ಭ್ರಷ್ಟಾಚಾರ ಆರೋಪ ತನಿಖೆ, ಅನುಮತಿ ವಿಳಂಬ ಸಲ್ಲದು
ಇದುವರೆಗೆ ರಾಜ್ಯದಲ್ಲಿ ಕೆಲಸ ಮಾಡಿರುವ ಎಲ್ಲ ಲೋಕಾಯುಕ್ತರೂ ಬಹಿರಂಗವಾಗಿ ಪ್ರಕಟಿಸಿರುವ ದೊಡ್ಡ ದೂರು ಎಂದರೆ ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳ ಮೇಲಿನ ತನಿಖೆಗೆ ಅಗತ್ಯವಾದ ಅನುಮತಿ ಕೊಡುವುದರಲ್ಲಿ ಸರ್ಕಾರಗಳ ಅಸಹನೀಯ ವಿಳಂಬ ಕುರಿತದ್ದು.
ತನಿಖೆ ವಿಳಂಬವಾದರೆ, ಸಾಕ್ಷ್ಯ ನಾಶವಾಗುವುದು ಖಚಿತ. ಅಂದರೆ, ಲೋಕಾಯುಕ್ತ ಪತ್ರ ಬಂದ ಒಂದು ನಿರ್ದಿಷ್ಟ ಅವಧಿಯ ಒಳಗಾಗಿ ಸರ್ಕಾರ ತನಿಖೆಗೆ ಅನುಮತಿ ನೀಡುವ ಅಥವಾ ನೀಡದೇ ಇರುವ ನಿರ್ಧಾರ ಕೈಗೊಳ್ಳದೇ ಹೋದರೆ ಆ ಪ್ರಕರಣವನ್ನು ಕೈ ಬಿಟ್ಟಂತೆಯೇ ಆಗುತ್ತದೆ. ಇದುವರೆಗೂ ಸರ್ಕಾರ ಇಂತಹ ವಿಳಂಬಕ್ಕೆ ಅಥವಾ ಆಡಳಿತ ಯಂತ್ರದ ನಿಷ್ಕ್ರಿಯತೆಗೆ ಕಾರಣಗಳನ್ನು ಕೊಟ್ಟಿಲ್ಲ. ಈಗಿನ ಲೋಕಾಯುಕ್ತ, ನಿವೃತ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರೂ ಇದೇ ದೂರನ್ನು ನೀಡಿದ್ದಾರೆ. 94 ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತರು ಶಿಫಾರಸ್ಸು ಮಾಡಿದ್ದರೂ ಸರ್ಕಾರ ಆ ಶಿಫಾರಸ್ಸಿಗೆ ತನ್ನ ಪ್ರತಿಕ್ರಿಯೆಯನ್ನು ತಿಳಿಸಿಲ್ಲ ಎನ್ನುವುದು ಅವರ ದೂರು.
ಸರ್ಕಾರದ ಈ ಆಲಸ್ಯ ನೀತಿ ನಿಜವಾಗಿಯೂ ಖಂಡನೆಗೆ ಅರ್ಹ. ನಿಜ. ಸರ್ಕಾರಕ್ಕೆ ಅನುಮತಿಯನ್ನು ನಿರಾಕರಿಸುವ ಹಕ್ಕು- ಅಧಿಕಾರ ಎರಡೂ ಇದೆ. ತನಿಖೆ ಅನಗತ್ಯ ಎಂದು ಸರ್ಕಾರ ಪ್ರಮಾಣಿಕವಾಗಿ ಭಾವಿಸಿದ್ದರೆ ಅದನ್ನು ನೇರವಾಗಿ ಲೋಕಾಯುಕ್ತರಿಗೆ ತಿಳಿಸುವುದಕ್ಕೇನು ಕಷ್ಟ? ಜನ ಸಾಮಾನ್ಯರಲ್ಲಿ ಸರ್ಕಾರದ ಈ ತಟಸ್ಥ ನೀತಿ ನಿಜವಾಗಲೂ ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಗಳನ್ನು ರಕ್ಷಿಸುವುದೇ ಎನ್ನುವ ಅಭಿಪ್ರಾಯ ಮೂಡುತ್ತಿದೆ. ಸಂಸತ್ತಿನಲ್ಲಿ ಲೋಕಪಾಲ ವಿಧೇಯಕದ ಮೇಲೆ ನಡೆದ ಚರ್ಚೆಯ ಕಾಲದಲ್ಲಿ ಅನೇಕರು ಹಲವು ರಾಜ್ಯಗಳಲ್ಲಿ (ಕರ್ನಾಟಕವೂ ಸೇರಿದಂತೆ) ಸರ್ಕಾರಗಳು ಲೋಕಾಯುಕ್ತರ ಶಿಫಾರಸ್ಸನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವ ವಿಚಾರದಲ್ಲಿ ಕೆಂಡ ಕಾರಿದ್ದರು. ಸುಪ್ರೀಮ್ ಕೋರ್ಟ್‌ನ ಒಂದು ತೀರ್ಪಿನಲ್ಲಿ ಲೋಕಾಯುಕ್ತರ ಶಿಫಾರಸ್ಸಿನ ಮೇಲೆ ಸರ್ಕಾರದ ನಿರ್ಧಾರ ಪ್ರಕಟವಾಗುವುದಕ್ಕೆ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿ ಅಗತ್ಯ ಎಂದು ಅಭಿಪ್ರಾಯ ಪ್ರಕಟವಾಗಿದೆ. ತನಿಖೆ ಒಂದು ವೇಳೆ ಸರ್ಕಾರಕ್ಕೆ ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಮಾಹಿತಿಯ ಅಗತ್ಯ ಕಂಡುಬಂದರೆ, ಅಬ್ಬಬ್ಬಾ ಎಂದರೆ ಇನ್ನೂ ಒಂದು ತಿಂಗಳ ಅವಧಿಯನ್ನು ತೆಗೆದುಕೊಳ್ಳಬಹುದು. ವಿಷಯ ಎಷ್ಟೇ ಸಂಕೀರ್ಣವಾಗಿದ್ದರೂ ಸರ್ಕಾರದ ನಿರ್ಧಾರಕ್ಕೆ ನಾಲ್ಕು ತಿಂಗಳಿಗಿಂತ ಹೆಚ್ಚಿನ ಕಾಲ ಕೇಳುವುದು ಸರಿಯಲ್ಲ. ಸರ್ಕಾರದಲ್ಲಿ ಆಡಳಿತದ ಸೂತ್ರಗಳನ್ನು ಹಿಡಿದವರಿಗೆ ಭ್ರಷ್ಟಾಚಾರದ ಪ್ರಕರಣಗಳು ಲೋಕಾಯುಕ್ತರ ಗಮನಕ್ಕೆ ಬರುವುದಕ್ಕೆ ಮುಂಚೆಯೇ ಹಲವು ಮೂಲಗಳಿಂದ ಗೊತ್ತಾಗಿರುತ್ತದೆ. ಭ್ರಷ್ಟಾಚಾರದ ಪ್ರಕರಣಗಳು ದಿಢೀರನೆ ತಲೆ ಎತ್ತುವಂತಹದ್ದಲ್ಲ.
ಕೆಲವು ಕಾಯಿದೆಗಳಲ್ಲಿ, ನಿರ್ದಿಷ್ಟ ಅವಧಿಯಲ್ಲಿ ಲಭ್ಯವಾಗಬೇಕಾದ ಮಾಹಿತಿ ಅಥವಾ ಆದೇಶ ಲಭ್ಯವಾಗದೇ ಹೋದರೆ, ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಕ್ರಮ ಕೊಗೊಳ್ಳಬಹುದು ಎನ್ನುವ ನಿಯಮವಿರುತ್ತದೆ. ಉದಾಹರಣೆಗೆ ಆದಾಯ ತೆರಿಗೆ ಇಲಾಖೆಯಿಂದ ಬರುವ ನೋಟೀಸುಗಳಿಗೆ ಗ್ರಾಹಕರು ನಿರ್ದಿಷ್ಟ ಅವಧಿಯಲ್ಲಿ ಪ್ರತಿಕ್ರಿಯೆ ನೀಡದೇ ಹೋದರೆ, ಇಲಾಖೆಯ ನಿಯಮಗಳಿಗೆ ಅನುಸಾರವಾಗಿ ಮುಂದಿನ ಕ್ರಮವನ್ನು ಜರುಗಿಸಬಹುದು. ನಿಜ. ಸರ್ಕಾರವನ್ನು ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಗೆ ಹೋಲಿಸುವುದು ಸರಿಯಲ್ಲ. ಆದರೆ ಸರ್ಕಾರದಲ್ಲಿ ನಿರ್ಣಾಯಕವಾದ ರೀತಿಯಲ್ಲಿ ಆದೇಶಗಳನ್ನು ನೀಡುವ ಸ್ಥಾನದಲ್ಲಿ ಕೂತ ವ್ಯಕ್ತಿಗಳು, ತಾವು ಮಾಡಬೇಕಾದ ಕೆಲಸವನ್ನು ಸಕಾಲದಲ್ಲಿ ಮಾಡದೇ ಹೋದರೆ, ಅಂತಹ ಅಧಿಕಾರಿಗಳ ಮೇಲೆ ಕ್ರಮಕ್ಕೆ ಅವಕಾಶವಿರಬೇಕು. ಸರ್ಕಾರದಲ್ಲಿ ಯಾವುದೇ ಕೆಲಸವನ್ನೇ ಆದರೂ ಅನಿರ್ದಿಷ್ಟ ಅವಧಿಗೆ ಬಾಕಿ ಇಡಬಾರದು. ನಿರ್ಧಾರ ಕೈಗೊಳ್ಳದೇ ಇರುವುದೇ ಒಂದು ನಿರ್ಧಾರ ಎನ್ನುವ ಮಾತೂ ಇದೆ. ಅದಕ್ಕೆ ಸಂವಿಧಾನದ ವಿಧಿ-ನಿಯಮಗಳಲ್ಲೇ ನಿಯಂತ್ರಣ ವ್ಯವಸ್ಥೆಯೂ ಅಡಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ಭಾಸ್ಕರರಾವ್ ಅವರ ಅಭಿಪ್ರಾಯ ಹಾಗೂ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲೇಬೇಕು. ಇಲ್ಲದಿದ್ದರೆ ಜನ ವಿಳಂಬಕ್ಕೆ ಅವರನ್ನೇ ಗುರಿಪಡಿಸಿದರೆ, ಅದು ತಪ್ಪಾಗುವುದಿಲ್ಲ.