ರೆಡ್ ಇಂಡಿಯನ್ನರ ಆತ್ಮಾಭಿಮಾನ
ಇದು ಸುಮಾರು ಒಂದೂವರೆ ಶತಮಾನದ ಹಿಂದೆ ನಡೆದ ಘಟನೆ. ಅಮೆರಿಕದಲ್ಲಿ ಇಂಗ್ಲಿಷರು ಕಾಲಿಡುವುದಕ್ಕಿಂತ ಮುಂಚೆ ಅಲ್ಲಿ ರೆಡ್ ಇಂಡಿಯನ್ನರು ಇದ್ದರು. ಮೂಲ ನಿವಾಸಿಗಳಾಗಿದ್ದ ಅವರು ಅಪ್ರತಿಮ ಸ್ವಾಭಿಮಾನಿಗಳಾಗಿ ಬಿಳಿಯರ ದಬ್ಬಾಳಿಕೆಯನ್ನು ಪ್ರತಿರೋಧಿಸಿದರು. ಇಂಗ್ಲಿಷರು ತಮ್ಮ ಪ್ರದೇಶವನ್ನು ಬಲಾತ್ಕಾರದಿಂದ ವಶಪಡಿಸಿಕೊಂಡದ್ದನ್ನು ಮತ್ತು ತಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ನಾಶಮಾಡುವ ಬಿಳಿಯರ ದಬ್ಬಾಳಿಕೆಯನ್ನು ಪ್ರಬಲವಾಗಿ ವಿರೋಧಿಸಿ ಹೋರಾಟ ಮಾಡುವ ಹಂತಕ್ಕೆ ತಲುಪಿದರು. ಅಂತಹ ಒಂದು ಹೋರಾಟ ಅವರ ಸ್ವಾಭಿಮಾನದ ಸಂಕೇತವಾಗಿದೆ. ಒಮ್ಮೆ ಬಹಾಯೋ ಪ್ರಾಂತ್ಯದ ಡಬ್ಲಿನ್ನಗರದ ಹೊರಗೆ ಸಿಂತೋಟಾ ಪಾರ್ಕ್ ಎಂಬ ರೆಡ್ ಇಂಡಿಯನ್ನರಿಗೆ ಸೇರಿದ ಸ್ಥಳವನ್ನು ಆಂಗ್ಲ ಉದ್ಯಮಿಯೊಬ್ಬ ಖರೀದಿಸಿದ. ಅಲ್ಲಿ ತನ್ನ ಭವ್ಯವಾದ, ದುಬಾರಿ ಬಂಗಲೆಯನ್ನು ಕಟ್ಟಿಸುವ ಇರಾದೆ ಅವನಿಗಿತ್ತು. ಇದು ರೆಡ್ ಇಂಡಿಯನ್ನರನ್ನು ಕೆರಳಿಸಿತು. ಮೊದಲೇ ಯೂರೋಪಿಯನ್ನರ ವಿಷಯದಲ್ಲಿ ಅಸಮಾಧಾನಗೊಂಡಿದ್ದ ರೆಡ್ ಇಂಡಿಯನ್ನರು ತಮ್ಮ ಪ್ರದೇಶದಲ್ಲಿ ಬಿಳಿಯನೊಬ್ಬ ಬಂದು ವಾಸಿಸುವುದನ್ನು ಬಲವಾಗಿ ವಿರೋಧಿಸಿದರು. ಅದಕ್ಕೆ ಅವಕಾಶ ನೀಡಬಾರದೆಂದು ನಿರ್ಧರಿಸಿ, ಅಲ್ಲಿದ್ದ ರೆಡ್ ಇಂಡಿಯನ್ನರೆಲ್ಲಾ ಸೇರಿಕೊಂಡು ಹಣಕೂಡಿಸಿ ಆ ಬಿಳಿಯ ನೀಡಿದ ಹಣದ ದುಪ್ಪಟ್ಟು ಕೊಟ್ಟು ಆ ಜಾಗವನ್ನು ಕೊಂಡುಕೊಂಡರು. ಅದನ್ನು ತಮ್ಮ ಸ್ವಾಭಿಮಾನದ ಕುರುಹಾಗಿ ಇಡಲು ಮತ್ತು ಅದು ಮೊದಲಿನಂತೆ ಗದ್ದೆಯಾಗಿಯೇ ಉಳಿಯಬೇಕೆಂದು ನಿರ್ಧರಿಸಿ, ಗಾರೆಯಿಂದ ಮಾಡಿದ ಜೋಳದ ಕಡ್ಡಿಯನ್ನು ಅಲ್ಲೆಲ್ಲಾ ನಿರ್ಮಾಣ ಮಾಡಿದರು. ನಂತರ ಅದಕ್ಕೆ ಸಿಮೆಂಟ್ಲೇಪನ ಮಾಡಲಾಯಿತು. ಹೀಗೆ ಅದೊಂದು ಜೋಳದ ಗದ್ದೆಯಾಗಿ, ರೆಡ್ ಇಂಡಿಯನ್ನರ ಆತ್ಮಾಭಿಮಾನದ ಕುರುಹಾಗಿ ಇಂದಿಗೂ ಉಳಿದಿದೆ. ಆ ಗದ್ದೆಯ ಸಮೀಪ ರೆಡ್ ಇಂಡಿಯನ್ನರ ಅಪ್ರತಿಮ ನಾಯಕ ಸೌಚಾ ಎಟಿನ್ ಎಂಬುವವನ ಬಳಪದ ಕಲ್ಲಿನಲ್ಲಿ ಕೆತ್ತಿದ ಮುಖವನ್ನು ಸ್ಥಾಪಿಸಲಾಗಿದೆ. ಸೌಚಾ ಎಟೆನ್ ಎಂದೂ ಆಡಿದ ಮಾತಿಗೆ ತಪ್ಪದ ವ್ಯಕ್ತಿಯಾಗಿದ್ದ. ಅವನನ್ನು ಬಿಳಿಯರು ಲೆದರ್ ಲಿಪ್ಸ್ ಎಂದು ಕರೆಯುತ್ತಿದ್ದರು. ಆದರೆ ದುರಂತವೆಂದರೆ ಈ ಪ್ರದೇಶವನ್ನು ಸ್ವಾಭಿಮಾನದ ಕುರುಹಾಗಿ ಇಡುವ ಬದಲಾಗಿ ಅಲಕ್ಷ್ಯ ಮಾಡಲಾಗಿದೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.