ಹೆಚ್ಚುವರಿ ಹಣ ಹೋಗುವುದೆಲ್ಲಿಗೆ?
ಇಂಡೇನ್ ಗ್ಯಾಸ್ ಸಿಲಿಂಡರ್ಗೆ ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿದಲ್ಲಿ 420 ರುಪಾಯಿಗಳನ್ನೂ, ಲಗತ್ತಿಸದಿದ್ದಲ್ಲಿ 1041 ರೂಪಾಯಿಗಳನ್ನೂ ಗ್ಯಾಸ್ ಕಾರ್ಡ್ದಾರರಿಂದ ಪಡೆಯುತ್ತಾರೆ. ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿದವರಿಗೆ ನಂತರ ಅವರ ಬ್ಯಾಂಕ್ ಖಾತೆಗೆ 612 ರುಪಾಯಿಗಳನ್ನು ಜಮಾ ಮಾಡುತ್ತಾರೆ. ಯಾವುದೇ ರೀತಿಯ ಸೇವೆಯನ್ನು ನೀಡಲು ಆಧಾರ್ ಕಾರ್ಡನ್ನು ಕೊಡಲೇಬೇಕು ಎಂಬ ನಿಯಮ ಮಾಡುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ಅದನ್ನು ಕಡ್ಡಾಯ ಮಾಡಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಮುಂದುವರಿದು, 1041 ರುಪಾಯಿಗಳಲ್ಲಿ ಸಿಲಿಂಡರ್ ಬೆಲೆಯಾದ 420 ರುಪಾಯಿಗಳನ್ನು ಕಳೆದಲ್ಲಿ ಗ್ಯಾಸ್ ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆಗೆ 621 ರುಪಾಯಿ ಜಮಾ ಮಾಡಬೇಕಾಗುತ್ತದೆ. 612 ರುಪಾಯಿಗಳಲ್ಲ. ಅಂದರೆ 9 ರುಪಾಯಿಗಳಷ್ಟು ಹಣವನ್ನು ಗ್ಯಾಸ್ ಬಳಕೆದಾರರ ಬ್ಯಾಂಕ್ ಖಾತೆಗೆ ಕಡಿಮೆಯಾಗಿ ಜಮಾ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಗ್ಯಾಸ್ ಬಳಕೆದಾರರಿಗೂ 9 ರುಪಾಯಿಗಳನ್ನು ಕಡಿಮೆ ಜಮಾ ಮಾಡಿದರೆ, ಆ ಹಣ ಯಾರ ಲೆಕ್ಕಕ್ಕೆ ಹೋಗುತ್ತದೆ ಎಂಬುದು ಅರ್ಥವಾಗುವುದಿಲ್ಲ. ಇದಕ್ಕೆ ಗ್ಯಾಸ್ ಸರಬರಾಜುದಾರರು ಸ್ಪಷ್ಟೀಕರಣ ನೀಡಬೇಕು. ಪ್ರತಿಯೊಬ್ಬ ಕಾರ್ಡ್ದಾರರಿಂದಲೂ 9 ರುಪಾಯಿಗಳನ್ನು ಹೆಚ್ಚಾಗಿ ಪಡೆದಿರುವುದೇ ಆದರೆ, ಹೆಚ್ಚುವರಿಯಾಗಿ ಪಡೆದ 9 ರೂಪಾಯಿಗಳನ್ನು ಅವರವರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮೂಲಕ ಆ ಹಣವನ್ನು ಅವರುಗಳಿಗೆ ಹಿಂತಿರುಗಿಸಬೇಕು. ಸಿಲಿಂಡರನ್ನು ಮನೆಯ ಬಾಗಿಲಿಗೆ ತಂದು ಕೊಡುವವರಿಗೆ ಪ್ರತ್ಯೇಕವಾಗಿ ಹಣ ನೀಡಲಾಗುತ್ತದೆ. ಹೀಗಿದ್ದೂ ಹೆಚ್ಚುವರಿಯಾಗಿ ಹಣ ಪಡೆಯುತ್ತಿರುವುದು ಸರಿಯಲ್ಲ. ಅಲ್ಲದೆ ಸೀಮೆಎಣ್ಣೆ ದರವನ್ನು ಒಂದು ಲೀಟರ್ಗೆ 60 ರುಪಾಯಿ ಮಾಡಲಾಗಿದೆ. ಮೊದಲೇ ಬದುಕು ದುರ್ಭರವಾಗಿರುವ ಈ ಕಾಲದಲ್ಲಿ ಬಡತನದ ರೇಖೆಯಿಂದ ಕೆಳಗಿರುವವರ ಮತ್ತು ಮಧ್ಯಮ ವರ್ಗದವರ ಪಾಡು ಹೇಳತೀರದಾಗಿದೆ. ದಿನೇ ದಿನೆ ಒಂದಲ್ಲ ಒಂದರ ಬೆಲೆಯನ್ನು ಸರ್ಕಾರವು ಏರಿಸಿಕೊಂಡು ಬರುತ್ತಿರುವುದರಿಂದ ಜನರು ಜೀವನ ಮಾಡುವುದೇ ಕಷ್ಟವಾಗಿದೆ.
- ಕೆ.ವಿ. ಸೀತಾರಾಮಯ್ಯ, ಹಾಸನ
ಗೋಡೆ ಒಡೆದಾಯ್ತು, ಮುಂದೆ?
'ಆಡಳಿತಕ್ಕಾಗಿ ವಿಧಾನ ಸೌಧದ ಗೋಡೆ ಒಡೆಯುವೆ' ಎಂದು ಗರ್ವದಿಂದ ಹೇಳಿದ ಸಚಿವರು, ತಮ್ಮ ಕೃತ್ಯಕ್ಕೆ ಯಾರಿಂದಾದರೂ ಅಡೆತಡೆಗಳು ಬಂದರೆ ಕಷ್ಟ ಎಂಬ ಭಯದಿಂದಲೋ ಏನೋ, ರಾತ್ರೋ ರಾತ್ರಿ ಕಾಮಗಾರಿಗೆ ಚಾಲನೆಯನ್ನು ನೀಡಿ ವಿಧಾನ ಸೌಧದ 340 ಮತ್ತು 341ನೇ ಕೊಠಡಿಗಳ ನಡುವಿನ ಗೋಡೆಯನ್ನು ಕೆಡವಿ ಹಾಕಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳ ಮೌನ ಸಮ್ಮತಿಯೂ ಇರುವುದು ಅತ್ಯಂತ ದುರದೃಷ್ಟಕರ. ಒಂಬತ್ತು ಲಕ್ಷ ರುಪಾಯಿಗಳ ವೆಚ್ಚದಲ್ಲಿ ಸಚಿವರ ಕೊಠಡಿಯ ಅದ್ಧೂರಿ ನವೀಕರಣವೂ ಆಗಿ, ಅದರ ಉದ್ಘಾಟನೆಯು ಮುಖ್ಯಮಂತ್ರಿಗಳಿಂದಲೇ ಆಗಿಬಿಟ್ಟರೆ, ಅಲ್ಲಿಗೆ ಈಗಿನ ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣದ ಸಾಧನೆಯಲ್ಲಿ ಮತ್ತೊಂದು ಮಹತ್ವದ ಮೆಟ್ಟಿಲನ್ನು ಹತ್ತಿದಂತಾಗುತ್ತದೆ. ಆಡಳಿತದ ಅನುಕೂಲದ ನೆಪವೊಡ್ಡಿ ಸ್ವಪ್ರತಿಷ್ಠೆಯ ಪ್ರದರ್ಶನಕ್ಕೆಂದೇ ಈಗ ನಡೆಸಿರಬಹುದಾದ ಗೋಡೆ ತೆರವುಗೊಳಿಸುವ ಕಾರ್ಯಕ್ರಮವು ಇನ್ನೆಷ್ಟು ಜನ ಸಚಿವರಲ್ಲಿ ಹೀಗೆ ಮಾಡುವ ಹುಮ್ಮಸ್ಸನ್ನು ತುಂಬಬಹುದೋ?
- ಬೊ. ನಾ. ಕೃಷ್ಣಮೂರ್ತಿ, ಸಾಗರ
-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com