ತಪ್ಪಾಯ್ತು ತಿದ್ಕೋತೀವಿ
ಮಾಜಿ ಸಚಿವ ಎಸ್.ಸುರೇಶ್ಕುಮಾರ್ ಅವರು ಲೇಖನದಲ್ಲಿ ತಾವು ಮಾಡಿರುವ ತಪ್ಪನ್ನು ಸರಿಪಡಿಸಿ ಮಿಂಚಂಚೆ ಕಳುಹಿಸಿದ್ದಾರೆ. 'ಮಂಗಳವಾರದ 'ಕನ್ನಡಪ್ರಭ' ಪತ್ರಿಕೆಯಲ್ಲಿ ನನ್ನ 'ಪಕ್ಷಕ್ಕೆ ಪ್ರೀತಿ ಹರಿಸಿದವರನ್ನು ಮರೆಯುವುದು' ಲೇಖನ ಪ್ರಕಟ ಮಾಡಿರುವುದಕ್ಕೆ ಧನ್ಯವಾದಗಳು. ಲೇಖನದಲ್ಲಿ ನನ್ನಿಂದ ಒಂದು ಸಣ್ಣ ಆದರೆ ಗಂಭೀರ ಸ್ವರೂಪದ ಲೋಪ ಎಸಗಲ್ಪಟ್ಟಿದೆ. ದಾವಣಗೆರೆಯ ಘಟನೆಯಲ್ಲಿ ಸಹೋದರರ ಪೈಕಿ ಮೃತರಾದವರು ಮೋಹನ್ ಎಂದು ತಿಳಿಸಿದ್ದೇನೆ. ನನ್ನಿಂದ ಚ್ಯುತಿ ಆಗಿದೆ. ವಾಸ್ತವಿಕವಾಗಿ ಮೃತರಾದವರು ನಟರಾಜ್. ಮೋಹನ್ ಆ ಪರಿಸ್ಥಿತಿಯಲ್ಲಿ ಪಕ್ಷದ ಹಿತವನ್ನು ಮನದಲ್ಲಿರಿಸಿಕೊಂಡು ಯಾರಿಗೂ ಸಾವಿನ ಸುದ್ದಿ ತಿಳಿಸದೇ ನಮ್ಮೆಲ್ಲರ ಮನಕಲಕುವಂತೆ ವರ್ತಿಸಿದವರು. ನನ್ನಿಂದ ಆಗಿರುವ ಪ್ರಮಾದಕ್ಕೆ ಕ್ಷಮೆ ಕೋರುತ್ತೇನೆ' ಎಂದಿದ್ದಾರೆ.
ಉತ್ತರ ಕನ್ನಡ ಹೊನ್ನಾವರದಿಂದ ಶಂಕರನಾರಾಯಣ ಭಟ್ ಪತ್ರ ಬರೆದಿದ್ದಾರೆ. 'ಉತ್ತರ ಕನ್ನಡ ಜಿಲ್ಲೆಯ ಸುದ್ದಿಗೆ ಮೀಸಲಿಟ್ಟ ಏ.22ರ ಪುಟ 3ರಲ್ಲಿ 'ಸಿಬಿಎಸ್ಸಿ ಕಟ್ಟಡಕ್ಕೆ 15 ಲಕ್ಷ ಡಿಡಿ ಹಸ್ತಾಂತರ' ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಕೆಲವು ನೋಟು ಹಾಗೂ ಚಿಲ್ಲರೆಗಳಿರುವ ಫೋಟೋ ಪ್ರಕಟಿಸಿದ್ದೀರಿ. ಏನಿದರ ಅರ್ಥ? ಏ.25ರಂದು ಪುಟ 6ರಲ್ಲಿ ಪ್ರೊ.ಆರ್.ವೈದ್ಯನಾಥನ್ ಅವರ ಲೇಖನದ 4ನೇ ಪ್ಯಾರಾ '.... ವಿದ್ಯುತ್ ಮತ್ತು ನೀರು ಸರಬರಾಜಿಗಾಗಿ ಕನಿಷ್ಠ 2500 ಕೋಟಿ ರುಪಾಯಿಗಳಾದರೂ ಕಟ್ಟಬೇಕಾಗುತ್ತದೆ' ಅಂತ ಪ್ರಕಟವಾಗಿದೆ. ಅದು ರುಪಾಯಿಗಳನ್ನಾದರೂ ಎಂದಾಗಬೇಕಿತ್ತಲ್ಲವೇ? ಅಥವಾ ರುಪಾಯಿಗಳಾದರೂ ಖರ್ಚಾಗುತ್ತದೆ ಅಂದರೂ ಸರಿಯೇನೋ? ಇದೇ ದಿನ ಪುಟ 10ರಲ್ಲಿ 'ಮತ್ತೆ ಹಾರಿದ ಸ್ಪೈಸ್ ಜೆಟ್' ಸುದ್ದಿಯ 2ನೇ ಪ್ಯಾರಾದ 14ನೇ ಸಾಲು '...ಅದು ವಿಳಂಬವಾಗಿದ್ದರಿಂದ ವಿಮಾನ ಬುಧವಾರದ ಬದಲು ಗುರುವಾರ ಮುಂಬೈಗೆ ಹಾಯಿತು' ಅಂತಿದೆ. ಅದು 'ಹಾರಿತ್ತು' ಎಂದಾಗಬೇಕಿತ್ತು. ಇದೇ ಪುಟದಲ್ಲಿ 'ಎಂಟೆಕ್: ಶ್ರೀನಿವಾಸ್ ಶೆಣೈ ರಾಜ್ಯಕ್ಕೆ ಪ್ರಥಮ' ಸುದ್ದಿಯ 8ನೇ ಸಾಲು '.... ಪ್ರಸ್ತುತ ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು' ಅಂತಿದೆ. ಇಲ್ಲಿ 'ಬೆಂಜನಪದವು' ಅಂದರೇನು?'
'ಏ.26 ಪುಟ 3ರಲ್ಲಿ 'ಸಕಾಲಕ್ಕೆ ಕೈಗಾರಿಕೆಗಳ ನೆರವು' ಶೀರ್ಷಿಕೆಯ 4ನೇ ಪ್ಯಾರಾ 3ನೇ ಸಾಲು '..... ಸೇವೆಗಳು ತ್ವರಿತವಾಗಿ ದೊರೆಯುಂತಾಗಲು' ಎಂದಿದೆ. ಅದು ದೊರೆಯುವಂತಾಗಲು ಎಂದಾಗಬೇಕಿತ್ತು. 'ಬ್ರಾಹ್ಮಣನಾದರೂ......' ಶೀರ್ಷಿಕೆಯ ಮೊದಲ ಪ್ಯಾರಾ 4ನೇ ಸಾಲು '......ನಿರಂತರವಾಗಿ ಇವರ ಮೇಲೆ ಬೀಳುತ್ತಿತ್ತು' ಎಂದಿದೆ. ಸಾಮಾನ್ಯವಾಗಿ ಪುರಾಣ ಪುರುಷ ದೇವರ ಹೆಸರುಗಳಿಗೆ ಇವನು ಅಂತಲೇ ಸಂಬೋಧಿಸುತ್ತಾರಲ್ಲವೇ? 3ನೇ ಪ್ಯಾರಾ '....ತಾನು ಯಾರು ಎಂಬ ಅಸ್ಮಿತೆ ಸಿಗುವುದಿಲ್ಲ' ಅಂತಿದೆ. ಅದು ಅಸ್ಮಿತತೆ ಆಗಬೇಕಿತ್ತೇನೋ?' ಪುಟ 5ರಲ್ಲಿ 'ಬಳ್ಳಾರಿ ವೀರೇಶ್ಗೆ ನುಡಿನಮನ' ಶೀರ್ಷಿಕೆಯ ಸುದ್ದಿಯಲ್ಲಿ '.... ನುಡಿ ನಮನ ಮಾಡಿದ್ದು ಭಾವುಪೂರ್ಣವಾಗಿದೆ' ಎಂದಿದ್ದು ಅದು ಭಾವಪೂರ್ಣ ಎಂದಾಗಬೇಕಿತ್ತು. 'ಕನ್ನಡ ಶ್ರೇಷ್ಠ ಭಾಷೆ' ಶೀರ್ಷಿಕೆಯ 6ನೇ ಪ್ಯಾರಾದ ಕೊನೆಯ ಸಾಲಿನಲ್ಲಿ 'ಎಂದೇಳಿ' ಎಂಬ ಶಬ್ದ ಪ್ರಯೋಗವಾಗಿದೆ. ಈ ರೀತಿಯ ಪ್ರಯೋಗವಿದೆಯೇ? '29ರಿಂದ ಸೃಷ್ಟಿ ಅಭಿನಯ ಕಲಾವಿದರ ನೃತ್ಯ ಸಪ್ತಾಹ' ವರದಿಯಲ್ಲಿ '....ಗಂಗಮ್ಮ ಕೇಶವಮೂರ್ತಿ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ವೆಂಕಟಚಾರಿ ಭಾಗವಹಿಸಿದ್ದಾರೆ' ಎಂದಿದೆ. ಮೊದಲನೆಯದಾಗಿ ವೆಂಕಟಾಚಾರಿ ಆಗಬೇಕು, ಎರಡನೆಯದಾಗಿ 26ರ ವರದಿಯಲ್ಲಿ 29ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಬರೆದರೆ ಅರ್ಥವೇನು? ಕಾರ್ಯಕ್ರಮ ನಡೆಯುವ ಮುಂಚೆಯೇ ಭಾಗವಹಿಸಲು ಸಾಧ್ಯವೇ? ಅದು ಭಾಗವಹಿಸಲಿದ್ದಾರೆ ಎಂದು ಆಗಬೇಕು' ಎಂದಿದ್ದಾರೆ.
ವಿಶ್ವೇಶ್ವರ ಭಟ್