ಒಒಡಿಗೆ ಖಂಡನಾ ನಿರ್ಣಯವಾಗಲಿ
ಸಾಹಿತ್ಯ ಎಂದರೆ ಅದು ಜಗತ್ತಿನ ಸಕಲ ಚರಾಚರ ವಸ್ತುಗಳ, ಜೀವಿಗಳ ಎಲ್ಲ ಬಗೆಯ ಸಂಬಂಧಗಳನ್ನೂ, ಆಗು-ಹೋಗುಗಳನ್ನೂ ಅಕ್ಷರ ರೂಪದಲ್ಲಿ ಚಿತ್ರಿಸುವ ಸಮೃದ್ಧ ವಿಚಾರಧಾರೆಗಳ ಆಗರವಾಗಿರುವುದರಿಂದ, ಸಾಹಿತ್ಯ ಸಮ್ಮೇಳನಗಳಲ್ಲಿ ಎಲ್ಲಾ ವರ್ಗದ ಜನರೂ ಭಾಗವಹಿಸುವುದು ಸಹಜವೇ ಆಗಿದೆ. ಪ್ರತಿ ವರ್ಷವೂ ಬೇರೆ ಬೇರೆ ಊರುಗಳಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವಿವಿಧ ಕಾರ್ಯಕ್ರಮಗಳಲ್ಲಿ, ಸ್ವತಃ ಕವಿಗಳಾಗಿಯೋ, ಸಾಹಿತಿಗಳಾಗಿಯೋ, ಕಲಾವಿದರಾಗಿಯೋ ಭಾಗಿಗಳಾಗುವ ರಾಜ್ಯ ಸರ್ಕಾರಿ ನೌಕರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ಸಮ್ಮೇಳನದ ಅವರ ಹಾಜರಾತಿಯನ್ನು 'ಅನ್ಯ ಕರ್ತವ್ಯ'ದ ಮೇಲಿನ ಹಾಜರಾತಿಯಂತೆ ಪರಿಗಣಿಸಿದರೆ ಅದಕ್ಕೊಂದು ಅರ್ಥವಿದೆ. ಆದರೆ, ಅಲ್ಲಿ ನಡೆಯುವ ಚರ್ಚೆ, ಭಾಷಣ, ಕವನವಾಚನ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದವುಗಳಲ್ಲಿ ಕೇವಲ ಕೇಳುಗರಾಗಿಯೋ ನೋಡುಗರಾಗಿಯೋ ಭಾಗವಹಿಸುವ, ಮತ್ತು ಪೂರ್ಣ ಭಾಗವಹಿಸಿದೇ ಮೋಜುಮಾಡುತ್ತಾ ಸುತ್ತಾಡುವ ರಾಜ್ಯ ಸರ್ಕಾರಿ ನೌಕರರು ಅಲ್ಲಿ ನಿಭಾಯಿಸುವ 'ಅನ್ಯ ಕರ್ತವ್ಯ' ಏನು? ಕೇವಲ ನೋಡುಗ-ಕೇಳುಗ ವರ್ಗದ ರಾಜ್ಯ ಸರ್ಕಾರಿ ನೌಕರರಿಗೆ 'ಅನ್ಯ ಕರ್ತವ್ಯ'ದ ಹಾಜರಾತಿಯ ಸವಲತ್ತನ್ನು ಯಾಕೆ ಕೊಡಬೇಕು ಎಂಬುದು ತೆರಿಗೆದಾರ ಪ್ರಜೆಗಳು ಕೇಳಲೇಬೇಕಾದ ಪ್ರಶ್ನೆ. ಇಂಥಾ ಸವಲತ್ತನ್ನು ಪಡೆಯಲು ತನ್ನ ನೌಕರರಿಗೆ ಇರಲೇಬೇಕಾದ ಕನಿಷ್ಠ ಅರ್ಹತೆಗಳೇನು, ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದಾಗ ಅವರು ನಿರ್ವಹಿಸಲೇಬೇಕಾದ 'ಅನ್ಯ ಕರ್ತವ್ಯಗಳು' ಏನಿರಬೇಕು ಮತ್ತು ಹೇಗಿರಬೇಕು, ಹಾಗೆಯೇ ಸಮ್ಮೇಳನದ ಅವಧಿಯಲ್ಲಿ ಅವರು ಏನು ಮಾಡಿದರೆ 'ಕರ್ತವ್ಯ ಲೋಪ' ಎನ್ನಿಸಿ ಸರ್ಕಾರಿ ನೌಕರರ ಸೇವಾ ನಿಯಮಗಳ ಅನುಸಾರ ಶಿಸ್ತಿನ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದನ್ನು ಕರ್ನಾಟಕ ಸರ್ಕಾರವು ನಿರ್ಧರಿಸಿ ಸೂಕ್ತ ಆದೇಶವನ್ನು ಹೊರಡಿಸುವುದು ಅತ್ಯಗತ್ಯವಾಗಿದೆ. ಇನ್ನು, ಸಮ್ಮೇಳನಗಳಿಗೆ ಹೋಗದೆಯೂ ತಾವಿದ್ದ ಸ್ಥಳದಿಂದಲೇ ಅನ್ಯ ಕರ್ತವ್ಯದ ಹಾಜರಾತಿ ಚೀಟಿಯನ್ನು ರಾಜ್ಯ ಸರ್ಕಾರಿ ನೌಕರರು ಪಡೆಯುವುದು ಅಥವಾ ಕೊಂಡುಕೊಳ್ಳುವುದು ಸಾಧ್ಯವೆಂದಾದರೆ, ಅವರಿಗೆ ಈ ಸವಲತ್ತಿನ ದುರ್ಲಾಭ ದೊರೆಯುವಂತೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸುವ ನಿರ್ಣಯವನ್ನು ಹಾವೇರಿಯಲ್ಲಿ ನಡೆಯಲಿರುವ ಮುಂದಿನ ಸಮ್ಮೇಳನದಲ್ಲಿ ತಪ್ಪದೇ ಸ್ವೀಕರಿಸಬೇಕು.
-ಬೊ. ನಾ. ಕೃಷ್ಣಮೂರ್ತಿ, ಸಾಗರ
ಜನತಾ ಹೋಟೆಲ್ ನಮಗೂ ಬೇಕು
ತಮಿಳುನಾಡು ಮಾದರಿಯಲ್ಲಿ ಜನತಾ ಹೋಟೆಲ್‌ಗಳನ್ನು ಕರ್ನಾಟಕದಲ್ಲೂ ಸಹ ಸರ್ಕಾರವು ಪ್ರಾರಂಭಿಸಬೇಕೆಂದು ಮಾನ್ಯ ಮುಖ್ಯಮಂತ್ರಿಯವರಲ್ಲಿ ಬಿನ್ನವಿಸಿಕೊಳ್ಳುತ್ತೇನೆ. ಇದರಿಂದಾಗಿ ಬಡವರಿಗೆ ಹಾಗೂ ಹಿರಿಯ ನಾಗರಿಕರಿಗೆ ತುಂಬಾ ಅನುಕೂಲವಾಗುತ್ತದೆ. ಈಗಿರುವ ಹೋಟೆಲ್ ಮಾಲೀಕರು ತಮ್ಮ ಮನಸ್ಸಿಗೆ ಬಂದ ಹಾಗೆ ಕಾಫಿ, ತಿಂಡಿಯ ಬೆಲೆಯನ್ನು ಏರಿಸತೊಡಗಿದ್ದಾರೆ. ಹಾಲು ಲೀಟರ್‌ಗೆ 3 ರು. ಏರಿದರೆ ಕಾಫಿ ಬೆಲೆಯನ್ನು ಸಹ 3 ರುಪಾಯಿಗೆ ಏರಿಸುತ್ತಾರೆ. ಇದೆಲ್ಲಿಯ ನ್ಯಾಯ ಸ್ವಾಮಿ?
ಬಡವರು ಮತ್ತು ಹಿರಿಯ ನಾಗರಿಕರೂ ಈಗಿರುವ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ಹೋಟೆಲ್‌ಗೆ ಹೋಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಯವರು, ಇತ್ತ ಕಡೆ ಗಮನ ಹರಿಸಿ, ತಾವು ದಯವಿಟ್ಟು ತಮಿಳುನಾಡಿನಲ್ಲಿ ಅಮ್ಮ ಜಯಲಲಿತಾ ಜಾರಿಗೊಳಿಸಿರುವ ಮಾದರಿಯಲ್ಲೇ ಕರ್ನಾಟಕದಲ್ಲಿಯೂ ಸಹ ಜನತಾ ಹೋಟೆಲ್‌ಗಳನ್ನು ಪ್ರಾರಂಭಿಸಿ ಬಡವರಿಗೆ ಮತ್ತು ಹಿರಿಯ ನಾಗರಿಕರಿಗೆ ಹೊರೆ ಇಳಿಸಿ. ಇದರಿಂದಾಗಿ ಅನೇಕ ಮಂದಿಗೆ ಉದ್ಯೋಗ ದೊರಕಿದಂತಾಗುತ್ತದೆ.
-ಎಂ.ಎನ್. ಕೃಷ್ಣಮೂರ್ತಿ, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com