ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತೆಲಂಗಾಣ- ಆಂಧ್ರ ಪ್ರದೇಶಕ್ಕೆ ವಿಶೇಷ ನೆರವಿನ ಭರವಸೆ

Mainashree
Updated On : 21 Feb 2014, 10:26 am

ರಾಜ್ಯಸಭೆಯಲ್ಲಿ ಗುರುವಾರ ಅಂಗೀಕೃತವಾಯಿತೆಂದು ಘೋಷಿಸಲಾದ ತೆಲಂಗಾಣ ರಾಜ್ಯದ ನಿರ್ಮಾಣಕ್ಕೆ ನೆರವು ನೀಡುವ ವಿಧೇಯಕದ ಸಂಸದೀಯ ಯಾತ್ರೆ ವಿಪರೀತ ಗೊಂದಲಮಯವಾಗಿತ್ತು. ವಿಧೇಯಕದ ಪ್ರತಿಗಳನ್ನು ಹರಿದು ಚೂರುಗಳನ್ನು ಸೀಮಾಂಧ್ರ ಸೀಮೆಯ ಹಲವು ಸದಸ್ಯರು ಪ್ರಧಾನಿಗೇ ಎಸೆದಿದ್ದು ನಿಜವಾಗಲೂ ನಡೆಯಬಾರದಾಗಿದ್ದ ಘಟನೆ.
  ಭಾರತದ 29ನೇ ರಾಜ್ಯದ ಉದಯವನ್ನು ಸ್ವಾಗತಿಸುವ ರೀತಿ - ನೀತಿ ಇನ್ನಷ್ಟು ಗಂಭೀರವಾಗಿ ಸಂಭ್ರಮದಿಂದಿರಬೇಕಾಗಿತ್ತು. ಆದರೆ ಪರಿಸ್ಥಿತಿಯ ಪಿತೂರಿ ಅದಕ್ಕೆ ಅವಕಾಶವನ್ನು ಕೊಡಲಿಲ್ಲ. ಸಚಿವರೊಬ್ಬರು ವಿಧೇಯಕವನ್ನು ಬಹಿರಂಗವಾಗಿ ವಿರೋಧಿಸಿದ್ದು ವಾಸ್ತವದಲ್ಲಿ ಸಂಸದೀಯ ನಡವಳಿಕೆಯ ನಿಯಮದ ಲೇವಡಿಯಂತಿತ್ತು.
  ಆದರೂ ಆಳುವ ಸಂಯುಕ್ತ ಪ್ರಗತಿಪರ ಕೂಟ ಹಾಗೂ ಪ್ರಧಾನ ಪ್ರತಿಪಕ್ಷವಾದ ಭಾರತೀಯ ಜನತಾ ಪಾರ್ಟಿಯ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಕೂಟಗಳ ನಡುವೆ ಒಪ್ಪಂದವಾಗಿದ್ದರಿಂದ ಎಲ್ಲ ವಿಪರ್ಯಾಸಗಳನ್ನೂ ಸದನದ ಕಾರ್ಯಕಲಾಪದ ನಿರ್ವಹಣೆಯ ಹೊಣೆ ಹೊತ್ತಿದ್ದ ಕುರಿಯನ್ ಅವರು ನಿಭಾಯಿಸಿದರು.
  ವಿಧೇಯಕಕ್ಕೆ ಈಗಾಗಲೇ ಲೋಕಸಭೆಯ ಅಂಗೀಕಾರ ಮುದ್ರೆ ಬಿದ್ದಿರುವುದರಿಂದ, ರಾಜ್ಯಸಭೆಯಲ್ಲಿ ವಿಧೇಯಕದಲ್ಲಿ ಒಂದಿಷ್ಟೂ ಬದಲಾವಣೆಗೆ ಅವಕಾಶವೇ ಇರಲಿಲ್ಲ. ಇದು ಗೊತ್ತಿದ್ದೂ ಸೀಮಾಂಧ್ರ ಸೀಮೆಯ ಸಂಸದರು, ಅದರಲ್ಲೂ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರು ಹಲವಾರು ತಿದ್ದುಪಡಿಗಳನ್ನು ಹಟ ಹಿಡಿದು ಮಂಡಿಸಿ, ಭಾಷಣಗಳನ್ನು ಮಾಡಿದ್ದು ಯಾವ ಪುರುಷಾರ್ಥ ಸಾಧನೆಗೆ ಎನ್ನುವುದು ಗೊತ್ತಾಗಲಿಲ್ಲ. ಆಂಧ್ರಪ್ರದೇಶದ ರಚನೆಯ ಸಮಯದಲ್ಲೇ ತೆಲಂಗಾಣ ಸೀಮೆಗೆ ಪ್ರತ್ಯೇಕ ರಾಜ್ಯ ಬೇಕೆನ್ನುವ ಬೇಡಿಕೆಯನ್ನು ಆಗಿನ ಸರ್ಕಾರ ತಿರಸ್ಕರಿಸಿತ್ತು. ಅಂದು ಆರಂಭವಾದ ಹೋರಾಟ ಈಗ ಮುಗಿದಿದೆ. ಆದರೆ ಈಗ ನಡೆದ "ಹೋರಾಟ" ನಿಜವಾಗಲೂ ಭೀಕರವಾದದ್ದು. ನೆರೆ ಹೊರೆಯ ರಾಜ್ಯಗಳಲ್ಲಿ ಇಷ್ಟೊಂದು ವೈರತ್ವವಿದ್ದರೆ ಮುಂದೆ ಸಹಕಾರ ನಿಜವಾಗಲೂ ಸಾಧ್ಯವಾದೀತೇ? ಕಾಲವೇ ಎಲ್ಲವನ್ನೂ ಸರಿಪಡಿಸಬೇಕು.
  ಹೇಳಿ-ಕೇಳಿ ಇದು ಚುನಾವಣೆ ವರ್ಷ. ಆಂಧ್ರದಲ್ಲಿ ಕಾರಣಾಂತರಗಳಿಂದ ಕಾಂಗ್ರೆಸ್ಸಿಗೆ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ತೆಲಂಗಾಣದ ಸ್ಥಾನಗಳನ್ನು ತನಗೆ ಭದ್ರಪಡಿಸಿಕೊಳ್ಳುವುದಕ್ಕಾಗಿ ತೆಲಂಗಾಣದ ರಾಜ್ಯ ರಚನೆಗೆ ಕಾಂಗ್ರೆಸ್ ಕೂಟ ಒಪ್ಪಿದ್ದು ರಹಸ್ಯವೇನೂ ಅಲ್ಲ. ಬಿಜೆಪಿಯಲ್ಲಿ ಮೊದಲ ಚಿಂತನೆ ಏನೇ ಇರಲಿ, ಸಂಘ ಪರಿವಾರದ ಪ್ರಮುಖರ ಆದೇಶವೂ ತೆಲಂಗಾಣ ರಾಜ್ಯದ ಪರವಾಗಿಯೇ ಇತ್ತು.
  ಆದರೂ ವಿಧೇಯಕದ ಅಂಗೀಕಾರಕ್ಕೆ ಯಾವ ಯಾವ ರೀತಿಯಲ್ಲಿ ಅಡ್ಡಿ ಆತಂಕಗಳನ್ನು ಒಡ್ಡಬಹುದೋ ಅಂತಹ ಎಲ್ಲ ಪ್ರಯತ್ನವೂ ನಡೆದಿತ್ತು. ಆಂಧ್ರ ಪ್ರದೇಶದಂಥ ದೊಡ್ಡ ರಾಜ್ಯ, ಸಂಸತ್ತಿನಲ್ಲಿ ಅಂಗೀಕಾರವಾದ ಒಂದು ವಿಧೇಯಕದ ಮೂಲಕ ವಿಭಜನೆಯಾಗಿದ್ದು, ಅದರಲ್ಲೂ ಮತಗಳ ಎಣಿಕೆಗೆ ಅವಕಾಶವೇ ಇಲ್ಲದಂತೆ ನಡೆದಿದ್ದು ಒಳ್ಳೆಯದಲ್ಲ.
  ವಿಪರೀತ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ಮುಂದಿನ ಐದು ವರ್ಷಗಳ ಕಾಲ ಆಂಧ್ರಕ್ಕೆ ವಿಶೇಷ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ. ಅದರ ಹೊರೆಯನ್ನು ಹೊರಬೇಕಾದ್ದು ಮುಂದಿನ ಸರ್ಕಾರ.
  ಈಗ ಅಂಗೀಕಾರವಾಗಿರುವ ವಿಧೇಯಕದಂತೆ, ಹೈದರಾಬಾದ್ ನಗರವೇ ಉಭಯ ರಾಜ್ಯಗಳ ರಾಜಧಾನಿಯಾಗಿರುತ್ತದೆ. ಅದು ಹತ್ತು ವರ್ಷಗಳ ಅವಧಿಯ ಮಾತು. ಮುಂದೆ ಹೈದರಾಬಾದ್ ತೆಲಂಗಾಣಕ್ಕಷ್ಟೇ ರಾಜಧಾನಿ. ಆಂಧ್ರಕ್ಕೆ ಬೇರೆ ರಾಜಧಾನಿಯನ್ನು ರೂಪಿಸಬೇಕು. ಅದಕ್ಕೂ ಕೇಂದ್ರದ ನೆರವು ಅನಿವಾರ್ಯ.
  ಈಗಾಗಲೇ ಗೊತ್ತಾಗಿರುವಂತೆ, ವಿಧೇಯಕಕ್ಕೆ ರಾಷ್ಟ್ರಪತಿಯ ಅಂಕಿತ ದೊರೆತ ಕೂಡಲೇ ವಿಧಾನಸಭೆ ವಿಸರ್ಜನೆಯಾಗಿ, ಲೋಕಸಭೆ ಚುನಾವಣೆಯ ಜತೆಯಲ್ಲೇ ಎರಡೂ ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣೆ ನಡೆಯುತ್ತದೆ. ಅಲ್ಲಿಯವರೆಗೆ ರಾಷ್ಟ್ರಪತಿಯ ಆಡಳಿತ. ಇನ್ನು ಕೆಲವೇ ದಿನಗಳಲ್ಲಿ ಆಂಧ್ರಪ್ರದೇಶದ ವಿಭಜನೆಯ ಎಲ್ಲ ವಿವರಗಳೂ ಸಿದ್ಧವಾಗಬೇಕು. ಅದು ನಿಜವಾಗಲೂ ಸಂಕೀರ್ಣವಾದ ಸಮಸ್ಯೆಯೇ. ಅದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸದೇ ಹೋದರೆ ಉಭಯ ರಾಜ್ಯಗಳ ನಡುವೆ ಶಾಶ್ವತವಾದ ವೈಷಮ್ಯ ನಿರ್ಮಾಣವಾಗಬಹುದು. ಹಾಗಾಗದಂತೆ ನೋಡಿಕೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement