ಕಾಯುವವರೇ ಕೊಂದರೆ..?
ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಅಕ್ರಮವಾಗಿ ಪ್ರವೇಶಿಸಿ ಅಪರೂಪದ ಚುಕ್ಕೆ ಜಿಂಕೆಯ ಮೇಲೆ, ಮೈಸೂರಿನ ...
ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಅಕ್ರಮವಾಗಿ ಪ್ರವೇಶಿಸಿ ಅಪರೂಪದ ಚುಕ್ಕೆ ಜಿಂಕೆಯ ಮೇಲೆ, ಮೈಸೂರಿನ ಸಿ.ಐ.ಡಿ. ವಿಭಾಗದ ಡಿವೈಎಸ್‌ಪಿ ಆದ ಟಿ.ಆರ್. ಧರ್ಮೇಶ್ ಅವರ ತಂಡ ಓಂಕಾರ ಅರಣ್ಯ ವಲಯದಲ್ಲಿ ಜಿಂಕೆ ಬೇಟೆಯಾಡಿರುವುದು ಅಕ್ಷಮ್ಯ. ನಗರೀಕರಣ, ಖಾಸಗೀಕರಣ ಮತ್ತು ಜನಸಂಖ್ಯಾ ಸ್ಫೋಟದಿಂದಾಗಿ ಅಮೂಲ್ಯ ಅರಣ್ಯ ಪ್ರದೇಶ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದರಿಂದ ವನ್ಯ ಜೀವಕುಲ ಅಪಾಯದ ಅಂಚಿನಲ್ಲಿದೆ. ಇಂತಹದರಲ್ಲಿ ಇವರು ಜೀವ ಸಂಪತ್ತನ್ನು ಉಳಿಸಿ ರಕ್ಷಸಬೇಕಾದ ಮಹಾನುಭಾವರು ರಾಷ್ಟ್ರೀಯ ಉದ್ಯಾನವನದಲ್ಲಿ ಅಳಿವಿನ ಅಂಚಿನಲ್ಲಿರುವ ಚುಕ್ಕೆ ಜಿಂಕೆಯನ್ನು ಮಾನ-ಮರ್ಯಾದೆ ಇಲ್ಲದೆ ಹತ್ಯೆ ಮಾಡಿದ್ದಾರಲ್ಲ.
ತಾನು ಏನು ಮಾಡಿದರೂ ನಡೆಯುತ್ತದೆ ಎಂಬ ಅಧಿಕಾರದ ಅಮಲೇ ಇಂಥದ್ದಕ್ಕೆ ಪ್ರೇರೇಪಿಸುತ್ತದೆಯಲ್ಲವೇ? ಕಾನೂನನ್ನು ರಕ್ಷಿಸಿ, ಪಾಲಿಸಬೇಕಾದ, ಕಾನೂನನ್ನು ಉಲ್ಲಂಘಿಸಿದವರನ್ನು ಬಂಧಿಸಬೇಕಾದವರೇ, ಕಾನೂನನ್ನು ಮುರಿದರೆ ಹೇಗೆ?
ಒಂದು ವನ್ಯ ಪ್ರಾಣಿಯ ಮೇಲೆ ದಯೆ ತೋರದವರು ಅದು ಹೇಗೆ ನಾಗರಿಕ ಸಮಾಜವನ್ನು ಕಾಪಾಡುತ್ತಾರೋ ದೇವರೇ ಬಲ್ಲ. ಸರ್ಕಾರ ತನ್ನ ಅಧಿಕಾರಿಗಳ ಧೋರಣೆಯನ್ನು ನೋಡಿಯೂ ನೋಡದಂತೆ ಕಣ್ಮುಚ್ಚಿ ಕುಳಿತಿದೆ. ಆದರೆ ನಾಗರಿಕ ಪ್ರಜ್ಞಾವಂತ ಸಮಾಜ ಮತ್ತು ವನ್ಯಜೀವ ಸಂರಕ್ಷಣಾ ಹೋರಾಟಗಾರರು ನಿಮ್ಮ ತಪ್ಪನ್ನು ಎಂದಿಗೂ ಕ್ಷಮಿಸಲಾರರು. ಇಂತಹ ಘೋರ ಅಪರಾಧ ಮಾಡಿರುವವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಲಿ.
- ಪ್ರೊ. ರಾಯಣ್ಣ ಆರ್., ಅರಷಿನಗೋಡಿ. ಬಾಗಲಕೋಟ
ಬಿ.ಇಡಿ ನಿರ್ಲಕ್ಷ್ಯ ಬೇಡ
ಪ್ರೌಢಶಾಲಾ ಶಿಕ್ಷಕರನ್ನು ರೂಪಿಸುವ ಬಿ.ಇಡಿ ಕೋರ್ಸ್ ತನ್ನ ಶೈಕ್ಷಣಿಕ ವರ್ಷವನ್ನು ಕಳೆದುಕೊಂಡು ಕ್ಯಾಲೆಂಡರ್ ವರ್ಷವನ್ನು ಪಡೆದುಕೊಂಡಿದೆ. ಪ್ರವೇಶ ಅರ್ಜಿ ಕರೆಯುವುದರಿಂದ ಹಿಡಿದು ಆಯ್ಕೆ ಪ್ರಕ್ರಿಯೆ ನಡೆದು ಪ್ರವೇಶದ ವರೆಗಿನ ಎಲ್ಲಾ ಪ್ರಕ್ರಿಯೆಗಳು ಕಾಲಮಿತಿಯಲ್ಲಿ ನಡೆಯುತ್ತಿಲ್ಲ. 2013 ರ ಜೂನ್- ಜುಲೈ ನಲ್ಲಿ ಆರಂಭವಾಗಬೇಕಾಗಿದ್ದ ಕೋರ್ಸ್ ಏಳೆಂಟು ತಿಂಗಳ ವಿಳಂಬದ ನಂತರ ಈಗ 2014 ರ ಫೆಬ್ರವರಿ ಮೊದಲ ವಾರದಲ್ಲಿ ಮಂದಗತಿಯಲ್ಲಿ ಆರಂಭವಾಗುತ್ತಿವೆ. ಬಿ.ಇಡಿ ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಬೋಧನೆಗೆ ಪ್ರೌಢಶಾಲೆಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳಿಗೆ ಬೋಧಿಸುವಂತಹ ಯೋಜಿತ ಕಾರ್ಯನಿರ್ವಹಿಸಬೇಕಾಗುತ್ತದೆ. ಪಾಠ-ಪ್ರವಚನಗಳು ಮುಗಿದು ಪರೀಕ್ಷಾ ತಯಾರಿಯಲ್ಲಿರುವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಿ.ಇಡಿ ವಿದ್ಯಾರ್ಥಿಗಳು ಮರು ಬೋಧಿಸುವುದಾದರು ಹೇಗೆ?
ಕಾಲನಿಷ್ಠೆಯಿಲ್ಲದ್ದರಿಂದಾಗಿ ಒಂದು ವರ್ಷದ ಬಿ.ಇಡಿ ಪದವಿಯು ಎರಡು ಶೈಕ್ಷಣಿಕ ವರ್ಷಗಳನ್ನ ವ್ಯರ್ಥಮಾಡುತ್ತಿದೆ. ಇದರಿಂದಾಗಿ ಸ್ನಾತಕೋತ್ತರ ಪದವಿ, ಆನಂತರ ಸಂಶೋಧನೆಗೆ ಹೋಗಬಯಸುವ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ನಿರಂತರತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಬದಲಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶದ ಮಾದರಿಯಲ್ಲಿ ಪದವಿ ಫಲಿತಾಂಶ ಪೂರ್ವ ಅರ್ಜಿ ಕರೆದು ನಿಗದಿತ ಅವಧಿಯಲ್ಲಿ ಬಿ.ಇಡಿ ಪದವಿ ಪೂರೈಸಲು ಅವಕಾಶ ಮಾಡಿಕೊಡಲಿ. ಬಿ.ಇಡಿ ನಿರ್ಲಕ್ಷ್ಯ ಬೇಡ.
- ಉಮೇಶ.ವಿ., ಬೆಳಗಾಲಪೇಟೆ, ಹಾವೇರಿ(ಜಿ)
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com