ಸಂಪಾದಕೀಯ

ಬಾಲ್ಯದಲ್ಲಿಯೇ ಗದ್ವಾಲ್ ಮಹಾರಾಜರಿಂದ ಸನ್ಮಾನ

1916 ರಿಂದ 1980ರವರೆಗೆ ಜೀವಿಸಿದ್ದ ಮಹಾನ್ ವೀಣಾವಾದಕ ವೆಂಕಟನಾರಾಯಣ, ಸ್ವರಮೂರ್ತಿ ವಿ.ಎನ್.ರಾವ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ವೀಣೆ ಶೇಷಣ್ಣನವರ ಮೊಮ್ಮಗನಾದ ಇವರು ಚಿಕ್ಕಂದಿನಿಂದಲೇ ತಮ್ಮ ಅಜ್ಜನ ವೀಣಾವಾದನ ಕೇಳಿ ತಾವೂ ಸಹ ನುಡಿಸಲು ಪ್ರಾರಂಭಿಸಿದರು. ಒಮ್ಮೆ ಶೇಷಣ್ಣವರ ಜೊತೆ ಗದ್ವಾಲ್ ಮಹಾರಾಜರ ಆಸ್ಥಾನಕ್ಕೆ ಹೋಗಿದ್ದಾಗ ಶೇಷಣ್ಣನವರ ಕಚೇರಿ ಮುಗಿದಮೇಲೆ ಆಗಿನ್ನೂ ಐದು ವರ್ಷದ ಬಾಲಕನಾಗಿದ್ದ ವೆಂಕಟನಾರಾಯಣ ತಮಗೂ ಹಾಡಲು ಅನುಮತಿ ನೀಡಬೇಕೆಂದು ಕೇಳಿಕೊಂಡ. ಅಚ್ಚರಿಗೊಂಡ ಮಹಾರಾಜರು ಕೂಡಲೇ ಅನುಮತಿ ನೀಡಿದರು. ಕೆಲಕಾಲ ಶಾಸ್ತ್ರಬದ್ಧವಾಗಿ ಯಾವ ವಿದ್ವಾಂಸರಿಗೂ ಕಡಿಮೆಯಿಲ್ಲದಂತೆ ವೀಣಾ ವಾದನದ ಜೊತೆಗೆ ಹಾಡುಗಾರಿಕೆಯನ್ನೂ ಪ್ರದರ್ಶಿಸಿದ ಬಾಲಕನ ಪ್ರತಿಭೆಗೆ ಮನಸೋತು ಕಚೇರಿ ಮುಗಿದ ಮೇಲೆ ಮಹಾರಾಜರು ಮಗುವನ್ನೆತ್ತಿ ಮುದ್ದಾಡಿ, ಸ್ವರಮೂರ್ತಿ ಎಂಬ ಬಿರುದನ್ನು ಖಿಲ್ಲತ್ತಿನೊಡನೆ ನೀಡಿ ಸನ್ಮಾನಿಸಿದರು. ಅಂದಿನಿಂದ ಅವರು ಸ್ವರಮೂರ್ತಿ ವಿ.ಎನ್.ರಾವ್ ಎಂದು ಕರೆಯಲ್ಪಟ್ಟರು. ತಾತ ಶೇಷಣ್ಣ ಮತ್ತು ತಂದೆ ವೀಣೆ ರಾಮಣ್ಣನವರ ಗರಡಿಯಲ್ಲಿ ಪಳಗಿ ಸುಪ್ರಸಿದ್ಧ ವೀಣಾವಾದಕರೆಂದು ಹೆಸರು ಗಳಿಸಿದರು. ಗದ್ವಾಲ್ ಮಹಾರಾಜರಿಂದ ಸನ್ಮಾನ ಸ್ವೀಕರಿಸಿ ಮೈಸೂರಿಗೆ ಹಿಂದಿರುಗಿ ಬಂದಾಗ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಾಲಕನನ್ನು ತಮ್ಮ ಸನ್ನಿಧಾನಕ್ಕೆ ಕರೆಸಿ ಕಚೇರಿಯೊಂದನ್ನು ಏರ್ಪಡಿಸಿದರು. ಸ್ವತಃ ಶೇಷಣ್ಣನವರ ವೀಣೆಯ ಪಕ್ಕ ವಾದ್ಯದೊಂದಿಗೆ ಅದ್ಭುತವಾಗಿ ಹಾಡಿ ಎಲ್ಲ ಸಭಾಸದರ ಮೆಚ್ಚುಗೆಗೆ ಪಾತ್ರರಾಗಿದ್ದು ಮಾತ್ರವಲ್ಲ, ಆಸ್ಥಾನಿಕರಿಂದ ಹರ್ಷೋದ್ಗಾರ ಮತ್ತು ಪ್ರಭುಗಳಿಂದ ಮೆಚ್ಚುಗೆಯ ಮಾತುಗಳೂ ಕೇಳಿಬಂದವು. ಕೊನೆಯಲ್ಲಿ ಮಹಾರಾಜರು ನಗದು ಬಹುಮಾನ ನೀಡಿ ಸನ್ಮಾನಿಸಿದ್ದು ಶೇಷಣ್ಣನವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮುಂದೆ ಶೇಷಣ್ಣನವರ ವೀಣಾ ಕಚೇರಿ ನಡೆದಾಗಲೆಲ್ಲ ಸ್ವರ ಮೂರ್ತಿಯ ಸಂಗೀತ ಕಚೇರಿಯೂ ನಡೆಯುತ್ತಿತ್ತು. ನಂತರ ಅವರನ್ನು ಮಹಾರಾಜರ ಆಸ್ಥಾನ ವಿದ್ವಾಂಸರನ್ನಾಗಿ ನೇಮಕ ಮಾಡಲಾಯಿತು. ಚಿಕ್ಕರಾಮರಾಯ, ಮುತ್ತಯ್ಯ ಭಾಗವರ್ತಿ, ಮೈಸೂರು ವಾಸುದೇವಾಚಾರ್ಯ, ವೆಂಕಟಗಿರಿಯಪ್ಪ, ವೆಂಕಟೇಶ ಅಯ್ಯಂಗಾರರ ಸಮಕಾಲೀನರಾಗಿದ್ದ ವೆಂಕಟನಾರಾಯಣ ಸಂಗೀತ ಶಾಲೆಯೊಂದನ್ನು ತೆರೆದು ಅನೇಕರಿಗೆ ವೀಣೆ ಮತ್ತು ಸಂಗೀತವನ್ನು ಕಲಿಸಿದರು. ವೀಣೆ ಸುಬ್ಬಣ್ಣ ಮತ್ತು ವೀಣೆ ಶೇಷಣ್ಣನವರ ಕುರಿತು ಎರಡು ಕೃತಿಗಳನ್ನೂ ರಚಿಸಿ ಪ್ರಸಿದ್ಧರಾಗಿದ್ದಾರೆ. ಅದರಲ್ಲಿ ವೀಣೆ ಶೇಷಣ್ಣ ಕೃತಿಗೆ ರಾಷ್ಟ್ರೀಯ ಪುರಸ್ಕಾರವೂ ದೊರೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಇವರಿಗೆ ಪಾಶ್ಚಾತ್ಯ ಸಂಗೀತ ವಾದ್ಯಗಳಾದ ಪಿಯಾನೋ, ಟೆರಿಮನ್, ಹಾಪರ್‌ಗಳನ್ನು ಕಲಿಯಲು ಪ್ರೋತ್ಸಾಹ ನೀಡಿದರು. ನಂತರ ಕೆಲಸಮಯದ ನಂತರ ತಮ್ಮ ವಾಸ್ತವ್ಯವನ್ನು ಬೆಂಗಳೂರಿಗೆ ಬದಲಾಯಿಸಿ, ಶ್ರೀ ಲಕ್ಷ್ಮೀ ವೆಂಕಟೇಶ್ವರ ವೀಣಾ ಗಾನ ಮಂದಿರ ಶಾಲೆಯನ್ನು ಪ್ರಾರಂಭಿಸಿ ಅನೇಕ ವಿದ್ವಾಸರನ್ನು ಕಲಾಕ್ಷೇತ್ರಕ್ಕೆ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!