ತಪ್ಪಾಯ್ತು ತಿದ್ಕೋತೀವಿ
ಶಾಸಕರ ವಿದೇಶ ಪ್ರವಾಸಕ್ಕೆ ಸಂಬಂಧಿಸಿದ ವರದಿಯಲ್ಲಿನ ತಪ್ಪನ್ನು ವಿಧಾನಪರಿಷತ್ ಸದಸ್ಯ ರಾಮಚಂದ್ರ ಗೌಡ ಅವರು ಗಮನಕ್ಕೆ ತಂದಿದ್ದಾರೆ. ತಪ್ಪನ್ನು ಸರಿಪಡಿಸಿಕೊಂಡು ನನಗೆ ನ್ಯಾಯ ಒದಗಿಸಿ ಎಂದು ಪತ್ರ ಕಳುಹಿಸಿದ್ದಾರೆ. 'ಜ.8ರ 'ಕನ್ನಡಪ್ರಭ' ದಿನಪತ್ರಿಕೆಯ ಪುಟಸಂಖ್ಯೆ 3ರಲ್ಲಿ 'ವಿದೇಶಕ್ಕೆ ತೆರಳಿದ್ದ ಶಾಸಕರು ಇಂದು ಸ್ವದೇಶಕ್ಕೆ ವಾಪಸ್' ಎಂಬ ಶೀರ್ಷಿಕೆಯ ವರದಿಯಲ್ಲಿ ವಿದೇಶಕ್ಕೆ ತೆರಳಿದ ಶಾಸಕರ ಪಟ್ಟಿಯಲ್ಲಿ ರಾಮಚಂದ್ರ ಗೌಡ ಎಂದು ನನ್ನ ಹೆಸರು ಮುದ್ರಿತವಾಗಿದೆ. ಆದರೆ ನಾನು ಸದರಿ ವಿದೇಶ ಪ್ರವಾಸದಲ್ಲಿ ಪಾಲ್ಗೊಂಡಿರುವುದಿಲ್ಲ. ಆದುದರಿಂದ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಈ ಕುರಿತು ಪ್ರಕಟಿಸಿದಲ್ಲಿ ಆಗಿರುವ ಪ್ರಮಾದಕ್ಕೆ ನ್ಯಾಯ ದೊರಕಿಸಿದಂತಾಗುವುದು.' ಎಂದು ಹೇಳಿದ್ದಾರೆ.
ಶಿರಾಳಕೊಪ್ಪದಿಂದ ಮ.ರಾ.ಹೆಗಡೆ ಅವರು ಪತ್ರ ಬರೆದಿದ್ದಾರೆ. 'ಡಿ.29ರ 'ಖುಷಿ' ಸಂಪಾದಕೀಯದ ಕೊನೆಯಿಂದ ಎರಡನೇ ಸಾಲಿನ ಐದನೇ ಶಬ್ದ 'ಶುಭಾಷಯಗಳು' ಎಂದು ಪ್ರಕಟವಾಗಿದೆ. ಇದು ಸುಯೋಗ್ಯವೇ? ಆಲೋಚಿಸಿ. ಶುಭ!ಆಶಯಶುಭಾಶಯ ಎಂದಾಗಬೇಡವೇ? ಮುದ್ರಣ ಮಾಧ್ಯಮದ ಅನೇಕರು ಈ ತಪ್ಪುಗಳನ್ನು ಮಾಡುತ್ತಿದ್ದಾರೆ. ಯಾವುದು ಸರಿ ಸ್ಪಷ್ಟೀಕರಣ ನೀಡಿರಿ' ಎಂದಿದ್ದಾರೆ.
ಇದೇ ಶಬ್ದ ಬಳಕೆಗೆ ಸಂಬಂಧಿಸಿ ಬೆಳಗಾವಿಯಿಂದ ಜಗದೀಶ ಎಂ ಸಂಗಣ್ಣವರ ಪತ್ರ ಬರೆದಿದ್ದಾರೆ. 'ಡಿ.31ರ ಸಂಚಿಕೆಯ ಬೆಳಗಾವಿ ಆವೃತ್ತಿಯ ಪುಟ 7ರಲ್ಲಿ 'ಹಳಬರೊಂದಿಗೆ ಹೊಸಹಾದಿ ಸಾಧ್ಯವೇ?' ಎಂಬ ಲೇಖನದಲ್ಲಿ ಸಣ್ಣ ತಪ್ಪಾಗಿದೆ. 'ಬಹುತೇಕ ಪತ್ರಿಕೆಗಳಲ್ಲಿ ವಾಜಪೇಯಿಯವರಿಗೆ ಶುಭಾಷಯ ಕೋರಿದ್ದ ಜಾಹೀರಾತುಗಳಿದ್ದವು' ಎಂಬ ವಾಕ್ಯವೇನೋ ಸರಿಯಾಗಿದೆ. ಆದರೆ 'ಶುಭಾಷಯ' ಈ ಪದ ತಪ್ಪಾಗಿದೆ. 'ಶುಭಾಶಯ' ಎಂದು ಬರೆಯಬೇಕಿತ್ತು, ಏನಂತೀರಾ?' ಎಂದು ಪ್ರಶ್ನಿಸಿದ್ದಾರೆ.
ಹೆಗಡೆ ಹಾಗೂ ಸಂಗಣ್ಣವರ ಅವರಿಬ್ಬರು ಹೇಳಿದಂತೆ ತಪ್ಪಾಗಿ ಪ್ರಕಟಿಸಲಾಗಿದೆ. 'ಶುಭಾಶಯ' ಎನ್ನುವುದೇ ಸರಿಯಾದ ಪದ ಬಳಕೆ.
ಬೆಂಗಳೂರಿನಿಂದ ಪ್ರವೀಣ್ ರಾವ್ ಎಂಬುವವರು ಕಚೇರಿಗೆ ದೂರವಾಣಿ ಕರೆ ಮಾಡಿ ಜ.5ರ ಪತ್ರಿಕೆಯಲ್ಲಿ ತಪ್ಪಾಗಿ ಪ್ರಕಟಿಸಿದ ಉಪಶೀರ್ಷಿಕೆಯನ್ನು ಗಮನಕ್ಕೆ ತಂದಿದ್ದಾರೆ. 'ಪುಟ 3ರಲ್ಲಿ 'ಎಲ್ಲರ ಕಣ್ಣು ವಿವಿ ರಸ್ತೆ ಮೇಲೆ....!' ಎಂಬ ಸುದ್ದಿ ಪ್ರಕಟವಾಗಿದೆ. ಸಂಪೂರ್ಣ ಸುದ್ದಿಯಲ್ಲಿ ಸುಂದರವಾದ ರಸ್ತೆ ಎಂದು ಬರೆದು, ಚೆಂದವಾದ ರಸ್ತೆಯ ಫೋಟೋ ಹಾಕಿದ್ದೀರಿ. ಆದರೆ ಉಪಶೀರ್ಷಿಕೆಯಲ್ಲಿ ಮಾತ್ರ 'ಚೆಂದಗೊಳಿಸದ ರಸ್ತೆ ಅಗೆಯಲು ಮುಂದಾದ ಕಂಪನಿಗಳು' ಎಂದು ಬರೆದು ಸುದ್ದಿಗೆ ಅರ್ಥವಿಲ್ಲದಂತೆ ಮಾಡಲಾಗಿದೆ. ಇದರ ಜತೆಗೆ 'ಮುಂದಾಗಿದ್ದ' ಎಂದು ಬರೆಯಲು 'ಮುಂದಾದ' ಎಂದೂ ಬಳಸಲಾಗಿದೆ. ಸುದ್ದಿಗೆ ವಿರುದ್ಧವಾಗಿ ಶೀರ್ಷಿಕೆ ನೀಡಿದರೆ ಹೇಗೆ? ಸುದ್ದಿಯನ್ನು ಓದಲು ಶೀರ್ಷಿಕೆ ಆಹ್ವಾನ ನೀಡುವಂತಿರಬೇಕು ಎಂದು ಹೇಳುತ್ತಾರೆ. ಆದರೆ ಸುದ್ದಿಯ ಹಣೆಬರಹವೇ ತಪ್ಪಾದರೆ ಹೇಗೆ ಸುದ್ದಿ ಓದಲಿ? ಎಂದು ಅವರು ಪ್ರಶ್ನಿಸಿದ್ದಾರೆ.
-ವಿಶ್ವೇಶ್ವರ ಭಟ್