ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಕೂಟ ರಾಜಕೀಯ: ಅಭದ್ರತೆ

ಕೇಂದ್ರದಲ್ಲಿ ಏಕಪಕ್ಷೀಯ ಬಹುಮತದ ಸರ್ಕಾರದ ರಚನೆಯ ಕಾಲ ಮುಗಿದಂತೆಯೇ ಆಗಿದೆ. ಸದ್ಯಕ್ಕಂತೂ ಆ ಸಂಭವ ...

Rashmi Kasaragodu
Updated On : 26 Feb 2014, 12:29 pm

ಕೇಂದ್ರದಲ್ಲಿ ಏಕಪಕ್ಷೀಯ ಬಹುಮತದ ಸರ್ಕಾರದ ರಚನೆಯ ಕಾಲ ಮುಗಿದಂತೆಯೇ ಆಗಿದೆ. ಸದ್ಯಕ್ಕಂತೂ ಆ ಸಂಭವ ತುಂಬಾ ಕಡಿಮೆ. 1996ರ ಅನಂತರ ದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿಗಳೆರಡು ಸೇರಿದರೂ ಒಟ್ಟು ಮತದಾನದ ಸಂಖ್ಯೆಯಲ್ಲಿ ಅರ್ಧಕ್ಕಿಂತ ಅಧಿಕ ಸಂಖ್ಯೆಯ ಮತಗಳು ಸಿಕ್ಕಿಲ್ಲ.
ಭಿನ್ನ ಭಿನ್ನ ಭಾಷೆ, ಧರ್ಮ, ಜಾತಿಗಳ ಒಕ್ಕೂಟ ರಾಷ್ಟ್ರವೆನ್ನಬಹುದಾದ ಭಾರತದಲ್ಲಿ ಇಂತಹ ವ್ಯವಸ್ಥೆ ರೂಪಗೊಂಡಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಹೀಗಾಗಿ ಭವಿಷ್ಯದಲ್ಲಿ ಕೂಟಗಳ ನಡುವಣ ರಾಜಕೀಯ ವ್ಯವಸ್ಥೆಯಲ್ಲೇ ದೇಶದ, ಜನರ ಹಿತಸಾಧನೆಗೆ ಪ್ರಯತ್ನ ನಡೆಯಬೇಕು. ರಾಜಕೀಯ ಪಕ್ಷಗಳೂ ಇದನ್ನು ಒಪ್ಪಬೇಕು.
ರಾಜಕೀಯ ಪಕ್ಷಗಳು ಚುನಾವಣೆಗೆ ಮುಂಚೆಯೇ ಸಿದ್ಧಾಂತದ ಆಧಾರದ ಮೇಲೆ ಕೂಟವನ್ನು ರಚಿಸಿಕೊಂಡು ಚುನಾವಣೆ ಕಣಕ್ಕೆ ಇಳಿಯುವ ಕಾಲವೂ ಈಗ ಇಲ್ಲವಾಗಿದೆ. ಜಾಗತಿಕ ರಾಜಕೀಯ ವ್ಯವಸ್ಥೆ ಸಿದ್ಧಾಂತ ಆಧರಿತದ ಸ್ವರೂಪವನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ರಾಜಕೀಯ ಕೂಟಗಳ ರಚನೆಗೆ ಇರಬಹುದಾದದ್ದು ಜನಹಿತ ಸಾಧನೆಯ ಉದ್ದೇಶ ಮಾತ್ರ. ಇಲ್ಲಿ ಭಿನ್ನಾಭಿಪ್ರಾಯಗಳಿಗೂ ಅವಕಾಶವಿದೆ. ಆದರೆ ಭಿನ್ನಾಭಿಪ್ರಾಯಗಳನ್ನು ಸ್ವಹಿತದ ದೃಷ್ಟಿಯಿಂದ ಬೆಳೆಸಿಕೊಂಡು ಹೋಗಬಾರದು.
ಕಳೆದ ಒಂದು ದಶಕದ ಕೂಟ ರಾಜಕೀಯ ವ್ಯವಸ್ಥೆಯ ಸರ್ಕಾರದ ಆಡಳಿತದಲ್ಲಿ ಅಭದ್ರತೆ ಮೂಡಿಸಿದ ವೈರುಧ್ಯಗಳ ಹಾವಳಿಯನ್ನು ದೇಶ ಅನುಭವಿಸಿದೆ. ಅಭದ್ರತೆಯ ಸನ್ನಿವೇಶದಲ್ಲಿ ಸಂಸತ್ತಿನಲ್ಲಿ ಬಹುಮತವನ್ನು ಉಳಿಸಿಕೊಳ್ಳಬೇಕಾದರೆ, ನ್ಯಾಯದ ಮಾರ್ಗವನ್ನು ಕೈ ಬಿಟ್ಟ ಪ್ರಕರಣಗಳೂ ಇವೆ. ಅದರಿಂದ ದೇಶಕ್ಕೆ ಹಾನಿಯಾಗಿದೆ.
ಆದ್ದರಿಂದ ಸುಭದ್ರ ಸರ್ಕಾರದ ಸ್ಥಾಪನೆಯೇ ಭವಿಷ್ಯದ ರಾಜಕೀಯ ಕೂಟಗಳ ರಚನೆಯ ಮೂಲ ಉದ್ದೇಶವಾಗಬೇಕು. ಈಗ ಭಿನ್ನ ಭಿನ್ನ ಪಕ್ಷಗಳು ಕೂಟ ರಚನೆಗೆ ನಡೆಸುತ್ತಿರುವ ಪ್ರಯತ್ನವನ್ನು ಗಮನಿಸಿದರೆ, ಭದ್ರತೆಗೆ ಆದ್ಯತೆ ಕಂಡುಬರುತ್ತಿಲ್ಲ. ಈಗ ನಡೆದಿರುವ ಪ್ರಯತ್ನಗಳೆಲ್ಲವೂ ಭದ್ರತೆಯ ಮನೋಧರ್ಮವನ್ನು ಪ್ರದರ್ಶಿಸುತ್ತಿಲ್ಲ.
ತೆಲಂಗಾಣ ರಾಜ್ಯ ರಚನೆಯ ಘೋಷಣೆ ಆದ ನಂತರ ಕಾಂಗ್ರೆಸ್ - ತೆಲಂಗಾಣ ರಾಷ್ಟ್ರ ಸಮಿತಿಗಳು ಹತ್ತಿರ ಬಂದಿವೆ. ಆದರೆ ತೆಲಂಗಾಣ ರಾಷ್ಟ್ರ ಸಮಿತಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಂಡು ಭವಿಷ್ಯದ ರಾಜಕೀಯ ವ್ಯಾಪಾರದ ಬಾಗಿಲನ್ನು ತೆರೆದಿಟ್ಟುಕೊಂಡಿರುವುದೂ ನಿಜ.
ಭಾರತೀಯ ಜನತಾ ಪಾರ್ಟಿಯ ನೇತೃತ್ವದ ಕೂಟಕ್ಕೆ ಬರಲು ಆಕ್ಷೇಪವಿಲ್ಲವೆಂದು ಹೇಳುತ್ತಿರುವ ಬಿಹಾರದ ರಾಮವಿಲಾಸ ಪಾಸ್ವಾನ್ ಅವರ ಲೋಕ ಜನ ಶಕ್ತಿಯ ವಿಚಾರವೂ ಅಷ್ಟೇ. ಅಲ್ಲಿ ಭದ್ರ ಸರ್ಕಾರದ ಮಾತಿಲ್ಲ. ರಾಮವಿಲಾಸ್ ಪಾಸ್ವಾನ್, ಅವರ ತಮ್ಮ ರಾಮಚಂದ್ರ ಪಾಸ್ವಾನ್ ಹಾಗೂ ರಾಮ ವಿಲಾಸರ ಪುತ್ರನ ಹಿತರಕ್ಷಣೆಯ ಉದ್ದೇಶವೇ ಅಲ್ಲಿರುವುದು. ಬಿಜೆಪಿಗೆ ಒಂದು "ದಲಿತ ಬಾಹು" ಸಿಗುವ ಆಮಿಷಕ್ಕೆ ಪಕ್ಷ ಬಲಿಯಾಗಿರುವಂತಿದೆ.
ಕೆಲವೇ ದಿನಗಳ ಹಿಂದೆ, ರಾಷ್ಟ್ರೀಯತಾ ಕಾಂಗ್ರೆಸ್ ನಾಯಕ ಶರದ್ ಪವಾರ್ ಆಡಿದ್ದ ಮಾತನ್ನು ಈಗ ಬದಲಾಯಿಸಿದ್ದಾರೆ. ಪಾಸ್ವಾನ್ ವಿಚಾರದಲ್ಲೂ ಅದು ನಿಜ. ಇನ್ನ್ನು ಒಕ್ಕೂಟಗಳ ರಚನೆಯ ಫಲ ಶೃತಿಗೆ ಸಮಯವಿದೆ. ಆಮ್ ಆದ್ಮಿ ಪಾರ್ಟಿಯಂತಹ ಕೆಲವು ಪಕ್ಷಗಳ ನಿಲವು ಪ್ರಕಟವಾಗಿಲ್ಲ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರಂತಹವರು ರಾಜಕೀಯ ರಂಗಗಳ ಸ್ವರೂಪ ಗೊತ್ತಾಗುವುದು ಚುನಾವಣೆ ಫಲಿತಾಂಶ ಪ್ರಕಟವಾದ ಅನಂತರವೇ ಎನ್ನುತ್ತಿದ್ದಾರೆ.
ಈಗಿನ ಕೂಟ ರಚನೆಯ ಪ್ರಯತ್ನಗಳ ವೈಖರಿ, ಭವಿಷ್ಯದ ಭದ್ರತೆಯಲ್ಲಿ ಆಸಕ್ತವಾಗಿರುವ ವಲಯಗಳಲ್ಲಿ ಆತಂಕವನ್ನು ಉಂಟು ಮಾಡಿರುವುದೂ ನಿಜ. ರಾಜಕೀಯ ಪಕ್ಷಗಳು ಭದ್ರ ಸರ್ಕಾರದ ರಚನೆಗೇ ಆದ್ಯತೆ ನೀಡಬೇಕು. ಅದನ್ನು ಸ್ಪಷ್ಟವಾಗಿ ಪ್ರಕಟಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement