ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನಿವೃತ್ತರಾಗಲಿರುವ ಪ್ರಧಾನಿ ವಿದಾಯ ಪತ್ರಿಕಾಗೋಷ್ಠಿ

Mainashree
Updated On : 3 Jan 2014, 10:09 am

ಸುಮಾರು ಒಂದು ದಶಕದ ಕಾಲ ದೇಶದ ಪ್ರಧಾನಿಯಾಗಿದ್ದು ಬಗೆ ಬಗೆಯ ಏಳು ಬೀಳುಗಳನ್ನು ಅನುಭವಿಸಿರುವ ಮನಮೋಹನಸಿಂಗ್ ಅವರ ವಿದಾಯ ಪತ್ರಿಕಾ ಗೋಷ್ಠಿಯಲ್ಲಿ ಬೆಂಕಿಯೂ ಇರಲಿಲ್ಲ, ಬೆಳಕೂ ಇರಲಿಲ್ಲ.
ನಿಜ. ಶುಕ್ರವಾರದ ಅವರ ಪತ್ರಿಕಾ ಗೋಷ್ಠಿಯಲ್ಲಿ ಚುನಾವಣೆಯ ಅನಂತರ ನಿವೃತ್ತರಾಗುವ ನಿರ್ಧಾರವನ್ನು ಪ್ರಕಟಿಸುತ್ತಾರೆನ್ನುವ ಊಹೆಗೆ ಮೊದಲೇ ಬೇಕಾದಷ್ಟು ಪ್ರಚಾರ ಸಿಕ್ಕಿದ್ದರಿಂದ ಅಲ್ಲಿ ಸುದ್ದಿ ಮೌಲ್ಯವಿರುವ ವಿಚಾರಗಳನ್ನು ನಿರೀಕ್ಷಿಸುವುದೂ ತಪ್ಪು.
ಅವರ ಹತ್ತು ವರ್ಷಗಳ ಅವಧಿಯ ಹಗರಣಗಳನ್ನು ಕುರಿತ ಪ್ರಶ್ನೆಗಳಿಗೆ ಸಿಕ್ಕ ಉತ್ತರ ಎಂದರೆ ಈಗ ಮಾಧ್ಯಮ ಪ್ರಪಂಚ ಪಟ್ಟ ಭದ್ರ ಆಸಕ್ತ ಹಿತಗಳ ಮಾತನ್ನು ನಂಬಿತ್ತು. ಮುಂದಿನ ಚರಿತ್ರಕಾರರು ಸಮಕಾಲೀನ ಮಾಧ್ಯಮಕ್ಕಿಂತ ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಹುದು ಎನ್ನುವುದಷ್ಟೇ ವಿದಾಯದ ಸಮಯದಲ್ಲಾದರೂ ಹಗರಣಗಳ ನಿಜ ಸ್ವರೂಪವನ್ನು ಬಯಲು ಪಡಿಸಬಹುದಾಗಿತ್ತು. ಆ ಅವಕಾಶವನ್ನು ಪ್ರಧಾನಿ ಕಳೆದುಕೊಂಡರು.
ಉಳಿದಂತೆ ಪ್ರಗತಿಯ ವೇಗ, ಸಾಮಾಜಿಕ ನ್ಯಾಯ ವಿತರಣೆ ಹಾಗೂ ಇತರ ವಿಷಯಗಳಲ್ಲಿ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟದ ಸಾಧನೆಗಿಂತ ಸಂಯುಕ್ತ ಪ್ರಗತಿಪರ ಕೂಟದ ಸಾಧನೆ ಹೆಚ್ಚು ಎಂದು ಪ್ರತಿಪಾದಿಸಿ ಪ್ರಸ್ತುತ ಸನ್ನಿವೇಶದಲ್ಲಿ ಪರಿಸ್ಥಿತಿ ಕಷ್ಟವಾಗಿದೆ ಎಂದು ಭಾವಿಸಿದರೂ, ಒಳ್ಳೆಯ ಕಾಲ ಬರುವ ಸಮಯ ಇದು, ಎನ್ನುವುದು ಅವರ ನಂಬಿಕೆ. ಅದನ್ನು ನೋಡಲಿಕ್ಕಾದರೂ ಅವರು ಇನ್ನೈದು ತಿಂಗಳ ಕಾಲ ಆ ಪೀಠದಲ್ಲೇ ಇರುತ್ತಾರೆ. ಆಹಾರ ಭದ್ರತೆ ಕಾಯಿದೆ ಜಾರಿಗೆ ಬಂದಾಗ ಪರಿಸ್ಥಿತಿ ಸುಧಾರಿಸುವ ನಂಬಿಕೆ ಅವರಿಗೆ ಇದೆ.
ಮನಮೋಹನಸಿಂಗ್ ಅವರ ದೃಷ್ಟಿಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗುವುದು ದೇಶದ ದುರಂತವೇ ಸರಿ. ಶಕ್ತಿಶಾಲಿ ನಾಯಕನೆಂದರೆ ಅಹಮದಾಬಾದ್‌ನ ಬೀದಿಗಳಲ್ಲಿ ಅಮಾಯಕ ಜನರ ಕಗ್ಗೊಲೆಯ ವ್ಯವಸ್ಥೆ ಮಾಡುವುದಲ್ಲ, ಎನ್ನುವುದು ತುಂಬಾ ಖಾರವಾದ ಮಾತುಗಳೇ. ಅದಕ್ಕೆ ಬಿಜೆಪಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದೆ.
ಮುಂದಿನ ಪ್ರಧಾನಿ ಸಂಯುಕ್ತ ಪ್ರಗತಿಪರ ಕೂಟ ಆರಿಸುವ ವ್ಯಕ್ತಿಯೇ ಆಗಿರುತ್ತಾರೆ. ರಾಹುಲ ಗಾಂಧಿಗೆ ಪ್ರಧಾನಿಯಾಗಲಿಕ್ಕೆ ಬೇಕಾದ ಎಲ್ಲ ಅರ್ಹತೆಯೂ ಇದೆ, ಎನ್ನುವ ವಿಶ್ವಾಸದ ಪ್ರಕಟಣೆ.
ಮನಮೋಹನ ಸಿಂಗ್ ಅವರ ಅಧಿಕಾರಾವಧಿಯಲ್ಲಿ ತುಂಬಾ ಆನಂದವನ್ನು ನೀಡಿದ ಕ್ಷಣ ಯಾವುದು ? ಆ ಪ್ರಶ್ನೆಗೆ ಉತ್ತರ ನೀಡಲು ಹಿಂದೆ-ಮುಂದೆ ನೋಡಲಿಲ್ಲ. ಭಾರತ-ಅಮೆರಿಕದ ನಡುವೆ ನ್ಯೂಕ್ಲಿಯರ್ ವಲಯದಲ್ಲಿನ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದಾಗ, ಅವರಿಗೆ ತುಂಬಾ ಆನಂದವಾಯಿತಂತೆ. ಆ ನಿರ್ಧಾರವನ್ನು ಪ್ರತಿಭಟಿಸಿ, ಕಮ್ಯುನಿಸ್ಟರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದರು. ಲೋಕಸಭೆಯಲ್ಲಿ ಈ ವಿಚಾರದಲ್ಲೇ, ಸರ್ಕಾರ ವಿಶ್ವಾಸ ಸೂಚಕ ನಿರ್ಣಯಕ್ಕೆ ಎಲ್ಲ ದಿಕ್ಕಿನಿಂದಲೂ ಮತಗಳನ್ನು ಪಡೆಯಲು ಪ್ರಯತ್ನಸಿದ್ದು, ಓಟಿಗಾಗಿ ನೋಟಿನ ಪ್ರಕರಣ ನಡೆದಿದೆ ಎನ್ನುವ ಆರೋಪ ಪ್ರಕಟವಾಗಿದ್ದೂ ಈ ಸಂದರ್ಭದಲ್ಲೇ. ಆ ಹಗರಣದಲ್ಲಿ ಸದನದಲ್ಲೇ ಪ್ರದರ್ಶನಕ್ಕಿಟ್ಟ ನೋಟುಗಳ ಮೂಲವನ್ನು ಸಿಬಿಐ ಕಂಡು ಹಿಡಿಯಲೇ ಇಲ್ಲ.
 ಸಹಜವಾಗಿಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎಲ್ಲ ವಿಚಾರಗಳಲ್ಲೂ ತಮಗೆ ನೀಡಿದ ಬೆಂಬಲ ಹಾಗೂ ಸಹಕಾರವನ್ನು ಮನಮೋಹನಸಿಂಗ್ ಸ್ಮರಿಸಿದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ, ಎಲ್ಲ ಪಕ್ಷಗಳೂ ಒಟ್ಟಾಗಿ ಭ್ರಷ್ಟಾಚಾರದ ರಾಕ್ಷಸೀ ಹಾವಳಿಯನ್ನು ದಮನ ಮಾಡಬೇಕೆನ್ನುವ ಸಾರ್ವತ್ರಿಕ-ಸಾಮಾನ್ಯ ಹೇಳಿಕೆಯನ್ನೇ ಉತ್ತರ ಸ್ವರೂಪದಲ್ಲಿ ನೀಡಿ, ಆ ಸಮಸ್ಯೆಯನ್ನು ಹಾಗೇ ಬದಿಗೆ ಸರಿಸಿದರು.
ಹತ್ತು ಸುದೀರ್ಘ ವರ್ಷಗಳ ಅವಧಿಯ ಕಾಲದ ಪ್ರಮುಖವಾದ ಬೆಳವಣಿಗೆಗಳನ್ನು ಕುರಿತ ಹೊಸ ಬೆಳಕೇನಾದರೂ ಬೀಳಬಹುದೆಂದು ನಿರೀಕ್ಷಿಸಿದ್ದವರು ಅನೇಕರು. ಅವರೆಲ್ಲರಿಗೂ ನಿರಾಸೆಯಾಗಿತ್ತು. ಮನಮೋಹನಸಿಂಗ್ ಅವರು ಪತ್ರಿಕಾಗೋಷ್ಠಿಗೆಂದೇ ಸಿದ್ಧಪಡಿಸಿದ್ದ ವಿಶೇಷ ಹೇಳಿಕೆಯಲ್ಲಿ ಇದುವರೆಗೆ ಪ್ರಕಟವಾಗದೇ ಇರುವ ಒಂದೇ ಒಂದು ವಿಚಾರವೂ ಇರಲಿಲ್ಲ.
ಪ್ರಗತಿಯ ವೇಗ, ರೈತರ ಸಾಲ ಮನ್ನ, ಸಾಮಾಜಿಕ ನ್ಯಾಯ ವಿತರಣೆಯಲ್ಲಿಟ್ಟ ದೊಡ್ಡ ಹೆಜ್ಜೆಗಳು, ಗ್ರಾಮೀಣ ನಿರುದ್ಯೋಗದ ನಿವಾರಣೆಯ ಕ್ರಮವಾಗಿ ಕೈಗೊಂಡ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮಹತ್ವ, ಶಿಕ್ಷಣ ಕ್ಷೇತ್ರದ ಸುಧಾರಣೆಯ ಪ್ರಸ್ತಾಪದಂತಹ ಆಡಳಿತಾತ್ಮಕವಾದ ವಿಚಾರಗಳೇ ತುಂಬಿದ್ದವು.
ಪ್ರಧಾನಿಯ ಭಾಷಣದ ಮಧ್ಯದಲ್ಲೇ ಒಂದು ರಾಷ್ಟ್ರೀಯ ಟಿ.ವಿ. ವಾಹಿನಿಗೆ ವೀಕ್ಷಕರು ಕಳುಹಿಸಿದ ಸಂದೇಶ : ಸರ್ಕಾರ ಪ್ರಕಟಿಸಿರುವ ಜಾಹಿರಾತುಗಳನ್ನು ಪೋಣಿಸಿ ಓದುತ್ತಿರುವಂತಿದೆ. ನೀರಸವಾಗಿದೆ ಈ ಭಾಷಣ.
ಆ ಕ್ಷಣದಲ್ಲಿ ಆ ಸಂದೇಶ ಸರಿಯಾಗಿತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸರ್ಕಾರ ಸಿದ್ಧಪಡಿಸುವ ಹೇಳಿಕೆಗಳು ಇರುವುದೇ ಹಾಗೆ ! ಅದಕ್ಕೆ ಜೀವ ತುಂಬುವುದು ಅದನ್ನು ಓದುವವರ ಕರ್ತವ್ಯ. ಮನಮೋಹನಸಿಂಗ್ ಆ ಸಾಹಸಕ್ಕೆ ಕೈ ಹಾಕಲಿಲ್ಲ.
ಭಾಷಣದ ಅನಂತರದ ಪ್ರಶ್ನೋತ್ತರ ಅವಧಿಯಲ್ಲಿ ಹಿರಿಯ ಪತ್ರಕರ್ತರು ಕೇಳಿದ ಪ್ರಶ್ನೆಗಳೂ ಯಥಾಪ್ರಕಾರ ಎನ್ನುವಂತೆಯೇ ಇದ್ದಿದ್ದರಿಂದ ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಭಿನ್ನವಾಗಿರುವುದು ಸಾಧ್ಯವಿರಲಿಲ್ಲ.
ಹೀಗೆ, ಭವಿಷ್ಯದಲ್ಲಿ ಯಾರೂ ನೆನಪಿನಲ್ಲಿ ಇಟ್ಟುಕೊಳ್ಳದ ರೀತಿಯಲ್ಲಿ ನೂರು ಕೋಟಿ ಭಾರತೀಯರ ಹಿತರಕ್ಷಣೆ ಮಾಡಲು ನೇಮಕಗೊಂಡಿದ್ದ ನಾಯಕರು ಮಾಡಿದ ಭಾಷಣ ಮುಗಿದಿತ್ತು. ಮುಂದೆ ಹೊಸ ಅಧ್ಯಾಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement