ತಪ್ಪಾಯ್ತು ತಿದ್ಕೋತೀವಿ
ಮಧ್ಯಪ್ರದೇಶದಿಂದ ನಾಗಮಣಿ ಅವರು ಬರೆಯುತ್ತಾರೆ- 'ಸೆ.6ರ ಸಂಚಿಕೆಯ ಮೂರನೆಯ ಪುಟದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮಕ್ಕಳು ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುತ್ತಿರುವ ಚಿತ್ರದ ತಲೆಬರಹ 'ತಸ್ಮೈಶ್ರೀ ಗುರುವೇ ನಮಃ' ಎಂದು ಪ್ರಕಟವಾಗಿದೆ. ಅದು ಗುರವೇ ಎಂದಾಗಬೇಕಿತ್ತು. ಸಂಸ್ಕೃತದ 'ಉ'ಕಾರಾಂತ ಪುಲ್ಲಿಂಗ ಶಬ್ದ. 'ಗುರು'ವಿನ ಚತುರ್ಥೀ ವಿಭಕ್ತಿ, ಏಕವಚನ 'ಗುರವೇ' ( ಗುರುವಿಗೆ ಎಂಬರ್ಥದಲ್ಲಿ ) ಎಂದಾಗುತ್ತದೆ. ಆದುದರಿಂದ ಆ ತಲೆಬರಹದ ಸರಿಯಾದ ರೂಪ 'ತಸ್ಮೈ ಶ್ರೀ ಗುರವೇ ನಮಃ' ಎಂದಾಗಬೇಕಿತ್ತು' ಎಂದಿದ್ದಾರೆ.
ಅಥಣಿಯಲ್ಲಿ ವೈದ್ಯರಾಗಿರುವ ಪ್ರಭಾ ಆರ್. ಗುಳ್ಳ ಅವರು ಬರೆಯುತ್ತಾರೆ- 'ಸೆ.9ರಂದು ಸಂಪಾದಕೀಯದಲ್ಲಿ 'ರಾಹುಲ್ ಹೆಸರು ಪಕ್ಕಾ' ಎಂಬಲ್ಲಿ 2ನೇ ಪ್ಯಾರಾದ ಕೊನೆಯ ವಾಕ್ಯ 'ಈ ಹಿನ್ನೆಲೆಯಲ್ಲಿ ರಷ್ಯದ ಸೇಂಟ್ ಪೀಟ್ರ್ಸ್ಬರ್ಗ್ನಿಂದ ದೆಹಲಿಗೆ ವಿಶೇಷ ವಿಮಾನದಲ್ಲಿ ಹಿಂತಿರುಗುವಾಗ ಪತ್ರಕರ್ತರ ಜತೆ ಮಾತನಾಡುತ್ತಾ ಈಗ ಕಾಂಗ್ರೆಸ್ಸಿನ ಆಯ್ಕೆ ರಾಹುಲ್ ಗಾಂಧಿ ಅವರೇ ಎಂದು ಹೇಳಿರುವುದು ರಾಜಕೀಯವಾಗಿ ಪ್ರಸ್ತುತವಾಗುತ್ತದೆ.' ಎಂದಿದೆ.'
'ಆದರೆ ಇಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನು ಹೇಳಿದ್ದು ಯಾರು ಎಂಬುದು ಸ್ಪಷ್ಟವಾಗಿಲ್ಲ. ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದಿರಬುಹುದು. ಅವರ ಹೆಸರೇ ವಾಕ್ಯದಿಂದ ಬಿಟ್ಟುಹೋಗಿದೆ.'
'5ನೇ ಪ್ಯಾರಾದ ಕೊನೆಗೆ, 'ಅನೇಕ ರಾಜ್ಯಗಳಲ್ಲಿ ಪ್ರಮುಖ ಸಮಿತಿಗಳ ರಚನೆಯಲ್ಲಿ ಅವರ (ರಾಹುಲ್ ಗಾಂಧಿ) ಚಿಂತನೆಯ ಕುರುಹು ಎದ್ದು ಕಂಡಿದೆ. ಮದನಗೋಪಾಲ್, ಮೀನಾಕ್ಷಿ ನಟರಾಜನ್ ಅವರಂತಹವರು ಇದ್ದಕ್ಕಿದ್ದಂತೆ ಸಕ್ರಿಯರಾಗಿದ್ದಾರೆ. ಅವರೆಲ್ಲ ರಾಹುಲ್ ಆರಿಸಿದ ಯುವಕರೇ' ಎಂದಿದೆ. ಮೀನಾಕ್ಷಿ ನಟರಾಜನ್ ಯುವಕರಾಗುತ್ತಾರಾ? ಅವರು ಹೆಣ್ಣಲ್ಲವೇ? ಹಾಗೆಯೇ 'ಸಕ್ರಿಯವಾಗಿದ್ದಾರೆ' ಎನ್ನುವ ಬದಲು 'ಸಕ್ರಿಯರಾಗಿದ್ದಾರೆ' ಎನ್ನಬಹುದು.'
'ಇನ್ನು ರಾಹುಲ್ ಗಾಂಧಿ ಅವರ ಭಾವಚಿತ್ರ ತಮ್ಮ ಕಡೆ ಸಾಕಷ್ಟು ಇದ್ದೇ ಇರುತ್ತದೆ. ಹಣೆಯ ಮೇಲೆ ನಾಮ ಇಟ್ಟ ಚಿತ್ರವನ್ನೇ ಏಕೆ ಆರಿಸಿಕೊಳ್ಳಲಾಗಿದೆ? ಅದಕ್ಕೂ ಪ್ರಧಾನಿಯವರ ರಷ್ಯಾ ಪ್ರವಾಸಕ್ಕೂ ಯಾವ ಸಂಬಂಧವೂ ಇರಲಿಲ್ಲ. ಕರುಣಾನಿಧಿ ಪುತ್ರಿ ಕನಿಮೋಳಿ ಅವರನ್ನು ರಾಹುಲ್ ಗಾಂಧಿ ಮೊನ್ನೆಯೇ ಭೇಟಿಯಾಗಿದ್ದಕ್ಕಗಾಲಿ, ಮೀನಾಕ್ಷಿ ನಟರಾಜರನ್ನು ಅವರೇ ಆರಿಸಿ ಸಂಸದರನ್ನಾಗಿಸಿಕೊಂಡಿದ್ದಕ್ಕಾಗಲೀ ಈ ನಾಮಕ್ಕೆ ಸಂಬಂಧವಿಲ್ಲ. ಅದೊಂದು ಹಿಂದುಗಳ ಸಾಂಪ್ರದಾಯಿಕ ಸಂಕೇತ. ಅದನ್ನಿಟ್ಟುಕೊಂಡಿರುವ ರಾಹುಲ್ ಗಾಂಧಿ ಹಿಂದು ಎಂದು ಬಿಂಬಿಸುವ ಪ್ರಯತ್ನವೇ?'
'ಭಾವಚಿತ್ರಗಳು ನೂರು ಶಬ್ದಗಳು ಹೇಳಿದ್ದನ್ನು ಓದುಗರ ಅಥವಾ ಸಂಪಾದಕೀಯ ಓದದೇ ಕೇವಲ ಕಣ್ಣಾಡಿಸುವವರ ಮೇಲೂ ಅಗಾಧ ಪರಿಣಾಮಬೀರುತ್ತವೆ. ಸಂಪಾದಕೀಯಗಳಲ್ಲಿ ಭಾವಚಿತ್ರ ಪ್ರಕಟಿಸುವಾಗ ಅದರ ಭಾವ ಸಾಮೂಹಿಕ ಮತ್ತು ಸಾಂದರ್ಭಿಕವಾಗಿರಬೇಕು. ಇಲ್ಲದಿದ್ದರೆ ಭಾವಚಿತ್ರವನ್ನು ಕೈಬಿಡುವುದೇ ಒಳ್ಳೆಯದು. ಸಕಾರಣವಿಲ್ಲದ ಭಾವಚಿತ್ರವು ಸಂಪಾದಕೀಯವನ್ನೇ ಜಾಹೀರಾತಾಗಿಸಿಬಿಡಬಹುದಾದ ಅಪಾಯ ಇರುತ್ತದೆ. ಜಾಗ್ರತೆ' ಎಂದಿದ್ದಾರೆ.
ವಿಶ್ವೇಶ್ವರ ಭಟ್