ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಂಘರ್ಷದ ಹಾದಿಯಲ್ಲಿ ಆಮ್ ಆದ್ಮಿ ಪಾರ್ಟಿ

Vishwanath S
Updated On : 15 Jan 2014, 12:11 pm

ಅಧಿಕಾರ ವಹಿಸಿಕೊಂಡ ದಿನದಿಂದಲೇ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಅರವಿಂದ ಕೇಜೀವಾಲ ಅವರು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ "ಷಾಕ್‌" ಕೊಡುತ್ತಲೇ ಇದ್ದಾರೆ. ಆದರೆ ಇದುವರೆಗೆ ಅವರ ದಿಢೀರ್ ಕ್ರಮಗಳು ನೇರವಾಗಿ ಕಾಂಗ್ರೆಸ್ಸಿನ ವಿರುದ್ಧ ಎನ್ನುವಂತಿರಲಿಲ್ಲ.
ಸೋಮವಾರ ಕೇಜ್ರೀವಾಲ ನೇತೃತ್ವದ ಸರ್ಕಾರ ವಿದೇಶೀ ಮಾಲಿಕತ್ವದ ಸೂಪರ್ ಬಜಾರ್‌ಗಳಿಗೆ ದೆಹಲಿಯಲ್ಲಿ ಅವಕಾಶ ನೀಡುವ ನೀತಿಯನ್ನು ವಿಮರ್ಶಿಸಿದ ನಂತರ ಹಿಂದಿನ ಶೀಲಾ ದೀಕ್ಷಿತ್ ಸರ್ಕಾರ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆಯುವ ಪತ್ರವನ್ನು ಕೇಂದ್ರ ಮಂತ್ರಾಲಯಕ್ಕೆ ರವಾನಿಸಿ, ಉದ್ಯಮ ವಲಯಗಳಲ್ಲಿ ಒಂದು ರೀತಿಯ ದಿಗ್ಭ್ರಮೆಯನ್ನೇ ಮೂಡಿಸಿದ್ದಾರೆ.
ಕಾಂಗ್ರೆಸ್ ಎರಡು ವರ್ಷಗಳ ಹಿಂದೆ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಲು ನಿರ್ಧರಿಸಿದ್ದರೂ, ಕೆಲವು ವಿಚಾರಗಳಲ್ಲಿ ನಿರ್ಧಾರವನ್ನು ರಾಜ್ಯಗಳ ಸರ್ಕಾರಗಳಿಗೇ ಬಿಟ್ಟಿದ್ದು ನಿಜ.
ಕೇಂದ್ರದ ಪ್ರಕಟಿತ ನೀತಿಗೆ, ಕಾಂಗ್ರೆಸ್ ಆಡಳಿತವಿದ್ದ ಎಲ್ಲ ರಾಜ್ಯಗಳೂ ಒಪ್ಪಿಗೆ ನೀಡಿದಂತೆ, ದೆಹಲಿಯ ಸರ್ಕಾರವೂ ನೀಡಿತ್ತು. ಬ್ರಿಟನ್ನಿನ ಟೆಸ್ಕೋ ಸಂಸ್ಥೆಯಿಂದ ಮೊದಲ ಅರ್ಜಿ ಬಂದಿದ್ದು ಕಳೆದ ವರ್ಷ. ಆದರೆ ಕಾಂಗ್ರೆಸ್ ದೆಹಲಿಯಲ್ಲಿ ಚುನಾವಣೆಯಲ್ಲಿ ಸೋತು ಅಧಿಕಾರವನ್ನು ಕಳೆದುಕೊಂಡಿದ್ದರೂ, ಕೇಜ್ರೀವಾಲರ ಸರ್ಕಾರಕ್ಕೆ ಅಗತ್ಯವಾದ ಬೆಂಬಲ ನೀಡಿರುವುದರಿಂದ, ಹೊಸ ಸರ್ಕಾರ ಕಾಂಗ್ರೆಸ್ ಅಂಗೀಕರಿಸಿರುವ ನೀತಿಗೆ ವಿರುದ್ಧದ ನಿರ್ಧಾರಗಳನ್ನು ಕೈಗೊಳ್ಳಲಾರದೆಂದು ಭಾವಿಸಲಾಗಿತ್ತು.
ಕೇಜ್ರೀವಾಲ ಆ ಭಾವನೆ ಸರಿಯಲ್ಲ ಎಂದು ತೋರಿಸಲೆಂದೇ ಶೀಲಾ ದೀಕ್ಷಿತ್ ಸರ್ಕಾರದ ಕ್ರಮವನ್ನು ಉಲ್ಟಾ ಮಾಡಿದ್ದಾರೆ. ಈ ಕ್ರಮಕ್ಕೆ ತತ್‌ಕ್ಷಣದ ಅಧಿಕೃತ ಪ್ರತಿಕ್ರಿಯೆ ಪ್ರಕಟವಾಗಿರುವುದು ಕೇಂದ್ರದಲ್ಲಿ ಕಾಂಗ್ರೆಸ್ಸಿನ ಪರವಾಗಿ ವಾಣಿಜ್ಯ ಮಂತ್ರಿಯಾಗಿರುವ ಆನಂದ ಶರ್ಮಾ ಅವರಿಂದ.
ಕೇಂದ್ರ ಸಚಿವರು, ದೆಹಲಿಯ ಆಮ್ ಆದ್ಮಿ ಪಾರ್ಟಿಯ ಸರ್ಕಾರದ ಈ ನಿರ್ಧಾರದಿಂದ, ವಿದೇಶೀ ಬಂಡವಾಳವನ್ನು ಆಕರ್ಷಿಸುವ ಪ್ರಯತ್ನಕ್ಕೇ ಹಿನ್ನಡೆಯಾಗಬಹುದೆಂದು ಹೇಳಿ, ರೈತರು ಹಾಗೂ ಗ್ರಾಹಕರಿಗೆ ಸಿಗಬೇಕಾಗಿದ್ದ ಸೌಲಭ್ಯ ಸಿಗುವುದಿಲ್ಲ ಎಂದಿದ್ದಾರೆ. ಈ ನಿರ್ಧಾರ ವ್ಯಾಪಾರಿಗಳ ಪರವಾಗಿದೆ.
ದೆಹಲಿಯ ಉದ್ಯಮ ಹಾಗೂ ವಾಣಿಜ್ಯ ಸಂಘಟನೆಗಳ ಪ್ರತಿನಿಧಿಗಳೂ ಸರ್ಕಾರದ ನೀತಿಯನ್ನು ವಿರೋಧಿಸಿದ್ದಾರೆ. ಈ ನಿರ್ಧಾರದಿಂದ ದೆಹಲಿಯಲ್ಲಿ ಬಂಡವಾಳ ಹೂಡಿಕೆಯ ವಾತಾವರಣದಲ್ಲಿ ಅನಿಶ್ಚಿತತೆ ಮೂಡುತ್ತದೆ ಎನ್ನುವ ಭೀತಿ ಅವರದ್ದು.
ಕೇಜ್ರೀವಾಲ ಅವರೇನೋ ಉದ್ಯಮಿಗಳ ಜತೆ ಮಾತುಕತೆ ನಡೆಸುವ ಭರವಸೆ ನೀಡಿರುವುದು ನಿಜ. ಈ ಬಾರಿಯ ಚುನಾವಣೆಯಲ್ಲಿ ಅವರ ಆದ್ಮಿ ಪಾರ್ಟಿಗೆ ಬೆಂಬಲ ನೀಡಿದವರಲ್ಲಿ ಸುಶಿಕ್ಷಿತ ಒಳ್ಳೆಯ ನೌಕರಿ ಅಥವಾ ವ್ಯಾಪಾರದಲ್ಲಿ ತೊಡಗಿದ್ದ ಯುವಜನರ ಸಂಖ್ಯೆ ದೊಡ್ಡದು. ಕೇಜ್ರೀವಾಲ ತಮ್ಮ ನಿರ್ಧಾರದಿಂದ ತಮ್ಮ ಬೆಂಬಲಿಗರಲ್ಲಿ ಒಂದು ವರ್ಗದ ಜನರ ವಿಶ್ವಾಸ ಕಳೆದುಕೊಳ್ಳುವ ಅಪಾಯವನ್ನು ಎದುರಿಸಬೇಕಾಗಿದೆ. ಕೇಜ್ರೀವಾಲ ಸಂಘರ್ಷದ ಹಾದಿಯನ್ನು ಹಿಡಿದ ಅನಂತರ ಕಾಂಗ್ರೆಸ್ಸಿಗೆ ಸರ್ಕಾರವನ್ನು ಬೆಂಬಲಿಸಲೇ ಬೇಕೆನ್ನುವ ಒತ್ತಡವೇನೂ ಇರುವುದಿಲ್ಲ. ಸರ್ಕಾರದ ಅಭದ್ರತೆ ಅಥವಾ ಪತನಕ್ಕೆ ಕೇಜ್ರೀವಾಲ ಅವರನ್ನು ದೂರುವುದಕ್ಕೂ ಕಾಂಗ್ರೆಸ್ಸಿಗೆ ಅವಕಾಶ ಕೊಟ್ಟಂತಾಗಿದೆ. ಲೋಕಸಭೆ ಚುನಾವಣೆಯಲ್ಲಿ ದೊಡ್ಡ ಸಾಧನೆಗೆ ಯೋಜನೆ, ತಂತ್ರವನ್ನು ರೂಪಿಸುತ್ತಿರುವ ಕೇಜ್ರೀವಾಲಾ ಅವರು ಸ್ವಲ್ಪ ಸಂಯಮವನ್ನು ಪ್ರದರ್ಶಿಸುವುದು ಒಳಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement