ತಪ್ಪಾಯ್ತು ತಿದ್ಕೋತೀವಿ
ಸಂಪದಿಂದ ಮ.ರಾ. ಹೆಗಡೆ ಅವರು ಬರೆಯುತ್ತಾರೆ- 'ಜ.26ರ 'ಖುಷಿ'ಯ 'ಈ 26' ಲೇಖನ ಮಾಲಿಕೆಯ 'ಕುಟುಂಬ ಕಾರಣ'ದಲ್ಲಿ 'ವಸುದೈವ ಕುಟುಂಬಕಂ' ಎಂದಿದೆ. ಆದರೆ ವಸುಧಾಏವ ವಸುಧೈವ ಎಂದಾಗುತ್ತದೆ.' 'ಮಠಮಂದಿರಗಳು' ಲೇಖನದಲ್ಲಿ 'ಅದ್ವೀತಿಯ' ಎಂಬುದು 'ಅದ್ವಿತೀಯ' ಆಗಬೇಕಿತ್ತು. 'ಆಯುರ್ವೇದದ ದಾರಿ' ಲೇಖನದಲ್ಲಿ 'ಮೀಲಕ' ಎಂಬುದು 'ಮೂಲಕ' ಆಗಬೇಕಿತ್ತು. 'ಶಿರದಲ್ಲೂ ಚರಣದಲ್ಲೂ' ಲೇಖನದಲ್ಲಿ 'ಸ್ವರ್ಗಾಧಪಿ' ಎಂಬುದು 'ಸ್ವರ್ಗಾದಪಿ' ಎಂದೂ 'ಮಹಾಮತೆ' ಎಂಬುದು 'ಮಹಾಮಾತೆ' ಎಂದೂ ಆಗಬೇಕಿತ್ತು.'
'ಜ.23ರ 'ಬೈಟು ಕಾಫಿ'ಯ 3ನೇ ಪುಟದ 'ಪದ್ಮಪುರಾಣ' ಶೀರ್ಷಿಕೆಯ ಲೇಖನದ ಮೊದಲ ಶಬ್ದವು 'ನೇಮಿಶಾರಣ್ಯ'ವು 'ನೈಮಿಷಾರಣ್ಯ'ವಾಗಬೇಕು. ಇದೇ ಲೇಖನದ ಮಧ್ಯಭಾಗದಲ್ಲಿರುವ 'ತಟಾಕ' ಎಂಬ ಶಬ್ದವು 'ತಕಾಟ'ಗೊಂಡು ಕಲುಷಿತವಾಗಿದೆ' ಎಂದಿದ್ದಾರೆ.
ತೀರ್ಥಹಳ್ಳಿಯಿಂದ ಕುತ್ಪಾಡಿ ಜಯಪ್ರಕಾಶ ಹೆಗ್ಡೆ ಅವರು ಬರೆಯುತ್ತಾರೆ- 'ಡಿ.30ರ ಸಂಚಿಕೆಯಲ್ಲಿ 'ಶಿ'ರಾಡಿ' ಘಾಟಿ ದರ್ಶನ' ಲೇಖನದಲ್ಲಿ ರೂಪಾ ಜಗದೀಶ್ ಹಾಸನ ಅವರ ಆಕ್ರೋಶದ ನುಡಿಗಳಲ್ಲಿ ಸರ್ಕಾರಕ್ಕೆ ಇನ್ನೂ 'ಬುದದ್ದಿ' ಬಂದಿಲ್ಲ ಎಂದಿದೆ. 'ಬುದ್ಧಿ' ಬಂದಿಲ್ಲ ಎಂದಾಗಬೇಕಿತ್ತು. ಡಾ. ಅಣ್ಣಯ್ಯ ಕುಲಾಲರ ಹೇಳಿಕೆಯಲ್ಲಿ 'ದಂಗೆ ಹೇಳಬೇಕು' ಎಂದಿದೆ. ಅದು 'ದಂಗೆ ಏಳಬೇಕು' ಎಂದಾಗಬೇಕಿತ್ತು' ಎಂದಿದ್ದಾರೆ.
ರಾಯಚೂರು ಜಿಲ್ಲೆ ಮಾನ್ವಿಯಿಂದ ಅಂಬಮ್ಮ ಪ್ರತಾಪಸಿಂಗ್ ಅವರು ಬರೆಯುತ್ತಾರೆ- 'ನಾನು 'ಖುಷಿ ಬಂಧ'ದಲ್ಲಿ ಪಯಣಿಸುವಾಗ ತಿಪ್ಪರಲಾಗ ಹಾಕಿಸಿದ್ದೀರಿ. ಅದಕ್ಕೆ ಕ್ಷಮಾಪಣೆಯನ್ನೂ ಕೇಳಿದ್ದೀರಿ. 'ತಪ್ಪು ಮಾಡದವ್ರು ಯಾರವ್ರೆ' ಅಂತ ಕ್ಷಮಿಸಿದ್ದೂ ಆಯ್ತು. ಆದರೆ ಫೆ.6ರ 'ಬೈಟು ಕಾಫಿ'ಯ 'ಪದಯಾತ್ರೆ' 377ರಲ್ಲಿ ಪಯಣಿಸುವಾಗ ದುರ್ಗಮ ಹಾದಿ ಇತ್ತು. ಸರಾಗವಾಗಿ ಪಯಣಿಸಲು ಸಾಧ್ಯವಾಗಲಿಲ್ಲ. ಇರಲಿ ಬಿಡು ಎಂದು ಫೆ.8ರ 'ಪದಯಾತ್ರೆ' 378ಕ್ಕೆ ಪಯಣಿಸಿದೆ. ಆದರೆ ಅಲ್ಲಿ ದಾರಿಯೇ ಇರಲಿಲ್ಲ. ಪದಯಾತ್ರೆ 377ರ ಪ್ರಯಾಣಕ್ಕೆ ಮಾರ್ಗಸೂಚಿ ನೋಡಿದೆ. ಮಾರ್ಗಸೂಚಿಯೂ ಸರಿಯಾಗಿರಲಿಲ್ಲ. ದಯವಿಟ್ಟು ಪದಯಾತ್ರೆ 377ರ ಪ್ರಯಾಣಕ್ಕೆ ಮಾರ್ಗಸೂಚಿ ಮತ್ತು ಪದಯಾತ್ರೆ 378ಕ್ಕೆ ಪ್ರಯಾಣಮಾಡಲು ದಾರಿ ತೋರಿಸುತ್ತೀರಾ?' ಎಂದಿದ್ದಾರೆ.
ಪದಯಾತ್ರೆಯಲ್ಲಿ ಕಷ್ಟ ಅನುಭವಿಸಿದ ಸಾಕಷ್ಟು ಓದುಗರು ನಮ್ಮ ಕಚೇರಿಗೆ ದೂರವಾಣಿ ಕರೆಯನ್ನೂ ಮಾಡಿದ್ದರು. ಪದಯಾತ್ರೆಯನ್ನು ಪುಟಕ್ಕೆ ಅಳವಡಿಸುವ ಸಂದರ್ಭದಲ್ಲಿ ಬಾಕ್ಸ್ ಮತ್ತು ಮಾರ್ಗಸೂಚಿಗಳು ಬದಲಾ ಗಿಬಿಟ್ಟಿವೆ. ಹಾಗೆಯೇ 378ರಲ್ಲಿ ಕೂಡ ಉತ್ತರಗಳು ಬೇರೆಯಾಗಿಬಿಟ್ಟಿವೆ. ಇದರಿಂದಾಗಿ 'ಪದಯಾತ್ರೆ'ಯಲ್ಲಿ ಅಡಚಣೆಯುಂಟಾಗಿದೆ.
-ವಿಶ್ವೇಶ್ವರ ಭಟ್