ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಕಾಲಿಕ ಒಳ್ಳೆಯ ಆದೇಶ

Mainashree
Updated On : 23 Apr 2014, 10:04 am

ಲೋಕಸಭೆ ಚುನಾವಣೆಯ ಮತದಾನದ ಪ್ರಕ್ರಿಯೆ ರಾಜಕೀಯ ಪಕ್ಷಗಳ ಭವಿಷ್ಯವನ್ನು ನಿರ್ಧರಿಸುವ ಉತ್ತರ ಪ್ರದೇಶ - ಬಿಹಾರ, ಆಂಧ್ರ ಪ್ರದೇಶ - ತಮಿಳುನಾಡು, ಮಹಾರಾಷ್ಟ್ರದ ಕಡೆ ಸಾಗಿದಂತೆ, ಪ್ರಚಾರದ ಬಿಸಿಯೂ ಹೆಚ್ಚಾಗಿದೆ.
ಹಿಂದೂ ಸಂಘಟನೆಗಳಿಗೆ ಸೇರಿದವರೆಂದು ಹೇಳಿಕೊಳ್ಳುವ, ಕೆಲವು ಸ್ವಯಂ ಘೋಷಿತ ನಾಯಕರು ಈಗ ಪ್ರಚಾರದಲ್ಲಿರುವ ನರೇಂದ್ರ ಮೋದಿ ಅವರ ಹೆಸರನ್ನು ಬಳಸಿ ಗೊಂದಲವನ್ನೆಬ್ಬಿಸುವ ಪ್ರಯತ್ನದಲ್ಲಿ ನಿರತರಾಗಿರುವುದು ಅವರ ಪಾಲಿಗೆ ಅಸಹಜವೇನೂ ಅಲ್ಲ.
ಪ್ರವೀಣ ಭಾಯಿ ತೊಗಾಡಿಯಾ ಹಾಗೂ ಗಿರಿರಾಜ ಸಿಂಗ್ ಅವರಿಬ್ಬರೂ ಪ್ರಚಾರ ಪ್ರಪಂಚಕ್ಕೆ ಚಿರಪರಿಚಿತರೇ. ತೊಗಾಡಿಯಾ ಅವರಂತೂ ತಮ್ಮ ಹರಿತ ನಾಲಿಗೆಯನ್ನು ಸ್ವೇಚ್ಛೆಯಾಗಿ ಹರಿಬಿಡುವ ಚಾಳಿಯನ್ನು ಹಿಂದೆಯೂ ಅನೇಕ ಬಾರಿ ಪ್ರದರ್ಶಿಸಿದ್ದಾರೆ. ಅದು ದಾಖಲೆಯಲ್ಲೂ ಇದೆ. ಗಿರಿರಾಜ ಸಿಂಗ್ ಅವರದ್ದೂ ಅದೇ ಸ್ಥಿತಿ. ಸಾಮಾನ್ಯ ದಿನಗಳಲ್ಲಿ ತೊಗಾಡಿಯಾ, ಗಿರಿರಾಜ ಸಿಂಗ್ ಅವರಂತಹವರ ಪ್ರಚೋದಕ ಭಾಷಣಗಳಿಗೆ ಯಾರೂ ಬೆಲೆ ಕೊಡುವುದಿಲ್ಲ. ಅದಕ್ಕೆ ಪ್ರಚಾರವೂ ಸಿಗುವುದಿಲ್ಲ.
ಆದರೆ ಚುನಾವಣೆ ಪ್ರಚಾರ ಸಮರದಲ್ಲಿ ಈಗಾಗಲೇ ಸಾಕು ಬೇಕಾದಷ್ಟು ಕಾವೇರಿದ್ದು, ಸ್ವಲ್ಪ ಪ್ರಚೋದನೆ ಸಿಕ್ಕಿದರೂ ಪರಿಸ್ಥಿತಿ ಸ್ಫೋಟಗೊಳ್ಳುವ ಸಂಭವವಿದೆ. ಸಹಜವಾಗಿಯೇ, ಸಾರ್ವಜನಿಕ ಜೀವನದಲ್ಲಿ "ಪ್ರಸಿದ್ಧಿ" ಪಡೆಯಲು ತುದಿಗಾಲ ಮೇಲೆ ನಿಂತಿರುವ ಜನರು ಎಲ್ಲ ಕಡೆ ಇದ್ದಾರೆ. ಮೊದಲೇ ವಾತಾವರಣದಲ್ಲಿ ಕೋಮು ಸಂಘರ್ಷದ ಬಿಸಿ ಗಾಳಿ. ಅದರ ಜತೆಗೆ ಪ್ರಚೋದಕ ಹೇಳಿಕೆಗಳೂ ಸೇರಿದರೆ, ಗಲಭೆಗೆ ಹೇಳಿ ಮಾಡಿಸಿದ ಸನ್ನಿವೇಶ. ಇಂತಹ ಸ್ಥಿತಿಯಲ್ಲಿ ಪ್ರಚೋದಕ ಹೇಳಿಕೆಯನ್ನು ಖಂಡಿಸುವ ನೆಪದಲ್ಲಿ ಉಗ್ರ ಹೇಳಿಕೆಯನ್ನೇ ನೀಡಿ, ಅದರ ಮೂಲಕ ಸ್ಫೋಟಕ್ಕೆ ಅಗತ್ಯವಾದ ಒತ್ತಡವನ್ನು ನಿರ್ಮಿಸುವುದು ಅನೇಕರಿಗೆ ಒಂದು ದಂಧೆಯಾಗಿದೆ.
ಈ ಸಂದರ್ಭದಲ್ಲಿ ಹೇಳಿಕೆ - ಪ್ರತಿ ಹೇಳಿಕೆಗಳ ಗೊಂದಲವನ್ನು ತಪ್ಪಿಸಲು ಸ್ವಯಂ ನರೇಂದ್ರ ಮೋದಿ ಅವರೇ ಮುಂದಾಗಿ ಪ್ರಚೋದಕ ಹೇಳಿಕೆಗಳನ್ನು ಕೊಡುವ ಪ್ರವೃತ್ತಿಯನ್ನು ತತ್‌ಕ್ಷಣವೇ ಕೊನೆಗಾಣಿಸುವಂತೆ ಸಂಬಂಧಪಟ್ಟವರಿಗೆ ಆದೇಶ ನೀಡಿರುವುದು ಅಗತ್ಯವಾಗಿದ್ದ ಒಳ್ಳೆಯ ಮಾರ್ಗದರ್ಶನದ ಮಾತು. ನರೇಂದ್ರ ಮೋದಿ ಅವರಿಗೆ ಬೆಂಬಲ ಕೊಡುವುದಾಗಿ ಹೇಳಿಕೊಳ್ಳುವವರು ಇಂತಹ ಹೇಳಿಕೆಗಳಿಂದ ಮೋದಿ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದಾರಷ್ಟೇ. ಆ ಹೇಳಿಕೆಗಳನ್ನು ಬಿಜೆಪಿಯೂ ಖಂಡಿಸಿದೆ.
ಆರೋಪಗಳ ವಿನಿಮಯದ ಸಮರಕ್ಕೆ ಈಗ ಪ್ರಿಯಾಂಕ ವಾಧ್ರಾ ಅವರ ಪ್ರವೇಶವಾಗಿರುವುದು ಸಂಘರ್ಷದ ಪರಿಸ್ಥಿತಿಗೆ ಹೊಸ ತಿರುವನ್ನೇ ನೀಡಿದೆ. ಪ್ರಿಯಾಂಕ ಪತಿ, ರಾಜಸ್ಥಾನದಲ್ಲಿ ಭೂ ಅವ್ಯವಹಾರದಲ್ಲಿ ತೊಡಗಿದ್ದಾರೆನ್ನುವ ಆರೋಪ ಈಗ ಹೊಸದಾಗಿ ಸೃಷ್ಟಿಯಾಗಿದ್ದಲ್ಲ. ಕಳೆದ ವರ್ಷದ ರಾಜಸ್ಥಾನ ವಿಧಾನಸಭೆ ಚುನಾವಣೆ ಕಾಲದಲ್ಲೂ, ಅದರ ಪ್ರಸ್ತಾಪವಾಗಿತ್ತು. ಆಗ ಅದೇನೂ ಹೆಚ್ಚು ಕಾವನ್ನು ಮೂಡಿಸಿರಲಿಲ್ಲ. ಈಗ ರಾಮ್ ಜೇಠ್ಮಲಾನಿ ಅವರಂತಹ ಹಿರಿಯ ರಾಜಕಾರಣಿ, ಪ್ರಸಿದ್ಧ ವಕೀಲರು ಈ ವಿಷಯವನ್ನು ಸಾರ್ವಜನಿಕ ಹಿತರಕ್ಷಣಾ ಮೊಕದ್ದಮೆಯ ಮೂಲಕ ನ್ಯಾಯಾಲಯಗಳಿಗೇ ಕೊಂಡೊಯ್ದಿರುವ ಸನ್ನಿವೇಶದಲ್ಲೇ ಪ್ರಿಯಾಂಕ ತಮ್ಮ ಉದ್ವೇಗಭರಿತ ಭಾಷಣ ಮಾಡಿರುವುದು ಗಮನಾರ್ಹ. ಇದುವರೆಗೆ ಅವರು ಸುಮ್ಮನೆ ಇದ್ದಿದ್ದೇಕೆ ಎನ್ನುವುದು ಸಹಜವಾದ ಪ್ರಶ್ನೆಯೇ. ವಿವಾದ ಇಲ್ಲಿಗೇ ಮುಗಿಯುವುದಿಲ್ಲ. ಆದರೆ ಲೋಕಸಭೆ ಚುನಾವಣೆಯ ಪ್ರಚಾರ ಸಮರದ ಮಟ್ಟ ಈ ಹಂತಕ್ಕೆ ಕುಸಿಯಿತಲ್ಲ ಎಂಬ ವೇದನೆ ಬಹುಕಾಲ ಉಳಿಯುವಂತಹದ್ದು. ಚುನಾವಣೆಯ ಪ್ರಚಾರ ಸಮರದಲ್ಲಿ ಪ್ರಸ್ತಾಪಿಸಲು ಬೇಕಾದಷ್ಟು ಗಂಭೀರ - ಸೈದ್ಧಾಂತಿಕ - ತಾತ್ವಿಕ ವಿಚಾರಗಳಿವೆ. ಆರೋಪ - ಪ್ರತ್ಯಾರೋಪ ಆರೋಗ್ಯಕರವಾದ ಚರ್ಚೆ ಎಂದು ಯಾರೂ ಹೇಳಲಿಕ್ಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement