ಇರಾನ್ ದೇಶವಾಗಿರುವ ಪರ್ಷಿಯಾಕ್ಕೆ ಅರಬರು ಬಂದು ಅಲ್ಲಿನ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸತೊಡಗಿದರು. ಅನೇಕರು ಬಲಾತ್ಕಾರಕ್ಕೆ ಮಣಿದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೂ, ಕೆಲವು ಪರ್ಷಿಯನ್ನರು ತಮ್ಮ ಜಾರತೂಷ್ಟ್ರ ಧರ್ಮಕ್ಕೇ ಬದ್ಧರಾಗಿರಲು ಬಯಸಿದರು. ಆದರೆ ಅಲ್ಲಿಯೇ ಇದ್ದರೆ ತಾವೂ ಧರ್ಮಭ್ರಷ್ಟರಾಗಬಹುದೆಂದು ತಿಳಿದು ಅಲ್ಲಿಂದ ಪಲಾಯನ ಮಾಡಿದರು. ಹೀಗೆ ಪಲಾಯನ ಮಾಡಿದ ಒಂದು ಗುಂಪು ಕ್ರಿ.ಶ.785ರಲ್ಲಿ ಗುಜರಾತಿನ ಸಮುದ್ರ ತೀರವನ್ನು ತಲುಪಿತು.
ಅಲ್ಲಿಯ ರಾಜ ಜಾಧವ್ ರಾಣಾನ ಆಸ್ಥಾನಕ್ಕೆ ಅವರನ್ನು ಕರೆದೊಯ್ಯಲಾಯಿತು. ಆ ನಿರಾಶ್ರಿತರ ನಾಯಕನಾಗಿದ್ದವನು ಒಬ್ಬ ವಯಸ್ಸಾದ ಪುರೋಹಿತ. ಅವನ ಕೈಲಿ ಒಂದು ಪುಟ್ಟ ಅಗ್ನಿಪಾತ್ರೆಯಿತ್ತು. ರಾಣ ಅವರನ್ನುದ್ದೇಶಿಸಿ ಅಲ್ಲಿಗೆ ಬಂದ ಕಾರಣವನ್ನೂ, ಅವರು ಯಾವ ಸಹಾಯವನ್ನು ಪಡೆಯುತ್ತಾರೆ ಎಂಬುದನ್ನೂ ಕೇಳಿದ. ಅದಕ್ಕೆ ಆ ವೃದ್ಧ ಪುರೋಹಿತ ತಮ್ಮ ತಂಡ ಗುಜರಾತಿನ ನೆಲಕ್ಕೆ ಕಾಲಿರಿಸಲು ಕಾರಣವಾದ ಅಂಶಗಳನ್ನು ತಿಳಿಸಿದ. ಅಲ್ಲಿ ಜೀವಿಸಲು ಅವಕಾಶ ನೀಡಬೇಕೆಂದೂ, ತಮಗೆ ಪೂಜಾ ಸ್ವಾತಂತ್ರ್ಯ ಮತ್ತು ಮಕ್ಕಳನ್ನು ತಮ್ಮ ಸಂಪ್ರದಾಯದಂತೆ ಸಾಕಿ ಬೆಳೆಸುವ ಅಧಿಕಾರವನ್ನೂ, ಜೀವನೋಪಾಯಕ್ಕಾಗಿ ಸ್ವಲ್ಪ ಜಮೀನನ್ನೂ ದಯಪಾಲಿಸಬೇಕೆಂದು ವಿನಮ್ರವಾಗಿ ಕೇಳಿಕೊಂಡ. ಆಗ ರಾಣಾ ತುಂಬ ಸಾವಧಾನದಿಂದ ಮತ್ತು ಸಹನೆಯಿಂದ ಆ ಪುರೋಹಿತನ ಮಾತು ಕೇಳಿ ಆ ನಿರಾಶ್ರಿತರಿಗೆ ಸಹಾಯ ಮಾಡಬೇಕೆಂಬ ನಿರ್ಧಾರಕ್ಕೆ ಬಂದ. "ಆಯ್ತು, ನೀವು ಕೇಳಿದ್ದನ್ನೆಲ್ಲಾ ಕೊಡುತ್ತೇನೆ. ಆದರೆ ಅದಕ್ಕೆ ಪ್ರತಿಫಲವಾಗಿ ಈ ನಾಡಿಗೆ ನೀವೇನು ಕೊಡಬಲ್ಲಿರಿ?" ಎಂದು ಪ್ರಶ್ನಿಸಿದ.
ಆಗ ಆ ವೃದ್ಧ ಪುರೋಹಿತ ರಾಜಭಟರಿಂದ ಒಂದು ಲೋಟದಲ್ಲಿ ಹಾಲನ್ನು ತರಿಸಿದ. ಅದರಲ್ಲಿ ತಾನು ತಂದಿದ್ದ ಸ್ವಲ್ಪ ಸಕ್ಕರೆಯನ್ನು ಬೆರೆಸಿದ. ನಂತರ ಆ ಬಟ್ಟಲನ್ನು ಎತ್ತಿ ಹಿಡಿದು ಎಲ್ಲರಿಗೂ ತೋರಿಸಿ, ಅದರಲ್ಲಿ ತಾನು ಹಾಕಿದ ಸಕ್ಕರೆ ಕಾಣುವುದೇ ಎಂದು ಪ್ರಶ್ನಿಸಿದ. ಎಲ್ಲರೂ ಇಲ್ಲವೆಂದು ನುಡಿದರು. ಆಗ ಆ ಪುರೋಹಿತ ಹೇಳುತ್ತಾನೆ, ಹೇಗೆ ಆ ಹಾಲಿನಲ್ಲಿ ಸಕ್ಕರೆ ಬೆರೆತು ಹಾಲನ್ನು ಸಿಹಿ ಮಾಡಿತೋ ಹಾಗೆ, ರಾಜನ ಕರುಣೆಯೆಂಬ ಕ್ಷೀರದಲ್ಲಿ, ತಾವು ಆ ನಿರಾಶ್ರಿತರು ಬೆರೆತು ಅಲ್ಲಿನ ಜನರ ಬದುಕನ್ನು ಸಿಹಿ ಮಾಡುತ್ತೇವೆ ಎಂದು. ರಾಣಾನಿಗೆ ಆ ಮಾತಿನಿಂದ ಸಂತೃಪ್ತಿಯಾಯಿತು. ಆ ನಿರಾಶ್ರಿತರಿಗೆ ಸಕಲ ಸೌಲಭ್ಯಗಳನ್ನೂ ತನ್ನ ನಾಡಿನಲ್ಲಿ ಒದಗಿಸಿಕೊಟ್ಟ.
ನಂತರ ಎಲ್ಲ ನಿರಾಶ್ರಿತರೂ ಆ ನೆಲದ ಮಣ್ಣನ್ನು ಕೈಗೆತ್ತಿಕೊಂಡು ಕಣ್ಣಿಗೆ ಒತ್ತಿಕೊಂಡು, ಹಣೆಗೆ ಸವರಿಕೊಂಡು, ರಾಣಾನಿಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು. ಈಗ ಪಾರ್ಸಿಗಳೆಂದು ಕರೆಯುವ ಈ ಜನ ಭಾರತದಾದ್ಯಂತ ನೆಲಸಿ, ನಮ್ಮ ದೇಶಕ್ಕೆ ಅನೇಕ ಮಹತ್ವವಾದ ಕೊಡುಗೆಗಳನ್ನು ನೀಡಿದ್ದಾರೆ. ಜಮ್ಶಡ್ಜೀ ಟಾಟಾ, ರತನ್ ಟಾಟಾ, ದಾದಾಭಾಯಿ ನವರೋಜಿ, ಬಿ.ಪಿ.ವಾಡಿಯಾ, ಹೋಮಿ ಜಹಾಂಗೀರ್ ಭಾಭಾ, ನಾರಿ ಕಂಟ್ರಾಕ್ಟರ್, ಮಾಣಿಕ್ ಷಾ, ಆದಿ ಗೋದ್ರೇಜ್..ಇವರೆಲ್ಲಾ ಪಾರ್ಸಿಗಳೇ...
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com