ಭ್ರಷ್ಟರ ಬೆನ್ನಿಗೆ ನಿಲ್ಲುವುದೇಕೆ?
ಭ್ರಷ್ಟಾಚಾರ ನಿರ್ಮೂಲನೆಯನ್ನೇ ಚುನಾವಣಾ ಪ್ರಣಾಳಿಕೆಯನ್ನಾಗಿಸಿಕೊಂಡು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನೇ ಅಸ್ತ್ರವನ್ನಾಗಿಸಿಕೊಂಡು ದಕ್ಷ, ಪ್ರಾಮಾಣಿಕ, ಪಾರದರ್ಶಕ ಆಡಳಿತ ನೀಡುತ್ತವೆ ಎಂದು ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೆಪಿಎಸ್ಸಿ ಭ್ರಷ್ಟಾಚಾರಕ್ಕೆ ಮಣಿದಂತೆ ತೋರುತ್ತಿದೆ. 2011ರ ಗೆಜೆಟೆಡ್ ಅಧಿಕಾರಿಗಳ ಅಕ್ರಮ ನೇಮಕಾತಿ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗುತ್ತದೆಂದು ಕೆಪಿಎಸ್ಸಿ ಆಕಾಂಕ್ಷಿಗಳು ಮತ್ತು ರಾಜ್ಯದ ಜನತೆ ನಿರೀಕ್ಷಿಸಿದ್ದರು. ಆದರೆ ಅದು ಹುಸಿಯಾಗಿದೆ. 2011ರ ಗೆಜೆಟೆಡ್ ಅಧಿಕಾರಿಗಳ ನೇಮಕಾತಿಯಲ್ಲಿ ಪೂರ್ವಭಾವಿ ಪರೀಕ್ಷೆಯಿಂದ ಹಿಡಿದು ಸಂದರ್ಶನದವರೆಗೆ ಪ್ರತಿ ಹಂತದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿರುವುದು ಸರ್ಕಾರವೇ ಆದೇಶಿಸಿದ ಸಿಒಡಿ ತನಿಖೆಯಿಂದ ಸಾಬೀತಾಗಿ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ. ರಾಜ್ಯ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ, ಡಿಪಿಎಆರ್ ಮತ್ತು ಮಾನ್ಯ ರಾಜ್ಯಪಾಲರು ಅಧಿಸೂಚನೆ ವಾಪಸ್ ಪಡೆದು ನೇಮಕಾತಿಯನ್ನು ರದ್ದುಗೊಳಿಸಿ ಹೊಸದಾಗಿ ನೇಮಕಾತಿ ನಡೆಸುವಂತೆ ಸೂಕ್ತ ಸಲಹೆ ನೀಡಿದರೂ ಸರ್ಕಾರ ಮೀನಮೇಷ ಎಣಿಸುತ್ತಿರುವುದನ್ನು ನೋಡಿದರೆ ಭ್ರಷ್ಟ ಕೆಪಿಎಸ್ಸಿ ಸದಸ್ಯರ ಮತ್ತು ಕೋಟಿಗಟ್ಟಲೆ ಹಣ ನೀಡಿ ಆಯ್ಕೆ ಪಟ್ಟಿಯಲ್ಲಿ ಸೇರಿಕೊಂಡಿರುವ ಭ್ರಷ್ಟ ಅಭ್ಯರ್ಥಿಗಳ ಪರವಾಗಿ ಸರ್ಕಾರ ನಿಂತಿರುವಂತೆ ಕಾಣುತ್ತಿದೆ. ಇಂಥ ಭ್ರಷ್ಟ ಅಧಿಕಾರಿ ವರ್ಗವನ್ನು ಸೃಷ್ಟಿಸಲು ಹೊರಟಿರುವ ಸರ್ಕಾರದಿಂದ ಭ್ರಷ್ಟಾಚಾರರಹಿತ, ಪಾರದರ್ಶಕತೆ, ಅಭಿವೃದ್ಧಿ ಪರ ಆಡಳಿತ ನಿರೀಕ್ಷಿಸುವುದು ಹೇಗೆ?
--ಸುರೇಶ, ಕುವೆಂಪುನಗರ, ಮೈಸೂರು.
ಗ್ರಾಹಕರ ಕಾಳಜಿಯಿಲ್ಲವೇ?
ಸರ್ಕಾರಿ ಅಧೀನದ ಹಾಪ್ಕಾಮ್ನಲ್ಲಿ (ಏ್ಟಠ್ಛ್ಟಟ) ಸಿಗುವ ವಸ್ತುಗಳು ಗುಣಮಟ್ಟದಾಗಿದ್ದು ಉತ್ತಮ ಬೆಲೆ ಯುಳ್ಳವುಗಳೇ ಅಂತ ಗ್ರಾಹಕರ ತಿಳಿವಳಿಕೆ. ಆದರೆ ಇದು ನಿಜವಾಗಿಯೂ ಸತ್ಯವೇ? ಎಂಬುದು ಈಗಷ್ಟೇ ಮನಗಂಡದ್ದು. ಕಳೆದ ಶನಿವಾರ, ಫೆಬ್ರವರಿ 15ರಂದು ಜೆ.ಪಿ. ನಗರದ 3ನೇ ಹಂತ, ಸಣ್ಣ ಕಾಡಿನ ಆವರಣ, ಬೆಂಗಳೂರು ಒನ್ ಪಕ್ಕದಲ್ಲಿರುವ ಹಾಪ್ಕಾಮ್ನಿಂದ ತಂದ ಸೇಬುಹಣ್ಣು ತೀರ ಕಳಪೆ ಮಟ್ಟದ್ದಾಗಿರುವುದರಿಂದ, ಅದನ್ನು ಅವರ ಗಮನಕ್ಕೆ ತರಲೆಂದು ವಾಪಸ್ ಕೊಂಡೊಯ್ದಾಗ ಆದ ಅನುಭವವೇ ಬೇರೆ. ಅಲ್ಲಿಯ ಸಿಬ್ಬಂದಿ (ಯಾರು ಅಂದು ಹಣ್ಣನ್ನು ಕೊಟ್ಟಿದ್ದರೋ ಅವರೇ) ಈ ಹಣ್ಣು ತಮ್ಮಲ್ಲಿಂದ ಕೊಂಡೊಯ್ದದ್ದೇ ಅಲ್ಲ, ಆ ದಿನ ನಮ್ಮಲ್ಲಿ ಸೇಬು ಹಣ್ಣುಗಳೇ ಇರಲಿಲ್ಲ. ಈ ಕೆಟ್ಟ ಹಣ್ಣುಗಳಿಗೆ ನಾವು ಜವಾಬ್ದಾರರಲ್ಲ ಅಂತ ಹೇಳಿ ವಾಪಸ್ ಪಡೆಯಲು ನಿರಾಕರಿಸಿದ್ದಷ್ಟೇ ಅಲ್ಲ ಬಹಳ ಒರಟಾಗಿಯೂ ವರ್ತಿಸಿದರು. ಈ ರೀತಿಯ ಅವರ ಒರಟು ವರ್ತನೆ ಇದೇನು ಮೊದಲು ಸಲವಲ್ಲ. ಸಂಸ್ಥೆ ಒಳ್ಳೆಯದೆಂದು ಕೊಂಡರೂ ಕೆಟ್ಟ ಸಿಬ್ಬಂದಿಗಳಿಂದ ಸಂಸ್ಥೆಯ ಹೆಸರು ಕೆಡುತ್ತದೆ ಎಂಬುದಕ್ಕೆ ಇದೊಂದು ಪ್ರತ್ಯಕ್ಷ ಸಾಕ್ಷಿ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದಾಗಲೀ, ಸಂಸ್ಥೆಯನ್ನು ಕಾಪಾಡುವುದಾಗಲಿ ಇಂಥ ಸಿಬ್ಬಂದಿಗಳ ಉದ್ದೇಶವೇ ಇರುವುದಿಲ್ಲ. ಸಂಬಂಧಪಟ್ಟವರು ಇತ್ತ ಗಮನಹರಿಸಲಿ.
--ಶಂಕರನಾರಾಯಣ ಭಟ್ , ಜೆ.ಪಿ. ನಗರ, ಬೆಂಗಳೂರು.
ಕಠಿಣ ಕ್ರಮ ಜರುಗಿಸಲಿ
ಇತ್ತೀಚೆಗೆ ಕಲಬೆರಕೆ ವಸ್ತುಗಳು ಹಾವಳಿ ಮಿತಿ ಮೀರಿದ ಪ್ರಮಾಣದಲ್ಲಿದೆ. ಜನರ ಸ್ವಾಸ್ಥ್ಯ ಹಾಳುಗೆಡುವುತ್ತಿರುವ ಕಲಬೆರಕೆ ದಂಧೆಯ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ. ಪೆಟ್ರೋಲ್ನಲ್ಲಿ ಸೀಮೆಎಣ್ಣೆ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಅದರಿಂದ ಹೊರಹೊಮ್ಮುವ ಹೊಗೆಯಲ್ಲಿ ವಿಷಾನಿಲಗಳು ತುಂಬಿಕೊಂಡಿವೆ ಮತ್ತು ಅದು ಆರೋಗ್ಯಕ್ಕೆ ಮಾರಕವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಆದ್ದರಿಂದ ಈ ವಿಚಾರವಾಗಿ ಸರ್ಕಾರವು ಕಠಿಣ ಕಾನೂನು ಕ್ರಮಕೈಗೊಳ್ಳಬೇಕಿದೆ.
-ರಕ್ಷಿತಾ ಕುಮಾರಿ, ವಿವೇಕಾನಂದ ಕಾಲೇಜು, ಪುತ್ತೂರು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com