ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಚುನಾವಣೆ ಪ್ರಣಾಳಿಕೆ ಆಶ್ವಾಸನೆ ಕಾರ್ಯ ಸಾಧುವಾಗಿರಬೇಕು

ಭಾರತೀಯ ರಾಜಕಾರಣದಲ್ಲಿ ಸೈದ್ಧಾಂತಿಕ ಸಂಘರ್ಷ ಹಾಗೂ ತತ್ವನಿಷ್ಠೆಯ ಪಾತ್ರ ತೀರ ಕಡಿಮೆಯಾಗುತ್ತಿರುವ ಸನ್ನಿವೇಶದಲ್ಲಿ ಪಕ್ಷಗಳು ಹಾಗೂ ಅಭ್ಯರ್ಥಿಗಳು...

Rashmi Kasaragodu
Updated On : 25 Feb 2014, 1:12 am

ಭಾರತೀಯ ರಾಜಕಾರಣದಲ್ಲಿ ಸೈದ್ಧಾಂತಿಕ ಸಂಘರ್ಷ ಹಾಗೂ ತತ್ವನಿಷ್ಠೆಯ ಪಾತ್ರ ತೀರ ಕಡಿಮೆಯಾಗುತ್ತಿರುವ ಸನ್ನಿವೇಶದಲ್ಲಿ ಪಕ್ಷಗಳು ಹಾಗೂ ಅಭ್ಯರ್ಥಿಗಳು ಪ್ರಕಟಿಸುವ ಪ್ರಣಾಳಿಕೆಗಳು ಅಕ್ಷರಶಃ ಜನರಿಗೆ ಉಡುಗೊರೆ-ಕೊಡುಗೆ-ತೋಫಾಗಳಿಂದ ತುಂಬಿದ ಸಾಹಿತ್ಯದ ಸ್ವರೂಪವನ್ನು ಪಡೆಯುತ್ತಿರುವುದು ನಿಜ.
ಇದರಿಂದ ಜನರ ವಿಶ್ವಾಸಕ್ಕೆ ಅರ್ಹವಾದ ಪ್ರಣಾಳಿಕೆಗಳೇ ಇಲ್ಲ ಎನ್ನುವಂತಾಗಿದೆ. ಪ್ರಣಾಳಿಕೆಗಳಲ್ಲಿ ಪ್ರಕಟವಾಗುವ ಅನೇಕ ಅಂಶಗಳ ಜಾರಿ ಅಸಾಧ್ಯ ಎನ್ನುವುದು ನಿಜ. ಈ ಪರಿಸ್ಥಿತಿಯನ್ನು ಗಮನಿಸಿದ ಸುಪ್ರೀಮ್ ಕೋರ್ಟ್ ಕಳೆದ ವರ್ಷ ಚುನಾವಣೆ ಪ್ರಣಾಳಿಕೆಗಳು, ಹೇಳಿಕೆಗಳಿಗೆ ಸಂಬಂಧಿಸಿದಂತೆ, ಪಕ್ಷಗಳು-ವ್ಯಕ್ತಿಗಳ ಆಚಾರ ಸಂಹಿತೆಯಲ್ಲೇ ನಿಯಮಗಳಲ್ಲದೇ ಇದ್ದರೂ, ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಚುನಾವಣೆ ಆಯೋಗಕ್ಕೆ ಸಲಹೆ ನೀಡಿತ್ತು.
ಈಗ ಚುನಾವಣೆ ಆಯೋಗ ದೇಶದ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ವಿಚಾರ ವಿನಿಮಯ ನಡೆಸಿ, ಸಿದ್ಧಪಡಿಸಿರುವ ಮಾರ್ಗದರ್ಶಿ ಸೂತ್ರದಲ್ಲಿ, ಪ್ರಣಾಳಿಕೆಗಳಲ್ಲಿ ಪ್ರಕಟವಾಗುವ ಕಾರ್ಯಕ್ರಮಗಳನ್ನು ಜಾರಿಗೆ ತರಲು ಅಗತ್ಯವಾದ ಸಂಪನ್ಮೂಲಗಳನ್ನು ರೂಢಿಸುವ ವಿಚಾರವನ್ನು ಪ್ರಸ್ತಾಪಿಸಬೇಕು ಹಾಗೂ ಪ್ರಣಾಳಿಕೆಯಲ್ಲಿ ಅಡಕವಾಗಿರುವ ಎಲ್ಲ ಅಂಶಗಳೂ ಪಾರದರ್ಶಕವಾಗಿರಬೇಕು ಎನ್ನುವ ಸಲಹೆಯನ್ನು ಅಳವಡಿಸಲು ಮುಂದಾಗಿದೆ.
ಈ ಸಲಹೆ ಜಾರಿಗೆ ಬಂದರೆ, ನಮ್ಮ ಚುನಾವಣೆ ಪದ್ಧತಿಯ ವಿಚಾರದಲ್ಲಿ ಜನರ ವಿಶ್ವಾಸವೂ ಹೆಚ್ಚುತ್ತದೆ ಹಾಗೂ ರಾಜಕೀಯ ಪಕ್ಷಗಳಿಗೂ ಜವಾಬ್ದಾರಿಯಿಂದ ವರ್ತಿಸುವ ಹೊಣೆಗಾರಿಕೆಯ ಒತ್ತಡವೂ ಬರುತ್ತದೆ ಎನ್ನುವುದು ನಿಜ.
ಆದರೆ, ಈಗಿನ ಕೆಟ್ಟ ರಾಜಕೀಯ ವಾತಾವರಣದಲ್ಲಿ ಪ್ರಬಲ ಹಾಗೂ ಪ್ರಮುಖ ಪಕ್ಷಗಳ ನಡುವೆ ಇರುವ ದ್ವೇಷದ ಹಿನ್ನೆಲೆಯಲ್ಲಿ ಯಾವ ಪಕ್ಷವೂ ಕೇವಲ ಸಲಹೆ-ಸೂಚನೆಗಳನ್ನು ಮಾನ್ಯ ಮಾಡುವ ಸ್ಥಿತಿಯಲ್ಲಿ ಇಲ್ಲ.
 ಚುನಾವಣೆ ಆಯೋಗದ ಸಲಹೆ ಸೂಚನೆಗಳನ್ನು ಧಿಕ್ಕರಿಸಿದರೆ, ವಾಗ್ದಂಡನೆ ಅಥವಾ ಅತೃಪ್ತಿಯ ಪ್ರದರ್ಶನದಂತಹ ಗಂಭೀರ, ಸೌಮ್ಯ ಕ್ರಮಗಳಿಗೆ ಯಾರೂ ಬಗ್ಗುವುದಿಲ್ಲ. ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಹಾಗೂ ಚುನಾವಣೆಯ ಅಭ್ಯರ್ಥಿಗಳು ಆಯೋಗದ ಮಾತಿಗೆ ಹೆದರಿ ತಗ್ಗಿ ಬಗ್ಗಿ ನಡೆಯಬೇಕಾದರೆ, ಶಿಕ್ಷೆಯ ಬೆದರಿಕೆ ಇರಬೇಕು. ಈಗ ಈ ವಿಚಾರವನ್ನು ಚುನಾವಣೆಯ ಆಚಾರ ಸಂಹಿತೆಯಲ್ಲೇ ಅಳವಡಿಸಿದರೆ, ಆ ಸಂಹಿತೆಯ ಉಲ್ಲಂಘನೆಗೆ ವಿಧಿಸುವ ಶಿಕ್ಷೆಗೆ ಪಕ್ಷಗಳು ಹೆದರಲೇಬೇಕಾಗುತ್ತದೆ. ಆಗಲೂ ಹಲವು ಲಘು ಪಕ್ಷಗಳು, ಅಭ್ಯರ್ಥಿಗಳು ಆಚಾರ ಸಂಹಿತೆಯನ್ನು ಧಿಕ್ಕರಿಸುವುದೂ ಸಾಧ್ಯ. ಆದರೆ ಅದರಿಂದ ಯಾರಿಗೂ ನಷ್ಟವಿಲ್ಲ. ಜನರಿಗೆ ಅಂತಹವರನ್ನು ಮತಗಟ್ಟೆಗಳಲ್ಲಿ ತಿರಸ್ಕರಿಸುವ ಆಯ್ಕೆಯಂತೂ ಇದ್ದೇ ಇದೆ.
ಆದರೆ ಸಮಸ್ಯೆ ಇರುವುದು ಪ್ರಬಲ, ಶಕ್ತಿಶಾಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ವರ್ತನೆಯಲ್ಲಿ. ಆ ಪಕ್ಷಗಳು ಅಭ್ಯರ್ಥಿಗಳು ಆಚಾರ ಸಂಹಿತೆಯನ್ನು ಒಂದು ಅನಿಷ್ಟ ಅನಿವಾರ್ಯ ಶನಿ ಎಂದು ಭಾವಿಸದೇ, ಚುನಾವಣೆಯ ಗಾಂಭೀರ್ಯ ಹಾಗೂ ಪಾವಿತ್ರ್ಯವನ್ನು ರಕ್ಷಿಸುವ ಸಾಧನ ಎಂದು ಭಾವಿಸುವುದಾದರೆ, ಚುನಾವಣೆ ಪದ್ಧತಿ ಇನ್ನಷ್ಟು ಉತ್ತಮಗೊಳ್ಳುವುದು ಖಚಿತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement