದ ಸಚಿವರಿಗೇ ಆಶ್ಚರ್ಯವಾಯಿತು.
ಸಚಿವ ಸಿಬಲ್ ಈಗ ಸಂಸ್ಥೆಗಳು ಮಾಡುವ ತಪ್ಪುಗಳಿಗೂ, ಅಧಿಕಾರಿಗಳು ವಿಧಿಸುವ ದಂಡದ ಪ್ರಮಾಣಕ್ಕೂ ಸಂಬಂಧವಿರಬೇಕೆನ್ನುವುದನ್ನು ಒಪ್ಪಿಕೊಂಡು, ಅಧಿಕಾರಿಗಳಿಗೆ ಸೂಕ್ತ ರೀತಿಯ ಸೂಚನೆಯನ್ನು ಕೊಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ವಿಧಿಸಲಾಗಿರುವ ದಂಡದ ಪ್ರಮಾಣವನ್ನು ವಿಮರ್ಶಿಸುವ ಭರವಸೆಯೂ ಬೃಹತ್ ಸಂಸ್ಥೆಗಳಿಗೆ ಸಿಕ್ಕಿದೆ.
ಈಗಾಗಲೇ ವಿಧಿಸಲಾಗಿರುವ ದಂಡದ ಪ್ರಮಾಣ ಸುಮಾರು 6850 ಕೋಟಿ ರುಪಾಯಿಗಳಷ್ಟಾಗುತ್ತದೆ. ಮೇಲ್ನೋಟಕ್ಕೇ ಇಷ್ಟು ದೊಡ್ಡ ಮೊತ್ತದ ದಂಡ ಹೆಚ್ಚಾಯಿತೇನೋ ಎನಿಸುತ್ತಿದೆ.
ಸರ್ಕಾರದಲ್ಲಿ ಹಾಗೂ ಸಮಾಜದಲ್ಲಿ ಈಗ ಟೆಲಿಕಾಮ್ ಕಂಪೆನಿಗಳೆಂದರೆ ಅತಿ ಶ್ರೀಮಂತ ಕಂಪೆನಿಗಳು, ಅವು ಅಧಿಕ ಲಾಭವನ್ನು ಗಳಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಅನುಸರಿಸುತ್ತವೆ ಎನ್ನುವ ಭಾವನೆ ಮೂಡಿರುವುದು ನಿಜ. ಅದಕ್ಕೆ ಕೆಲವು ಬೃಹತ್ ಪ್ರಮಾಣದ ಅವ್ಯವಹಾರಗಳಿಗೆ ಸಿಕ್ಕಿರುವ ಪ್ರಚಾರವೇ ಕಾರಣ. ಆಡಿಟ್ ವರದಿಗಳಲ್ಲೂ ಈ ವಿಚಾರದ ಪ್ರಸ್ತಾಪವಾಗಿದೆ.
ಅಧಿಕಾರಿಗಳೇಕೆ ಅನಗತ್ಯವಾಗಿ ಭಾರಿ ಪ್ರಮಾಣದ ದಂಡವನ್ನು ವಿಧಿಸುತ್ತಿದ್ದಾರೆ. ಎನ್ನುವ ಪ್ರಶ್ನೆಗೆ ಸಿಕ್ಕಿರುವ ಉತ್ತರ; ಕೆಲವು ಪ್ರಕರಣಗಳಲ್ಲಿ ಕಡಿಮೆ ಪ್ರಮಾಣದ ದಂಡವನ್ನು ವಿಧಿಸಿದಾಗ, ಅಧಿಕಾರಿಗಳ ವಿರುದ್ಧ ಲಂಚ ಪಡೆದು ದಂಡದಲ್ಲಿ ಕಡಿಮೆ ಮಾಡಿದ್ದಾರೆನ್ನುವ ಆರೋಪ ಹೊರಿಸಲಾಗಿತ್ತು.
ನಿಜಕ್ಕೂ ಇದೊಂದು ವಿಚಿತ್ರ ಪ್ರಕರಣ ಅದನ್ನು ಕಪಿಲ್ ಸಿಬಲ್ ಅವರಂತಹ ಚಾಣಾಕ್ಷರೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.