ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮತದಾರರ ನೈತಿಕತೆಗೂ ಪರೀಕ್ಷೆಯ ಸಮಯ

ಕರ್ನಾಟಕ ರಾಜ್ಯ ಹಿಂದೆಂದೂ ಕಂಡರಿಯದ ರಾಜಕೀಯ ಭ್ರಷ್ಟಾಚಾರ ಹಾಗೂ ಹಗರಣಗಳಿಂದ ಸುದ್ದಿಯಾಗಿದೆ...

Rashmi Kasaragodu
Updated On : 5 Apr 2014, 12:52 pm

ಕರ್ನಾಟಕ ರಾಜ್ಯ ಹಿಂದೆಂದೂ ಕಂಡರಿಯದ ರಾಜಕೀಯ ಭ್ರಷ್ಟಾಚಾರ ಹಾಗೂ ಹಗರಣಗಳಿಂದ ಸುದ್ದಿಯಾಗಿದೆ. ಎಲ್ಲದಕ್ಕೂ ಜನಪ್ರತಿನಿಧಿಗಳೇ, ರಾಜಕೀಯ ಪಕ್ಷಗಳೇ ಕಾರಣವೆಂದು ಮತದಾರರ ಆರೋಪ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಶೇ. 80ಕ್ಕೂ ಹೆಚ್ಚು ಗ್ರಾಮೀಣ, ಪಟ್ಟಣ ಹಾಗೂ ನಗರ ಪ್ರದೇಶಗಳ ಮತದಾರರಲ್ಲಿ ಇಂದು ನೈತಿಕತೆ ಮತ್ತು ಮೌಲ್ಯಗಳು ಮಾಯವಾಗಿವೆ.
ಗ್ರಾಮೀಣ ಪ್ರದೇಶದಲ್ಲಿ ಹಣ, ಹೆಂಡ, ಬಾಡೂಟ, ಸೀರೆಗಳಿಗೆ ಮತವನ್ನು ಮಾರಿಕೊಳ್ಳುವ ಮತದಾರರಿದ್ದಾರೆ. ಪಟ್ಟಣ, ನಗರ ಪ್ರದೇಶಗಳಲ್ಲಿ ಗುಂಡು ಪಾರ್ಟಿ, ಗಿಫ್ಟ್ ಆಗಿ ಟಿವಿ, ಚಿನ್ನದ ಉಂಗುರ, ಮೂಗುತಿ, ಬೆಳ್ಳಿ ಬಟ್ಟಲುಗಳಿಗೆ ಮತವನ್ನು ಮಾರಿಕೊಳ್ಳುವ ಮತದಾರರಿದ್ದಾರೆ. ಇನ್ನು ವಿದ್ಯಾರ್ಥಿಗಳು ಕ್ರಿಕೆಟ್ ಟೂರ್ನಮೆಂಟ್, ವಾಲಿಬಾಲ್ ಟೂರ್ನಮೆಂಟ್ಗೆ ಕ್ರೀಡಾ ಸಾಮಗ್ರಿಗಳು, ಟೀ ಶರ್ಟ್, ಪ್ಯಾಂಟ್ ಹಾಗೂ ಊಟದ ವ್ಯವಸ್ಥೆ ಮಾಡುವಂತೆ ಅಭ್ಯರ್ಥಿಗಳಲ್ಲಿ ಬೇಡಿಕೆ ಇಡುತ್ತಾರೆ. ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳ ಮಹಿಳಾ ಮಣಿಗಳು ನಮ್ಮ ಸಂಘಕ್ಕೆ 10ರಿಂದ 20 ಸಾವಿರ ದೇಣಿಗೆ ಕೊಡಿ ಎಂದು ಬೇಡಿಕೆ ಇಟ್ಟು ಸದಸ್ಯರೇ ಹಣ ಹಂಚಿಕೊಳ್ಳುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಆಡುವ ಸಂಘಗಳು, ಸೀನ್ಸ್ ಕೊಡಿಸಿ, ಲೈಟ್ ಹಾಗೂ ಕುರ್ಚಿ ಅರೇಂಜ್ಮೆಂಟ್ ನಿಮ್ಮದೇ ಸ್ವಾಮಿ ಅಂತ ಅಭ್ಯರ್ಥಿಗಳನ್ನು ಗೋಗರೆಯುತ್ತಾರೆ. ನಮ್ಮೂರಲ್ಲಿರುವ ದೇವಸ್ಥಾನದ ಜೀರ್ಣೋದ್ಧಾರಕ್ಕೆ, ಗೋಪುರ ಕಟ್ಟಿಸಲು ಹಣ ಕೊಡಿ ಎಂದು ಊರ ಹಿರಿಯರು, ಯಜಮಾನರು ಬೇಡಿಕೆ ಇಡುತ್ತಾರೆ. ನಾನು ಬಡವ ಮಗಳ ಮದುವೆ ಮಾಡುತ್ತಿದ್ದೇನೆ ಎಂದು ವಿವಾಹ ಪತ್ರಿಕೆ ಕೊಟ್ಟು ಅಕ್ಕಿ ಕೊಡಿಸಿ, ಬಟ್ಟೆ ಕೊಡಿಸಿ ಹಣ ಸಹಾಯ ಮಾಡಿ ಎಂದು ಬೇಡಿಕೆ ಇಡುವ ಜನ. ವಯಸ್ಸಾದ ತಂದೆ ಅಥವಾ ತಾಯಿಯನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿದ್ದೇನೆ ಆಪರೇಷನ್ಗೆ ಹಣ ಸಹಾಯ ಮಾಡಿ ಎಂದು ಬೇಡಿಕೆ ಇಡುವ ಮಕ್ಕಳು. ತಾತ ಅಥವಾ ಅಜ್ಜಿ ತೀರಿಕೊಂಡಾಗ ತಿಥಿ ಮಾಡಲು ಹಣ ಬೇಡುವ ಜನ.
ಹಿಂದೆ ಪಕ್ಷಗಳ ಉತ್ತಮ ಆಡಳಿತವನ್ನು ಗಮನಿಸಿ ಜನರು ಮತ ಚಲಾಯಿಸುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. "ಜಾತಿ" ಆಧಾರದ ಮೇಲೆ ಮತ ಚಲಾಯಿಸಲಾಗುತ್ತಿದೆ. ಇಂದು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿಕೊಂಡರೆ ಪಟ್ಟಣ ಪ್ರದೇಶಗಳಲ್ಲಿ ಮತದಾನದ ಸಂಖ್ಯೆ ಇಳಿಮುಖವಾಗಿದೆ. ಪಟ್ಟಣ ಹಾಗೂ ನಗರಪ್ರದೇಶಗಳ ಪ್ರಜ್ಞಾವಂತ ಮತದಾರರು ಚುನಾವಣೆಯ ದಿನದಂದು ರಜೆ ಸಿಕ್ಕಿದೆ ಎಂದು ಪ್ರವಾಸ ತಾಣಗಳಿಗೆ ಹೊರಟು ಹೋಗುತ್ತಾರೆ. ಆದರೆ ಇದು ನಿಜಕ್ಕೂ ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಆದ್ದರಿಂದ ಪ್ರಜ್ಞಾವಂತ ನಾಗರಿಕರು ಒಳ್ಳೆಯ ಅಭ್ಯರ್ಥಿಗೆ ಮತ ಚಲಾಯಿಸಿ ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಹಣಕ್ಕಾಗಲೀ, ಮದ್ಯಕ್ಕಾಗಲೀ, ಯಾವುದೇ ಆಮಿಷಕ್ಕೂ ಒಳಗಾಗದೇ ನನ್ನ ದೇಶ ಅದರ ಭವಿಷ್ಯಕ್ಕಾಗಿ ಮತ ಚಲಾಯಿಸುತ್ತಿದ್ದೇನೆ ಎಂಬ ಅಭಿಮಾನದಿಂದ ಮತದಾರರು ತಪ್ಪದೇ ಮತ ಚಲಾಯಿಸಲಿ.
ಟಿ ನೇರಲಗುಡ್ಡ ಶಿವಕುಮಾರ್, ಶಿರಾ

ಎಲ್ಲಿದೆ ಕನ್ನಡನುಡಿ?
ಪುಂಡಲೀಕ ಹಾಲಂಬಿಯವರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ಆಜೀವ ಸದಸ್ಯರಿಗೆ 'ಕನ್ನಡ ನುಡಿ' ಮಾಸ ಪತ್ರಿಕೆ ನಿರಂತರವಾಗಿ ಏಕೆ ಬರುತ್ತಿಲ್ಲ? ಕನ್ನಡ ಉಳಿದರೆ ಕನ್ನಡಿಗರು ಉಳಿಯುತ್ತಾರೆ. ಕನ್ನಡಿಗರು ಉಳಿದರೆ ಕರ್ನಾಟಕ ಉಳಿಯುತ್ತದೆ ಎಂದು ಹೇಳುವ ಪ್ರಾತಿನಿಧಿಕ ಸಂಸ್ಥೆಗೆ ಏನು ಕೊರತೆಯೋ, ಏನು ಕೊರೆತವೋ ತಿಳಿಯದಾಗಿದೆ. ಕನ್ನಡಿಗರಿಗೆ ಬಡಿದೆಚ್ಚರಿಸಿರಿ ಸ್ವಾಮಿ- ಬೇಗ ಉತ್ತರಿಸಿರಿ.
ಟಿ ಬಿ.ಎನ್. ಸೊಲ್ಲಾಪುರ, ಕಮಲನಗರ, ಬೀದರ್


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement