ಸಲ್ಲದ ಪ್ರತೀಕಾರದ ಮಾತು
ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಪೀಠಕ್ಕೆ ಪಕ್ಷದ ಅಭ್ಯರ್ಥಿ ಎಂದು ಪ್ರಕಟಿಸುವುದಕ್ಕೆ ಮುಂಚೆಯೇ, ಗುಜರಾತ್ನ ಮಾಜಿ ಗೃಹಮಂತ್ರಿ, ಹಲವಾರು ಬಾರಿ ತೀವ್ರ ಸ್ವರೂಪದ ಟೀಕೆಗಳನ್ನು ಎದುರಿಸಿದ ಅಮಿತ್ ಷಾ ಅವರನ್ನು ಉತ್ತರ ಪ್ರದೇಶದಲ್ಲಿ ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುವ "ಉಸ್ತುವಾರಿ ಅಧಿಕಾರಿಯಾಗಿ" ನೇಮಿಸಲಾಗಿತ್ತು.
ಮೋದಿ ಅವರ ಬಲಗೈ ಬಂಟ ಎಂದೇ ಹೆಸರು ಮಾಡಿರುವ ಅಮಿತ್ ಷಾ ಕಳೆದ ಮೂರು ತಿಂಗಳಿಂದಲೂ ಗುಜರಾತನ್ನು ಬಿಟ್ಟು ಉತ್ತರ ಪ್ರದೇಶದಲ್ಲೇ ಬೀಡು ಬಿಟ್ಟಿದ್ದಾರೆ. ಅಲ್ಲಿ ಅಧಿಕೃತವಾಗಿ ಬಿಜೆಪಿಯ ಪದಾಧಿಕಾರಿಗಳನ್ನು ಬದಲಾಯಿಸದೇ ಹೋದರೂ, ತಮಗೆ ಸರಿ ಎಂದು ಕಂಡವರಿಗೆ ಸ್ಥಳೀಯವಾಗಿ ಪಕ್ಷದ ಉಸ್ತುವಾರಿಯ ಹೊಣೆಯನ್ನು ಅವರು ಒಪ್ಪಿಸಿದ್ದರು.
ಈ ಅವಧಿಯಲ್ಲಿ ಉತ್ತರ ಪ್ರದೇಶದ ಬಿಜೆಪಿಯಲ್ಲಿ ಬೇಕಾದಷ್ಟು ಬದಲಾವಣೆಗಳಾದವು. ಹಲವಾರು ಪ್ರಕರಣಗಳಲ್ಲಿ (ಗುಜರಾತ್ನ 2002ರ ಗೊಂದಲಕ್ಕೆ ಹಾಗೂ ಎರಡು ನಕಲಿ ಕಾಳಗಕ್ಕೆ ಸಂಬಂಧಿಸಿದ್ದು) ಸೂಕ್ತ ಸಾಕ್ಷ್ಯ-ಆಧಾರಗಳು ಲಭ್ಯವಿಲ್ಲದ ಕಾರಣದ ಮೇಲೆ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಲಾಗಿದೆ. ಅದು ನ್ಯಾಯಾಲಯದ ತೀರ್ಪು. ಬಿಜೆಪಿಯ ದೃಷ್ಟಿಯಿಂದ ಅಮಿತ್ ಷಾ ಸಾಕಷ್ಟು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಉತ್ತರ ಪ್ರದೇಶದ ರಾಜಕಾರಣದಲ್ಲಿ ಚುನಾವಣೆ ಲೆಕ್ಕದಲ್ಲಿ ನಾಲ್ಕು ವರ್ಷಗಳ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್, ಮೊದಲೆರಡು ಸ್ಥಾನಗಳನ್ನು ಸಮಾಜ ವಾದಿ ಪಾರ್ಟಿ ಹಾಗೂ ಬಹುಜನ ಸಮಾಜ ಪಾರ್ಟಿಗಳಿಗೆ ಬಿಟ್ಟುಕೊಟ್ಟು, ಮೂರು- ನಾಲ್ಕನೇ ಸ್ಥಳಗಳಿಗೆ ಬಿಜೆಪಿ- ಕಾಂಗ್ರೆಸ್ಗಳು ಸ್ಪರ್ಧಿಸಬೇಕಾದ ಸ್ಥಿತಿ ಇತ್ತು.
ಈಗಿನ ಚುನಾವಣೆ ಸಮೀಕ್ಷೆಗಳು ಹಾಗೂ ಇತರ ರಾಜಕೀಯ ಪಂಡಿತರ ವಿಶ್ಲೇಷಣೆಗಳ ವರದಿಗಳನ್ನು ಗಮನಿಸಿದರೆ ಬಿಜೆಪಿ, ಆ ಕೆಳಹಂತದ ಸ್ಥಾನದಿಂದ ಮೇಲೆದ್ದು ನಿಂತಿದೆ. ಇದಕ್ಕೆ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಹಾಗೂ ದೇಶದ ಅನೇಕ ಕಡೆಗಳಲ್ಲಿ ಕಂಡುಬಂದಿರುವ ಮೋದಿ ನೇತೃತ್ವದ "ಬಿಜೆಪಿ ಅಲೆ" ಕಾರಣವಾದಂತೆಯೇ ಅಮಿತ್ ಷಾ ಆ ವಿಶಾಲವಾದ ರಾಜ್ಯದ ಉದ್ದಗಲಕ್ಕೂ ಓಡಾಡಿ ಸ್ಥಳೀಯ ಸಮಸ್ಯೆಗಳ ವಿಚಾರದಲ್ಲಿ ಪಕ್ಷದ ಬೇರು ಮಟ್ಟದ ನಾಯಕರು ವಿಶೇಷ ಆಸಕ್ತಿ ವಹಿಸಿ, ಹೋರಾಟಗಳನ್ನು ನಡೆಸಲು ಪ್ರಚೋದಿಸಿದ್ದೂ ಕಾರಣವಾಗಿರುವುದನ್ನು ಅಲ್ಲಗಳೆಯಬಾರದು.
ಗುಜರಾತಿನಿಂದ ಬಂದ ಅಮಿತ್ ಷಾ ಉತ್ತರ ಪ್ರದೇಶದಲ್ಲೇನೂ ಪವಾಡ ಸಾಧಿಸುವುದು ಸಾಧ್ಯವಿಲ್ಲ ಎಂದವರೇ ಈಗ ಬಹಿರಂಗ ಸಭೆಗಳಲ್ಲಿ ಅಮಿತ್ ಷಾ ಅವರ "ಹಾವಳಿಯ ವಿಚಾರವನ್ನು" ಪ್ರಸ್ತಾಪಿಸಲೇಬೇಕಾಗಿದೆ. ಅದು ವಾಸ್ತವ.
ಅಂತಹ ಬದಲಾವಣೆಯನ್ನು ತರಲು ಆ ರಾಜ್ಯದಲ್ಲಿ ಪಕ್ಷದ ಸಂಘಟನೆಯ ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಾಯಿಸಿದ್ದೂ ಆಗಿದೆ. ಉತ್ತರ ಪ್ರದೇಶದ ಶ್ರೀಮಂತ ಪ್ರದೇಶವಾದ ಪಶ್ಚಿಮ ಭಾಗದ ಪ್ರಮುಖ ನಗರಗಳಲ್ಲಿ ಒಂದಾದ ಮುಜಫರ ನಗರದ ಸುತ್ತಮುತ್ತ, ಕೋಮು ಗಲಭೆಗಳಾದಾಗ, ಅಮಿತ್ ಷಾ ಮಾತಾಡಿದ್ದು ಕಡಿಮೆ. ಆದರೆ ಭೀಕರ ಗಲಭೆಗಳ ಅನಂತರ "ನಿರಾಶ್ರಿತರಿಗೆ" ಉತ್ತರಪ್ರದೇಶ ಸರ್ಕಾರದ ಚುಕ್ಕಾಣಿ ಹಿಡಿದಿರುವ ಅಖಿಲೇಶ್ ಸಿಂಗ್ ಯಾದವ್ರ ಸರ್ಕಾರ ಸೂಕ್ತ ರೀತಿಯ ಪರಿಹಾರವನ್ನು ಒದಗಿಸದೇ, ಅವರನ್ನು ಗಡಗಡನೆ ನಡುಗಿಸುವ ಚಳಿಯಲ್ಲಿ ಬಟಾಬಯಲಿನಲ್ಲಿ ಬಿಡಲಾಯಿತೆನ್ನುವ ವರದಿಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ಪ್ರಚಾರವನ್ನು ಆರಂಭಿಸಿ, ಎಲ್ಲದಕ್ಕೂ ಸರ್ಕಾರವನ್ನೇ ದೂರಿದರು. ಅದನ್ನು ಬಿಜೆಪಿಯ ವಿರೋಧಿಗಳು ತಿರಸ್ಕರಿಸುವ ಸ್ಥಿತಿಯಲ್ಲೂ ಇರಲಿಲ್ಲ. ಮುಜಫರ ನಗರದ ಕೋಮು ಗಲಭೆಗಳಲ್ಲಿ ಜಾಟ್ ಸಮುದಾಯದ ಪಾತ್ರವನ್ನು ಕುರಿತು ಯಾದವ ನಾಯಕರ ಹೇಳಿಕೆಗಳನ್ನೇ ಬಂಡವಾಳವಾಗಿಟ್ಟುಕೊಂಡ ಬಿಜೆಪಿ ನಾಯಕರು ಜಾಟ್ ಸಮುದಾಯದ ಮತಗಳನ್ನು ಆಕರ್ಷಿಸಲು ಮುಂದಾಗಿದ್ದು ಸಹಜವಾದ ಚುನಾವಣೆ ತಂತ್ರ. ದಬ್ಬಾಳಿಕೆಯ ದೂರು ಇದ್ದಿದ್ದು ಜಾಟ್ ಸಮುದಾಯದ ಮೇಲೆ. ಆದರೆ ಅಮಿತ್ ಷಾ ಅವರು ಪ್ರಚಾರ ತಂತ್ರವನ್ನು ಬದಲಾಯಿಸಿ, ಜಾಟ್ ಸಮುದಾಯಕ್ಕೆ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಚುನಾವಣೆ ಒದಗಿಸಿರುವ ಸಂವಿಧಾನಾತ್ಮಕವಾದ ಅವಕಾಶವನ್ನು ಬಳಸಿಕೊಂಡು ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಮತ ನೀಡಬೇಕೆಂದು ಬಹಿರಂಗವಾಗಿಯೇ ಕರೆ ನೀಡಿರುವುದಾಗಿ ವರದಿಯಾಗಿದೆ. ಈ ಮನವಿಯನ್ನು ಷಾ ಮಾಡಿದ್ದು ಒಂದು ಜಾಟ್ ಸಮುದಾಯದ ಸಭೆಯಲ್ಲಿ ಎಂದು ಹೇಳಲಾಗಿದೆ. ಇದುವರೆಗೆ ಯಾರೂ ಆ ಹೇಳಿಕೆಯ ಮೂಲವನ್ನು ಹುಡುಕಲಿಕ್ಕೆ ಹೋಗಿಲ್ಲ. ಚುನಾವಣೆ ಸಮಯದಲ್ಲಿ ಸಾಮಾನ್ಯವಾಗಿ ನಡೆಯುವಂತೆ ಬಿಜೆಪಿಯ ಎದುರಾಳಿಗಳು ಅಮಿತ್ ಷಾ ಅವರ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಮತದಾನದ ಕರೆಯನ್ನು ಮತೀಯ - ಧಾರ್ಮಿಕ ಆಧಾರದ ಪ್ರಚೋದನೆಯ ಹೇಳಿಕೆ ಎಂದು ಖಂಡಿಸಿದ್ದೂ ಆಗಿದೆ. ಈ ಅವಕಾಶಕ್ಕಾಗಿ ಕಾಯುತ್ತಿದ್ದ ಬಿಜೆಪಿಯ ಅಧ್ಯಕ್ಷ ರಾಜನಾಥ ಸಿಂಗ್ ಅಮಿತ್ ಷಾ ಅವರ ಹೇಳಿಕೆಯನ್ನು ಬೆಂಬಲಿಸಿದ್ದೂ ಆಯಿತು. ಈ ಭಾಗದ ಚುನಾವಣೆಗಳಲ್ಲಿ ಮತದಾನದ ರೂಪರೇಷೆ ಹೆಚ್ಚು ಕಡಿಮೆ ಸಿದ್ಧವಾದಂತೆಯೇ. ಈಗ ಬಿಜೆಪಿ ವಿರೋಧಿಗಳು ಏನೇ ಹೇಳಿದರೂ ಅದು ವ್ಯರ್ಥವಾಗಬಹುದು. ಆದರೆ ಇಂತಹ ಸೇಡಿನ ಮತಯಾಚನೆ ಚುನಾವಣೆ ಪ್ರಚಾರ ಸಮರದಲ್ಲಿ ಸಲ್ಲದು. ಕಾಯಿದೆಯನ್ನು ಮೀರಿದ ಮಾನವೀಯತೆಯ ಪ್ರದರ್ಶನ ಅಲ್ಲಿ ಆಗಬೇಕಾಗಿದೆ.