ಶಾಂತಾರಾಮ ವೆಂಕಟರಾವ್ ಪಿಕಳೆ ಉತ್ತರಕನ್ನಡ ಜಿಲ್ಲೆಯವರಾದರೂ ನೆಲೆಸಿದ್ದು ಮಾತ್ರ ಮುಂಬೈಯಲ್ಲಿ. ತಂದೆ ಬಡ ರೈತ. ಎಷ್ಟೇ ದುಡಿದರೂ ಜೀವನಕ್ಕೆ ಸಾಲದು. ಶಾಂತಾರಾಮ ಚಿಕ್ಕಂದಿನಿಂದಲೂ ಓದಿನಲ್ಲಿ ಜಾಣ. ಅದಕ್ಕಾಗಿ ಅವನ ತಾಯಿ ಅವನಿಗೆ ದೊಡ್ಡವನಾದ ಮೇಲೆ ಕಲೆಕ್ಟರನಾಗಬೇಕು, ಬ್ಯಾರಿಸ್ಟರ್ ಆಗಬೇಕು ಎಂದು ಯಾವಾಗಲೂ ಹೇಳುತ್ತಿದ್ದಳು. ಒಮ್ಮೆ ಮನೆಯಲ್ಲಿ ತಂದೆತಾಯಿ ನಡುವೆ ಜಗಳವಾದಾಗ ಬೇಸಾಯ, ಬೇಸಾಯ ಅಂತ ನನ್ನ ಎಲ್ಲ ಬಂಗಾರವನ್ನೆಲ್ಲ ಮಣ್ಣಿಗೆ ಹಾಕಿದಿರಿ ಎಂದು ತಾಯಿ ದೂರಿದಳು. ಅಲ್ಲಿಯೇ ಕುಳಿತು ಕೇಳುತ್ತಿದ್ದ ಬಾಲಕ ಚಿಂತೆ ಮಾಡಬೇಡಮ್ಮ, ನಾನು ದೊಡ್ಡವನಾದ ಮೇಲೆ ನಿನ್ನನ್ನು ಬಂಗಾರದ ಪಲ್ಲಕ್ಕಿಯಲ್ಲಿ ಕೂಡಿಸುತ್ತೇನೆ ಎಂದ. ಮುಂದೆ ಮುಂಬೈನಲ್ಲಿ ವಕೀಲಿ ವೃತ್ತಿ ಕೈಗೊಂಡು ಯಶಸ್ಸಿನ ಶಿಖರ ಹತ್ತಿದಾಗ ಇವರ ಹೆಸರು ಪ್ರತಿಷ್ಠಿತರ ಪಟ್ಟಿಯಲ್ಲಿ ಸೇರಿತು. 1986ರಲ್ಲಿ ಮುರಾರ್ಜಿ ದೇಸಾಯಿಯವರು ಭಾರತದ ಅರ್ಥಸಚಿವ ಹಾಗೂ ಉಪ ಪ್ರಧಾನಮಂತ್ರಿಗಳಾಗಿದ್ದಾಗ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋದರು. ಮೊರಾರ್ಜಿಯವರನ್ನು ಕಂಡು ತಾವು ಭಾರತದಲ್ಲಿ ಆದಾಯ ತೆರಿಗೆ ಎಂಬ ಗ್ರಂಥವನ್ನು ರಚಿಸಿರುವುದಾಗಿಯೂ, ಅದಕ್ಕೊಂದು ಮುನ್ನುಡಿ ಬರೆದುಕೊಡಬೇಕೆಂದೂ ವಿನಂತಿಸಿದರು. ಆಗ ಮೊರಾರ್ಜಿಯವರು ತಮಗೆ ಬಿಡುವಿಲ್ಲವೆಂದೂ, ಆ ಕೆಲಸ ತಮ್ಮಿಂದಾಗದೆಂದೂ ಹೇಳಿದರು. ನಿರಾಶರಾದ ಪಿಕಳೆಯವರು ಆ ಹಸ್ತಪ್ರತಿಯನ್ನು ವಾಪಸ್ ಪಡೆದು ಹೇಳಿದರು, "ಭಾರತದ ಆಯಕರ ಕಾಯ್ದೆ ಬಹಳ ಜಟಿಲವಾಗಿದೆ, ಅದನ್ನು ಸುಲಭಗೊಳಿಸಿ ಸಾಮಾನ್ಯರಿಗೂ ಅರ್ಥವಾಗುವಂತೆ ಪುಸ್ತಕ ಬರೆಯಬೇಕೆಂದೂ, ಹಾಗೆ ಬರೆಯಲು ಮುಂದೆ ಬಂದ ವಕೀಲರಿಗೆ ಪ್ರೋತ್ಸಾಹಿಸುವುದಾಗಿಯೂ ತಾವು ಕಳೆದ ಸಂಸತ್ ಅಧಿವೇಶನದಲ್ಲಿ ಹೇಳಿದ್ದಿರಿ. ಆದರೆ ತಾವು ಮಾತನಾಡುವುದು ಒಂದು, ಅದರ ಅರ್ಥ ಇನ್ನೊಂದು ಎಂಬುದು ಈಗ ತಿಳಿಯಿತು" ಎಂದು ಹೊರ ನಡೆಯಲು ಅನುವಾದರು. ಆ ಮಾತು ದೇಸಾಯಿಯವರ ಅಭಿಮಾನ ಕೆಣಕಿತು. ಪಿಕಳೆಯವರಿಂದ ಮತ್ತೆ ಆ ಪುಸ್ತಕವನ್ನು ಪಡೆದು ಆ ಗ್ರಂಥಕ್ಕೆ ಒಂದು ಸೊಗಸಾದ ಮುನ್ನುಡಿ ಬರೆದುಕೊಟ್ಟರು. ಆ ಪುಸ್ತಕ ಮುಂದೆ ಅದೆಷ್ಟು ಪ್ರಸಿದ್ಧವಾಯಿತೆಂದರೆ ಅದರ ಬಗ್ಗೆ ಪ್ರಶಂಸಾಪೂರ್ಣ ವಿಮರ್ಶೆಯೂ ಪ್ರಕಟವಾಯಿತು. ಅದೇ ವರ್ಷ ಜಿನೀವಾದಲ್ಲಿ ನಡೆದ ಟ್ಯಾಕ್ಸೇಷನ್ ಕಾನ್ಫರೆನ್ಸಿನಲ್ಲಿ ಭಾಗವಹಿಸಿಲು ಲೇಖಕರಿಗೆ ಆಮಂತ್ರಣವೂ ಬಂತು. ಹೀಗೆ ತಮ್ಮ ಉದ್ಯೋಗದಲ್ಲಿ ಪಿಕಳೆಯವರು ಹಣ ಮತ್ತು ಹೆಸರು ಗಳಿಸಿದರು. ಜಪಾನ್ ಇದ್ದಕ್ಕಿದ್ದಂತೆ ಭಾರತದ ಕಬ್ಬಿಣದ ಅದಿರನ್ನು ಕೊಳ್ಳುವುದನ್ನು ನಿಲ್ಲಿಸಿದಾಗ ಗೋವಾದ ಗಣಿ ಮಾಲೀಕರ ಸಂಘ ಅವರನ್ನು ಜಪಾನಿಗೆ ಕಳಿಸಿತು. ಅಲ್ಲಿ ಜಪಾನೀ ಅಧಿಕಾರಿಗಳೊಡನೆ ಮಾತುಕತೆ ನಡೆಸಿ, ಅವರ ಮನಮೊಲಿಸಿ ಮತ್ತೆ ಅದಿರಿಗೆ ಬೇಡಿಕೆ ಪಡೆಯಲು ಯಶಸ್ವಿಯಾದರು. ಆದರೆ ಅವರು ತಾಯಿಗೆ ಮಾತುಕೊಟ್ಟಂತೆ ಚಿನ್ನದ ಪಲ್ಲಕ್ಕಿಯಲ್ಲಿ ಕೂಡಿಸಿ ಸಂಭ್ರಮಿಸಲು ಮಾತ್ರ ಆಗಲಿಲ್ಲ. ಏಕೆಂದರೆ ಅಷ್ಟರಲ್ಲಾಗಲೇ ಅವರ ತಾಯಿ ತೀರಿಹೋಗಿದ್ದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com