ತಿ.ತಾ.ಶರ್ಮರು ಪ್ರತೀಕಾರ ತೀರಿಸಿಕೊಂಡ ಬಗೆ
ತಿರುಮಲೆ ತಾತಾಚಾರ್ಯ ಶರ್ಮರು ಗಾಂಧಿಯುಗದ ದೇಶಸೇವಕರು. 'ವಿಶ್ವಕರ್ನಾಟಕ' ಪತ್ರಿಕೆಯನ್ನು ಸ್ಥಾಪಿಸಿ, ಅದರಲ್ಲಿ ನಿರ್ಭೀತ ಸಂಪಾದಕೀಯಗಳನ್ನು ಬರೆದು ಜನರನ್ನು ಬಡಿದೆಬ್ಬಿಸುವ ಕಾರ್ಯ ಮಾಡುತ್ತಿದ್ದರು. ಅವರ ಆತ್ಮ ಚರಿತ್ರೆ "ನನ್ನ ಜೀವನ ಮತ್ತು ನನ್ನ ಧ್ಯೇಯ" ಅನೇಕ ಸ್ವಾರಸ್ಯಕರ ಘಟನೆಗಳ ಆಗರ.
1906-07ರ ಸಮಯ. ಅವರು ಗೌರಿಬಿದನೂರಿನ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಪ್ರತಿದಿನ ಬೆಳಿಗ್ಗೆ ಮೌಲಿಕ ಕಥೆ ಹೇಳುವುದರ ಮೂಲಕ ಶಾಲೆ ಪ್ರಾರಂಭವಾಗುತ್ತಿತ್ತು. ಒಂದು ದಿನ ಪ್ರಾರ್ಥನಾ ಸಮಯದಲ್ಲಿ ಒಬ್ಬ ವ್ಯಕ್ತಿ ಬಂದು ನಿಂತರು. ಅವರು ಕಥೆ ಹೇಳಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆ ವ್ಯಕ್ತಿ ತಮ್ಮ ಕಂಚಿನ ಕಂಠದಿಂದ 'ವಂದೇ ಮಾತರಂ' ಗೀತೆಯನ್ನು ಬಹು ಶುಶ್ರಾವ್ಯವಾಗಿ ಹಾಡಿದರು. ಶಾಲೆಯ ಎದುರೇ ತಹಶೀಲ್ದಾರರ ಬಂಗಲೆ. ಅಲ್ಲಿಂದ ಪೊಲೀಸು ಪೇದೆಯೊಬ್ಬ ಓಡೋಡಿ ಬಂದು ಮುಖೋಪಾಧ್ಯಾಯರನ್ನು ತಹಶೀಲ್ದಾರರ ಮನೆಗೆ ಕರೆದೊಯ್ದ. ಆಗಿನ ಕಾಲದಲ್ಲಿ ವಂದೇ ಮಾತರಂನಂತಹ ರಾಷ್ಟ್ರಭಕ್ತಿ ಸಾರುವ ಗೀತೆಗಳನ್ನು ಹಾಡುವಂತಿರಲಿಲ್ಲ. ಆದ್ದರಿಂದ ತಹಶೀಲ್ದಾರರು "ಶಾಲೆಗೆ ರಾಜದ್ರೋಹಿಗನ್ನೇಕೆ ಕರೆಸಿದಿರಿ?" ಎಂದು ಗದರಿ, ಇನ್ನು ಮುಂದೆ ಇಂತಹ ಕೆಲಸ ಮಾಡಬಾರದೆಂದು ತಾಕೀತು ಮಾಡಿ ಕಳುಹಿಸಿದರು. ಅದು ಬಾಲಕ ಶರ್ಮರಿಗೆ ತಿಳಿಯಿತು. ಆಗಲೇ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಅವರು ತಮ್ಮ ಇನ್ನಿತರ ಗೆಳೆಯರೊಡನೆ ಕೂಡಿಕೊಂಡು ಮಾರನೆಯ ದಿನದಿಂದ ಎಲ್ಲ ಅಂಗಡಿ, ಮನೆಗಳ ಗೋಡೆಯ ಮೇಲೆ ಇದ್ದಲಿ ಚೂರಿನಿಂದ ವಂದೇ ಮಾತರಂ ಗೀತೆಯನ್ನು ಬರೆದು ತಹಶೀಲ್ದಾರರ ಮೇಲೆ ಸೇಡು ತೀರಿಸಿಕೊಂಡಿದ್ದರು. ಅದೇ ರೀತಿ ಬೆಂಗಳೂರಿನ ಲಂಡನ್ ಮಿಶನ್ ಶಾಲೆಯಲ್ಲಿ ಓದುತ್ತಿದ್ದಾಗ ಇ.ಪಿ.ರೈಸ್ ಎಂಬ ಪ್ರಿನ್ಸಿಪಾಲರಿದ್ದರು. ಅವರು ಬೋರ್ಡ್ನ ಮೇಲೆ ಬರೆದಿದ್ದನ್ನು ಶರ್ಮರು ಕಷ್ಟಪಟ್ಟು, ಕಣ್ಣು ಕಿರಿದಾಗಿಸಿಕೊಡು ಬರೆಯುತ್ತಿದ್ದರು. ಇದನ್ನು ನೋಡಿ ಶರ್ಮರಿಗೆ ದೃಷ್ಟಿ ದೋಷವಿರಬೇಕೆಂದು ಗ್ರಹಿಸಿದರು ಪ್ರಿನ್ಸಿಪಾಲರು. ಶಾಲಾ ಸಮಯ ಮುಗಿದ ಮೇಲೆ ಅವರನ್ನು ತಮ್ಮ ಕುದುರೆ ಗಾಡಿಯಲ್ಲಿ ಕರೆದುಕೊಂಡು ಹೋಗಿ ಡಾ.ರಾಮಸ್ವಾಮಿ ಅಯ್ಯಂಗಾರ್ ಎಂಬ ನೇತ್ರ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರು. ನಂತರ ನಾಲ್ಕಾರು ದಿನ ಒಬ್ಬ ಗುಮಾಸ್ತನನ್ನು ಜೊತೆಮಾಡಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿ ಒಂದು ಕನ್ನಡಕವನ್ನೂ ಕೊಡಿಸಿದರು. ಹೀಗೆ ತಮಗೆ ಕಣ್ಣುಗಳನ್ನು ದಯಪಾಲಿಸಿದ ರೈಸ್ ಅವರ ಬಗ್ಗೆಯೂ ಅವರು ಕಡೇ ತನಕ ಕೃತಜ್ಞರಾಗಿದ್ದರು. ವಿಪರ್ಯಾಸವೆಂದರೆ ಗದರಿದ ತಹಶೀಲ್ದಾರರು ಭಾರತೀಯರಾಗಿದ್ದರೆ, ಪ್ರೀತಿ ಮತ್ತು ಕಾಳಜಿ ತೋರಿದ ಪ್ರಿನ್ಸಿಪಾಲರು ಆಂಗ್ಲರಾಗಿದ್ದರು!
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.