ತಪ್ಪಾಯ್ತು ತಿದ್ಕೋತೀವಿ
ಮಂಗಳೂರಿನ ಮೂಡುಶೆಡ್ಡೆಯಿಂದ ರಾಮಕೃಷ್ಣ ಪಿ.ಬಿ. ಮೊಗೇರ ಅವರು ಇದೇ ಮೊದಲ ಬಾರಿಗೆ 'ತಪ್ಪಾಯ್ತು ತಿದ್ಕೋತೀವಿ' ಅಂಕಣಕ್ಕೆ ಮೊದಲ ಬಾರಿಗೆ ಪತ್ರ ಬರೆದಿದ್ದಾರೆ. ವಿಚಿತ್ರವೆಂದರೆ ಅವರು ಈ ಅಂಕಣವನ್ನು ವಿರೋಧಿಸಿದ್ದಾರೆ. ಅವರು ಬರೆಯುತ್ತಾರೆ- 'ಮೊದಲನೆಯದಾಗಿ ನಾನು ಈ ಅಂಕಣವನ್ನು 'ಪ್ರೀತಿಯಿಂದ' ವಿರೋಧಿಸುತ್ತೇನೆ. ಏಕೆಂದರೆ ಇದು 'ಕನ್ನಡಪ್ರಭ'ದಂತಹ ಕನ್ನಡಿಗರ ಹಿರಿಯ ನೆಚ್ಚಿನ ಪತ್ರಿಕೆಗೆ ಶೋಭೆಯಲ್ಲ. ಒಂದರ್ಥದಲ್ಲಿ ಓದುಗರ ಜ್ಞಾಪನಾ ಶಕ್ತಿ, ಬುದ್ದಿಶಕ್ತಿಯನ್ನು ಕಂಡುಹಿಡಿಯಲು ಉದ್ದೇಶಪೂರ್ವಕವಾಗಿಯೇ ತಪ್ಪಾಗಿ ಬರೆಯುವುದು, ತಪ್ಪಾಗಿ ಮುದ್ರಿಸುವುದು ಎಂಬುದರ ಕಡೆಗೆ ಮನಸ್ಸು ವಾಲುತ್ತದೆ.'
'ಯಾವುದೇ ಅಂಕಣವನ್ನು ಬರೆದುಕೊಟ್ಟವರಿಂದ ಅಕ್ಷರ ತಪ್ಪಾಗಿದ್ದರೆ ಮುದ್ರಕ ಅಥವಾ ಲಿಪಿಗಾರ ತಿದ್ದುಪಡಿ ಮಾಡಬಹುದಲ್ಲವೇ? ಮುದ್ರಿಸಿದ ನಂತರ ಹಿರಿಯ ಸಂಪಾದಕರು ಅಥವಾ ಇತರ ಯಾರೇ ಆದರೂ ಸೆನ್ಸಾರ್, ತಿದ್ದುಪಡಿ, ಸಂಕಲನ ಮಾಡುವುದಿಲ್ಲವೇ? ಅಥವಾ ಏಕೆ ಮಾಡಬಾರದು?'
'ಜ.5ರ 'ಬೈಟು ಕಾಫಿ'ಯ 2ನೇ ಪುಟದಲ್ಲಿ 'ಜನುಮದಿನ' ಅಂಕಣದಲ್ಲಿ ಕಪಿಲ್ದಗೇವ್ ಹುಟ್ಟಿದ ಇಸವಿ 1929 ಎಂದಿದೆ. 1993ರಲ್ಲಿ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ಎಂದಿದೆ. 1929-199364 ವರ್ಷ ಪ್ರಾಯದ ವಿಶ್ವಕಪ್ ಗೆದ್ದ ಭಾರತದ ನಾಯಕ!! ಆ ಪ್ರಕಾರ ಕಪಿಲ್ಗೆ ಈಗ ವಯಸ್ಸು ಎಷ್ಟು ಗೊತ್ತೇ? 84! ಆದ್ದರಿಂದ ಕಪಿಲ್ದೇವ್ ರಾಮಲಾಲ್ ನಿಖಾಂಜ್ ಹುಟ್ಟಿದ್ದು 1959ರ ಜ.6ರಂದು. ವಿಶ್ವಕಪ್ ಗೆದ್ದಿದ್ದು 1983ರಲ್ಲಿ. ಈಗ ವಯಸ್ಸು 54' ಎಂದಿದ್ದಾರೆ.
ಕಪಿಲ್ದೇವ್ ಅವರ ಕುರಿತು ಮಾಹಿತಿ ತಪ್ಪಾಗಿ ಪ್ರಕಟವಾಗಿರುವ ಬಗ್ಗೆ ಸಾಕಷ್ಟು ಓದುಗರು ಪತ್ರ ಬರೆದಿದ್ದಾರೆ. ಆದರೆ ರಾಮಕೃಷ್ಣ ಪಿ.ಬಿ. ಮೊಗೇರ ಅವರ ತಕರಾರನ್ನು ಅಷ್ಟೇ ಪ್ರೀತಿಯಿಂದ ತಿರಸ್ಕರಿಸಬೇಕಾಗಿದೆ. ತಪ್ಪು ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಗುತ್ತದೆ. ನಾವು ಆದ ತಪ್ಪನ್ನು ಓದುಗರ ಮುಂದೆ ಒಪ್ಪಿಕೊಳ್ಳುತ್ತಿದ್ದೇವೆ. ಹಿರಿಯರು ತಪ್ಪು ಮಾಡಲೇಬಾರದು ಅಥವಾ ಹಿರಿಯರಿಂದ ತಪ್ಪಾಗುವುದೇ ಇಲ್ಲ ಎಂದೇನಿಲ್ಲ. ಇದು 'ಕನ್ನಡಪ್ರಭ'ಕ್ಕೂ ಅನ್ವಯವಾಗುತ್ತದೆ.
ತಪ್ಪು ಪ್ರಕಟವಾಗುತ್ತಿದೆ ಎಂಬ ಕಾರಣಕ್ಕೆ ಪತ್ರಿಕೆ ಯಾರೂ ನೋಡದೇ ಮುದ್ರಣಕ್ಕೆ ಹೋಗುತ್ತದೆ ಎಂದು ಭಾವಿಸುವ ಅಗತ್ಯವಿಲ್ಲ. ಎಲ್ಲರೂ ನಿಗಾವಹಿಸಿದರೂ ತಪ್ಪುಗಳಾಗಿಬಿಡುತ್ತವೆ. ಮಕ್ಕಳಿಗೆ ಏನೋ ಆಗಿಬಿಟ್ಟರೆ ತಂದೆ-ತಾಯಿ ಅವರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದರ್ಥವೇ? ಅವರ ಕಾಳಜಿಯ ಹೊರತಾಗಿಯೂ ಕೆಲವೊಮ್ಮೆ ಅವಘಡಗಳು ಘಟಿಸುತ್ತವೆ. ಹಾಗೆಯೇ ಪತ್ರಿಕೆಯಲ್ಲಿ ತಪ್ಪುಗಳು. ಇನ್ನು ಉದ್ದೇಶಪೂರ್ವಕವಾಗಿ ತಪ್ಪು ಮಾಡುತ್ತೇವೆ ಎನ್ನುವುದು ಪೊಲೀಸರು ಇದ್ದಾರೆಂದು ಕಳ್ಳತನ, ಕೊಲೆಗಳು ನಡೆಯುತ್ತವೆ ಅಂದಹಾಗಾಯ್ತು. ಬೇಕಂತಲೇ ತಪ್ಪು ಪ್ರಕಟಿಸುವ ಅಗತ್ಯವಾದರೂ ಏನಿದೆ ಎಂಬುದನ್ನು ನಮಗೆ ನಾವೇ ಪ್ರಶ್ನಿಸಿಕೊಂಡರೆ ಅದಕ್ಕೆ ಉತ್ತರ ಅಲ್ಲಿಯೇ ದೊರೆಯುತ್ತದೆ.
-ವಿಶ್ವೇಶ್ವರ ಭಟ್