ರೈಲ್ವೆ ಸುರಕ್ಷತೆ ಬಿಗಿಯಾಗಲಿ
ಇತ್ತೀಚಿನ ವಿದ್ಯಮಾನದಲ್ಲಿ- 9 ಮಂದಿ ಸಜೀವ ದಹನ, ಸುಟ್ಟು ಕರಕಲಾದ ರೈಲ್ವೆ ಬೋಗಿಯ ಚಿತ್ರ ಹಾಗೂ ಇತರ ವಿವರ ನೋಡಿ ಖೇದವಾಯಿತು.
ನಮ್ಮ ದೇಶದ ಅತಿದೊಡ್ಡ ಸಂಸ್ಥೆಯಾಗಿರುವ ರೈಲ್ವೆ, ಲಕ್ಷಾನುಲಕ್ಷ ಜನರಿಗೆ ಉದ್ಯೋಗ ನೀಡಿದೆ. ಕೋಟ್ಯಂತರ ಜನರು ನಿತ್ಯ ಹಗಲು-ರಾತ್ರಿ ಪ್ರಯಾಣ, ಸರಕು ಸಾಗಾಣೆ ಇಂತಹ ಸಂಸ್ಥೆಯ ಬೋಗಿಗಳ ಸುರಕ್ಷತೆ, ವಿನ್ಯಾಸದ ಬಗ್ಗೆ ಸಾರ್ವಜನಿಕರಿಗೆ ಕುತೂಹಲ, ಆತಂಕ ಉದ್ಭವಿಸಿರುವುದು ಸಹಜ. ರೈಲ್ವೆ ಬೋಗಿಗಳ ವಿನ್ಯಾಸವನ್ನು ಸುರಕ್ಷತೆ ದೃಷ್ಠಿಯಿಂದ ಖಂಡಿತವಾಗಿಯೂ ಯೋಜಿಸಿದಂತಿಲ್ಲ. ಬೋಗಿಯ ಹೊರಹೊದಿಕೆಗೆ ಬಣ್ಣ ಬಳಿಯುವುದು ಖಂಡಿತವಾಗಿಯೂ ಕೂಡ ಅಸುರಕ್ಷಿತ. ಒಳಗಡೆ ಬೋಗಿಯ ನೆಲ ಈಗಿರುವ ಹೊದಿಕೆ ವಿನೈಲ್ ಮ್ಯಾಟ್ ಅದೂ ಕೂಡ ಸುರಕ್ಷಿತವಲ್ಲ. ಒಳಗಡೆ ಆಸುಪಾಸು, ಒಳಗಡೆಯ ಹೊದಿಕೆ, ಮೇಲ್ಛಾವಣಿಯ ಹೊದಿಕೆ, ಅದಕ್ಕೆ ಬಳಿದ ಪೈಂಟ್, ಕುಶನ್ ಶೀಟ್, ಒಳಗಿರುವ ರಬ್ಬರ್ ಫೋಮ್ ಹೀಗೆ ಪ್ರತಿಯೊಂದು ವಸ್ತುವು ಅಸುರಕ್ಷಿತವೆಂದು ಸಾಮಾನ್ಯ ಪರಿಜ್ಞಾನವುಳ್ಳವರೂ ಕೂಡ ಊಹಿಸಬಹುದಾಗಿದೆ. ಅದಕ್ಕೆ ತಕ್ಷಣ ನಮ್ಮ ರಾಜ್ಯದವರೇ ಆದ ಮಾನ್ಯ ಮಲ್ಲಿಕಾರ್ಜುನ ಖರ್ಗೆಯವರು -ರೈಲ್ವೆ ಮಂತ್ರಿ, ರೈಲ್ವೆ ಇಲಾಖೆ, ಕೇಂದ್ರ ಸರ್ಕಾರ ಎಚ್ಚೆತ್ತು ಕಾರ್ಯ ಪ್ರವೃತ್ತರಾಗಬೇಕು.
-ಎ. ಎಸ್. ಕಾಮತ್, ವ್ಯವಸ್ಥಾಪಕ ನಿರ್ದೇಶಕರು, ಕಾಮತ್ ಯಾತ್ರಿ ನಿವಾಸ್
ಕ.ರಾ.ರ.ಸಾ. ಸ್ಪಷ್ಟನೆ ನೀಡೀತೇ?
ಜನವರಿ 9ರಂದು ಚಿತ್ರದುರ್ಗಕ್ಕೆ ತೆರಳಲು ಬೆಳಿಗ್ಗೆ 8-43ರ ಹಾನಗಲ್ ಘಟಕದ ಸರ್ಕಾರಿ ಬಸ್ ಹತ್ತಿದೆ. ಆ ಬಸ್ನಲ್ಲಿ ಚಿತ್ರದುರ್ಗಕ್ಕೆ ನಿರ್ವಾಹಕರು 45-00 ರು. ಪಡೆದು ಟಿಕೆಟ್ ನೀಡಿದರು. ಆ ಟಿಕೆಟ್ನಲ್ಲಿ ಹಿರಿಯೂರಿನಿಂದ ಚಿತ್ರದುರ್ಗಕ್ಕೆ 38 ಕಿ.ಮೀ. ಎಂದು ನಮೂದಿಸಲಾಗಿತ್ತು. ಕೆಲಸ ಮುಗಿದ ಬಳಿಕ ಹಿರಿಯೂರಿಗೆ ಹಿಂದಿರುಗಲು ಬೆಳಿಗ್ಗೆ 10-24ರ ಸಮಯದ ಹರಿಹರ ಘಟಕದ ಮತ್ತೊಂದು ಸರ್ಕಾರಿ ಬಸ್ ಹತ್ತಿದೆ. ಆ ಬಸ್ನಲ್ಲಿ ಚಿತ್ರದುರ್ಗದಿಂದ ಹಿರಿಯೂರಿಗೆ ನಿರ್ವಾಹಕರು 46-00 ರೂ. ಪಡೆದು ಟಿಕೆಟ್ ನೀಡಿದರು. ಆ ಟಿಕೆಟ್ಲ್ಲಿ ಚಿತ್ರದುರ್ಗದಿಂದ ಹಿರಿಯೂರಿಗೆ 43 ಕಿ.ಮೀ. ಎಂದು ನಮೂದಿಸಲಾಗಿತ್ತು. ಹೋಗುವಾಗ 38 ಕಿ.ಮೀ. ಇದ್ದ ಚಿತ್ರದುರ್ಗ ಬರುವಷ್ಟರಲ್ಲೇ 05 ಕಿ.ಮೀ. ದೂರ ಸ್ಥಳಾಂತರವಾಗಿದ್ದು ಅಚ್ಚರಿಯಾಯಿತು. ಈ ಬಗ್ಗೆ ನಿರ್ವಾಹಕರನ್ನು ಪ್ರಶ್ನಿಸಿದರೆ ಸಿಕ್ಕಿದ್ದು ಅಸಮರ್ಪಕ, ಒರಟು ಉತ್ತರ. ಅಲ್ಲದೆ ಹಿರಿಯೂರಿನಿಂದ ಚಿತ್ರದುರ್ಗಕ್ಕೆ ಸಾಗುವ ಮೈಲಿಗಲ್ಲಿನಲ್ಲಿ ಚಿತ್ರದುರ್ಗ ಹಿರಿಯೂರಿನಿಂದ 40 ಕಿ.ಮೀ. ಎಂದು ಬರೆಯಲಾಗಿದೆ. ಇವುಗಳಲ್ಲಿ ಯಾವುದು ಸರಿ? ಈ ತಾರತಮ್ಯದ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಬೇಕು.
- ಎಲ್.ವಿ. ಕುಮಾರಸ್ವಾಮಿ, ಹಿರಿಯೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com