ಮೂರನೆಯ ರಂಗ ರಚನೆ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಗಳೆರಡನ್ನೂ ಸಮಾನವಾಗಿ ವಿರೋಧಿಸುವ ಪ್ರಾದೇಶಿಕ ಪಕ್ಷಗಳ ಒಂದು ಐಕ್ಯ ರಂಗವನ್ನು ರಚಿಸಿಕೊಳ್ಳುವ ನಿರ್ಧಾರ, ಈಗ ಸಾಂಕೇತಿಕವಾಗಿ ಸಂಸತ್ತಿನಲ್ಲಿ ಅಂತಹ ಕೆಲವು ಪಕ್ಷಗಳು ಒಂದು ಅನೌಪಚಾರಿಕ ಕೂಟದ ರೂಪದಲ್ಲಿ ಅಸ್ತಿತ್ವದಲ್ಲಿ ಬಂದಿದೆ. ಸದ್ಯಕ್ಕೆ ರವಾನೆಯಾಗಿರುವ ಸಂದೇಶ ಎಂದರೆ, ದೇಶದ ಹನ್ನೊಂದು ಪಕ್ಷಗಳು ಒಂದಾಗಿ ಲೋಕಸಭೆ ಚುನಾವಣೆಯನ್ನು ಎದುರಿಸಬೇಕು ಎನ್ನುವುದು. ಆದರೆ ಎಂದಿನಂತೆ, ಬೇರೆ, ಬೇರೆ ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಐಕ್ಯರಂಗದಲ್ಲಿ ಉಳಿಯುವ ವ್ಯವಸ್ಥೆ ಇದು. ಉಳಿದಿದ್ದೆಲ್ಲಾ ಹಿಂದಿನ ರಾಷ್ಟ್ರೀಯ ರಂಗ, ಅನಂತರದ ಸಂಯುಕ್ತ ರಂಗದ ಮಾದರಿಯಲ್ಲೇ ನಡೆಯಬೇಕು ಎನ್ನುವ ಚಿಂತನೆ ಇದ್ದಂತೆ ಕಂಡುಬರುತ್ತಿದೆ.
ವಾಸ್ತವದಲ್ಲಿ ಈ ರಂಗದ ಉದ್ದೇಶ ಇನ್ನೂ ಮಸಕು- ಮಸಕು. ಸಾಲದ್ದಕ್ಕೆ ಸದ್ಯದ ಸ್ಥಿತಿಯಲ್ಲಿ ಯಾವ ವ್ಯಕ್ತಿಯನ್ನು ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಬಿಂಬಿಸುವ ಸ್ಥಿತಿಯಲ್ಲಿ ಪಕ್ಷಗಳಿಲ್ಲ. ನಿಜ ಹೇಳಬೇಕೆಂದರೆ, ಇದೊಂದು ಸರ್ವಗ್ರಾಹಿಯಂತಿರುವ "ಹೊಲ್ಡಾಲ್" ಕೂಟ ಎನ್ನಬಹುದು. ಅಣ್ಣಾ ಡಿಎಂಕೆಯ ನಾಯಕಿ ಜಯಲಲಿತಾ ಹಾಗೂ ಒಡಿಶಾದ ಮುಖ್ಯಮಂತ್ರಿ ಬಿಜೂ ಪಟ್ಟನಾಯಕ ಅವರ ನಾಯಕತ್ವದ ಬಿಜೂ ಜನತಾದಳದ ನಡುವೆ ಯಾವ ರೀತಿಯ ಸಂಬಂಧ ಇರಬಹುದೆನ್ನುವುದನ್ನು ಊಹಿಸುವುದೂ ಕಷ್ಟ. ಆದರೂ ದೇಶದ ರಾಜಕೀಯದಲ್ಲಿ ಒಂದು ರೀತಿಯಲ್ಲಿ ಹೆಚ್ಚು ಸ್ಫುಟವಾದ ಕಾರ್ಯಕ್ರಮ, ಹೊಂದಾಣಿಕೆಯ ಸಿದ್ಧಾಂತಗಳ ವಿಚಾರದಲ್ಲಿ ಸ್ಪಷ್ಟವಾದ ಹಾಗೂ ಖಚಿತವಾದ ನಿಲವಿಗೆ ಬದ್ಧವಾಗಲು ಪಕ್ಷಗಳು ಸಿದ್ಧವಾಗದೇ ಹೋದರೆ, ಈಗಿನ ಪ್ರಯೋಗವೂ ಹಿಂದಿನ ಪ್ರಯೋಗಗಳಂತೆಯೇ ಆಗಬಹುದು. ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಅವರ ನೇತೃತ್ವದ ಸಮಾಜವಾದಿ ಪಕ್ಷ ಕಳೆದ ಐದು ವರ್ಷಗಳ ಕಾಲದಲ್ಲಿ, ಮೈದಾನದ ರಾಜಕೀಯದಲ್ಲಿ ಕಾಂಗ್ರೆಸ್ಸಿನ ಕಡುವಿರೋಧಿಯಾಗಿ ವರ್ತಿಸಿದರೂ, ಸಂಸತ್ತಿನಲ್ಲಿ ಆಳುವ ಕೂಟ ಎದುರಿಸಿದ ಎಲ್ಲ ಬಿಕ್ಕಟ್ಟುಗಳ ಕಾಲದಲ್ಲೂ ಸರ್ಕಾರದ ಪರವಾಗಿಯೇ ವರ್ತಿಸಿದೆ. ಅದೇ ರೀತಿ ಮತವನ್ನೂ ನೀಡಿದೆ.
ಈಗ ಹೊಸ ರಂಗದಲ್ಲಿನ ಪಕ್ಷಗಳು ಸಮಾಜವಾದಿ ಪಕ್ಷದ ಈ ನೀತಿಯನ್ನು (ಮೈದಾನದ ರಾಜಕೀಯ ಬೇರೆ- ಸಂಸದೀಯ ರಾಜಕೀಯ ಬೇರೆ) ಒಪ್ಪುವುದಾದರೂ ಹೇಗೆ? ಈಗಲೂ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರ ಉಳಿದಿರುವುದು ಕಾಂಗ್ರೆಸ್ಸಿನ ಬೆಂಬಲದಿಂದಲೇ. ಆದರೆ ದಿಲ್ಲಿಯಲ್ಲಿ, ಮೈದಾನದ ರಾಜಕೀಯದಲ್ಲಿ ನಿತೀಶ್ ಕಾಂಗ್ರೆಸ್ ವಿರೋಧಿ. ಈ ವಿರೋಧಾಭಾಸಗಳನ್ನು ಜನರಿಗೆ ಅರ್ಥವಾಗುವಂತೆ ವಿವರಿಸಬೇಕಾದ್ದು ರಂಗದ ನಾಯಕರ ಕರ್ತವ್ಯ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.