ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಆಧಾರ್ ಹೇರುತ್ತಿರುವುದಕ್ಕೆ ಕಾರಣವೇನು?

Vishwanath S
Updated On : 8 Jan 2014, 12:18 pm

ಗ್ಯಾಸ್ ಸಬ್ಸಿಡಿಗೂ ಆಧಾರ್ ಕಾರ್ಡ್‌ಗೂ ತಳಕು ಹಾಕಬಾರದೆಂದು ಸುಪ್ರೀಂ ಕೋರ್ಟ್ ಹೇಳಿದ್ದರೂ, ಇದೀಗ ಸಚಿವ ವೀರಪ್ಪ ಮೊಯಿಲಿ ಅನಿಲ ಸಂಪರ್ಕ ಪಡೆಯಲು ಆಧಾರ ಕಾರ್ಡ್ ಅಗತ್ಯವಲ್ಲದಿದ್ದರೂ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಅಗತ್ಯವೆಂದು ಅಪ್ಪಣೆಕೊಟ್ಟಿದ್ದಾರೆ.
ಅನಿಲ ಜಾಡಿ ಬಳಕೆದಾರರು ಆಧಾರ್ ಕಾರ್ಡ್‌ಅನ್ನು ಲಗತ್ತಿಸುವುದರಿಂದ ಬೋಗಸ್ ಅನಿಲ ಜಾಡಿಗಳ ದುರುಪಯೋಗವನ್ನು ತಡೆಯಬಹುದಂತೆ! ಬೋಗಸ್‌ನ ಜಾಲ ಎಲ್ಲಿದೆ ಎಂಬುದು ಗೊತ್ತಿದ್ದರೂ ಕಣ್ಣು ಮುಚ್ಚಿ ಕದ್ದು ಹಾಲು ಕುಡಿಯುವ ಕಳ್ಳ ಬೆಕ್ಕಿನಂತೆ ವರ್ತಿಸುವ 'ವ್ಯವಸ್ಥೆ' ಅದನ್ನು ತಡೆಯಲು ಏಕೆ ಮುಂದಾಗುತ್ತಿಲ್ಲ? ಅಧಿಕ ವೇತನ ಪಡೆಯುವ (ಆದಾಯ ಗಳಿಸುವ) ನೌಕರಶಾಹಿ, ಶಾಸಕರು, ಸಂಸದರು, ಮಂತ್ರಿಗಳು- ಇವರೆಲ್ಲ ಸಬ್ಸಿಡಿಯ ಅನಿಲಜಾಡಿಗಳನ್ನು ಪಡೆಯುತ್ತಿರುವುದೇಕೆ? ಹೊಟ್ಟೆ ತುಂಬಿದವರಿಗೆ ಸಬ್ಸಿಡಿಯನ್ನೇಕೆ ನೀಡಬೇಕು? ಓಟ್ ಬ್ಯಾಂಕ್ ರಾಜಕಾರಣ, ಭ್ರಷ್ಟಾಚಾರ ಮತ್ತು ಬಡ- ಮಧ್ಯಮ ವರ್ಗದವರ ಮೂಗಿಗೆ ತುಪ್ಪ ಸವರುವುದು ಈ ಮೂರು ಪ್ರಕ್ರಿಯೆಗಳು ನಮ್ಮ ಬಹುಮಂದಿ ರಾಜಕಾರಣಿಗಳ ಹವ್ಯಾಸವಾಗಿ ಹೋಗಿದೆ. 'ಸಬ್ಸಿಡಿ ಹಾಗೂ ಉಚಿತ' ಎಂಬ ಎರಡು ವ್ಯವಸ್ಥೆ ದೇಶದ ಪ್ರಗತಿಗೆ ಮಾರಕ. ಆದರೆ ನಿರಭಿಮಾನಿಗಳಾದ ನಾವು ಇವುಗಳಿಗಾಗಿ ನಾಯಿಯಂತೆ ರಾಜಕಾರಣಿಗಳ ಮುಂದೆ ಅಂಗಲಾಚುತ್ತಿದ್ದೇವೆ.
ಸುಪ್ರೀಂ ಕೋರ್ಟ್ ಆಧಾರ ಕಾರ್ಡ್‌ಗೆ ತಪರಾಕಿ ಹಾಕಿದ ಮೇಲೆ ಸರ್ಕಾರ ಜಾಹಿರಾತಿನ ಮೂಲಕ ಜನರ 'ಬ್ರೇನ್‌ವಾಷ್‌' ಮಾಡಲು ಮುಂದಾಗಿದೆ. 'ಸೇವೆಗಳ ಸೌಲಭ್ಯ ಪಡೆಯಲು ಸಂತೋಷದೊಂದಿಗೆ' ಎಂಬ ಘೋಷವಾಕ್ಯದ ಮೂಲಕ ಆಧಾರ ಗುತ್ತಿಗೆ ಹಿಡಿದವರಿಗೆ ಸಂತೋಷವನ್ನುಂಟುಮಾಡಲು ಹೊರಟಿದೆ.
- ಎಂ. ಸುಬ್ರಹ್ಮಣ್ಯ ಭಟ್, ಮುಡಿಪು

ಬ್ರ್ಯಾಂಡ್ ಆಯ್ಕೆಯಲ್ಲಿ ಎಚ್ಚರವಿರಲಿ!
ನಾವು ಪೇಟೆಯಲ್ಲಿ ಯಾವುದೇ ಗ್ರಾಹಕ ವಸ್ತುವನ್ನು ಖರೀದಿಸುವಾಗ ಈಗಾಗಲೆ ಬ್ರ್ಯಾಂಡ್ ಆಗಿರುವುದನ್ನು ಖರೀದಿಸುತ್ತೇವೆ. ಒಂದೊಮ್ಮೆ ಒಂದು ಬ್ರ್ಯಾಂಡ್ ಸರಿಯಿಲ್ಲದಿದ್ದರೆ ಇನ್ನೊಂದು ಪ್ರಚಲಿತ ಬ್ರ್ಯಾಂಡ್‌ನ ವಸ್ತುವನ್ನೇ ಖರೀದಿಸಲು ಇಚ್ಚಿಸುತ್ತೇವೆ. ಪೇಟೆಗೆ ಹೊಸ ಬ್ರ್ಯಾಂಡ್‌ನ ವಸ್ತು ಬಂದರೆ ಸ್ವಲ್ಪ ಕಾಲ ಕಾದು ಅದರ ಗುಣಾವಗುಣಗಳ ಕುರಿತು ತಿಳಿದು ಖರೀದಿಸುತ್ತೇವೆ. ಇದೀಗ 'ಆಪ್ ಪ್ರಾಮಾಣಿಕ ಬ್ರ್ಯಾಂಡ್‌' ಸರಕು ದೆಹಲಿ ಪೇಟೆಗೆ ಬಂದಿದ್ದು ಅದು ತನ್ನ ಗುಣಮಟ್ಟವನ್ನು ಸಾಬೀತುಪಡಿಸುವ ಮೊದಲೇ ಅದರ ತಯಾರಕರು ಅಖಿಲ ಭಾರತ ಮಟ್ಟದಲ್ಲಿ ಅದನ್ನು ಚಲಾವಣೆಗೆ ತರುವ ಆತುರದಲ್ಲಿದ್ದಾರೆ. ಇದಕ್ಕಾಗಿ ಒಂದಿಷ್ಟು ಉಚಿತ ಉಡುಗೊರೆಗಳನ್ನು ನೀಡಿ ಮುಗ್ಧ ಗ್ರಾಹಕರನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. ನಮ್ಮ ಒಂದಿಷ್ಟು ವಿದ್ಯಾವಂತರಂತೂ ಅದರ ಪ್ರಚಾರದ ಮೋಡಿಗೆ ಸಂಪೂರ್ಣ ಮರುಳಾಗಿದ್ದಾರೆ. ಆದರೆ ಈ ಸರಕಿನ ಗುಣ ಮಟ್ಟದ ಬಗ್ಗೆ ಈಗಾಗಲೆ ಸಂಶಯ ಉಂಟು ಮಾಡುವಂಥ ಮತ್ತು ದೇಹ(ಶ)ಕ್ಕೆ ಅಪಾಯಕಾರಿ ಘಟಕಗಳಿರುವ ಸೂಚನೆ ಕಂಡುಬಂದಿದೆ. ಆದ್ದರಿಂದ ನಮ್ಮ  ವಿದ್ಯಾವಂತ (?) ಗ್ರಾಹಕರು ಈ ಸರಕಿಗೆ ಮುಗಿಬೀಳುವ ಮೊದಲು ಕನಿಷ್ಠ ಒಂದೈದು ವರ್ಷ ಕಾದು ನೋಡುವುದು ಒಳಿತು.
- ಸೀತಾರಾಮ ವಾರಂಬಳ್ಳಿ, ಬೆಂಗಳೂರು


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement