ಇದು ಸಣ್ಣ ಪ್ರಕರಣವಲ್ಲ
ಆಂಧ್ರ ಪ್ರದೇಶದಲ್ಲಿ ಟೈಟೇನಿಯಂ ಹಾಗೂ ಇತರ ಖನಿಜಗಳ ಗಣಿಗಾರಿಕೆ-ರಫ್ತಿಗೆ ಅನುಮತಿ ಕೊಡಿಸುವ ಪ್ರಯತ್ನ ನಡೆದಿರುವುದರಲ್ಲಿ ...
ಆಂಧ್ರ ಪ್ರದೇಶದಲ್ಲಿ ಟೈಟೇನಿಯಂ ಹಾಗೂ ಇತರ ಖನಿಜಗಳ ಗಣಿಗಾರಿಕೆ-ರಫ್ತಿಗೆ ಅನುಮತಿ ಕೊಡಿಸುವ ಪ್ರಯತ್ನ ನಡೆದಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅದು ಅಂತಾರಾಷ್ಟ್ರೀಯ ವ್ಯವಹಾರದ ಒಂದು ಸಾಧಾರಣ ಪ್ರಕ್ರಿಯೆ.
ಆದರೆ ಅದಕ್ಕೆ ಬೇಕಾದ ಪರವಾನಗಿಗಳನ್ನು ಆಂಧ್ರಪ್ರದೇಶ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಕೊಡಿಸಲು ಪ್ರಭಾವ ಬೀರಲು ರಾಜ್ಯದ-ಕೇಂದ್ರದ ಅಧಿಕಾರಿಗಳಿಗೆ ಲಂಚ ಕೊಡುವ ಪಿತೂರಿ ಸಾಮಾನ್ಯವಾದದ್ದಲ್ಲ. ಅದು ಗಂಭೀರವಾದ ವಿಚಾರವೇ. ಇಂತಹ ಒಂದು ಪಿತೂರಿಯ ಪ್ರಕರಣದಲ್ಲಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆರಿಸಿ ಹೋಗಿರುವ ಕೆ.ವಿ.ಪಿ. ರಾಮಚಂದ್ರರಾವ್ (ಕಾಂಗ್ರೆಸ್) ಅವರೂ ಪಾಲುಗೊಂಡಿರಬಹುದೆಂದು ಅಮೆರಿಕದ ನ್ಯಾಯಮಂಡಳಿಯೊಂದು ದೋಷಾರೋಪವನ್ನು ಹೊರಿಸಿದ್ದು ನಿಜಕ್ಕೂ ಸಾಮಾನ್ಯವಾದ ವಿಚಾರವಲ್ಲ.
ಈ ಪ್ರಕರಣದಲ್ಲಿ ಭಾರತೀಯ ಮೂಲದ ಅಮೆರಿಕದ ಉದ್ಯಮಿಯೊಬ್ಬರು, ಉಕ್ರೇನ್ನ ಉದ್ಯಮಿಯೊಬ್ಬರು ಹಾಗೂ ಇನ್ನು ನಾಲ್ವರ ಮೇಲೆ ದೋಷಾರೋಪ ಹೊರಿಸಲಾಗಿದೆ ಎಂದು ಅಧಿಕಾರಸ್ಥ ಮೂಲಗಳೇ ತಿಳಿಸಿವೆ. ವಾಸ್ತವದಲ್ಲಿ ಇದು 180 ಲಕ್ಷ ಡಾಲರ್ಗಳಿಗೂ ಮೀರಿದ "ಬೃಹತ್ ಯೋಜನೆ".
ಈ ಪ್ರಕರಣವನ್ನು ಅಮೆರಿಕಕ್ಕೆ ಸಂಬಂಧಿಸಿದ ವಿಷಯ, ಅಲ್ಲಿಂದ ಏನಾದರೂ ದಾಖಲೆ ಬರುವವರೆಗೆ ನಾವೇನೂ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರದ ಅಲಕ್ಷ್ಯ ಮಾಡಬಾರದು. ಟೈಟೇನಿಯಂ ಖನಿಜ ಭಾರತದ ನಿಸರ್ಗ ಸಂಪತ್ತು. ಅದರ ಬಳಕೆಯ ವ್ಯವಹಾರದಲ್ಲಿ ಭ್ರಷ್ಟಾಚಾರದ ಆರೋಪ ಯಾವ ಮೂಲೆಯಿಂದ ಬಂದಿದ್ದರೂ ತನಿಖೆಯಾಗಬೇಕು.