ತಪ್ಪಾಯ್ತು ತಿದ್ಕೋತೀವಿ
ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- "ಕನ್ನಡಪ್ರಭ'ಕ್ಕೆ ಎಂತಹ ವಿಶಿಷ್ಟ ಓದುಗರು ಇರುತ್ತಾರೆ ಎಂಬುದನ್ನು ಸೆಪ್ಟೆಂಬರ್ ಹನ್ನೊಂದರ 'ತಪ್ಪಾಯ್ತು ತಿದ್ಕೊತೀವಿ' ಅಂಕಣದಿಂದ ವೇದ್ಯವಾಯ್ತು ಮತ್ತು ಸಂತೋಷವಾಯ್ತು. ಶ್ರೀ ಕೃಷ್ಣ ಜಯಂತಿ ಅಂಗವಾಗಿ 'ಬೈಟು ಕಾಫಿ'ಯಲ್ಲಿ ಬಂದ ಲೇಖನದಲ್ಲಿ 'ಕಳ್ಳ ಕೃಷ್ಣ' ಎಂದು ಸಂಬೋಧಿಸಿದ್ದಕ್ಕೆ ಬೇಸರ ಪಟ್ಟ ಓದುಗರ ಸಂವೇದನೆಗೆ ಅನಂತ ವಂದನೆಗಳು. ನೀವು ಕೊಟ್ಟ ಸಮಜಾಯಿಷಿ ಸೂಕ್ತವಾಗಿದೆ. ಈ ವಿಚಾರವನ್ನು ಮತ್ತೊಂದು ದೃಷ್ಟಿಕೋನದಿಂದಲೂ ನೋಡಬಹುದು ಎಂಬುದಕ್ಕೆ ಈ ಪತ್ರ. ದಯವಿಟ್ಟು 'ಕಳ್ಳ ಕೃಷ್ಣ' ಪ್ರಕರಣವನ್ನು ಮುಚ್ಚಿಹಾಕದೆ ಓದುಗರ ಸಲುವಾಗಿ ಬಿಚ್ಚಿಟ್ಟು ಮುಂದುವರೆಸಬೇಕಾಗಿ ವಿನಂತಿ.'
'ಶ್ರೀ ಕೃಷ್ಣನ ಜೀವನ ಲೀಲಾ ಚರಿತ್ರೆಯ ಮುಖ್ಯ ಆಕರ ಶ್ರೀ ವೇದವ್ಯಾಸರ ಶ್ರೀಮದ್ಭಾಗವತ. ಈ ಗ್ರಂಥವು ಕೃಷ್ಣನನ್ನು ಮೂರು ಸಂದರ್ಭಗಳಲ್ಲಿ ಕೃಷ್ಣನನ್ನು 'ಕಳ್ಳ' ಅಥವಾ 'ಚೋರ' ಎಂದು ಕರೆದಿದೆ. ಗೋಕುಲದಲ್ಲಿ ಬಾಲಕನಾಗಿದ್ದಾಗ ಮನೆಗಳಲ್ಲಿ ಬೆಣ್ಣೆ ಕದ್ದಿದ್ದರಿಂದ ನವನೀತ ಚೋರ, ಮೆಚ್ಚಿನ ಮಡದಿ ಸತ್ಯಭಾಮೆಯೊಂದಿಗೆ ಅಮರಾವತಿಗೆ ಹೋದಾಗ ಇಂದ್ರನ ನರ್ಸರಿಯಲ್ಲಿ ಇದ್ದ ಪಾರಿಜಾತ ವೃಕ್ಷವನ್ನು ಕೇಳಿದರು. ಕೊಡದಿದ್ದಾಗ ಬಲವಂತವಾಗಿ ಹೊತ್ತು ತಂದಿದ್ದರಿಂದ ಪಾರಿಜಾತಾಪಹಾರಕ.'
'ಕೃಷ್ಣನೇ ತಮಗೆ ಗಂಡನಾಗಬೇಕೆಂದು ಸುಂದರ ಗೋಪಿಕಾಸ್ತ್ರೀಯರು ಕಾತ್ಯಾಯಿನಿ ವ್ರತ ನಿಮಿತ್ತ ಯಮುನೆಯಲ್ಲಿ ನಗ್ನರಾಗಿ ಸ್ನಾನ ಮಾಡುತ್ತಿದ್ದಾಗ ಅವರ ಬಟ್ಟೆಗಳನ್ನು ಕದ್ದಿದ್ದರಿಂದ ಬಂದ ಹೆಸರು ಗೋಪಿವಸ್ತ್ರಾಪಹಾರಕ.'
'ಈ ಎಲ್ಲಾ ಕಳ್ಳತನ ಪ್ರಕರಣದ ಹಿಂದೆ ಆಧ್ಯಾತ್ಮದ ಸಂದೇಶವನ್ನು ಬಲ್ಲವರು ಹೇಳುತ್ತಾರೆ. ಕೃಷ್ಣ ಒಂದು ರೀತಿ ಲೋಕ ವಿಲಕ್ಷಣ ಕಳ್ಳ. ಕೃಷ್ಣನನ್ನು 'ಕನ್ನಡಪ್ರಭ' ಕೇವಲ ಕಳ್ಳ ಎಂದು ಮಾತ್ರ ಕರೆದಿದೆ. ಭಾಗವತ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ 'ಗೋಪಿಜನಜಾರ' ಎಂದು ಕರೆದಿದೆ. ಪಾಮರ ಜನರು ಇದನ್ನೇ ತಪ್ಪಾಗಿ ತಿಳಿಯದಿರಲಿ ಎನ್ನುವ ದೃಷ್ಟಿಯಿಂದ ಅದೇ ವೇಳೆ ಕೃಷ್ಣನನ್ನು ಅನಾದಿ ಬ್ರಹ್ಮಚಾರಿ ಎಂದೂ ಕೊಂಡಾಡಿದೆ.'
'ಇನ್ನು ಕೃಷ್ಣನನ್ನು 'ಕಳ್ಳ' ಎಂದು ಸಂಬೋಧಿಸಿದರೆ ತಪ್ಪೇನಿಲ್ಲ ಎಂಬುದರ ಸಂವಾದಿಯಾಗಿ, ಶ್ರೀ ವ್ಯಾಸರಾಜರು ರಚಿಸಿದ 'ಸುಂದರ ಉಗಾಭೋಗ'ವನ್ನು ಇಲ್ಲಿ ನೆನೆಪಿಸಿಕೊಳ್ಳುವುದು ಸೂಕ್ತವಾಗಿದೆ.'
'ಜಾರತ್ವವನು ಮಾಡಿದ ಪಾಪಗಳಿಗೆಲ್ಲ -ಗೋಪಿಜನಜಾರನೆಂದರೆ ಸಾಲದೆ
ಚೋರತ್ವವನು ಮಾಡಿದ ಪಾಪಗಳಿಗೆಲ್ಲ -ನವನೀತಚೋರನೆಂದರೆ ಸಾಲದೆ
ಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲ -ಮಾವನ ಕೊಂದವ ಎಂದರೆ ಸಾಲದೆ
ಪ್ರತಿದಿವಸ ಮಾಡಿದ ಪಾಪಗಳಿಗೆಲ್ಲ -ಪತಿತ ಪಾವನ ಎಂದರೆ ಸಾಲದೆ
ಇಂತಿಪ್ಪ ಮಹಿಮೆಯೊಳು ಒಂದನಾದರು ಒಮ್ಮೆ- ಸಂತತ ನೆನೆವರ ಸಲಹುವ ಸಿರಿಕೃಷ್ಣ' ಎಂದು ಹೇಳಲಾಗಿದೆ' ಎಂದಿದ್ದಾರೆ.
ವಿಶ್ವೇಶ್ವರ ಭಟ್