ಚಿ.ಮೂ. ಅಭಿಪ್ರಾಯಕ್ಕೆ ಪ್ರತಿಕ್ರಿಯೆ
"ವಾಲ್ಮೀಕಿ ಯಾರು?" ಎನ್ನುವ ನನ್ನ ಕೃತಿಯ ಕುರಿತು ಚಿದಾನಂದಮೂರ್ತಿಯವರ ಅಭಿಪ್ರಾಯಕ್ಕೆ (4-4-14)ಈ ಪ್ರತಿಕ್ರಿಯೆ. ವಾಲ್ಮೀಕಿ ರಾಮಾಯಣವನ್ನು ಚಿ.ಮೂ. ಓದಿದಂತೆ ಕಾಣುವುದಿಲ್ಲ. ವಾಲ್ಮೀಕಿಯೇ ಹೇಳಿಕೊಂಡಿರುವ ತನ್ನ ಜನನದ ಬಗೆಗಿನ ಮಾತುಗಳಿಗೆ ಇತರರವು ಪ್ರಬಲ ಸವಾಲಾಗಿರಲಾರವು. ಅಪ್ರಮಾಣ; ಅದು ಬೇರೊಬ್ಬರ ಮಾತಾಗುತ್ತದೆ; ಉಭಯ ಭಾಷಾ ವೈಶಾರದ್ಯ ಎ.ಆರ್. ಕೃಷ್ಣಶಾಸ್ತ್ರಿ, ತ.ಸು. ಶಾಮರಾಯರ ಕಾಲದೊಡನೆ ಮುಗಿದಂತೆ ಕಾಣುತ್ತದೆ. ಶಾಸನ, ಛಂದಸ್ಸು, ವ್ಯಾಕರಣ ಪರಿಣತಿ ಬೇರೆ. ಅದೂ ವಿದ್ವತ್ತು ಹೌದು. ರಸಪ್ರಜ್ಞೆಯೇ ಬೇರೆ. ಒಬ್ಬ ಹುಡುಗನನ್ನು "ನಿಮ್ಮ ಹುಡುಗ ಸಿಂಹ ಕಾಣ್ರೀ" ಎಂದಾಗ, "ಅವನು ಪ್ರಾಣಿ" ಎಂದೋ, ಅವನಿಗೂ ನಾಲ್ಕು ಕಾಲು, ಬಾಲ ಇವೆಯೆಂದೋ ಅರ್ಥೈಸುವುದು ರಸಪ್ರಜ್ಞೆಯಾಗದು. ಅಲ್ಲಿ ಪರಾಕ್ರಮ ಪ್ರಸ್ತುತ. ನನ್ನ ಕಾಲೇಜಿನಲ್ಲಿ ಹಿಂದೆ ವಿವೇಕಾನಂದರ ಪ್ರತಿಮೆ ಉದ್ಘಾಟಿಸಲು ಆಗ ಮಂತ್ರಿಗಳಾಗಿದ್ದ ಕೆ.ಎಚ್. ಪಾಟೀಲರು ಬಂದಿದ್ದು ವಿದ್ಯಾರ್ಥಿಗಳಿಗೆ ಸಂದರ್ಭೋಚಿತ ಉಪದೇಶವೀಯುತ್ತ "ನೀವೆಲ್ಲ ಹನುಮಂತನಂತೆ ವೀರರೂ, ದೇಶಭಕ್ತರೂ, ಧರ್ಮನಿಷ್ಟರೂ ಆಗಬೇಕು" ಎಂದಾಗ ಒಂದು ಗುಂಪಿನ ವಿದ್ಯಾರ್ಥಿಗಳು "ಇವರು ನಮ್ಮನ್ನು ಕೋತಿಗಳೆಂದು ಹಿಯಾಳಿಸುತ್ತಿದ್ದಾರೆ" ಎಂದು ಪ್ರತಿಭಟಿಸಿ, ಚಳವಳಿ ಮಾಡಿ ಪಾಟೀಲರಿಗೆ ತೇಜೋವಧೆ ಮಾಡಿದರು. ಪ್ರಾಧ್ಯಾಪಕರಲ್ಲೇ ಆಗ ಎರಡು ಗಂಪು ಇತ್ತು! ಹಾಗಾಯ್ತು, ಚಿದಾನಂದ ಮೂರ್ತಿಗಳ ಅರ್ಥೈಕೆ: "ವಾಲ್ಮೀಕಿ ಕೋಕಿಲ ಎಂಬ ಪ್ರಶಸ್ತಿಯ ಕೋಗಿಲೆಯನ್ನು ಕಾಗೆಗಳೊಡನೆ ಸಮೀಕರಿಸುವ ದುಷ್ಟ ಯತ್ನ ನಿಲ್ಲಬೇಕು" ಎಂದು ನಾನು ಬರೆದದ್ದಕ್ಕೆ ಚಿ.ಮೂ. ಅಪಾರ್ಥ ಮಾಡಿದ್ದಾರೆ. ವಾಲ್ಮೀಕಿ ಕೋಗಿಲೆಯ ಧ್ವನಿಗೂ, ಕೃತಕ ರಾಮಾಯಣ ಕವಿಗಳ ತಿರುಚು ಕೃತಿಗಳ ಅಪಶ್ರುತಿಗೂ ಮಾತ್ರ ಇಲ್ಲಿ ವ್ಯತ್ಯಾಸ. ಕಾಗೆಯ ಜಾತಿ, ಕೋಗಿಲೆಯ ಜಾತಿಗಳ ಹೋಲಿಕೆಯಲ್ಲ. ಬಣ್ಣದಲ್ಲಿ ಅಲ್ಲ, ಒಂದು ಮಾತಿಗೆ ವ್ಯಾಪ್ತಿ, ಅತಿವ್ಯಾಪ್ತಿ, ಅವ್ಯಾಪ್ತ ಎಂಬ ಮಿತಿ ಪರಿಧಿಗಳಿರುತ್ತವೆ. "ಜೀವಾತ್ಮರು ದೇವರನ್ನು ನದಿಗಳು ಸಮುದ್ರ ಸೇರುವಂತೆ ಸೇರುತ್ತಾರೆಂದರೆ", ನಾಶವಾಗುತ್ತಾರೆಂಬುದು ಅತಿವ್ಯಾಪ್ತಿ. ಇದು ಚಿ.ಮೂ. ಅವರಿಗೆ ತಿಳಿಯಬೇಕು. ಎರಡನೆಯದಾಗಿ ವಾಲ್ಮೀಕಿಯ ಜಾತಿಯ ಬಗೆಗೆ ಪಂಜಾಬ್, ಹರ್ಯಾಣ ಹೈಕೋರ್ಟ್ ತಿರ್ಮಾನವೇ ಇದೆ. ಅವನು ಬೇಡನಲ್ಲ ಬ್ರಾಹ್ಮಣ ಎಂದು. (ದಿ. 12-10-2009) ಒಂದು ಟಿ.ವಿ. ಧಾರಾವಾಹಿಯ ಬಗ್ಗೆ ಎದ್ದ ವಿವಾದದ ಸಂದರ್ಭ ಅದು. ನ್ಯಾ.ಮೂರ್ತಿಗಳಿಗೆ ಸಹಾಯಕ ಪ್ರಮಾಣ ಇತ್ತವರು ಡಾ. ಮಂಜುಳಾ ಸಹದೇವ, ನಿವೃತ್ತ ನಿರ್ದೇಶಕರು, ಮಹರ್ಷಿ ವಾಲ್ಮೀಕಿ, ಅಧ್ಯಯನ ಪೀಠ, ಪಂಜಾಬ್ ವಿ.ವಿದ್ಯಾಲಯ. ವಿವರಗಳು ಅಂತರ್ಜಾಲದಲ್ಲಿವೆ. ಸಂಶೋಧನೆಗೆ ಸಿದ್ಧಹಸ್ತರಾದವರಿಗೂ ದುರ್ಗತಿ ಬರುವುದು ಶೋಚನೀಯ. ಚಿ.ಮೂ. ನನ್ನ ಮಿತ್ರರು. ನನ್ನ ಪುಸ್ತಕವನ್ನು ಸರಿಯಾಗಿ ಓದದೆ, ನನ್ನನ್ನೂ ಫೋನಿನಲ್ಲಿ ಕೇಳದೆ ಸಿಕ್ಕಂತೆ ಬರೆದುದು ಕನ್ನಡ ಸಂಸ್ಕೃತಿ, ಸಾಹಿತ್ಯ, ಸಂಶೋಧನೆಯ ದಿಕ್ಕನ್ನು ತೋರಿಸುತ್ತದೆ ಎಂದು ವಿಷಾದದಿಂದ ಬರೆಯಬೇಕಾಗಿದೆ.
-ಕೆ.ಎಸ್. ನಾರಾಯಣಾಚಾರ್ಯ
ನಮಗೆಲ್ಲಿದೆ ಮತ ಹಕ್ಕು?
ನಾನು ಸುಮಾರು 4-5 ಚುನಾವಣೆಗಳಿಗೆ ನಿಯುಕ್ತಿ ಹೊಂದಿ ಅದಕ್ಕೆ ಸಂಭಾವನೆ ಪಡೆದೆ. ಆದರೆ ಮತ ಹಾಕಲು ನನಗೆ ಅವಕಾಶವಿಲ್ಲ. ಅಂಚೆ ಮತದ ವ್ಯವಸ್ಥೆ ಮಾಡುತ್ತೀವಿ ಎಂದು ತರಬೇತಿ ವೇಳೆ ನೀಡುವ ಆಶ್ವಾಸನೆ ಚುನಾವಣೆ ದಿನದಂದು 'ಕ್ಷಮಿಸಿ ಸಾಧ್ಯವಾಗಲಿಲ್ಲ' ಎನ್ನುವಲ್ಲಿಗೆ ಮುಗಿಯುತ್ತದೆ. ಪ್ರತಿ ದಿನ ಪತ್ರಿಕೆ, ವಾಹಿನಿಗಳಲ್ಲಿ 'ಮತ ನಿಮ್ಮ ಹಕ್ಕು- ಅದನ್ನು ನಿರ್ಭೀತಿಯಿಂದ ಚಲಾಯಿಸಿ' ಎನ್ನುವ ಜಾಹೀರಾತುಗಳ ಕರ್ತೃವಿಗೆ ಈ ದೀಪದ ಕೆಳಗಿನ ಕತ್ತಲು ತಿಳಿದಿಲ್ಲವೇ? ತಿಳಿದಿದೆ. ಹೀಗಾಗಿ ಈ ಬಾರಿ ನಿಯುಕ್ತಿ ಹೊಂದಿದ ಅಧಿಕಾರಿಗಳು ತಮ್ಮ ಕ್ಷೇತ್ರದ ಒಂದು ಬೂತಿನಲ್ಲಿ ಮತದಾನಕ್ಕೆ ಅವಕಾಶ ನೀಡುವ ಭರವಸೆ ನೀಡುತ್ತಾರೆ. ರಾಜಕಾರಣಿಗಳು ಒಂದು ರೀತಿಯ ಆಶ್ವಾಸನೆ, ಈ ಅಧಿಕಾರಿಗಳದ್ದು ಇನ್ನೊಂದು ರೀತಿಯದು. ನನ್ನ ಹೆಸರು ಬಸವನಗುಡಿ (ವಾಸಸ್ಥಳ) ಯಲ್ಲಿದೆ. ನನ್ನ ಕೆಲಸ ಮೈಸೂರು ರಸ್ತೆಯ ಬೆಂಗಳೂರು ವಿ.ವಿ. ಸಮೀಪ. ನನ್ನ ಚುನಾವಣಾ ಕರ್ತವ್ಯ ರಾಮನಗರದಲ್ಲಿ. ನಾನೆಲ್ಲಿ ಮತ ನೀಡುವುದು? ಸಂಬಂಧಿಸಿದವರು ವಿವರಿಸಿಯಾರೆ? ನಾನು ಚುನಾವಣೆ ಕರ್ತವ್ಯಕ್ಕೆ ಹಾಜರಾಗದಿದ್ದರೇ ಅದು ಶಿಕ್ಷಾರ್ಹ ಅಪರಾಧ. ಆದರೆ ನನ್ನ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಚುನಾವಣಾ ಅಧಿಕಾರಿಗಳು ಯಾವ ಕಲಮಿನಡಿ ವಿನಾಯತಿ ಪಡೆಯುತ್ತಾರೆ? ಇದು ನನ್ನೊಬ್ಬನ ಪ್ರಶ್ನೆಯಷ್ಟೇ ಅಲ್ಲ.
-ಏ.ವಿ. ರಾಮದಾಸ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com