ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 6 Jan 2014, 9:51 am

ಮೈಸೂರಿನ ಕೃಷ್ಣಮೂರ್ತಿ ಪುರಂನಿಂದ ಎಸ್.ರಾಘವೇಂದ್ರ ಮಿಂಚಂಚೆ ಕಳುಹಿಸಿದ್ದಾರೆ. 'ನಮ್ಮ ಮೆಚ್ಚಿನ 'ಕನ್ನಡಪ್ರಭ' ಓದುಗರ ಪಾಲಿಗೆ 'ಒಳಗೊಂದು ಹೊರಗೊಂದು' ನೀತಿ ಅನುಸರಿಸುತ್ತೆ ಅಂತ ಕನಸು ಮನಸಲ್ಲೂ ಎಣಿಸಿರಲಿಲ್ಲ! ಇದಕ್ಕೆ ನಿದರ್ಶನ ಜನವರಿ 2ರ ಸಂಚಿಕೆ. ಸಿದ್ದರಾಮಯ್ಯ ಸಂಪುಟಕ್ಕೆ ಹೊಸದಾಗಿ ಹಳಬರಿಬ್ಬರ ಸೇರ್ಪಡೆ ಸಂಬಂಧ ಈ ನಿಲುವು ಜಗಜ್ಜಾಹೀರಾಗಿದೆ.'
'ಅಲ್ಪ ಪ್ರಾಣ ಮತ್ತು ಮಹಾ ಪ್ರಾಣಗಳನ್ನು ಬಳಸುವ ಸಂಬಂಧ ಉಂಟಾಗುತ್ತಿರುವ ತಾಕಲಾಟ ಮಾಧ್ಯಮಗಳನ್ನೂ ಬಿಟ್ಟಿಲ್ಲ. ಮಾಧ್ಯಮಗಳಿರಲಿ, ಓದುಗರನ್ನು ಬಿಟ್ಟಿಲ್ಲ. ಪ್ರಧಾನ ಸಂಪಾದಕರಿಗೆ ಮಿಂಚಂಚೆ ಕಳುಹಿಸುವ ಸಂಬಂಧ ಉಂಟಾಗುವ 'ಪ್ರಾಣ ಪ್ರಮಾದ'ಗಳನ್ನು ಭಟ್ಟರೇ ತಿದ್ದಿ ಪ್ರಕಟಿಸಿದ ನಿದರ್ಶನಗಳೂ ಉಂಟು. ಕೆಲವೇ ಬೆರಳೆಣಿಕೆಯ ಪತ್ರಕರ್ತರು ಮಾತ್ರ ಸ್ಪಷ್ಟ ಉಚ್ಚಾರಣೆ ಮತ್ತು ಶುದ್ಧ ಬರಹದಲ್ಲಿ ಈ ತಾಕಲಾಟವನ್ನು ಮೀರಿ ನಿಂತಿರುತ್ತಾರೆ.'
'ಇನ್ನು ವಿಷಯಕ್ಕೆ ಬರುವುದಾದರೆ, ಶಿವಾಜಿನಗರದ ಶಾಸಕರಾದ ರೋಷನ್ ಬೇಗ್ ಸಾಹೇಬರು ಮುಖ ಪುಟದಲ್ಲಿ ಸರಿಯಾಗಿ 'ರೋಷನ್' ಎಂದು ಫಳಫಳ ಮಿಂಚಿರುತ್ತಾರೆ. ಅದೇ ಸುದ್ದಿ ಮೊದಲನೇ ಪುಟದಿಂದ ಹನ್ನೊಂದನೇ ಪುಟಕ್ಕೆ ಹೋದಾಗ 'ರೋಶನ್' ಆಗಿ ಮಂಕುಹಿಡಿದವರಂತೆ ಕಾಣುತ್ತಾರೆ. ಹಿಂದೆ ಕೇಂದ್ರ ಗೃಹ ಮಂತ್ರಿ ಸುಶೀಲ್ಕುಮಾರ್ ಶಿಂದೆ ವಿಚಾರದಲ್ಲಿ ತಾವು 'ಮಹಾ ನ್ಯಾಯ' ಒದಗಿಸಿಕೊಟ್ಟಿದ್ದನ್ನು ಮರೆತಿರಲಾರಿರಿ. ರೋಷನ್ ಬೇಗ್ ಸಾಹೇಬರು ಮಂತ್ರಿಯಾಗಿರುವುದರಿಂದ ಇನ್ನು ಮುಂದೆ ಪತ್ರಿಕೆಯಲ್ಲಿ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈ ಪ್ರಾಣ ಪ್ರಮಾದ ಅವರನ್ನು ಮತ್ತು ನಮ್ಮನ್ನು ಬಾಧಿಸಿದಂತೆ ತಾವು ಕ್ರಮಕೈಗೊಳ್ಳುತ್ತಿರೆಂದು ಆಶಿಸುತ್ತೇನೆ' ಎಂದಿದ್ದಾರೆ.
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಪತ್ರ ಕಳುಹಿಸಿದ್ದಾರೆ. 'ಡಿ.23ರ 'ಮಾಹಿತಿ.ಕಾಂ' ಅಂಕಣದಲ್ಲಿ 'ಬಿಂಬ್ಲಿಕಾಯಿ' ವಿಷಯದ ಕುರಿತು ಮಾಹಿತಿಗಳಿವೆ. ಆದರೆ ಮಾಹಿತಿ ನೀಡುವಲ್ಲಿ ತುಸು ಎಡವಟ್ಟಾಗಿದೆ. ಮಾಹಿತಿಯಲ್ಲಿ ಸೂಚಿಸಿರುವಂತೆ ಈ ಸಸ್ಯ ಮರವಲ್ಲ. ಮಧ್ಯಮ ಗಾತ್ರದ ಗಿಡವೆನ್ನಬೇಕು. ಅಂಕಣದಲ್ಲಿ 'ಬಿಂಬ್ಲಿಕಾಯಿ ಸಾಮಾನ್ಯವಾಗಿ 100 ಅಡಿವರೆಗೂ ಬೆಳೆಯುತ್ತದೆ' ಎಂದು ಮುದ್ರಣಗೊಂಡಿದೆ. ಮಾವಿನ ಮರಗಳೇ ಸಾಮಾನ್ಯವಾಗಿ 50-60 ಅಡಿ ಬೆಳೆಯಬಹುದೇನೋ! 100 ಅಡಿ ಎತ್ತರದ ಬಿಂಬ್ಲಿಕಾಯಿ ಗಿಡ(ಮರವಲ್ಲ) ಬೆಳೆದರೆ ಅದು ವಿಶ್ವದಾಖಲೆಯಾದೀತು! 10 ಅಡಿ ಬೆಳೆಯುವ ಗಿಡ ಎಂಬುದು ಸರಿ! ಅದು ನೆಟ್ಟಗೆ ನಿಂತಿರಲು ಕೃತಕ ಆಧಾರ ನೀಡಬೇಕಾದೀತು! ಈ ಗಿಡಕ್ಕೆ 'ಬೀಂಪುಳಿ' ಗಿಡವೆಂದೂ ಕರೆಯುತ್ತಾರೆ.  ಇದೇ ದಿನದ 'ಸುಹಾಸಿನಿ' ಅಂಕಣದಲ್ಲಿ ಶೀರ್ಷಿಕೆಯೇ ಒಂದು ವಿಷಯವೇ ಇನ್ನೊಂದು ಎಂಬ ಎಡವಟ್ರಾಯರು ಕಾಣಿಸಿಕೊಂಡಿದ್ದಾರೆ! ಹಿಂದಿನ ದಿನಗಳ ಶೀರ್ಷಿಕೆಯನ್ನು ಡಿಲೀಟ್ ಮಾಡದೆ ಈ ಅಂಕಣದಲ್ಲಿ 'ಗೋವಿಂದ ಅವರ ಸಂಗೀತ ಸಾಧನೆ ಅದ್ಭುತ' ಎಂದು ಕೊಂಡಾಡಿದ ಪುಟ ನಿರ್ವಹಣೆ ಮಾಡಿದವರ ಕೌಶಲ್ಯಕ್ಕೆ 'ಗೋವಿಂದಾ! ಗೋವಿಂದಾ! ಗೋವಿಂದ!!' ಎಂದು ನಕ್ಕುಬಿಡುತ್ತೇನೆ! ಇದರಲ್ಲಿ ಖಂಡಿತವಾಗಿಯೂ ಕಾಲೆಳೆಯುವ ಕೀಟಲೆಯಿಲ್ಲ. ಅಂಕಣ ಹಾಗೂ ಪುಟವನ್ನು ನಿರ್ವಹಿಸುವವರು ಎಚ್ಚರವಹಿಸಲಿ ಎಂಬ ಹಿತವಾದ ಬೆಚ್ಚನೆಯ ಸ್ನೇಹ ನುಡಿಯಷ್ಟೇ ಇದೆ!' ಎಂದಿದ್ದಾರೆ.


 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement