ಕೊನೆಗೂ ಮೋದಿ ಹೆಸರು; 2014ರ ಚುನಾವಣೆ ಶಂಖನಾದ
ಸೆಪ್ಟೆಂಬರ್ ಹದಿನೇಳು ಬಿಜೆಪಿ ನಾಯಕ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ. ಪ್ರಧಾನಿ ಪೀಠಕ್ಕೆ ಅವರೇ ಪಕ್ಷದ ಅಭ್ಯರ್ಥಿ ಎನ್ನುವ ಪ್ರಕಟಣೆ ಆ ದಿನಕ್ಕೆ ಮುಂಚೆಯೇ ಹೋರಬೀಳಬೇಕು ಎನ್ನುವ ಬಯಕೆ ಶುಕ್ರವಾರ ಈಡೇರಿತ್ತು. ಭಾರತೀಯ ರಾಜಕಾರಣಕ್ಕೇ ಇದು ಹೊಸದು.
2004-2009 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತು ಹೈರಾಣವಾಗಿದ್ದ ಪಕ್ಷಕ್ಕೆ ಒಂದು ರೀತಿಯಲ್ಲಿ ಚೈತನ್ಯವನ್ನು ತುಂಬಿದ್ದು, ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಗಳಿಸಿದ ಹ್ಯಾಟ್ರಿಕ್.
2002ರ ಫೆಬ್ರವರಿ ಅನಂತರ ಗುಜರಾತ್ನಲ್ಲಿ ಎಡೆಬಿಡದೇ ನಡೆದಿದ್ದ ಹತ್ಯಾಕಾಂಡದ ಅನಂತರ, ಮುಖ್ಯಮಂತ್ರಿಯಾಗಿ ಆ ಘಟನೆಗಳನ್ನು ನಿಭಾಯಿಸಿದ ರೀತಿಯಿಂದ ಅನೇಕರ ಕೆಂಗಣ್ಣು, ಹರಿತ ನಾಲಿಗೆಗೆ ಗುರಿಯಾಗಿದ್ದ ನರೇಂದ್ರ ಮೋದಿ ಮೂರನೆಯ ಬಾರಿ ವಿಜಯಗಳಿಸಿದಾಗ ದೇಶದ ಜನರ ವಿಚಾರ ಹೇಗಾದರೂ ಇರಲಿ, ಅದರಲ್ಲಿ ಬಿಜೆಪಿಯ ಸದಸ್ಯ-ಕಾರ್ಯಕರ್ತ- ಅಭಿಮಾನಿಗಳ ಬಳಗ ಕಂಡಿದ್ದು ಪಕ್ಷಕ್ಕೊಬ್ಬ ಹೊಸ ನಾಯಕನ ಆಗಮನ. ಕೇಂದ್ರದ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಕೂಟದ ಸರ್ಕಾರ ಹಗರಣಗಳಲ್ಲಿ ಮುಳುಗಿ, ತನ್ನ ಸಂಗಾತಿಗಳನ್ನು ಉಳಿಸಿಕೊಳ್ಳುವ ತೊಳಲಾಟದಲ್ಲಿ ಭಾಗಶಃ ಸೋತು ಪೇಲವವಾದಾಗ, ಬಿಜೆಪಿಯಲ್ಲಿ, ಪ್ರಧಾನವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರಿಗೆ ಹೊಸ ಆಸೆಯೊಂದು ಅಂಕುರವಾಗಿತ್ತು.
ಇಡೀ ದೇಶವನ್ನು ಎರಡು ಶಕ್ತಿಕೂಟಗಳ ಸಂಘರ್ಷಕ್ಕೆ ಅಣಿಗೊಳಿಸುವ ಪ್ರಯತ್ನ ಸಫಲವಾದರೆ, ಬಿಜೆಪಿ ನೇತೃತ್ವದ ಕೂಟ ದೆಹಲಿಯಲ್ಲಿ ಅಧಿಕಾರದ ದಂಡವನ್ನು ಹಿಡಿಯುವುದು ಸಾಧ್ಯ ಎನ್ನುವ ನಂಬಿಕೆ ಬೇರೂರಿದಾಗ, ಆ ಕೆಲಸಕ್ಕೆ ಪಕ್ಷದ ಮುಖವಾಗಿ ನರೇಂದ್ರ ಮೋದಿ ಅವರ ಮುಖವನ್ನು ಬಿಂಬಿಸಿದರೆ ಮಾತ್ರ ಆ ನಂಬಿಕೆ ನಿಜವಾಗಬಹುದೆನ್ನುವ ಭಾವನೆಯೂ ಬೇರೂರಿತ್ತು.
ಕಳೆದ ಒಂದು ವರ್ಷದಲ್ಲಿ ಆ ನಂಬಿಕೆಯ ಬೆನ್ನುಹತ್ತಿ ಪ್ರಧಾನಿ ಪೀಠಕ್ಕೆ ನರೇಂದ್ರ ಮೋದಿ ಅಭ್ಯರ್ಥಿ ಎನ್ನುವ ಆಂದೋಲನವನ್ನೇ ಆರಂಭಿಸಿದಾಗ, ಹಿರಿಯರಾದ ಆಡ್ವಾಣಿ, ಮುರುಳಿ ಮನೋಹರ ಜೋಷಿ ಅವರೆಲ್ಲರ ಅಭಿಪ್ರಾಯ, ಮೋದಿ ಅವರ ಮುಖ ತೋರಿಸಿದರೆ, ಬಿಜೆಪಿ - ಕಾಂಗ್ರೆಸ್ಗಳ ನಡುವಣ ಸಂಘರ್ಷದ ಸ್ವರೂಪವೇ ಗುರ್ತು ಸಿಕ್ಕದ ರೀತಿಯಲ್ಲಿ ನರೇಂದ್ರ ಮೋದಿ ಬೇಕೆ ಬೇಡವೇ ಎನ್ನುವ ಚರ್ಚೆಯೇ ಪ್ರಧಾನವಾದೀತು ಎನ್ನುವುದೇ ಆಗಿತ್ತು.
ಸಂಘ ಪರಿವಾರದ ಮಾತೃಸ್ಥಾನದ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ ಭಾಗವತ್ ಅವರ ಆದೇಶವೂ ಕೆಲಸ ಮಾಡಿತ್ತು. ಆರೆಸ್ಸೆಸ್ ನರೇಂದ್ರ ಮೋದಿಯನ್ನು ಒಪ್ಪಿತ್ತು. ಬಿಜೆಪಿಯ ಅಧ್ಯಕ್ಷ ರಾಜನಾಥ ಸಿಂಗ್ ಅವರೇ ನರೇಂದ್ರ ಮೋದಿ ಪರವಾಗಿ ನಾಯಕರ, ಪ್ರಮುಖವಾಗಿ ಪಕ್ಷದ ಸಂಸದೀಯ ಮಂಡಳಿಯ ಸದಸ್ಯರ, ಮನ ಒಲಿಸಲು ಮುಂದಾದರು. ಅದರಲ್ಲಿ ಸಾಕಷ್ಟು ಯಶಸ್ಸನ್ನೂ ಗಳಿಸಿದರು. ಲಾಲ್ಕೃಷ್ಣ ಆಡ್ವಾಣಿ, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅಂತಿಮ ಕ್ಷಣದವರೆಗೂ ನರೇಂದ್ರ ಮೋದಿಯವರಂತಹ ವಿವಾದಗ್ರಸ್ತ ವ್ಯಕ್ತಿಯ ಹೆಸರಿನಲ್ಲಿ ಚುನಾವಣೆಗೆ ಹೋಗುವುದು ಬೇಡ ಎಂದು ಹೇಳಿದರೂ, ಬಹಿರಂಗವಾಗಿ ಒಂದು ಮಾತನ್ನೂ ಮೋದಿ ವಿರುದ್ಧ ಆಡಿರಲಿಲ್ಲ.
ಶುಕ್ರವಾರ ಸಂಜೆಯ ವೇಳೆಗೆ, ದೆಹಲಿಯ ಅಶೋಕಾ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದ ಸುತ್ತಮುತ್ತಲ ಪ್ರದೇಶ ಒಂದು ಬಿಜೆಪಿ ರಾಜಕೀಯ ಮಹಾಮೇಳದ ಸ್ವರೂಪವನ್ನು ಪಡೆದಿತ್ತು. ಸಂಜೆ ಆರಂಭವಾದ ಸಂಸದೀಯ ಮಂಡಳಿಯ ಹನ್ನೆರಡು ಸದಸ್ಯರಲ್ಲಿ ಮೂವರನ್ನು ಬಿಟ್ಟರೆ ಉಳಿದವರೆಲ್ಲ ನರೇಂದ್ರ ಮೋದಿ ಅವರ ಹೆಸರನ್ನು ಬಹಿರಂಗವಾಗಿ ಒಪ್ಪಿದ್ದಾರೆನ್ನುವ ಲೆಕ್ಕ ಪ್ರಕಟವಾದಾಗ ತಮಟೆಗಳ ಸದ್ದು ಆರಂಭ. ಅದು ಸಂಘ ಪರಿವಾರದ ಶಂಖನಾದ.
ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ ಮಹತ್ವದ ದಿನ. ಮಧ್ಯಾಹ್ನದವರೆಗೂ ಅಹಮದಾಬಾದ್ನಲ್ಲೇ ಎಂದಿನ ದೈನಂದಿನ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದು, ಸಂಜೆಯ ವೇಳೆಗೆ ದೆಹಲಿಯಲ್ಲಿ ತಮ್ಮ ಹೆಸರನ್ನು ಗಟ್ಟಿಯಾಯಿತೆನ್ನುವ ಬಲ್ಲ ಮೂಲಗಳಿಂದ ಭರವಸೆಯ ಹಿನ್ನೆಲೆಯಲ್ಲಿ ವಿಮಾನವನ್ನೇರಿದರು.
ಆ ವೇಳೆಗಾಗಲೇ ಪ್ರಸಿದ್ಧ - ಪ್ರತಿಷ್ಠಿತ ಟಿ.ವಿ. ವಾಹಿನಿಗಳಲ್ಲಿ ಯಾರಾದರೂ ಒಪ್ಪಲಿ, ಬಿಡಲಿ, ನರೇಂದ್ರ ಮೋದಿಯ ಹೆಸರು, ಪ್ರಧಾನಿ ಪೀಠದ ಅಭ್ಯರ್ಥಿಯ ಸ್ಥಾನಕ್ಕೆ ಸಂಸದೀಯ ಮಂಡಲಿಯ ಪರವಾಗಿ ಸೂಚನೆಯಾಗುವುದು ಶತಸ್ಸಿದ್ಧ ಎನ್ನುವ ವಾಕ್ಯ ಪದೇ ಪದೇ ಪ್ರಕಟವಾಗುತ್ತಿತ್ತು. ಆ ಮೋದಿಯ ಹೆಸರು ಪಕ್ಕಾ ಆಗಿದೆ ಉಳಿದಿರುವುದು ಅಧಿಕೃತ ಪ್ರಕಟಣೆ ಒಂದೇ ಎನ್ನುವ ಸ್ಥಿತಿ ಏರ್ಪಾಟಾಗಿತ್ತು. ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್, ಸಂಸದೀಯ ಮಂಡಳಿಯ ಸಭೆಯ ಅನಂತರ ನರೇಂದ್ರ ಮೋದಿ ಅವರ ಹೆಸರನ್ನು ಪ್ರಕಟಿಸಿದರು. ಆಗ ಅಲ್ಲಿ ಲಾಲ್ ಕೃಷ್ಣ ಆಡ್ವಾಣಿ ಅವರು ಇರಲಿಲ್ಲ.
ಬಿಜೆಪಿಯ ಸಂಗಾತಿ ಪಕ್ಷಗಳಾದ ಶಿವಸೇನೆ, ಶಿರೋಮಣಿ ಅಕಾಲಿ ದಳಗಳೂ ಮೋದಿಯವರ ಹೆಸರನ್ನು ಒಪ್ಪಿವೆ. ಇದು ಪಕ್ಷದ ಆಯ್ಕೆ. ಅದನ್ನು ಜನರ ಮುಂದೆ ಕೊಂಡೊಯ್ಯುವುದು ಪಕ್ಷದ ಕಾರ್ಯಕರ್ತರ ಜವಾಬ್ದಾರಿ. ಕೊನೆಗೂ ರಾಷ್ಟ್ರೀಯ ಸ್ವಂಯ ಸೇವಕ ಸಂಘ ತನ್ನ ಆಯ್ಕೆಯನ್ನು ಬಿಜೆಪಿಯ ಮೇಲೆ ಹೇರಿದೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದು ಸಮಯೋಚಿತವಾಗಿತ್ತು. ಈ ನಿರ್ಧಾರ ಸರಿಯೇ, ತಪ್ಪೇ ಎನ್ನುವುದು ಈಗ ಇತ್ಯರ್ಥವಾಗುವ ಪ್ರಶ್ನೆ ಅಲ್ಲ. ಸಮರದ ಘೋಷಣೆಯಂತೂ ಆಗಿದೆ.