ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅಲ್ಪಸಂಖ್ಯಾತರಿಗೆ ನ್ಯಾಯ

Mainashree
Updated On : 21 Feb 2014, 10:26 am

ಸರ್ಕಾರಿ ನೌಕರಿ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಒಂದು ಉಸ್ತುವಾರಿ ಆಯೋಗದ ರಚನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಆ ಆಯೋಗದ ಹೆಸರು ಸಮಾನ ಅವಕಾಶಗಳ ಆಯೋಗ.
ಇಂತಹ ಆಯೋಗದ ಸಲಹೆ ಮೊದಲು ಪ್ರಕಟವಾಗಿದ್ದು ರಾಜೇಂದ್ರ ಸಾಚಾರ್ ಸಮಿತಿಯ ವರದಿಯಲ್ಲಿ. 2009ಕ್ಕೂ ಮುಂಚೆ. ಇದುವರೆಗೆ, ಅಲ್ಪಸಂಖ್ಯಾತರ ಸಂಘಟನೆಗಳಿಂದ ಎಷ್ಟೇ ಒತ್ತಡಗಳು ಬಂದರೂ ಸರ್ಕಾರ ಅಗತ್ಯವಾದ ಕ್ರಮವನ್ನು ಕೈಗೊಂಡಿರಲಿಲ್ಲ. ಯಾವುದೇ ವಿಚಾರದಲ್ಲೂ "ಧರ್ಮದ ಆಧಾರದ ಮೇಲೆ ಯಾರಿಗೂ ಅನ್ಯಾಯವಾಗಬಾರದು" ಎನ್ನುವ ಸಿದ್ಧಾಂತವನ್ನು ಸರ್ಕಾರ ಒಪ್ಪಿತ್ತು. ಅದಕ್ಕೆ ಸಾರ್ವತ್ರಿಕ ಬೆಂಬಲವೂ ಇತ್ತು. ಆದರೆ ಸೂಕ್ತವಾದ ಆಡಳಿತ ವ್ಯವಸ್ಥೆಯ ಚೌಕಟ್ಟು ಇರಲಿಲ್ಲ.
  ಬಹುತೇಕವಾಗಿ ಈ ವಿಚಾರದಲ್ಲಿ ಒತ್ತಡವನ್ನು ತಂದಿದ್ದು, ದೇಶದ ಜನಸಂಖ್ಯೆಯ ಶೇಕಡಾ ಹದಿಮೂರರಷ್ಟಿರುವ (ಹದಿಮೂರು ಕೋಟಿಗೂ ಹೆಚ್ಚು) ಮುಸ್ಲಿಂ ಜನಾಂಗೀಯ ಸಂಘಟನೆಗಳು. ಸರ್ಕಾರ ಈಗ ಚುನಾವಣೆಯ ಸಮಯದಲ್ಲಿ, ಆಳುವ ಕೂಟಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ, ಈ ಆಯೋಗವನ್ನು ರಚಿಸಲು ಮುಂದಾಗಿದ್ದರೂ, ವಾಸ್ತವದಲ್ಲಿ ಇಂತಹ ಒಂದು ವ್ಯವಸ್ಥೆ ಅಗತ್ಯವಾಗಿತ್ತು.
  ಅಲ್ಪ ಸಂಖ್ಯಾತ ವರ್ಗಗಳಿಗೆ ಸರ್ಕಾರ 1600 ಕೋಟಿ ರುಪಾಯಿಗಳ ವೆಚ್ಚದಲ್ಲಿ ವಿಶೇಷ ಶಿಕ್ಷಣ ಯೋಜನೆಗಳನ್ನು ರೂಪಿಸಿದೆ. ಮುಸ್ಲಿಮರಲ್ಲಿ ಈಗಲೂ ಸುಶಿಕ್ಷಿತರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ. ಅದೇ ರೀತಿ ಮುಸ್ಲಿಮ್ ಧಾರ್ಮಿಕ ಸಂಘಗಳ ಆಸ್ತಿಪಾಸ್ತಿಯ ರಕ್ಷಣೆಗೂ ವಿಶೇಷ ವ್ಯವಸ್ಥೆಯಾಗಲಿದೆ.
  ಅಸ್ಸಾಂ, ಪಶ್ಚಿಮ ಬಂಗಾಳ, ಬಿಹಾರ, ಕೇರಳ ಹಾಗೂ ಉತ್ತರ ಪ್ರದೇಶಗಳಲ್ಲಿ ಮುಸ್ಲಿಮರ ಸಂಖ್ಯೆ ಗಮನಾರ್ಹ. ಈ ರಾಜ್ಯಗಳಿಂದಲೇ 196 ಪ್ರತಿನಿಧಿಗಳು ಲೋಕಸಭೆಗೆ ಆರಿಸಿ ಬರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement