ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 21 Feb 2014, 10:34 am

ಮೈಸೂರಿನ ಕುವೆಂಪುನಗರದಿಂದ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- 'ತಪ್ಪಾಯ್ತು ತಿದ್ಕೋತೀವಿ ಅಂತೀರಿ. ಆದ್ರೆ ತಪ್ಪಾದ್ರೂ ಸಮರ್ಥಿಸಿಕೊಳ್ತೀರಿ. ನಿಮಗೆ ಎಷ್ಟು ಹೇಳಿದ್ರೂ ಅಷ್ಟೆ. ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಈ ಮಾತನ್ನು ತುಂಬಾ ಬೇಸರದಿಂದ ಹೇಳಬೇಕಾಗಿದೆ.'
'ಫೆ.9ರಂದು 'ಕನ್ನಡಪ್ರಭ'ದ ಮೈಸೂರು ಆವೃತ್ತಿಯ ಸ್ಥಳೀಯ  ಸುದ್ದಿಗಳಿಗೆ ಮೀಸಲಾದ 3ನೇ ಪುಟದಲ್ಲಿ ಆಧಾರ್ ಜಾಹೀರಾತು ಪ್ರಕಟವಾಗಿದೆ. ಈ ಜಾಹೀರಾತಿನಿಂದ ಯಾರಿಗೆ ಉಪಯೋಗ? ಬೆಂಗಳೂರು ಮಹಾನಗರದ ನಿವಾಸಿಗಳಿಗೆ ಸಂಬಂಧ ಪಟ್ಟ ಈ ಜಾಹೀರಾತನ್ನು ಮೈಸೂರಿನ ಆವೃತ್ತಿಯಲ್ಲಿ ಪ್ರಕಟಿಸಲು ಕಾರಣವೇನು? ಬೆಂಗಳೂರಿನ ನಿವಾಸಿಗಳು ಮೈಸೂರಿಗೆ ಬಂದು ಪತ್ರಿಕೆ ಓದಿ ಆಧಾರ್ ಕಾರ್ಡ್ ಮಾಡಿಸಬೇಕಾ? ಅಥವಾ ಮೈಸೂರಿನ ನಿವಾಸಿಗಳು ಈ ಜಾಹೀರಾತು ನೋಡಿ ಬೆಂಗಳೂರಿನ ನಿವಾಸಿಗಳಿಗೆ ಸುದ್ದಿ ಮುಟ್ಟಿಸಬೇಕಾ?'
'ಮೈಸೂರು ಸಾಂಸ್ಕೃತಿಕ ನಗರಿ. ಇಲ್ಲಿರುವ ಓದುಗರು ಬೆಂಗಳೂರಿನ ಓದುಗರಿಗಿಂತ ಸ್ವಾಭಿಮಾನಿಗಳು. ಬೆಂಗಳೂರಿನ ಬಿಬಿಎಂಪಿಯ ಕೆಲಸಕ್ಕೆ ಬಾರದ ಸುದ್ದಿಗಳನ್ನು ಓದಿ ಮೈಸೂರಿನ ಓದುಗರಿಗೆ ಏನು ಉಪಯೋಗ? ಮೈಸೂರಿನ ಸ್ಥಳೀಯ ಸುದ್ದಿಗಳಿಗೆ ಕೊಕ್ ನೀಡಿ, ಬೆಂಗಳೂರಿನ ಜಾಹೀರಾತನ್ನು ಪ್ರಕಟಿಸುವುದನ್ನು ನಾವು ಕ್ಷಮಿಸುವುದಿಲ್ಲ.'
"ಕನ್ನಡಪ್ರಭ' ತರಿಸಿಕೊಳ್ಳಿ ಎಂದು ಸ್ನೇಹಿತರಿಗೆ ಸಲಹೆ ನೀಡಿದ್ದ ನನಗೆ ಆ ಸ್ನೇಹಿತರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ. ಪತ್ರಿಕೆಗೆ ಜಾಹೀರಾತು ಮುಖ್ಯವಾಗಿರಬಹುದು. ಆದರೆ ಓದುಗರಿಗೆ ಜಾಹೀರಾತಿಗಿಂತ ಸುದ್ದಿ ಮುಖ್ಯ. ಅತಿಯಾದರೆ ಅಮೃತವೂ ವಿಷ. ಊಟಕ್ಕೆ ಉಪ್ಪಿನಕಾಯಿ ಇರುವಂತೆ ಪತ್ರಿಕೆಯಲ್ಲಿ ಜಾಹೀರಾತಿರಲಿ. ಉಪ್ಪಿನಕಾಯಿಯೇ ಊಟವಾದರೆ ನಮ್ಮ ಗತಿಯೇನು? ಒಳ್ಳೆಯ ಕೆಲಸ ಮಾಡಿದಾಗ ಪತ್ರಿಕೆಯ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಓದುಗರಿಗೆ, ಪತ್ರಿಕೆ ತಪ್ಪುಮಾಡಿದಾಗ ಕಿವಿಹಿಂಡುವ ಅಧಿಕಾರವೂ ಇದೆ.'
'ತಪ್ಪಾಯ್ತು ಅಂತೀರಾ? ತಿದ್ಕೋತೀವಿ ಅಂತೀರಾ? ಈಗಲಾದ್ರೂ ಮೈಸೂರಿನ ಆವೃತ್ತಿಗೆ ಒಂದೆರಡು ಪುಟ ಹೆಚ್ಚುವರಿಯಾಗಿ ನೀಡಿ ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡುತ್ತೀರಾ?' ಎಂದಿದ್ದಾರೆ.
ಎಷ್ಟು ಹೇಳಿದರೂ ಅಷ್ಟೇ, ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಎಂದು ಹೇಳುವವರಿಗೂ ಈ ಮಾತು ಅನ್ವಯವಾಗುವುದಿಲ್ಲವೇ? ಯಾಕೆಂದರೆ ಜಾಹೀರಾತಿಗೂ ಸಂಪಾದಕೀಯ ವಿಭಾಗಕ್ಕೂ ಸಂಬಂಧವಿಲ್ಲ ಎಂದು ಇದೇ ಅಂಕಣದಲ್ಲಿ ಕನಿಷ್ಠ 4-5 ಬಾರಿ ಬರೆಯಲಾಗಿದೆ. ಆದರೂ ಬಹುಶಃ ಬೆಂಗಳೂರಿಗೂ ಮೈಸೂರಿಗೂ ಬಹಳ ಸಂಪರ್ಕ ಇರುವುದರಿಂದ ಅಲ್ಲೂ ಬರಲಿ ಎಂಬ ಕಾರಣಕ್ಕೆ ಅವರು ಪ್ರಕಟಿಸಿರಬಹುದು. ಅದು ನಮಗೆ ಸಂಬಂಧಪಡದ ವಿಚಾರ. ತಪ್ಪಾಗಿದ್ದಲ್ಲಿ ಅದನ್ನು ಎಂದಿಗೂ ಸಮರ್ಥಿಸಿಕೊಂಡಿಲ್ಲ. ಹಾಗೆ ಮಾಡುವುದಿದ್ದರೆ ಈ ಅಂಕಣದ ಅಗತ್ಯವೇ ಇರಲಿಲ್ಲ.
ಹೆಚ್ಚಾದರೆ ಅಮೃತವೂ ವಿಷ ಎಂಬುದನ್ನು ಸುದ್ದಿಗೂ ಅನ್ವಯಿಸಬಹುದಲ್ಲವೇ? ಅಮೃತ ಯಾವುದು ಎಂಬುದು ನಾವು ನೋಡುವ ದೃಷ್ಟಿಕೋನದಿಂದ ತೀರ್ಮಾನವಾಗುತ್ತದೆ. ಕಿವಿಹಿಂಡುವ ಅಧಿಕಾರ ಓದುಗರಿಗೆ ಖಂಡಿತ ಇದೆ. ಆದರೆ ಅಧಿಕಾರವಿದೆಯೆಂದು ಸುಮ್ಮನೇ ಸುಮ್ಮನೇ ಕಿವಿಹಿಂಡಿದರೆ ಅಧಿಕಾರ ದುರುಪಯೋಗವಾಗುವುದು.

 ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement