ಕ್ರಿಕೆಟ್: ಅಗತ್ಯವಾಗಿದ್ದ ವಿಜಯ
ಕರ್ನಾಟಕದಲ್ಲಿ ಕ್ರಿಕೆಟ್ ಬಹುಜನಪ್ರಿಯ ಕ್ರೀಡೆ. ಅದರಲ್ಲೂ ಬೆಂಗಳೂರಿನಲ್ಲಂತೂ ಚಿನ್ನಸ್ವಾಮಿ ಸ್ಟೇಡಿಯಂ, ರಾಜೇಂದ್ರ ಸಿಂಗ್ಜೀ...
ಕರ್ನಾಟಕದಲ್ಲಿ ಕ್ರಿಕೆಟ್ ಬಹುಜನಪ್ರಿಯ ಕ್ರೀಡೆ. ಅದರಲ್ಲೂ ಬೆಂಗಳೂರಿನಲ್ಲಂತೂ ಚಿನ್ನಸ್ವಾಮಿ ಸ್ಟೇಡಿಯಂ, ರಾಜೇಂದ್ರ ಸಿಂಗ್ಜೀ ಸ್ಟೇಡಿಯಂಗಳಿಂದ ಹಿಡಿದು ಹಾದಿ-ಬೀದಿಗಳಲ್ಲಿ ಮಕ್ಕಳಾಡುವ ಆಟವನ್ನೂ ಜನ ಆಸಕ್ತಿಯಿಂದಲೇ ನೋಡುತ್ತಾರೆ. ರಬ್ಬರ್ಬಾಲ್ ಕ್ರಿಕೆಟ್ ಟೂರ್ನಿಗಳೂ ನಡೆಯುವುದುಂಟು. ಕೆಲವೇ ವರ್ಷಗಳ ಹಿಂದೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕರ್ನಾಟಕಕ್ಕೆ ಸಾಕಷ್ಟು ಪ್ರಾತಿನಿಧ್ಯ ಸಿಗುತ್ತಿತ್ತು. ವೈಯಕ್ತಿಕವಾಗಿ ನಮ್ಮ ರಾಜ್ಯಮಟ್ಟದ ಕ್ರಿಕೆಟ್ ಪಟುಗಳ ಸಾಮರ್ಥ್ಯ ಕಡಿಮೆ ಏನೂ ಅಲ್ಲ. ಆದರೂ ಕಳೆದ ಹದಿನೈದು ವರ್ಷಗಳಿಂದಲೂ ಕರ್ನಾಟಕಕ್ಕೆ ದೇಶದ ಅತಿ ಪ್ರತಿಷ್ಠಿತ ಅಂತಾರಾಜ್ಯ ಪ್ರಶಸ್ತಿಯಾದ ರಣಜಿ ಪ್ರಶಸ್ತಿ ದೊರೆತಿರಲಿಲ್ಲ.
ಈ ರಣಜಿ ಪ್ರಶಸ್ತಿಗೆ ಸುಮಾರು 80 ವರ್ಷಗಳ ಇತಿಹಾಸವಿದೆ. ಕರ್ನಾಟಕ ಈಗಾಗಲೇ ಆರು ಬಾರಿ ಆ ಪ್ರಶಸ್ತಿಯನ್ನು ಗಳಿಸಿದ್ದರೂ, ಹದಿನಾಲ್ಕು-ಹದಿನೈದು ವರ್ಷಗಳ ಕಾಲ ರಣಜಿ ಪ್ರಶಸ್ತಿ ಅಲಭ್ಯವಾಗಿದ್ದು ಕ್ರಿಕೆಟ್ ಪ್ರೇಮಿಗಳಲ್ಲಿ ಒಂದು ರೀತಿಯ ಹತಾಶೆಯನ್ನು ಮೂಡಿಸಿದ್ದೂ ನಿಜ. ಅದೆಲ್ಲವನ್ನೂ ರಾಜ್ಯದ ಈಗಿನ ಯುವ ಕ್ರಿಕೆಟ್ ತಂಡ, ರಣಜಿ ಪ್ರಶಸ್ತಿಗಾಗಿ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ, ಹೈದರಾಬಾದ್ನಲ್ಲಿ ಮಹಾರಾಷ್ಟ್ರ ತಂಡವನ್ನು ಸೋಲಿಸಿ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು ನೀಗಿಸಿದೆ. ಭಾನುವಾರ ಸಂಜೆಯ ವೇಳೆಗೆ ರಣಜಿಯ ವಿಜಯೋತ್ಸಾಹದಲ್ಲಿ ರಾಜ್ಯಕ್ಕೆ ರಾಜ್ಯವೇ ಮಿಂದಿತ್ತು. ನಿಜಕ್ಕೂ ಇದು ರಾಜ್ಯ ತಂಡಕ್ಕೆ ಬೇಕಾಗಿದ್ದ ಸಾಧನೆ. ಸಕಾಲದಲ್ಲಿ ಸಿಕ್ಕಿದೆ. ಹತಾಶೆಯನ್ನು ಹೊಡೆದು ಓಡಿಸಿದೆ.
ರಾಜ್ಯ ಕ್ರಿಕೆಟ್ ತಂಡದಲ್ಲಿ ಈಗ ಬಹುತೇಕ ಸದಸ್ಯರು ಇನ್ನೂ ಯುವಕರು. ಅವರಿಗೆ ಕ್ರಿಕೆಟ್ ಪ್ರೇಮಿಗಳೆಲ್ಲರ ಅಭಿನಂದನೆ ಸಲ್ಲಲೇ ಬೇಕು. ಈಗಾಗಲೇ ಅದು ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿದೆ. ಇದೊಂದು ಒಳ್ಳೆಯ ಬೆಳವಣಿಗೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ ರಣಜಿ ವಿಜೇತ ತಂಡಕ್ಕೆ ಕೊಡುವ ಎರಡು ಕೋಟಿ ರುಪಾಯಿಗಳ ಜತೆಗೆ ರಾಜ್ಯ ಸಂಸ್ಥೆಯೂ ಒಂದು ಕೋಟಿ ರುಪಾಯಿ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಒಂದು ಕೋಟಿ ರುಪಾಯಿ ಮೆಚ್ಚುಗೆಯ ಹಣವನ್ನು ಸರ್ಕಾರದ ಪರವಾಗಿ ಪ್ರಕಟಿಸಿದ್ದೂ ಒಳ್ಳೆಯದೇ.
ಕ್ರೀಡಾ ಪ್ರಪಂಚದಲ್ಲಿ ಸೋಲು-ಗೆಲವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು ಎನ್ನುವುದು ನಿಜ. ಆ ಮಾತಿನ ಜತೆಯಲ್ಲೇ ಗೆದ್ದವರು ಸಂಭ್ರಮ-ಸಡಗರವೆಲ್ಲ ಮುಗಿದ ಅನಂತರ ಭವಿಷ್ಯದಲ್ಲಿ ಅವರವರ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆಗೆ ಪ್ರಯತ್ನಿಸಬೇಕು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ರಣಜಿ ಟ್ರೋಫಿಯನ್ನು ಗೆದ್ದು ತಂದ ತಂಡಕ್ಕೆ ಅಭಿನಂದನೆ.