ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 1 Jan 2014, 10:09 am

ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಮೈಸೂರು ಅರಸರ ನಿಧನಾನಂತರ, ನೊಂದು ಬೆಂದ ಮೈಸೂರು ಪ್ರಜೆಗಳ ಹೃದಯಕ್ಕೆ ತಂಪೆರೆಯುವಂತೆ ಮೈಸೂರು ಅರಸರು ಸಂಸ್ಥಾನಕ್ಕೆ ಸಲ್ಲಿಸಿದ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸುವ ಲೇಖನ ಸರಣಿಯನ್ನು ಕ.ಪ್ರ  ಮೈಸೂರು ಪುಟದಲ್ಲಿ  ಪ್ರಕಟಿಸಿದ್ದು ಸ್ತುತ್ಯರ್ಹ. ಟೀಂ ಕನ್ನಡ ಪ್ರಭ ಮೈಸೂರು ತಂಡದ ಕ್ಯಾಪ್ಟನ್ ಅಂಶಿ ಪ್ರಸನ್ನ ಕುಮಾರ್ ಬಹಳಷ್ಟು ಕರಾರುವಾಕ್ ಮಾಹಿತಿ ಕೊಟ್ಟಿದ್ದಾರೆ, ಧನ್ಯವಾದಗಳು. ಈ ಸರಣಿ ಮಾಲಿಕೆಯಲ್ಲಿ 20ನೇ ಡಿಸೆಂಬರ್ ಸಂಚಿಕೆಯಲ್ಲಿ ಅವರು ಬರೆದ ಒಂದು ಮಾಹಿತಿಗೆ ತಿದ್ದುಪಡಿ ಸೂಚಿಸಲು ಈ ಮಿಂಚಂಚೆ!'
'ಮೈಸೂರು ಅರಸರ ಮೂಲಪುರುಷರ ಬಗ್ಗೆ ಕೆದುಕುತ್ತಾ ಅಂಶಿಯವರು ಹೇಳುತ್ತಾರೆ- 'ಯದು ಸಹೋದರರು ಉತ್ತರದ ದ್ವಾರಕದಿಂದ ಬಂದರು' ಎಂದು. ಅಂಶಿಯವರು ಹೇಳಿದಂತೆ ದ್ವಾರಕಾ ಉತ್ತರದಲ್ಲಿ ಎಂದೆಂದೂ ಕಾಣ ಸಿಗುವುದಿಲ್ಲ. ದ್ವಾರಕಾ ಪಶ್ಚಿಮ ಭಾರತದ, ಈಗಿನ ಗುಜರಾತ್ ರಾಜ್ಯದಲ್ಲಿ ಸಮುದ್ರ ತಟದಲ್ಲಿದೆ.'
'ದ್ವಾರಕಾ ಯಾದವ ಕೃಷ್ಣನ ಕಾರ್ಯ ಕ್ಷೇತ್ರವಾಗಿತ್ತು. ದ್ವಾಪರ ಯುಗದಲ್ಲಿ ಮಗಧ ದೇಶದ (ಈಗಿನ ಬಿಹಾರ್) ಕುಖ್ಯಾತ ರೌಡಿ ರಾಜ ಎನಿಸಿದ್ದ ಜರಾಸಂಧ ಶ್ರೀ ಕೃಷ್ಣನಿಗೆ ಉಪಟಳ ಕೊಡದೆ ಹೋಗಿರದಿದ್ದರೆ  ದ್ವಾರಕಾ ಪಟ್ಟಣ ನಿರ್ಮಾಣವಾಗುತ್ತಲೇ ಇರಲಿಲ್ಲ. ಶ್ರೀ ಕೃಷ್ಣ ತನ್ನ ತಂದೆ ವಸುದೇವ, ತಾಯಿ ದೇವಕಿಯನ್ನು ಸೆರೆಯಿಂದ ಬಿಡಿಸಿ ಕರೆತರಬೇಕಾದರೆ ತನ್ನ ಮಾವ ಕಂಸನನ್ನು ಕೊಲ್ಲಬೇಕಾಯ್ತು. ಈ ಕಂಸನಿಗೆ ಜರಾಸಂಧ ತನ್ನ ಮಕ್ಕಳಾದ ಅಸ್ತಿ ಮತ್ತು ಪ್ರಾಸ್ತಿಯನ್ನು ಮದುವೆ ಮಾಡಿ ಕೊಟ್ಟಿದ್ದನು.'
'ತನ್ನ ಅಳಿಯನನ್ನೇ ಕೊಂದ ಕೋಪಕ್ಕೆ ಪ್ರತೀಕಾರವಾಗಿ ಜರಾಸಂಧ ಶ್ರೀಕೃಷ್ಣನ ಮೇಲೆ ಒಟ್ಟು 21 ಬಾರಿ ಯುದ್ಧ ಮಾಡಿದ್ದನು. ಪ್ರತಿ ಬಾರಿಯೂ ಕೃಷ್ಣ ಜರಾಸಂಧನನ್ನು ಜಾಣ್ಮೆಯಿಂದ ಮಣ್ಣು ಮುಕ್ಕಿಸಿದನು. ತನ್ನಿಂದಾಗಿ ತನ್ನ ಪ್ರಜೆಗಳಾದ ಯಾದವರಿಗೆ ತೊಂದರೆ ಆಗದಿರಲಿ ಎಂಬ ಉದ್ದೇಶದಿಂದ ಮಥುರಾ ನಗರ (ಈಗಿನ ಉತ್ತರ ಪ್ರದೇಶ) ಬಿಟ್ಟು ಈಗಿನ ಗುಜರಾತ್ಗೆ ವಲಸೆ ಬಂದು ಸಮುದ್ರ ಮಧ್ಯದಲ್ಲಿ ವಿಶ್ವ ಕರ್ಮನಿಂದ ದ್ವಾರಕಾ ಪಟ್ಟಣವನ್ನು ನಿರ್ಮಾಣ ಮಾಡಿದನು. ಶ್ರೀ ಕೃಷ್ಣ ಪರಂಧಾಮಕ್ಕೆ ತೆರಳಿದ 7ದಿನಗಳ ನಂತರ ಸಮುದ್ರದಲ್ಲಿ ದ್ವಾರಕಾಪಟ್ಟಣ ಮುಳುಗಿ ಹೋಯ್ತು ಎಂದು ನಮ್ಮ ಪುರಾಣಗಳು ಸಾರುತ್ತವೆ.'
'ದ್ವಾರಕೆಯ ಸಮುದ್ರ ತಳದಲ್ಲಿ ಉತ್ಖನನ ಕೈಗೊಂಡು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ, ಶ್ರೀ ಕೃಷ್ಣನ ಅಸ್ತಿತ್ವಕ್ಕೆ ಪುರಾವೆ ಕೊಟ್ಟ ಖ್ಯಾತಿ ಕನ್ನಡಿಗರಾದ, ಪುರಾತತ್ವ ವಿಜ್ಞಾನಿ ದಿವಂಗತ ಪ್ರೊಫೆಸರ್ ಶಿಕಾರಿಪುರ ರಂಗನಾಥ ರಾವ್ (ಎಸ್.ಆರ್. ರಾವ್) ಅವರಿಗೆ ಸಲ್ಲಬೇಕು.'
'500 ವರ್ಷಗಳ ಹಿಂದೆ ವಾದಿರಾಜ ಸ್ವಾಮಿಗಳು ಭಾರತದಾದ್ಯಂತ ಪಾದಯಾತ್ರೆ ಕೈಗೊಂಡ ಸಂದರ್ಭದಲ್ಲಿ ಈ ಪಟ್ಟಣವನ್ನು ಸಂದರ್ಶಿಸಿ ಸ್ತುತಿಸಿದ್ದಾರೆ. ಗೋಪಿ ಚಂದನದಿಂದ ಹಣೆಯಲ್ಲಿ ಧರಿಸುವ ತಿಲಕ (ರೇಖೆ ) ವೈಷ್ಣವರ ಪ್ರಮುಖ ಬಾಹ್ಯ ಲಕ್ಷಣ. ಗೋಪಿಚಂದನವು ದ್ವಾರಕೆಯ ಸಮೀಪ ಪರ್ವತ ರೂಪದಲ್ಲಿ ಲಭ್ಯ. 'ಫಾಲೇ ಯಲ್ಲಿಖಿತಂ ಧುನೋತಿ ವಿವಿಧಾಂ ರೇಖಾ ವಿಧಾತ್ರಾ ಕೃತಂ' ಗೋಪಿಚಂದನ ಧಾರಣೆಯಿಂದ ಬ್ರಹ್ಮ ಬರೆದ ಹಣೆಬರಹವನ್ನು ಬದಲಿಸಬಹುದು ಎಂದು ಚಮತ್ಕಾರದಿಂದ ವಾದಿರಾಜರು ತಮ್ಮ ತೀರ್ಥ ಪ್ರಬಂಧದಲ್ಲಿ ಸ್ತೋತ್ರ ಮಾಡಿದ್ದಾರೆ. ಶಂಕರಾಚಾರ್ಯರು ಚತುರಾಮ್ನಾಯ ಪೀಠಗಳಲ್ಲಿ ಒಂದನ್ನು ದ್ವಾರಕೆಯಲ್ಲಿ ಸ್ಥಾಪಿಸಿದರು ಎಂದು ಸ್ಮರಿಸಿಕೊಳ್ಳಬಹುದಾಗಿದೆ' ಎಂದಿದ್ದಾರೆ.


 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement