ತಪ್ಪಾಯ್ತು ತಿದ್ಕೋತೀವಿ
ತಾಳಿಕೋಟೆಯ ಎಸ್.ಕೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಿಂದ ವೀರೇಶ. ಶ. ಸಿಂದಗಿ ಅವರು ಬರೆಯುತ್ತಾರೆ- 'ಡಿ.30ರಂದು ಕ.ಪ್ರ.ದಲ್ಲಿನ ಪುಟ 2ರ 'ಬರ ಪರಿಹಾರ ಕಾಮಗಾರಿ ಆರಂಭಿಸಿ: ವಿ.ಡಿ. ಪಾಟೀಲ' ಎಂಬ ವರದಿಯ ಪ್ರಾರಂಭದಲ್ಲಿ 'ತೀವೃತೆ' ಎಂದಾಗಿದೆ. ಅದು 'ತೀವ್ರತೆ'ಎಂದಾಗಬೇಕಿತ್ತು. ಪುಟ7ರ 'ಸ್ಥಾನ ಅರಸು ಅವರದು, ವರ್ತನೆ ಚಿಕ್ಕೇಗೌಡ್ರುದು' ಎಂಬ ವರದಿಯ 'ಅನುಭವ ಚಿತ್ರ: ಉಮಾಶ್ರೀಗೆ ಸಂಕಟ ವಿಚಿತ್ರ' ಎಂಬ ಉಪಶೀರ್ಷಿಕೆಯ ಪ್ರಾರಂಭದಲ್ಲಿ- 'ತಾವು ರಂಗ ಕಲಾವಿದೆ, ಸಿನಿಮಾ ನಂಟಿ ಎಂಬುದನ್ನೂ ಅವರು ಮರೆತಂತೆ ಇದೆ' ಎಂದು ಪ್ರಕಟಿಸಿದ್ದೀರಿ. ಇಲ್ಲಿ 'ನಂಟಿ' ಎಂಬುದು 'ನಟಿ' ಎಂದಾಗಬೇಕಿತ್ತು.'
'ಹಾಗೆ ಮುಂದೆ ಅನುಭವ ಚಿತ್ರ 20-25 ವರ್ಷದ ಹಿಂದೆ ತೆರೆಕಂಡು ಭಾರೀ ಸದ್ದು ಮಾಡಿತ್ತು ಎಂದು ಪ್ರಕಟಿಸಿದ್ದೀರಿ. ಆದರೆ ಅನುಭವ ಚಿತ್ರ 30 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದು ಎಂದು ಚಿತ್ರದ ಪೋಸ್ಟರ್ನಲ್ಲಿಯೇ ತಿಳಿಸಿದ್ದಾರೆ. ಇದು ನಿಮ್ಮ ವರದಿಗಾರರಿಗೆ ಗೊತ್ತಿಲ್ಲವೇ? ಪುಟ 11ರ 'ಪಂದ್ಯಕ್ಕೂ ಮುನ್ನ ಪಿಚ್ ವಿವಾದ' ಎಂಬ ವರದಿಯ ಪ್ರಾರಂಭದಲ್ಲಿ 'ಸಂವಹನ' ಎಂಬುದು 'ಸಂಹವನ' ಎಂದು ತಪ್ಪಾಗಿ ಮುದ್ರಣಗೊಂಡಿದೆ.
'ಡಿ. 31ರ ಪುಟ 6ರ ಈ ನಿವೃತ್ತಿಯಿಂದ ಮನಸ್ಸೇಕೋ 'ಖಾಲಿ'ಸ್ ಎನಿಸುತ್ತಿದೆ ಎಂಬ ವರದಿಯಲ್ಲಿ ಕೆ.ಎಸ್. ಜಗನ್ನಾಥ್ ಅವರು- '12 ಎಸೆತಗಳಿಗೆ ಆತನ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ ಸಮಾಪ್ತಿಯಾಗಿತ್ತು. ಅಷ್ಟೇ ಅಲ್ಲ, ಅದಾದ ನಂತರ ನಾಲ್ಕೂ ಟೆಸ್ಟ್ಗಳಲ್ಲಿಯೂ ಕಾಲಿಸ್ ಏನೂ ಕಿಸಿಯಲಿಲ್ಲ ಎಂದು ವಿವರಿಸಿದ್ದಾರೆ. ಒಬ್ಬ ಅಂತಾರಾಷ್ಟ್ರೀಯ ಆಟಗಾರನ ಬಗ್ಗೆ ಏನೂ 'ಕಿಸಿಯಲಿಲ್ಲ' ಎಂಬ ಪದ ಪ್ರಯೋಗ ಮಾಡಿರುವುದು ಎಷ್ಟರಮಟ್ಟಿಗೆ ಸರಿ? ಇದು ಕಾಲಿಸ್ ಅವರಿಗೆ ಅಗೌರವ ತೋರಿಸಿದಂತಾಗುವುದಿಲ್ಲವೇ!'
'ಇದೇ ಪುಟದ ಮಂಗಳಮುಖಿಯರನ್ನು ದೂರ ಮಾಡುವುದು ಬೇಡ ಎಂಬ ವರದಿಯಲ್ಲಿ- 'ಭಾವನಾ ನಂತರ ಮಂಗಳಮುಖಿಯರಿಗೆ ಅವಕಾಶ, ಪ್ರೋತ್ಸಾಹ ಸಿಕ್ಕರೆ ಹೋಟೆಲ್ ಉದ್ಯಮವಷ್ಟೇ ಅಲ್ಲ' ಎಂದು ಪ್ರಕಟವಾಗಿದೆ. ಇಲ್ಲಿ 'ಭಾವನಾ ನಂತರ' ಎಂಬುದರ ಬದಲಾಗಿ 'ಭಾವನಾರಂತಹ' ಎಂದಾಗಬೇಕಿತ್ತು. ಪುಟ 11ರ 'ಕಿವೀಸ್ ಸರಣಿಗೆ ಇಂದು ತಂಡ' ಎಂಬ ವರದಿಯಲ್ಲಿ 'ಸರಣಿಯಲ್ಲಿ ಭಾರತ 5 ಏಕದಿನ ಮತ್ತು ಎರಡು ಪಂದ್ಯಗಳನ್ನಾಡಲಿದೆ' ಎಂದು ಪ್ರಕಟವಾಗಿದೆ. ಇಲ್ಲಿ ಭಾರತ 5 ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನಾಡಲಿದೆ ಎಂದಾಗಬೇಕಿತ್ತು' ಎಂದಿದ್ದಾರೆ.
ಕೆ.ಎಸ್. ಜಗನ್ನಾಥ್ ಅವರ ಅಂಕಣದ ಒಟ್ಟು ಭಾವ ಕಾಲಿಸ್ ಅವರನ್ನು ಹೊಗಳಿಯೇ ಇತ್ತು. ಜಗನ್ನಾಥ್ ಅವರು ಕ್ರಿಕೆಟ್ ಆಸ್ವಾದಿಸುವವರು. ಅವರು ಯಾವುದೇ ಕಾರಣಕ್ಕೂ ಕ್ರಿಕೆಟ್ ಆಟಗಾರರಿಗೆ ಅವಮಾನವಾಗುವಂತೆ ಬರೆಯಲಾರರು. ಕಾಲಿಸ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ಮಾಡಿದ, ಅಂತಿಮ ಪಂದ್ಯದಲ್ಲಿ ಶತಕ ಬಾರಿಸಿದ ಆಟಗಾರ. ಆದರೆ ಆರಂಭದ ಪಂದ್ಯಗಳಲ್ಲಿ ಅವರೂ ಉತ್ತಮವಾಗಿ ಆಡಿರಲಿಲ್ಲ ಎಂಬುದನ್ನು ಹೇಳುವಾಗ ಆ ರೀತಿಯ ಶಬ್ದ ಬಳಸಿದ್ದಾರೆ. ಕಾಲಿಸ್ ಅವರನ್ನು ಅವಮಾನ ಮಾಡುವುದೇ ಲೇಖನದ ಅಥವಾ ಲೇಖಕರ ಉದ್ದೇಶವಾಗಿದ್ದರೆ ಅಷ್ಟುದೊಡ್ಡ ಲೇಖನವನ್ನು ಕಾಲಿಸ್ಗಾಗಿ ಅವರು ಬರೆಯುತ್ತಲೇ ಇರಲಿಲ್ಲ. ಕಾಲಿಸ್ ಬಗ್ಗೆ ಗೌರವ ಇದ್ದಿದ್ದರಿಂದಲೇ ಅವರ ಬಗ್ಗೆ ಉತ್ತಮ ಲೇಖನ ಬರೆದಿದ್ದಾರೆ.
ವಿಶ್ವೇಶ್ವರ ಭಟ್