ತಪ್ಪಾಯ್ತು ತಿದ್ಕೋತೀವಿ
ಮೈಸೂರಿನ ಕುವೆಂಪುನಗರದಿಂದ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ಜ.24ರಂದು ಮತ್ತು ಜ.31ರಂದು ಪತ್ರಿಕೆಯ 11ನೇ ಪುಟದಲ್ಲಿ ಪ್ರಕಟವಾಗಿರುವ ವಿ.ಜೆ.ಎಸ್. ಭಟ್ ಅವರು ನುಡಿದಿರುವ ನಿತ್ಯಫಲವು ನಮ್ಮ ಜ್ಞಾಪಕಶಕ್ತಿಯನ್ನು ಪರೀಕ್ಷಿಸಲು ತಾವು ಮಾಡಿರುವ ಪ್ರಯತ್ನವಿರಬಹುದು. ಏನ್ ಸ್ವಾಮಿ, ನೋಡ್ತಾ ಇರಿ ಏನೇನ್ ಮಾಡ್ತೀವಿ ಅಂತಾ ಹೇಳಿ ಹೀಗಾ ಮಾಡೋದು?' ಎಂದು ಪ್ರಶ್ನಿಸಿದ್ದಾರೆ.
ಓದುಗರ ಜ್ಞಾಪಕ ಶಕ್ತಿಯ ಬಗ್ಗೆ ಅನುಮಾನಪಡುವುದಕ್ಕಿಂತ ಅಚ್ಚರಿಪಟ್ಟಿದ್ದೇ ಹೆಚ್ಚು. ಸಾಕಷ್ಟು ಸಂದರ್ಭಗಳಲ್ಲಿ ತುಂಬ ಹಿಂದೆ ಇದೇ ಅಂಕಣದಲ್ಲಿ ಬಂದ ಸಂಗತಿಗಳನ್ನು ನಾನು ಮರೆಯಬಹುದು. ಆದರೆ ಅದೆಷ್ಟೋ ತಿಂಗಳ ನಂತರ ಹಿಂದೊಮ್ಮೆ ನೀವು ಹೀಗೆ ಬರೆದಿದ್ದಿರಿ, ಆದರೆ ಈಗ ಹೀಗೆ ಸುದ್ದಿಯಲ್ಲಿ ಪ್ರಕಟಿಸಿದ್ದೀರಿ ಎಂದು ದಿನಾಂಕ ಸಹಿತವಾಗಿ ಬರೆಯುವ ಓದುಗರಿದ್ದಾರೆ. ಆದ್ದರಿಂದ ಅಂತಹ ಓದುಗರ ಜ್ಞಾಪಕಶಕ್ತಿಯನ್ನು ಪರೀಕ್ಷಿಸುವ ಸಾಹಸಕ್ಕೆ ಕೈಹಾಕಲಾರೆವು. ತಪ್ಪಿನಿಂದಾಗಿಯೇ ಆ ಎರಡೂ ದಿನ ಒಂದೇ ಭವಿಷ್ಯ ಪ್ರಕಟವಾಗಿದೆ.
ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಜ.31ರಂದು ಮುಖಪುಟದ 'ಆಧಾರ್ ಸಿಲಿಂಡರ್ಗೆ ಕಡ್ಡಾಯ ಕಟ್ಟಳೆಯಲ್ಲ' ಮಾಲಿಕೆಯಲ್ಲಿನ ಸಿಲಿಂಡರ್ಗೆ ಹೊಂದಿಕೊಂಡಿರುವ 'ಆಧಾರ್ ಕಾರ್ಡ್' ಚಿತ್ರ ಸರಿಯಾಗಿದೆಯೇ. ಪ್ರಕಟಿಸಿರುವ ಚಿತ್ರ ಆರ್.ಟಿ.ಒ ಸಂಸ್ಥೆಯವರು ನೀಡುವ ಚಾಲನೆಯ ಪರವಾನಿಗೆಯ ಇಕಾರ್ಡ್ನಂತಿಲ್ಲವೇ? ಆಧಾರ್ ಕಾರ್ಡ್ ವ್ಯಕ್ತಿಯ ಭಾವಚಿತ್ರ ಸಹಿತವಾಗಿರುತ್ತದೆಯಲ್ಲವೇ?'
'ಜ.16ರಂದು ಪತ್ರಿಕೆಯ ಪುಟ5ರಲ್ಲಿ 'ಗುಂಡೇಟು ಬಿದ್ದಿದ್ದ ಇನ್ಸ್ಪೆಕ್ಟರ್ ಬಂಡೆ ವಿಧಿವಶ' ವರದಿಯಲ್ಲಿ ಬಂಡೆಯವರಿಗೆ ಇಬ್ಬರು ಮಕ್ಕಳು ಶಿವಾನಿ(6) ಸಾಯಿದರ್ಶನ್ (2) (1ಹೆಣ್ಣು, 1 ಗಂಡು) ಎಂಬಂತೆ ವರದಿಯಿದೆ. ಆದರೆ ಫೆ.1ರಂದು ಪುಟ 12ರಲ್ಲಿ ಬಂಡೆ ಕುಟುಂಬಕ್ಕೆ '50 ಲಕ್ಷ ಮೌಲ್ಯದ ಚೆಕ್ ವಿತರಣೆ' ವರದಿಯ ಕೊನೆಯ ಪ್ಯಾರಾದಲ್ಲಿ 'ಬಂಡೆ ಅವರ ಇಬ್ಬರು ಪುತ್ರರ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಘೋಷಿಸಿತ್ತು' ಎಂದಿದೆ.'
'ಫೆ.1ರಂದು ಪುಟ 14ರ 'ಮಾಹಿತಿಪ್ರಭ' ಮಾಲಿಕೆಯಲ್ಲಿ 'ಮೋನೋ ರೈಲ್' ಬಗ್ಗೆ ಮಾಹಿತಿ ನೀಡಿದ್ದೀರಿ. ಇದರಲ್ಲಿನ ಆರನೇಯ ಅಂಶದಲ್ಲಿ 'ಒಂದು ರೈಲಿನಲ್ಲಿ 4 ಬೋಗಿಗಳಿರುತ್ತದೆ' ಎಂದಿದೆ. ಆದರೆ ರೇಲ್ವೇ ಇಂಜಿನಿಯರಿಂಗ್ ಪ್ರಕಾರ ರೈಲು ಹಳಿ (ಇಂಜಿನ್ ಮತ್ತು ಬೋಗಿಗಳು ಚಲಿಸುವ ಕಂಬಿ)ಗೆ ರೈಲ್ ಎನ್ನುತ್ತಾರೆ. ಇದನ್ನೇ ಪರಿಗಣಿಸುವುದಾದರೆ ಒಂದು ಇಂಜಿನ್ಗೆ 4 ಬೋಗಿಗಳಿರುತ್ತದೆ ಎಂದಿರಬೇಕಿತ್ತು ಎಂದಿದ್ದಾರೆ.'
ಅದು ಆಧಾರ್ ಕಾರ್ಡ್ನ ಚಿತ್ರವಲ್ಲ. ಪ್ರಾತಿನಿಧಿಕ ಚಿತ್ರ ಎಂದು ನಮೂದಿಸಬೇಕಿತ್ತು. ಇನ್ನು ಬಂಡೆ ಅವರಿಗೆ ಸಂಬಂಧಿಸಿದ ಸುದ್ದಿಯಲ್ಲಿ 'ಅವರ ಇಬ್ಬರು ಮಕ್ಕಳ' ಎಂದು ಬರೆಯಲು ಹೋಗಿ ತಪ್ಪಾಗಿ 'ಪುತ್ರರ' ಎಂದಾಗಿದೆ. ಇನ್ನು ತಾಂತ್ರಿಕವಾಗಿ ಹೇಗೇ ಇದ್ದರೂ ಸಾಮಾನ್ಯವಾಗಿ ರೈಲು ಅಂದರೆ, ಎಂಜಿನ್ ಮತ್ತು ಬೋಗಿಗಳನ್ನು ಸೇರಿಸಿಯೇ ಹೇಳುತ್ತೇವೆ. ಒಂದು ಎಂಜಿನ್ಗೆ ಇಷ್ಟು ಬೋಗಿ ಎಂದು ಹೇಳುವುದಿಲ್ಲ. ಇದೇ ಅರ್ಥದಲ್ಲಿ ನಾವು ಬರೆದಿದ್ದು. ತಕರಾರು ಎತ್ತಲು ಇಂತಹ ಅಂಶಗಳು ಸೂಕ್ತವಾಗಬಹುದೇ ಹೊರತು ಬಳಕೆಗಲ್ಲ.
-ವಿಶ್ವೇಶ್ವರ ಭಟ್