ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತೆಲಂಗಾಣದ ರಂಪ ರಾದ್ಧಾಂತ

Vishwanath S
Updated On : 7 Feb 2014, 12:17 pm

ಪ್ರಸ್ತುತ ಲೋಕಸಭೆಯ ಕಟ್ಟಕಡೆಯ ಅಧಿವೇಶನಕ್ಕೆ ಆಳುವ ಸಂಯುಕ್ತ ಪ್ರಗತಿಪರ ಕೂಟದ ಸರ್ಕಾರ, ಚುನಾವಣೆಯನ್ನೇ ದೃಷ್ಟಿಯಾಗಿಟ್ಟುಕೊಂಡ  ಆರೇಳು ವಿಧೇಯಕಗಳನ್ನು ಸಿದ್ಧವಾಗಿಟ್ಟುಕೊಂಡಿತ್ತು. ಆದರೆ ಆಳುವ ಕೂಟಕ್ಕೆ ಈಗಿನ ಅವಾಂತರಕಾರಿ ರಾಜಕೀಯದಲ್ಲಿ ಯಾವ ವಿಧೇಯಕವೂ ವಿಧಿಬದ್ಧವಾಗಿ ಕಾಯಿದೆಯಾಗುವ ಸಂಭವ ಕಡಿಮೆ ಎನ್ನುವ ವಿಷಯ ಹೊಳದೇ ಇರಲಿಲ್ಲವೆಂದು ಕಂಡುಬರುತ್ತಿದೆ.
ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ, ಸಂಸತ್ತಿನ ಕಾರ್ಯಕಲಾಪದಲ್ಲಿ ಹೊಂದಾಣಿಕೆಯನ್ನು ಮೂಡಿಸುವ  ಸ್ಥಾನಗಳಲ್ಲಿರುವವರು ತಮ್ಮ  ಸಂಖ್ಯಾಬಲವೇ ತಮಗೆ ರಕ್ಷೆ ಎಂದುಕೊಂಡಿರಬೇಕು. ಅದಕ್ಕೇ ಪ್ರತಿಪಕ್ಷಗಳ ಜತೆ ವಿಚಾರ ವಿನಿಮಯ ನಡೆಸುವ ಅಭ್ಯಾಸವನ್ನೇ ಅದು ಕೈ ಬಿಟ್ಟಂತಿದೆ. ಜಗಳದ ಅನಂತರವೇ ಮಾತು. ಆದರೆ ಕಾಂಗ್ರೆಸ್ ಲೆಕ್ಕ ತಲೆಕೆಳಗಾಗಿದ್ದು, ತೆಲಂಗಾಣ ರಾಜ್ಯ ರಚನೆಯ ಸಂಬಂಧದಲ್ಲಿನ ರಂಪ ರಾದ್ಧಾಂತ, ಯಾವ  ಮಟ್ಟಕ್ಕೆ ಹೋಗಬಹುದು ಎನ್ನುವುದನ್ನು ಊಹಿಸುವುದೇ ಪಕ್ಷಕ್ಕೆ ಅಸಾಧ್ಯವಾದಾಗ, ಪಕ್ಷದ ಮುಖ್ಯಮಂತ್ರಿ ಕಿರಣ ಕುಮಾರ್ ರೆಡ್ಡಿ ಅವರು ನೇರವಾಗಿ ದೆಹಲಿಗೇ ಬಂದು ಆಂಧ್ರದ ವಿಭಜನೆಯ ಸಲಹೆಯನ್ನು ಪ್ರತಿಭಟಿಸಲು ಧರಣಿ ಮಾಡಿದ್ದು, ಅನಂತರ ಸೀಮಾಂಧ್ರ ಸೀಮೆಯ ಸಂಸದರು ಲೋಕಸಭೆ- ರಾಜ್ಯಸಭೆಗಳಲ್ಲಿ ಕಾರ್ಯಕಲಾಪವನ್ನು ಅಸಂಸದೀಯ ಮಾರ್ಗಗಳಿಂದ ತಡೆ ಹಿಡಿದದ್ದು, ಇಂತಹ ಪ್ರಕರಣಗಳು ನಡೆದರೂ ನಾಯಕತ್ವ ಏನೂ ಮಾಡದ ಸ್ಥಿತಿಯನ್ನು ತಲುಪಿತ್ತು.
ಈ ಸನ್ನಿವೇಶದಲ್ಲಿ ಪ್ರತಿಪಕ್ಷಗಳ ಕೆಲಸ ಸುಲಭ. ಆಳುವ ಕೂಟ ತನ್ನ ಆಂತರಿಕ ಬಿಕ್ಕಟ್ಟನ್ನು ನಿವಾರಿಸಿಕೊಂಡು ಬರಲಿ, ಅನಂತರ ನಮ್ಮ ಮಾತನ್ನು ಹೇಳುತ್ತೇವೆ ಎನ್ನುವ ನಿಲವು ತಾಳಲು ಅವಕಾಶವಾಯಿತು. ಪ್ರತಿಪಕ್ಷಗಳ ಪಾಲಿಗೂ ತೆಲಂಗಾಣ ಸುಲಭದ ಪ್ರಶ್ನೆ ಅಲ್ಲ. ಈಗಿನ ಅಧಿವೇಶನದ ಎರಡು ದಿನಗಳು ಕಳೆದು ಹೋಗಿವೆ. ಸಂಸತ್ತಿಗೆ ಆಳುವ ಕೂಟ ಸಿದ್ಧಪಡಿಸಿರುವ ವೇಳಾಪಟ್ಟಿಯನ್ನು ಪಾಲಿಸುವುದು ನಿಜವಾಗಲೂ ಅಸಾಧ್ಯದ ಮಾತೇ. ಅಂತಿಮ ಹಂತದಲ್ಲಿ ತೆಲಂಗಾಣವನ್ನು ರಚಿಸಬೇಕೋ, ಬೇಡವೋ ಎನ್ನುವ ಪ್ರಶ್ನೆಯನ್ನು ಹಾಗೇ ತ್ರಿಶಂಕು ಅವಸ್ಥೆಯಲ್ಲಿ ಬಿಡುವುದು ಸಾಧ್ಯವಿಲ್ಲ. ಕಾಂಗ್ರೆಸ್ ಈಗ ತನ್ನ ರಾಜಕೀಯ ಶಕ್ತಿಯನ್ನು ಪ್ರದರ್ಶಿಸಲೇಬೇಕು.
ಉಳಿದಂತೆ, ಇತರ ವಿಧೇಯಕಗಳು ಅಂಗೀಕಾರವಾದರೂ ಒಂದೇ, ಬಿಟ್ಟರೂ ಒಂದೇ. ಅದು ಆಳುವ ಕೂಟದ ಪಕ್ಷಗಳ ಚುನಾವಣೆ ಪ್ರಚಾರಕ್ಕೆ ಅನುಕೂಲವಾಗಬಹುದಷ್ಟೇ. ಕೆಲವು ದಿನಗಳ ಹಿಂದೆ ಪ್ರಕಟಿಸಿದಂತೆ, ಸುಮಾರು ಐವತ್ತು ವಿಧೇಯಕಗಳು ಸದನ ಸಮಿತಿಗಳಿಂದ ಹೊರಗೇ ಬಂದಿಲ್ಲ. ಕೆಲವು ಪ್ರಮುಖ ಕಾಯಿದೆಗಳನ್ನು ಮೂರನೆಯ ಬಾರಿಗೆ ತುರ್ತು ಶಾಸನವನ್ನು ಪ್ರಕಟಿಸಿ, ಜಾರಿಗೊಳಿಸಬೇಕಾಗಿ ಬಂದಿತ್ತು.
ಇದು ನಿಜಕ್ಕೂ ಅಸಹನೀಯವಾದ ಪರಿಸ್ಥಿತಿ. ಇಂತಹ ಸಂಸತ್ತನ್ನು ದೇಶ ಹಿಂದೆ ಕಂಡಿರಲಿಲ್ಲ. ಇನ್ನು ಮುಂದೆ ಕಾಣುವುದೂ ಬೇಡ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement